ರಾಜ್ಯದಲ್ಲಿ ಸ್ವಯಂ ಗಣತಿಗೆ ನೀರಸ ಪ್ರತಿಕ್ರಿಯೆ

Published : Apr 15, 2026, 11:11 AM IST
census

ಸಾರಾಂಶ

ರಾಷ್ಟ್ರೀಯ ಜನಗಣತಿ 2027ರ ಅಂಗವಾಗಿ ದೇಶದಲ್ಲಿ ಇದೇ ಮೊದಲ ಬಾರಿ ನಡೆಸಲಾಗುತ್ತಿರುವ ಸ್ವಯಂ ಗಣತಿ ವ್ಯವಸ್ಥೆಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಯಂ ಗಣತಿ ಆರಂಭವಾದ 13 ದಿನಗಳಲ್ಲಿ ಶೇ. 3.35ರಷ್ಟು ಮನೆ ಮಾಲೀಕರು ಗಣತಿಯಲ್ಲಿ ಪಾಲ್ಗೊಂಡಿದ್ದಾರೆ.

 ಗಿರೀಶ್ ಗರಗ

  ಬೆಂಗಳೂರು :  ರಾಷ್ಟ್ರೀಯ ಜನಗಣತಿ 2027ರ ಅಂಗವಾಗಿ ದೇಶದಲ್ಲಿ ಇದೇ ಮೊದಲ ಬಾರಿ ನಡೆಸಲಾಗುತ್ತಿರುವ ಸ್ವಯಂ ಗಣತಿ ವ್ಯವಸ್ಥೆಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸ್ವಯಂ ಗಣತಿ ಆರಂಭವಾದ 13 ದಿನಗಳಲ್ಲಿ ಶೇ. 3.35ರಷ್ಟು ಮನೆ ಮಾಲೀಕರು ಗಣತಿಯಲ್ಲಿ ಪಾಲ್ಗೊಂಡಿದ್ದಾರೆ.

ಏ.16ರಿಂದ ನಡೆಯಲಿರುವ ಮನೆಮನೆ ಗಣತಿಗೂ ಮುನ್ನ ಏ.1ರಿಂದ ಏ.15ರವರೆಗೆ ಸ್ವಯಂ ಗಣತಿಗೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಸಾರ್ವಜನಿಕರು ಅಧಿಕೃತ ವೆಬ್‌ಸೈಟ್‌ www.se.census.gov.in ಮೂಲಕ ತಮ್ಮ ಮಾಹಿತಿ ಹಂಚಿಕೊಳ್ಳಬಹುದಾಗಿದೆ. ಐಟಿ ಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರು ನಗರ ಜಿಲ್ಲೆಯಲ್ಲಿ ಕೇವಲ ಶೇ.0.98 ಮನೆ ಮಾಲೀಕರು ಮಾತ್ರ ಸ್ವಯಂ ಗಣತಿಯಲ್ಲಿ ಪಾಲ್ಗೊಂಡಿದ್ದಾರೆ.

ಬಳ್ಳಾರಿ ಫಸ್ಟ್‌, ಕೋಲಾರ ಲಾಸ್ಟ್‌:

ರಾಜ್ಯದಲ್ಲಿ 1.68 ಕೋಟಿ ಮನೆಗಳಿರುವ ಕುರಿತು ಅಂದಾಜಿಸಲಾಗಿದೆ. ಅದರಲ್ಲಿ ಸ್ವಯಂ ಗಣತಿ ಅಡಿ 5.65 ಲಕ್ಷ ಮನೆಗಳು ಮಾತ್ರ ಸ್ವಯಂ ಗಣತಿಗೊಳಗಾಗಿವೆ. ಬಳ್ಳಾರಿ ಜಿಲ್ಲೆಯಲ್ಲಿ 2.98 ಲಕ್ಷ ಮನೆಗಳ ಪೈಕಿ ಅತಿಹೆಚ್ಚು 35356 ಮನೆ ಮಾಲೀಕರು (ಶೇ.11.84) ಸ್ವಯಂ ಗಣತಿಯಲ್ಲಿ ಪಾಲ್ಗೊಂಡು, ತಮ್ಮ ಮಾಹಿತಿ ಹಂಚಿಕೊಂಡಿದ್ದಾರೆ. ಉಳಿದಂತೆ ಬಾಗಲಕೋಟೆಯಲ್ಲಿ ಶೇ.10.98, ದಕ್ಷಿಣ ಕನ್ನಡದಲ್ಲಿ ಶೇ.10.13 ಮನೆ ಮಾಲೀಕರು ಸ್ವಯಂ ಗಣತಿಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು, ಕೋಲಾರದಲ್ಲಿ ಅತಿ ಕಡಿಮೆ 4.06 ಲಕ್ಷ ಮನೆ ಮಾಲೀಕರಲ್ಲಿ 3762 ಮನೆ ಮಾಲೀಕರು (ಶೇ. 0.93) ಮಾತ್ರ ಸ್ವಯಂ ಗಣತಿ ಅಡಿ ಮನೆ ಮಂದಿ ಮಾಹಿತಿ ನೀಡಿದ್ದಾರೆ. ಅದಾದ ನಂತರ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ. 0.98, ಚಾಮರಾಜನಗರದಲ್ಲಿ ಶೇ.1.21ರಷ್ಟು ಮಾತ್ರ ಮನೆ ಮಾಲೀಕರು ಆನ್‌ಲೈನ್‌ ಮೂಲಕ ತಮ್ಮ ಮಾಹಿತಿ ನೀಡಿದ್ದಾರೆ.

ಸ್ವಯಂ ಗಣತಿಗೆ ಹಿಂದೆ ಬೀಳಲು ಕಾರಣವೇನು?:

ಸ್ವಯಂ ಗಣತಿ ವ್ಯವಸ್ಥೆ ಇದೇ ಮೊದಲ ಬಾರಿ ಜಾರಿಗೊಳಿಸಿರುವ ಕಾರಣ ಜನರಿಗೆ ಅಷ್ಟಾಗಿ ಮಾಹಿತಿ ದೊರೆತಿಲ್ಲ. ಅಲ್ಲದೆ, ಹಲವರಿಗೆ ಮೊಬೈಲ್‌ ಅಥವಾ ಆನ್‌ಲೈನ್‌ ಮೂಲಕ ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳುವ ಕುರಿತು ಜಾಗೃತಿಯ ಕೊರತೆಯೂ ಇದೆ. ಉಳಿದಂತೆ, ಯಾರೇ ಸ್ವಯಂ ಗಣತಿ ಮಾಡಬೇಕಾದರೂ ಜಿಪಿಎಸ್‌ ಆಧಾರದಲ್ಲಿ ತಮ್ಮ ಮನೆಯ ಲೊಕೇಷನ್‌ ನೀಡಬೇಕು. ಅದೂ ಕೂಡ ಮನೆಯಲ್ಲಿದ್ದಾಗ ಮಾತ್ರ ಮನೆಯ ನೈಜ ಲೊಕೇಷನ್‌ ತೆಗೆದುಕೊಳ್ಳುತ್ತದೆ. ಇಲ್ಲದಿದ್ದರೆ ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ಜತೆಗೆ ಗಣತಿದಾರರು ಗಣತಿಗಾಗಿ ಮನೆಗೆ ಬಂದಾಗ ಸ್ವಯಂ ಗಣತಿ ಕುರಿತು ಮಾಹಿತಿ ನೀಡಬೇಕಾಗಿದೆ. ಹೀಗಾಗಿ ಸ್ವಯಂ ಗಣತಿ ಮಾಡಿಕೊಳ್ಳುವ ಬದಲು, ಮನೆ ಗಣತಿ ನಡೆಯುವಾಗ ಮಾಹಿತಿ ನೀಡುವುದು ಉತ್ತಮ ಎಂದು ಜನ ತಿಳಿದಿದ್ದಾರೆ.

16 ಬಾಷೆಗಳಲ್ಲಿ ಮಾಹಿತಿಗೆ ಅ‍ವಕಾಶ:

ಇನ್ನು, ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳುವವರಿಗಾಗಿ ಜನಗಣತಿಯ ಅಧಿಕೃತ ವೆಬ್‌ಸೈಟ್‌ನಲ್ಲಿ 16 ಭಾಷೆಗಳನ್ನು ಅಳವಡಿಸಲಾಗಿದೆ. ಸ್ವಯಂ ಗಣತಿಯಲ್ಲಿ ಪಾಲ್ಗೊಳ್ಳುವವರು ತಮಗೆ ಅನುಕೂಲವಾಗುವ ಭಾಷೆಯನ್ನು ಆಯ್ಕೆ ಮಾಡಿ ಅದರ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ. ಆದರೆ, ವೆಬ್‌ಸೈಟ್‌ ತೆರೆದಾಗ ಆರಂಭದಲ್ಲಿ ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಮಾಹಿತಿ ದೊರೆಯುತ್ತದೆ. ಹೀಗೆ ಈ ಕಾರಣಗಳಿಂದಾಗಿ ಸ್ವಯಂ ಗಣತಿ ವ್ಯವಸ್ಥೆಯಲ್ಲಿ ಜನ ಅಷ್ಟಾಗಿ ಪಾಲ್ಗೊಂಡಿಲ್ಲ.

ಸ್ವಯಂ ಗಣತಿಯ ವಿವರ : ಮೊದಲ 5 ಜಿಲ್ಲೆಗಳು:

ಜಿಲ್ಲೆ ಮನೆಗಳ ಸಂಖ್ಯೆ ಸ್ವಯಂ ಗಣತಿಯಲ್ಲಿ ಪಾಲ್ಗೊಂಡವರು ಶೇಕಡಾವಾರು

ಬಳ್ಳಾರಿ 298536 35356 ಶೇ. 11.84

ಬಾಗಲಕೋಟೆ 440602 48395 ಶೇ. 10.98

ದಕ್ಷಿಣ ಕನ್ನಡ 567256 57466 ಶೇ. 10.13

ತುಮಕೂರು 780899 67840 ಶೇ. 8.69

ವಿಜಯನಗರ 288406 23384 ಶೇ. 8.11

ಕೊನೆಯ 5 ಜಿಲ್ಲೆಗಳು

ಜಿಲ್ಲೆ ಮನೆಗಳ ಸಂಖ್ಯೆ ಸ್ವಯಂ ಗಣತಿಯಲ್ಲಿ ಪಾಲ್ಗೊಂಡವರು ಶೇಕಡಾವಾರು

ಕೋಲಾರ 406685 3762 ಶೇ. 0.93

ಬೆಂಗಳೂರು ನಗರ 3351383 32907 ಶೇ. 0.98

ಚಾಮರಾಜನಗರ 298747 3604 ಶೇ. 1.21

ಮೈಸೂರು 911259 11034 ಶೇ. 1.21

ಬೆಳಗಾವಿ 1200302 14606 ಶೇ. 1.22

ಮನೆಗಳ ಸಂಖ್ಯೆ ಸ್ವಯಂ ಗಣತಿಯಲ್ಲಿ ಪಾಲ್ಗೊಂಡವರು ಶೇಕಡಾವಾರು

16857713 565015 ಶೇ. 3.35

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಇಂದು ಸ್ವಯಂ ಗಣತಿ ಪೂರ್ಣ, ನಾಳೆಯಿಂದ ಮನೆಗಣತಿ
ಬೀದಿಗಳಲ್ಲಿ ಇಲಿಗಳ ಕಾಟ : ಆರೋಗ್ಯ ಸಮಸ್ಯೆ ಭೀತಿ