ಬೆಂಗಳೂರು : ಮಾನ್ಯತಾ ವಿದ್ಯುತ್ ಉಪಕೇಂದ್ರದಲ್ಲಿ ತುರ್ತುನಿರ್ವಹಣಾ ಕೆಲಸ ನಡೆಯುವುದರಿಂದ ಸೆ.20 ರಂದು ಬೆಳಗ್ಗೆ 8 ರಿಂದ ಸಂಜೆ 6ರ ವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಶೋಭ ಸಿಟಿ, ಚೊಕ್ಕನಹಳ್ಳಿ, ಡೋಮಿನೊ, ಪಿಜ್ಜಾ ಇನ್ ಪ್ಯಾರಡೈಸ್ ನೂರ ನಗರ, ಎಕ್ಸ್ ಸರ್ವಿಸ್ ಮೆನ್ ಲೇಔಟ್, ಪೊಲೀಸ್ ಕ್ವಾರ್ಟರ್ಸ್, ಆರ್. ಕೆ. ಹೆಗಡೆ ನಗರ, ಶಬರಿ ನಗರ, ಹೊಸ ಶಾಂತಿ ನಗರ, ಕೆಂಪೇಗೌಡ ಲೇಔಟ್, ನಾಗೇನಹಳ್ಳಿ ಗ್ರಾಮ, ರೀಜೆನ್ಸಿ ಹಾರ್ಮೋನಿಕ್ ಲೇಔಟ್, ನಾಗೇನಹಳ್ಳಿ ಜಿಮ್ , ಸ್ಲಂ ಬೋರ್ಡ್ ಮತ್ತು ಬೆಂಚ್ ರಾಯಲ್‌ವುಡ್, ಅರ್ಕಾವತಿ ಲೇಔಟ್ ಥಣಿಸಂದ್ರ, ಬೆಳ್ಳಹಳ್ಳಿ ಗ್ರಾಮ, ತಿರಿಮೇನಹಳ್ಳಿ ಗ್ರಾಮ, ಮಿಟ್ಟಗಾನಹಳ್ಳಿ ಮತ್ತು ಕೋಗಿಲು ಗ್ರಾಮ, ಬೆಲಹಳ್ಳಿ ವಿಧಾನಸೌಧ ಲೇಔಟ್, ಕರ್ನಾಟಕ ಕಾಲೇಜು, ಭಾರತೀಯ ಸಿಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಪೂರ್ವ ವೃತ್ತ ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.
ಜಲಮಂಡಳಿ, ಬೆಸ್ಕಾಂ ಕಾಮಗಾರಿಗಳ ಸ್ಥಗಿತಕ್ಕೆ ಆಯುಕ್ತ ಚೋಳನ್ ಸೂಚನೆ
ಬೆಂಗಳೂರು : ಕಾಮಗಾರಿ ನಡೆಸಿದ ಬಳಿಕ ರಸ್ತೆಗಳನ್ನು ದುರಸ್ತಿ ಮಾಡದೇ ಹಾಗೆ ಬಿಟ್ಟು ವಾಹನ, ಜನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್ ಸೇರಿದಂತೆ ಎಲ್ಲಾ ಇಲಾಖೆಗಳ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುರುವಾರ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವಿವಿಧ ಇಲಾಖೆಯವರು ರಸ್ತೆಗಳನ್ನು ಅಗೆದು ಕಾಮಗಾರಿ ಪೂರ್ಣಗೊಳಿಸಿದ್ದರೂ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಹೀಗಾಗಿ, ದುರಸ್ತಿ ಕಾರ್ಯ ಕೈಗೊಳ್ಳುವವರೆಗೆ ಪ್ರಗತಿಯಲ್ಲಿರುವ ಕಾಮಗಾರಿಯನ್ನು ನಿಲ್ಲಿಸುವುದರ ಜೊತೆಗೆ ಹೊಸದಾಗಿ ಯಾವುದೇ ಇಲಾಖೆಗೂ ರಸ್ತೆ ಅಗೆತಕ್ಕೆ ಅನುಮತಿ ನೀಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕಾಮಗಾರಿ ನಡೆಸಿದ ನಂತರ ದುರಸ್ತಿ ಮಾಡದೇ ಹಾಗೇ ಬಿಡುವುದರಿಂದ ಪಾಲಿಕೆಗೆ ಕೆಟ್ಟ ಹೆಸರು ಬರುತ್ತಿದೆ. ಅಗೆದ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ನಿರ್ಲಕ್ಷ್ಯ ತೋರಲಾಗುತ್ತಿದೆ. ಹೀಗಾಗಿ, ಕಾಮಗಾರಿ ನಡೆದಿರುವ ಸ್ಥಳಗಳನ್ನು ಫೋಟೋ ಸಹಿತ ಪಟ್ಟಿ ಮಾಡಬೇಕು. ಅನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಸಭೆ ನಡೆಸಿ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚನೆ ನೀಡಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕವೇ ಪ್ರಗತಿಯಲ್ಲಿರುವ ಕಾಮಗಾರಿ ಹಾಗೂ ಕಾಮಗಾರಿಗೆ ಅನುಮತಿ ನೀಡಬೇಕು ಎಂದು ಚೋಳನ್ ಹೇಳಿದರು.
ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಿ:
ಸಂಪಿಗೆ ರಸ್ತೆ, ಶೇಷಾದ್ರಿ ರಸ್ತೆ, ಶಿವಾನಂದ ವೃತ್ತ ಸೇರಿದಂತೆ ಸುಮಾರು 6 ಕಿ.ಮೀ ರಸ್ತೆಗಳ ಪರಿಶೀಲನೆ ನಡೆಸಿದ ಆಯುಕ್ತರು, ಮೇಲ್ಮೈ ಪದರ ದುರಸ್ತಿ ಹಾಗೂ ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಬೇಕು. ಶಿವಾನಂದ ವೃತ್ತದ ಬಳಿಯಿರುವ ಎಲ್ಲಾ ರಸ್ತೆಗಳ ಮೇಲ್ಮೈ ಪದರ ಸಂಪೂರ್ಣ ಹಾಳಾಗಿದ್ದು, ಕೂಡಲೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಶೇಷಾದ್ರಿಪುರದ ಕುಮಾರ ಪಾರ್ಕ್ ರಸ್ತೆಯ ರೈಲ್ವೆ ಸಮಾನಾಂತರ ರಸ್ತೆಯುದ್ದಕ್ಕೂ ಪಾದಚಾರಿ ಮಾರ್ಗದ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಹಾಳಾದ ಬೀದಿ ದೀಪಗಳನ್ನು ಬದಲಿಸಲು ಚೋಳನ್ ಸೂಚಿಸಿದರು.
ನೋಡಲ್ ಅಧಿಕಾರಿಗಳ ನಿಯೋಜನೆ:
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳು, ಬ್ಲಾಕ್ ಸ್ಪಾಟ್, ನೀರು ನಿಲ್ಲುವ ಜಾಗಗಳು, ವಿದ್ಯುದ್ದೀಪ, ಪಾದಚಾರಿ ಮಾರ್ಗ ದುರಸ್ತಿ ಮಾಡಲು ಎಲ್ಲಾ ರಸ್ತೆಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಮಸ್ಯೆಗಳನ್ನು ಹಂತ-ಹಂತವಾಗಿ ಪರಿಹರಿಸಲಾಗುವುದು ಎಂದು ಆಯುಕ್ತ ಚೋಳನ್ ಹೇಳಿದ್ದಾರೆ.