ಬೆಂಗಳೂರು : ನಗರದ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೋದ ಹಳದಿ ಮಾರ್ಗ ಆರಂಭವಾದ ಬಳಿಕ ಈ ಮಾರ್ಗದ ರಸ್ತೆಗಳಲ್ಲಿ ವಾರದ ದಿನಗಳ ಬೆಳಗಿನ ಸಂಚಾರ ದಟ್ಟಣೆ ವೇಳೆಯಲ್ಲಿ ಸರಾಸರಿ ಶೇ.38ರಷ್ಟು ಹಾಗೂ ಸಂಜೆ ವೇಳೆ ಶೇ. 37ರಷ್ಟು ರಸ್ತೆ ಸಂಚಾರ ದಟ್ಟಣೆ ಕಡಿಮೆ ಆಗಿರುವುದು ಬೆಂಗಳೂರು ಸಂಚಾರಿ ಪೊಲೀಸರು ನಡೆಸಿದ ಅಧ್ಯಯನ ವರದಿಯಲ್ಲಿ ತಿಳಿದು ಬಂದಿದೆ.
19.15 ಕಿಮೀ ಉದ್ದದ ಈ ಮಾರ್ಗವನ್ನು ಕಳೆದ ಆ.10ರಂದು ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಿದ್ದರು. ಅದಾಗಿ ಒಂದೂವರೆ ತಿಂಗಳ ಅವಧಿಯಲ್ಲಿ ನಡೆಸಿದ ಅಧ್ಯಯನದಲ್ಲಿ ಸಂಚಾರ ದಟ್ಟಣೆ ಕಡಿಮೆ ಆಗಿರುವುದು ಕಂಡುಬಂದಿರುವುದಾಗಿ ವರದಿ ತಿಳಿಸಿದೆ. ಜತೆಗೆ ಮುಂದಿನ ದಿನಗಳಲ್ಲಿ ಹಳದಿ ಮಾರ್ಗದಲ್ಲಿ ರೈಲುಗಳು ಸೇರ್ಪಡೆ ಆದಂತೆ ಟ್ರಾಫಿಕ್ ಸಮಸ್ಯೆ ಇನ್ನಷ್ಟು ಕಡಿಮೆ ಆಗಲಿದೆ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಂಚಾರಿ ಪೊಲೀಸರು ‘ಅಸ್ತ್ರಮ್’ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವರದಿ ಪ್ರಕಾರ ವಾರಾಂತ್ಯದ ಬೆಳಗ್ಗೆಯ ಸಂಚಾರ ದಟ್ಟಣೆಯ ಅವಧಿಯಲ್ಲಿ ಸರಾಸರಿ ಶೇ.69ರಷ್ಟು ದಟ್ಟಣೆ ಇಳಿಕೆಯಾಗಿದೆ. ವಾರದ ದಿನಗಳ ಸಂಚಾರ ದಟ್ಟಣೆ ಅಲ್ಲದ ಅವಧಿಯಲ್ಲಿ ಶೇ.17ರಷ್ಟು ಇಳಿದಿರುವುದು ಕಂಡುಬಂದಿದೆ. ವಾರಾತಂತ್ಯದ ಸಂಚಾರ ದಟ್ಟಣೆ ಅಲ್ಲದ ಅವಧಿಯಲ್ಲಿ ರಸ್ತೆ ಸಂಚಾರ ದಟ್ಟಣೆ ಶೇ.58ರಷ್ಟು ಇಳಿಕೆಯಾಗಿದೆ. ಅದೇ ಸಂಜೆ ವೇಳೆ ಶೇ.39ರಷ್ಟು ಕಡಿಮೆಯಾಗಿದೆ. ಒಟ್ಟಾರೆ ಹಳದಿ ಮಾರ್ಗದಲ್ಲಿ ಸಂಚಾರ ದಟ್ಟಣೆ ಆರಂಭವಾದ ಬಳಿಕ ಶೇ.30ರಷ್ಟು ಇಳಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಸೇರಿ ಟೆಕ್ ಹಬ್ ಎನ್ನಿಸಿಕೊಂಡಿರುವ ಈ ಮಾರ್ಗದಲ್ಲಿ ಟೆಕ್ಕಿಗಳು ಮೆಟ್ರೋವನ್ನು ಬಳಸಲು ಆರಂಭಿಸಿರುವುದು ಸಂಚಾರ ದಟ್ಟಣೆ ನಿವಾರಣೆಗೆ ಕಾರಣವಾಗಿದೆ. ಮೆಟ್ರೋಗಾಗಿ ಕಾಯುವಿಕೆ ಅವಧಿ ಕಡಿಮೆ ಆದಲ್ಲಿ ರಸ್ತೆ ಮೇಲಿನ ಮತ್ತಷ್ಟು ಒತ್ತಡ ಕಡಿಮೆಯಾಗಲಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.