ರಾಜ್ಯದ ಡ್ಯಾಂಗಳಿಗೆ 5 ದಿನದಲ್ಲೇ ಬಂತು 50 ಟಿಎಂಸಿ ನೀರು!

Published : Jul 10, 2026, 04:44 AM IST
  Rain

ಸಾರಾಂಶ

ಕಳೆದ ನಾಲ್ಕೈದು ದಿನಗಳಿಂದ ರಾಜ್ಯಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಅದರ ಪರಿಣಾಮ ಮುಂಗಾರು ಆರಂಭವಾಗಿ ತಿಂಗಳಾದರೂ ಖಾಲಿಯಾಗಿದ್ದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.

  ಬೆಂಗಳೂರು :  ಕಳೆದ ನಾಲ್ಕೈದು ದಿನಗಳಿಂದ ರಾಜ್ಯಾದ್ಯಂತ ಭಾರಿ ಮಳೆ ಸುರಿಯುತ್ತಿದೆ. ಅದರ ಪರಿಣಾಮ ಮುಂಗಾರು ಆರಂಭವಾಗಿ ತಿಂಗಳಾದರೂ ಖಾಲಿಯಾಗಿದ್ದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ. ಐದು ದಿನದಲ್ಲೇ ಡ್ಯಾಂಗಳಿಗೆ 50 ಟಿಎಂಸಿಗೂ ಅಧಿಕ ನೀರು ಹರಿದುಬಂದಿದ್ದು, ಈ ಅವಧಿಯಲ್ಲಿ ಜಲಾಶಯಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಬಹುತೇಕ ಡಬಲ್‌ ಆಗಿದೆ.

ಸೂಪರ್‌ ಎಲ್‌ನಿನೋ ಕಾರಣದಿಂದಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಆತಂಕ ಸೃಷ್ಟಿಯಾಗಿತ್ತು. ಆದರೀಗ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ರಾಜ್ಯದ ಪ್ರಮುಖ 22 ಜಲಾಶಯಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿರುವುದು ನೆಮ್ಮದಿ ತಂದಿದೆ.

ಅದರಲ್ಲೂ 5 ದಿನಗಳಿಂದೀಚೆಗೆ ಅಣೆಕಟ್ಟುಗಳಲ್ಲಿ 50.91 ಟಿಎಂಸಿ ಅಡಿಗಳಷ್ಟು ನೀರು ಹೆಚ್ಚಾಗಿದೆ. ಜಲಸಂಪನ್ಮೂಲ ಇಲಾಖೆ ಮಾಹಿತಿಯಂತೆ ಕಳೆದ ಶನಿವಾರ (ಜು. 4)ರಂದು 22 ಅಣೆಕಟ್ಟುಗಳಲ್ಲಿ ಕೇವಲ 66.62 ಟಿಎಂಸಿ ನೀರು ಭರ್ತಿಯಾಗಿತ್ತು. ಅದೇ ಜು. 9ಕ್ಕೆ ನೀರಿನ ಪ್ರಮಾಣ 117.53 ಟಿಎಂಸಿ ಅಡಿಗಳಿಗೆ ಏರಿಕೆಯಾಗಿದೆ.

ಎಷ್ಟು ಏರಿಕೆ?:

ಕಳೆದ ಐದು ದಿನಗಳ ಹಿಂದಷ್ಟೇ ಏಳು ಅಣೆಕಟ್ಟುಗಳಲ್ಲಿ ಒಟ್ಟು ಸಾಮರ್ಥ್ಯದ ಶೇ. 25ಕ್ಕಿಂತ ಕಡಿಮೆ ನೀರಿತ್ತು. ಉಳಿದಂತೆ 6 ಜಲಾಶಯಗಳಲ್ಲಿ ಶೇ. 25ರಿಂದ 55ರಷ್ಟು, 7 ಜಲಾಶಯಗಳಲ್ಲಿ ಶೇ. 55ರಿಂದ 75 ಹಾಗೂ ಎರಡು ಜಲಾಶಯಗಳಲ್ಲಿ (ವಾಣಿ ವಿಲಾಸ ಸಾಗರ ಮತ್ತು ಮುಲ್ಲಾಮಾರಿ ಕೆಳದಂಡೆ ಜಲಾಶಯ) ಮಾತ್ರ ಶೇ. 75ರಿಂದ 100ರಷ್ಟು ನೀರು ಭರ್ತಿಯಾಗಿತ್ತು.

ಅದೇ ಜು. 19ಕ್ಕೆ ತುಂಗಭದ್ರಾ ಜಲಾಶಯ, ಭೀಮಾ ಏತ ಜಲಾಶಯ, ಸೌದಾಗರ್‌ ಜಲಾಶಯಗಳಲ್ಲಿ ಮಾತ್ರ ಶೇ. 25ಕ್ಕಿಂತ ಕಡಿಮೆ ನೀಡಿದೆ. ಉಳಿದಂತೆ ಕೆಆರ್‌ಎಸ್‌ ಜಲಾಶಯ, ಆಲಮಟ್ಟಿ ಜಲಾಶಯ ಸೇರಿದಂತೆ 10 ಜಲಾಶಯಗಳಲ್ಲಿ ಶೇ. 25ರಿಂದ 55ರಷ್ಟು, 6 ಜಲಾಶಯಗಳಲ್ಲಿ ಶೇ. 55ರಿಂದ 75 ಹಾಗೂ ವಾಣಿ ವಿಲಾಸ ಸಾಗರ ಮತ್ತು ಮುಲ್ಲಾಮಾರಿ ಕೆಳದಂಡೆ ಜಲಾಶಯಗಳಲ್ಲಿ ಶೇ. 75ರಿಂದ 100ರಷ್ಟು ನೀರು ಭರ್ತಿಯಾಗಿದೆ.

ಜಲಾಶಯಗಳಲ್ಲಿ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕಾರಣದಿಂದಾಗಿ ಕೃಷಿ ಚಟುವಟಿಕೆಗೆ ಇದ್ದ ತೊಡಕು ನಿವಾರಣೆಯಾಗುತ್ತಿದೆ. ಅಲ್ಲದೆ, ಕೆಆರ್‌ಎಸ್‌ ಜಲಾಶಯದಲ್ಲಿ ಸದ್ಯ 13.51 ಟಿಎಂಸಿ ಅಡಿಗಳಷ್ಟು ನೀರಿದ್ದು 5.13 ಟಿಎಂಸಿ ಅಡಿಗಳಷ್ಟು ನೀರನ್ನು ಬಳಸಬಹುದಾಗಿದೆ. ಅಲ್ಲದೆ ಒಳಹರಿವು 12694 ಕ್ಯುಸೆಕ್‌ಗೆ ಹೆಚ್ಚಳವಾಗಿದ್ದು, ಹೊರಹರಿವು ಕೇವಲ 684 ಕ್ಯುಸೆಕ್‌ ಇದೆ. ಅದೇ ರೀತಿ ಆಲಮಟ್ಟಿ ಜಲಾಶಯಕ್ಕೆ 1.31 ಲಕ್ಷ ಕ್ಯುಸೆಕ್‌ ಒಳಹರಿವು, ತುಂಗಭದ್ರಾ ಜಲಾಶಯಕ್ಕೆ 28 ಸಾವಿರ ಕ್ಯುಸೆಕ್‌, ಭದ್ರಾ ಜಲಾಶಯಕ್ಕೆ 16304 ಕ್ಯುಸೆಕ್‌, ಹೇಮಾವತಿ ಜಲಾಶಯಕ್ಕೆ 15646 ಕ್ಯುಸೆಕ್‌ ಒಳಹರಿವಿದೆ.

- ಎಲ್‌ ನಿನೋ ಪರಿಣಾಮ ಜೂನ್‌ನಲ್ಲಿ ಭಾರಿ ಪ್ರಮಾಣದಲ್ಲಿ ಕ್ಷೀಣಿಸಿದ್ದ ಮುಂಗಾರು

- ಆ ವೇಳೆ ಅಪಾಯಕಾರಿ ಮಟ್ಟಕ್ಕೆ ಕುಸಿದಿದ್ದ ಅಣೆಕಟ್ಟುಗಳಲ್ಲಿನ ನೀರಿನ ಪ್ರಮಾಣ

- ಕೇವಲ 66.62 ಟಿಎಂಸಿ ನೀರು ಭರ್ತಿ ಆಗಿ, ಸೃಷ್ಟಿಯಾಗಿದ್ದ ಬರಗಾಲದ ಆತಂಕ

- ಆದರೆ ಕಳೆದ 5 ದಿನದಿಂದ ಉತ್ತಮ ಮಳೆ. ಜಲ ಸಂಗ್ರಹ 117 ಟಿಎಂಸಿಗೇರಿಕೆ

- ಮಳೆ ಇದೇ ರೀತಿ ಮುಂದುವರಿದರೆ ಬರದ ಆತಂಕ ದೂರ ಆಗುವ ಆಶಾಭಾವ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮಹಾ ಗಡಿ ಕ್ಯಾತೆಗೆ ತಕ್ಕ ಉತ್ತರ : ಸಿಎಂ
ಮುಜರಾಯಿ ದೇಗುಲಗಳಲ್ಲಿ ದೇಣಿಗೆ ಸಿಸಿಟೀವಿ ನಿಗಾದಲ್ಲಿ ಇನ್ನು ಸಂಗ್ರಹ