ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿ ನ್ಯಾಯಾಲಯಕ್ಕೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.
ಬೆಂಗಳೂರು : ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿ ನ್ಯಾಯಾಲಯಕ್ಕೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಈ ಬಗ್ಗೆ ರೇವಣ್ಣ ಅವರು ಸೋಮವಾರ ಬೆಂಗಳೂರಿನಲ್ಲಿ ವಕೀಲರ ಜತೆ ಸಮಾಲೋಚನೆ ನಡೆಸಿದ್ದು, ಮಂಗಳವಾರ ಅವರು ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಬಹುದು ಎನ್ನಲಾಗಿದೆ.
ಇನ್ನು ಜಾಮೀನು ಇತ್ಯರ್ಥ ಬಳಿಕ ಎಸ್‌ಐಟಿ ಮುಂದೆ ಹಾಜರಾಗಲು ವಿದೇಶದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂಸದನ ಅಧಿಕಾರ ಬಳಸಿ ಪರಾರಿ : ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಶುಕ್ರವಾರ ಸಂಜೆ ದಿಢೀರ್ ಬೆಂಗಳೂರಿಗೆ ದೌಡಾಯಿಸಿದ ಹಾಸನ ಸಂಸದ ಪ್ರಜ್ವಲ್, ಬಳಿಕ ತಡರಾತ್ರಿವರೆಗೆ ಪರಿಚಿತರ ಮನೆಯಲ್ಲಿದ್ದರು. ನಂತರ ತಮ್ಮ ಸಂಸದರ ರಾಜತಾಂತ್ರಿಕ ಅಧಿಕಾರ ಬಳಸಿ ಜರ್ಮನಿ ವೀಸಾ ಪಡೆದು ಅವರು ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ.