ಠಾಣೆಗಳ ಭೇಟಿ : ನಗರ ಆಯುಕ್ತರ ರೆಕಾರ್ಡ್‌

Published : Jun 02, 2025, 07:58 AM IST
B Dayananda

ಸಾರಾಂಶ

ಠಾಣೆಗಳಿಗೆ ಭೇಟಿ ಹಾಗೂ ಶೇ.80 ರಷ್ಟು ಠಾಣೆಗಳ ಪರಿವೀಕ್ಷಣೆ (inspection) ನಡೆಸಿ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಹೊಸ ದಾಖಲೆ ಬರೆದಿದ್ದಾರೆ.

 ಗಿರೀಶ್ ಮಾದೇನಹಳ್ಳಿ

  ಬೆಂಗಳೂರು : ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ರಾಜಧಾನಿ ಪೊಲೀಸ್ ವ್ಯಾಪ್ತಿಯ ಪ್ರತಿ ಕಚೇರಿ, ಠಾಣೆಗಳಿಗೆ ಭೇಟಿ ಹಾಗೂ ಶೇ.80 ರಷ್ಟು ಠಾಣೆಗಳ ಪರಿವೀಕ್ಷಣೆ (inspection) ನಡೆಸಿ ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರು ಹೊಸ ದಾಖಲೆ ಬರೆದಿದ್ದಾರೆ.

ತಾವು ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ದಯಾನಂದ್ ಅವರು, ಆರು ದಶಕಗಳ ಬೆಂಗಳೂರು ಪೊಲೀಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಠಾಣೆಗಳ ಪರಿವೀಕ್ಷಣೆ ಆರಂಭಿಸಿದರು. ಇದುವರೆಗೆ ಡಿಸಿಪಿ ವಿಭಾಗ ಅಥವಾ ಎಸಿಪಿ ಉಪ ವಿಭಾಗದ ಮಟ್ಟದಲ್ಲಿ ನಡೆದಿದ್ದ ಆಯುಕ್ತರ ಪರಿಶೀಲನಾ ಸಭೆಗಳು ಠಾಣೆಗಳಿಗೆ ವರ್ಗವಾದವು. ತನ್ಮೂಲಕ ಸಾಂಪ್ರದಾಯಿಕ ಆಡಳಿತ ವ್ಯವಸ್ಥೆಗೆ ಆಧುನಿಕತೆ ಸ್ಪರ್ಶ ನೀಡಿದ್ದಲ್ಲದೆ ಠಾಣೆಗಳ ಸ್ವಚ್ಛತಾ ಅಭಿಯಾನಕ್ಕೆ ದಯಾನಂದ್‌ ಮುನ್ನುಡಿ ಬರೆದರು.

ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ, ಮಹಿಳಾ ಹಾಗೂ ಸೈಬರ್‌ (ಸಿಇಎನ್‌) ಠಾಣೆಗಳಿಗೆ ಖುದ್ದು ಭೇಟಿ ನೀಡಿ ಅಧಿಕಾರಿ ಮತ್ತು ಸಿಬ್ಬಂದಿ ಜತೆ ಸಂವಾದಿಸಿದರು. ಅಲ್ಲದೆ ಸಿಸಿಬಿ ಹಾಗೂ ರಾಜಧಾನಿಯ ನಾಲ್ಕು ನಗರಶಸ್ತ್ರ ಮೀಸಲು ಪಡೆಗಳು (ಸಿಎಆರ್‌) ಕಾರ್ಯಾಲಯಗಳಿಗೆ ತೆರಳಿ ಸಭೆ ನಡೆಸಿ ಪ್ರಾಥಮಿಕ ಹಂತದಿಂದ ಅವರು ಮಾಹಿತಿ ಸಂಗ್ರಹಿಸಿದರು.

ಪರಿವೀಕ್ಷಣೆ ತಂದ ಬದಲಾವಣೆ

2023ರ ಮೇ 31 ರಂದು ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ದಯಾನಂದ್ ಅವರು, ಕೆಲವೇ ದಿನಗಳಲ್ಲಿ ತಮ್ಮ ಕಾರ್ಯ ವೈಖರಿ ಕುರಿತು ನೀಲ ನಕ್ಷೆ ರೂಪಿಸಿದರು. ಅಲ್ಲದೆ ಕಾರ್ಯಕ್ರಮಗಳ ಕುರಿತು ಅವರು ದಿನಚರಿ ಸಿದ್ಧಪಡಿಸಿದರು. ಅಂತೆಯೇ ಪ್ರತಿ ಶುಕ್ರವಾರ ಠಾಣೆಗಳ ಪರಿವೀಕ್ಷಣೆ ನಿಗದಿಪಡಿಸಿದರು. ಇನ್ನು ಪರಿವೀಕ್ಷಣೆಗೆ ಆಯ್ಕೆಯಾದ ಠಾಣೆಗೆ 20 ಅಂಶಗಳ ಮಾರ್ಗಸೂಚಿ ಅ‍ವರು ನೀಡುತ್ತಿದ್ದರು. ಈಗ ಪರಿವೀಕ್ಷಣೆ ಪರಿಣಾಮ ಠಾಣೆಗಳ ಕಾರ್ಯನಿರ್ವಹಣೆ ಮೇಲೆ ಬೀರಿದೆ. ಪ್ರತಿ ಠಾಣೆಗಳ ಕಸದರಾಶಿಯಿಂದ ಮುಕ್ತಿಗೊಂಡು ನಳನಳಿಸುತ್ತಿವೆ. ಹಳೇ ಪ್ರಕರಣಗಳು ಹಾಗೂ ಅನಾಥ ವಾಹನಗಳಿಗೆ ಮುಕ್ತಿ ಸಿಕ್ಕಿದೆ. ರೌಡಿಪಟ್ಟಿ ಹಾಗೂ ಎಂಓಬಿ ಪಟ್ಟಿ ಪರಿಷ್ಕರಣೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುದ್ದೆ ಮಾಲ್‌ಗಳ ಲೆಕ್ಕ ಪಕ್ಕಾ

ಅಪರಾಧ ಪ್ರಕರಣಗಳಲ್ಲಿ ಮುದ್ದೆ ಮಾಲ್‌ಗಳ (ಜಪ್ತಿ ವಸ್ತುಗಳು) ಕುರಿತು ಪಕ್ಕಾ ಮಾಹಿತಿ ಲಭ್ಯವಾಗುತ್ತಿದೆ. ನಗರದ ಮಹಿಳಾ ಠಾಣೆಯೊಂದಕ್ಕೆ ಆಯುಕ್ತರು ಭೇಟಿ ನೀಡಿ ಪರಿಶೀಲಿಸಿದ್ದರು. ಆ ವೇಳೆ ವರದಕ್ಷಿಣೆ ಕಿರುಕುಳ ಸಂಬಂಧ ಪೊಲೀಸರು ವಶಪಡಿಸಿಕೊಂಡಿದ್ದ ರೇಷ್ಮೆ ಸೀರೆ ಹಾಗೂ ಚಿನ್ನಾಭರಣಗಳು ಸಹ ನಾಪತ್ತೆಯಾಗಿದ್ದವು. ಈ ಘಟನೆ ಬಳಿಕ ಮುದ್ದೆ ಮಾಲ್‌ ಗಳು ಕಣ್ಮರೆಯಾಗದಂತೆ ಬಿಗಿಗೊಳಿಸಿದರು. ಇದಕ್ಕಾಗಿ ಪ್ರತ್ಯೇಕ ಆ್ಯಪ್ ರೂಪಿಸಿ ಕ್ಯೂ ಆರ್‌ ಕೋಡ್ ವ್ಯವಸ್ಥೆಯನ್ನು ಅವರು ಜಾರಿಗೊಳಿಸಿದರು.

ಸಿಸಿಬಿ ಕಚೇರಿಯೇ ಬದಲಾವಣೆ

ಸಿಸಿಬಿ ಚರಿತ್ರೆಯಲ್ಲಿ ಪ್ರಥಮ ಬಾರಿಗೆ ಆಯುಕ್ತರು ಪರಿವೀಕ್ಷಣೆ ನಡೆಸಿದರು. ಚಾಮರಾಜಪೇಟೆಯ ಧೂಳು ತುಂಬಿದ್ದ ಹಳೇ ಕಚೇರಿಯಲ್ಲೇ ಬೆಳಗ್ಗೆ 11 ರಿಂದ ರಾತ್ರಿ 8.30ರವರೆಗೆ ಕಡತಗಳನ್ನು ಪರಿಶೀಲಿಸಿದ್ದರು. ಕೊನೆಗೆ ಚಾಮರಾಜಪೇಟೆಯಿಂದ ಸಿಸಿಬಿ ಕಚೇರಿ ಶಾಂತಿನಗರದ ಬಿಎಂಟಿಸಿ ಕಟ್ಟಡಕ್ಕೆ ಸ್ಥಳಾಂತರವಾಯಿತು.

ಪರಿವೀಕ್ಷಣೆಯಿಂದ ಠಾಣೆಗಳ ಸ್ವಚ್ಛತೆ ಹಾಗೂ ತಳಹಂತದಿಂದ ಆಡಳಿತ ಸುಧಾರಣೆಗೆ ಸಹಕಾರಿಯಾಗಿದೆ. ಎಲ್ಲ ಕಚೇರಿ ಹಾಗೂ ಠಾಣೆಗಳಿಗೆ ಭೇಟಿ ನೀಡಿದ್ದೇನೆ. ಆದರೆ ಪರಿವೀಕ್ಷಣೆ ಶೇ.80 ರಷ್ಟು ಆಗಿದ್ದು, ಇನ್ನುಳಿದ ಠಾಣೆಗಳ ಪರಿವೀಕ್ಷಣೆ ಮುಂದಿನ ಹಂತದಲ್ಲಿ ಮುಗಿಸುತ್ತೇನೆ.

-ಬಿ.ದಯಾನಂದ್, ಆಯುಕ್ತರು, ನಗರ ಪೊಲೀಸ್

ಬೆಂಗಳೂರಿನ ಠಾಣೆಗಳ ವಿವರ ಹೀಗಿದೆ.

ಕಾನೂನು ಮತ್ತು ಸುವ್ಯವಸ್ಥೆ- 112

ಸಂಚಾರ- 53

ಸಿಇಎನ್‌-8

ಮಹಿಳಾ-8

ಸಿಸಿಬಿ-1

ಒಟ್ಟು- 182 ಠಾಣೆಗಳು. 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಗ್ಯಾರಂಟಿಯಿಂದಾಗಿ ತಲ ಆದಾಯದಲ್ಲಿ ರಾಜ್ಯ ನಂ.1: ಸಿದ್ದರಾಮಯ್ಯ
ಅರ್ಹರು ಪಂಚ ಗ್ಯಾರಂಟಿ ಯೋಜನೆಗಳನ್ನು ಸದ್ಬಳಸಿಕೊಳ್ಳಿ