ಜೈಲಿನ ಕೂಲಿ ಕೆಲಸಕ್ಕೆ ಪ್ರಜ್ವಲ್‌ ರೇವಣ್ಣ ಚಕ್ಕರ್‌!

Published : Jul 10, 2026, 04:51 AM IST
Prajwal Revanna

ಸಾರಾಂಶ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತಮಗೆ ನೀಡಲಾದ ಕೆಲಸವನ್ನು ಮಾಡದೆ ಅತ್ಯಾ*ರ ಪ್ರಕರಣದ ಸಜಾ ಕೈದಿ, ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು :  ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ತಮಗೆ ನೀಡಲಾದ ಕೆಲಸವನ್ನು ಮಾಡದೆ ಅತ್ಯಾ*ರ ಪ್ರಕರಣದ ಸಜಾ ಕೈದಿ, ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಅತ್ಯಾ*ರ ಪ್ರಕರಣ ಸಂಬಂಧ ಕಳೆದ ವರ್ಷ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ ಬಳಿಕ ಕಾರಾಗೃಹದ ಗ್ರಂಥಾಲಯದಲ್ಲಿನ ಸಹಾಯಕನ ಕೆಲಸವನ್ನು ಪ್ರಜ್ವಲ್ ಅವರೇ ಆಯ್ಕೆ ಮಾಡಿಕೊಂಡಿದ್ದರು. ಈ ಕೆಲಸಕ್ಕೆ ಅವರಿಗೆ 520 ರು. ದಿನಗೂಲಿ ಸಹ ನಿಗದಿಯಾಗಿತ್ತು. ಆದರೆ ಇದುವರೆಗೆ ಕೆಲಸಕ್ಕೆ ಪ್ರಜ್ವಲ್ ಹಾಜರಾಗದೆ ಗೈರಾಗಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ ಮಾಹಿತಿ ನೀಡಿವೆ.

ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ತಮ್ಮ ಇತರೆ ಪ್ರಕರಣಗಳ ವಿಚಾರಣೆಗೆ ಹಾಜರಾಗುವ ಅವರು, ಇನ್ನುಳಿದ ಸಮಯವನ್ನು ಯೋಗ, ಪುಸ್ತಕ ಓದು ಹಾಗೂ ಧ್ಯಾನ ಮಾಡುತ್ತಾ ಕಳೆಯುತ್ತಿದ್ದಾರೆ. ಕೆಲಸಕ್ಕೆ ಹಾಜರಾಗುವಂತೆ ಅವರಿಗೆ ಅಧಿಕಾರಿಗಳು ಕಟ್ಟುನಿಟ್ಟಾಗಿ ತಾಕೀತು ಮಾಡಿಲ್ಲ. ಇದರಿಂದ ಪ್ರಜ್ವಲ್ ಅವರು ನಿರಾಳರಾಗಿದ್ದಾರೆ ಎನ್ನಲಾಗಿದೆ.

ಯಾಕೆ ಕೆಲಸ?:

2024ರ ಲೋಕಸಭಾ ಚುನಾವಣೆ ಸಮರದ ಅಂತ್ಯದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಅಂದಿನ ಸಂಸದ ಹಾಗೂ ಜೆಡಿಎಸ್ ಹುರಿಯಾಳು ಪ್ರಜ್ವಲ್ ವಿರುದ್ಧ ಲೈಂ*ಕ ದೌರ್ಜನ್ಯ ಆರೋಪ ಕೇಳಿ ಬಂದಿತ್ತು. ಮತದಾನದ ಮರುದಿನ ಲೈಂ*ಕ ಹಗರಣದ್ದು ಎನ್ನಲಾದ ಅಶ್ಲೀಲ ವಿಡಿಯೋ ತುಂಬಿದ್ದ ‘ಪೆನ್‌ ಡ್ರೈವ್‌’ಗಳು ಹಂಚಿಕೆಯಾಗಿ ವೈರಲ್ ಆಗಿದ್ದವು. ಈ ಹಗರಣದ ಕುರಿತು ತನಿಖೆಗೆ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್ ಸಾರಥ್ಯದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ)ಯನ್ನು ಸರ್ಕಾರ ರಚಿಸಿತ್ತು. ಬಳಿಕ ಮೂರು ಅತ್ಯಾ*ರ ಪ್ರಕರಣಗಳು ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದವು.

ಈ ಕೃತ್ಯ ಬೆಳಕಿಗೆ ಬಂದ ನಂತರ ವಿದೇಶಕ್ಕೆ ಪರಾರಿಯಾಗಿದ್ದ ಅವರು ತಾಯ್ನಾಡಿಗೆ ಮರಳಿದ ಕೂಡಲೇ ಬಂಧನವಾಯಿತು. 2025ರ ಆಗಸ್ಟ್ 2ರಂದು ತಮ್ಮ ಮನೆ ಕೆಲಸದಾಳು ಮೇಲೆ ಅತ್ಯಾ*ರ ಎಸಗಿದ ಪ್ರಕರಣದಲ್ಲಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಸಜಾ ಕೈದಿಯಾದ ನಂತರ ಜೈಲಿನ ನಿಯಮಾವಳಿ ಅನ್ವಯ ಜೈಲಿನಲ್ಲಿ ಅವರು ಶ್ರಮದಾನ ಮಾಡಬೇಕಿತ್ತು.

ಕೌಶಲ್ಯಕ್ಕೆ ಅನುಗುಣವಾಗಿ ಕೈದಿಗಳಿಗೆ ಕೆಲಸದ ಆಯ್ಕೆ ಸ್ವಾತಂತ್ರ್ಯವಿದೆ. ಅಂತೆಯೇ ಗ್ರಂಥಾಲಯದಲ್ಲಿ ಸಹಾಯಕನ ಕೆಲಸವನ್ನು ಪ್ರಜ್ವಲ್ ಆರಿಸಿಕೊಂಡರು. ಇದಕ್ಕೆ ಪ್ರತಿ ದಿನ ಅವರಿಗೆ 520 ರು. ಕೂಲಿ ನಿಗದಿಯಾಗಿತ್ತು (ಕೈದಿಗಳಿಗೆ ಜೈಲಿನಲ್ಲಿ ಕನಿಷ್ಠ 520 ರು.ನಿಂದ ಗರಿಷ್ಠ 610 ರು. ದಿನಗೂಲಿ ಸಿಗಲಿದೆ). ಆರಂಭದಲ್ಲಿ ಕೆಲ ತಾಸು ಕೆಲಸಕ್ಕೆ ಹಾಜರಾದ ಮಾಜಿ ಸಂಸದ ಆನಂತರ ಗ್ರಂಥಾಲಯದ ಕಡೆ ಹೆಜ್ಜೆ ಹಾಕದೆ ದೂರ ಉಳಿದಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಕೋರ್ಟ್ ವಿಚಾರಣೆ ಕಾರಣ

ನ್ಯಾಯಾಲಯದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ನಾಲ್ಕು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ಈ ಕಾರಣ ಮುಂದಿಟ್ಟು ಅವರು ಕೆಲಸಕ್ಕೆ ಗೈರಾಗಿದ್ದಾರೆ ಎನ್ನಲಾಗಿದೆ.

ಸನ್ನಡತೆಗೆ ಶ್ರಮದಾನ ಪರಿಗಣನೆ

ಜೈಲಿನಲ್ಲಿ ಶ್ರಮದಾನವು ಅವಧಿಪೂರ್ವ ಕೈದಿಗಳ ಬಿಡುಗಡೆಗೆ ಅನುಕೂಲವಾಗಲಿದೆ. ಸನ್ನಡತೆ ಆಧಾರದಡಿ ಕೈದಿಗಳು ಬಂಧಮುಕ್ತರಾಗುತ್ತಾರೆ. ಜೈಲಿನಲ್ಲಿ ಕಾನೂನುಪಾಲನೆ ಹಾಗೂ ಶ್ರಮದಾನವು ಒಳ್ಳೆಯ ನಡವಳಿಕೆ ನಿರೂಪಿಸುವ ಮಾನದಂಡವಾಗಿದೆ. ಹೀಗಾಗಿ ಕಾರಾಗೃಹದಲ್ಲಿ ಕೈದಿಗಳು ಕೆಲಸ ಮಾಡದೆ ಹೋದರೆ ಸನ್ನಡತೆ ಆಧಾರದಲ್ಲಿ ಆ ಕೈದಿಗಳ ಬಿಡುಗಡೆಗೆ ಶಿಫಾರಸು ಮಾಡಲು ಅವಕಾಶವಿರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಸುತ್ತ ಕಾರಾಗೃಹದಲ್ಲಿ ಸುಮಾರು 500 ಕೈದಿಗಳಿಗೆ ಕೂಲಿ ಕೊಡಬಹುದು. ಹೀಗಾಗಿ ಎಲ್ಲಾ ಸಜಾ ಬಂಧಿಗಳಿಗೂ ಕೆಲಸ ಹಂಚಿಕೆ ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಶ್ರಮದಾನವನ್ನು ಕಡ್ಡಾಯಗೊಳಿಸಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಿನಯ್‌ ಕುಲಕರ್ಣಿಗೆ ಕೂಡ ಕೆಲಸ ಇಲ್ಲ

ಇನ್ನು ಜಿಪಂ ಮಾಜಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಇನ್ನೂ ಕೆಲಸ ಆಯ್ಕೆ ಮಾಡಿಕೊಂಡಿಲ್ಲ ಎಂದು ತಿಳಿದು ಬಂದಿದೆ. ಕೊಲೆ ಪ್ರಕರಣದಲ್ಲಿ ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್‌ಗೆ ಸಜಾ ಕೈದಿ ವಿನಯ್ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಶ್ರಮದಾನಕ್ಕೆ ಕೆಲಸವನ್ನು ಮಾಜಿ ಸಚಿವರು ಆಯ್ಕೆ ಮಾಡಿಕೊಂಡಿಲ್ಲ ಎಂದು ತಿಳಿದು ಬಂದಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯದ ಡ್ಯಾಂಗಳಿಗೆ 5 ದಿನದಲ್ಲೇ ಬಂತು 50 ಟಿಎಂಸಿ ನೀರು!
ಮಹಾ ಗಡಿ ಕ್ಯಾತೆಗೆ ತಕ್ಕ ಉತ್ತರ : ಸಿಎಂ