;Resize=(412,232))
ಬೆಂಗಳೂರು : ನಾಗಸಾಧುಗಳ ಸೋಗಿನಲ್ಲಿ ವಾಸ್ತು ಶಿಲ್ಪಿಯೊಬ್ಬರಿಗೆ ವಂಚಿಸಿ 11 ಗ್ರಾಂ ಚಿನ್ನ ದೋಚಿ ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರ್‌ಪಿಸಿ ಲೇಔಟ್‌ನ ಅರುಣ್ ಶ್ರೀಪಾದ್ ವಂಚನೆಗೊಳಗಾಗಿದ್ದು, ಜೂ.12 ರಂದು ಅವರ ಕಚೇರಿಗೆ ನಾಗಸಾಧುಗಳ ಛದ್ಮವೇಷದಲ್ಲಿ ತೆರಳಿ ಆರೋಪಿಗಳು ವಂಚಿಸಿದ್ದಾರೆ. ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರ್‌ಪಿಸಿ ಲೇಔಟ್‌ನಲ್ಲಿರುವ ವಾಸ್ತುಶಿಲ್ಪಿ ಅರುಣ್ ಅವರ ಕಚೇರಿಗೆ ನಾಗಸಾಧುಗಳ ವೇಷದಲ್ಲಿ ಮೂವರು ತೆರಳಿದ್ದಾರೆ. ಆಗ ಅರುಣ್ ಅವರಿಗೆ ಬೂದಿ ಕೊಟ್ಟು ಮಂತ್ರಿಪಠಿಸಿದ್ದಾರೆ. ಆಗ ಅವರ ಕೈಯಲ್ಲಿದ್ದ 11 ಗ್ರಾಂ ಚಿನ್ನದ ಉಂಗುರ ಎಗರಿಸಿ ಅವರ ಕೈಗೆ ನಕಲಿ ಉಂಗುರು ಕೊಟ್ಟು ಆರೋಪಿಗಳು ಕಾಲ್ಕಿತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಸಾರ್ವಜನಿಕರಿಗೆ ಬೆದರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಡಿ.ಜೆ.ಹಳ್ಳಿ ನಿವಾಸಿ ಮೊಹಮ್ಮದ್ ನಯೀಂ ಹಾಗೂ ಸೈಯದ್ ವಸೀಂ ಬಂಧಿತರಾಗಿದ್ದು, ಆರೋಪಿಗಳಿಂದ ಬೈಕ್ ಹಾಗೂ ನಗದು ಹಣವನ್ನು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಕೆಂಪಾಪುರದ ಕೃಷ್ಣಸ್ವಾಮಿ ಅವರಿಗೆ ಬೆದರಿಸಿ 9000 ರು. ಹಣ ದೋಚಿ ಕಿಡಿಗೇಡಿಗಳು ಪರಾರಿಯಾಗಿದ್ದರು.
ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸುಲಭವಾಗಿ ಹಣ ಸಂಪಾದನೆಗೆ ಆರೋಪಿಗಳು ಸುಲಿಗೆ ಕೃತ್ಯಕ್ಕಿಳಿದಿದ್ದರು. ನಸುಕಿನ ಹೊತ್ತಿನಲ್ಲಿ ಏಕಾಂಗಿಯಾಗಿ ಸಂಚರಿಸುವ ನಾಗರಿಕರನ್ನೇ ಇಬ್ಬರು ಟಾರ್ಗೆಟ್ ಮಾಡಿ ಕೃತ್ಯ ಎಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.