ತರಕಾರಿಯಲ್ಲಿನ ಅಪಾಯಕಾರಿ ಅಂಶ ದೇಹಕ್ಕೆ ಸೇರದಿರಲು ಈ ಕ್ರಮ ಅನುಸರಿಸಿ ಸೇವಿಸಿ

Published : Feb 25, 2026, 08:49 AM IST
vegetable

ಸಾರಾಂಶ

ಬೆಂಗಳೂರು ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ತರಕಾರಿ, ಸೊಪ್ಪುಗಳಲ್ಲಿ ಸೀಸದ ಅಂಶಗಳು ಸೇರಿದಂತೆ ಭಾರಿ ಲೋಹದ ಅಂಶಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ. ಈ ಸಮಸ್ಯೆಗೆ ಮೂಲದಲ್ಲೇ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.

  ಬೆಂಗಳೂರು :  ಬೆಂಗಳೂರು ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ತರಕಾರಿ, ಸೊಪ್ಪುಗಳಲ್ಲಿ ಸೀಸದ ಅಂಶಗಳು ಸೇರಿದಂತೆ ಭಾರಿ ಲೋಹದ ಅಂಶಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ. ಈ ಸಮಸ್ಯೆಗೆ ಮೂಲದಲ್ಲೇ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಅಲ್ಲದೇ, ತರಕಾರಿಗಳನ್ನು ಬಿಸಿ ನೀರಿನಲ್ಲಿ ತೊಳೆದ ಬಳಿಕವೇ ಸೇವನೆ ಮಾಡುವುದು ಸೂಕ್ತ ಎಂದು ಆಹಾರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮೇಲ್ಭಾಗದಲ್ಲಿನ ಅನಾರೋಗ್ಯಕಾರಕ ಅಂಶ ತೊಳೆಯುವ ಮೂಲಕ ಪರಿಹರಿಸಿಕೊಳ್ಳಬಹುದು

ಹಣ್ಣು, ತರಕಾರಿಗಳು, ಸೊಪ್ಪುಗಳ ಮೇಲ್ಭಾಗದಲ್ಲಿನ ಅನಾರೋಗ್ಯಕಾರಕ ಅಂಶಗಳನ್ನು ಸ್ವಚ್ಛವಾಗಿ ತೊಳೆಯುವ ಮೂಲಕ ಪರಿಹರಿಸಿಕೊಳ್ಳಬಹುದು. ಆದರೆ, ಒಳಗಿನ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಲಾಗದು. ಶುದ್ಧವಾದ ತರಕಾರಿಗಳನ್ನು ಬೆಳೆಯಲು ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕೃಷಿಯಲ್ಲೇ ಸುಧಾರಣೆ ತರಬೇಕು. ಈ ನಿಟ್ಟಿನಲ್ಲಿ ತೋಟಗಾರಿಕೆ, ಕೃಷಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಕಾರ್ಯೋನ್ಮುಖವಾಗಬೇಕು ಎಂದು ಫೋರ್ಟೀಸ್ ಆಸ್ಪತ್ರೆಯ ಚೀಫ್ ಡಯಟೀಷಿಯನ್ ಡಾ.ಶಾಲಿನಿ ಅರವಿಂದ್ ಹೇಳಿದ್ದಾರೆ.

ಸೊಪ್ಪು, ತರಕಾರಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಆಹಾರವಾಗಿವೆ. ಉತ್ತಮ ಆರೋಗ್ಯಕ್ಕಾಗಿ ಹಣ್ಣು, ತರಕಾರಿ, ಸೊಪ್ಪು ತಿನ್ನಲು ಸಲಹೆ ನೀಡಲಾಗುತ್ತದೆ. ಆದರೆ, ಅವುಗಳಲ್ಲೇ ಸಮಸ್ಯೆ ಇದೆ ಎಂದಾಗ ಏನು ಮಾಡಬೇಕು ಎನ್ನುವ ಪ್ರಶ್ನೆ ಎದುರಾಗುತ್ತದೆ. ಇಂತಹ ಪ್ರಶ್ನೆಗಳನ್ನು ನಾವು ಅನೇಕ ಬಾರಿ ರೋಗಿಗಳಿಂದ ಕೇಳಿಸಿಕೊಂಡಿದ್ದೇವೆ. ಸಾಧ್ಯವಾದಷ್ಟು ಸಾವಯವ ಕೃಷಿಯ ಕಡೆ ಗಮನ ಹರಿಸಬೇಕು. ನಿರಂತರವಾಗಿ ಮಣ್ಣು, ನೀರಿನ ತಪಾಸಣೆ ಆಗಬೇಕು. ಸುರಕ್ಷಿತ ಆಹಾರವನ್ನು ಬೆಳೆಯಲು ಕ್ರಮ ಕೈಗೊಳ್ಳಬೇಕು ಎಂದು ಡಾ.ಶಾಲಿನಿ ಅರವಿಂದ್ ಹೇಳಿದರು.

ತಕ್ಷಣದ ಪರಿಹಾರ ಕ್ರಮಗಳು

ತರಕಾರಿಗಳಲ್ಲಿ ಸೀಸದ ಅಂಶ ಪತ್ತೆ ಆಗುವುದು ಭಾರೀ ವಿರಳ. ಆದರೆ, ಸೀಸದ ಅಂಶ ಇರುವ ತರಕಾರಿ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಹೊಟ್ಟೆ ನೋವು, ವಾಂತಿ ಜೊತೆಗೆ ನರ ದೌರ್ಬಲ್ಯ ಉಂಟಾಗುತ್ತದೆ. ಯಾವುದೇ ತರಕಾರಿ ಸೇವನೆ ಮಾಡುವ ಮುನ್ನ ಬಿಸಿ ನೀರಿನಲ್ಲಿ ತೊಳೆಯಬೇಕು. ಕ್ರಿಮಿನಾಶಕ ಅವಶೇಷದ ಅಂಶವನ್ನು ಕಡಿಮೆ ಮಾಡಲು ಬಿಸಿ ನೀರು ಬಳಸಿ ತರಕಾರಿ, ಹಣ್ಣು, ಸೊಪ್ಪುಗಳನ್ನು ಚೆನ್ನಾಗಿ ತೊಳೆಯಬೇಕು. ತರಕಾರಿಗಳನ್ನು ಕುದಿಸುವುದರಿಂದ ತಕ್ಕಮಟ್ಟಿಗೆ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಆಹಾರ ತಜ್ಞೆ ಡಾ. ಕೀರ್ತಿ ಹೇಳಿದ್ದಾರೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಶಿಫಾರಸುಗಳು

ಕೋಲಾರ, ಚಿಕ್ಕಬಳ್ಳಾಪುರ, ನೆಲಮಂಗಲ ಪ್ರದೇಶಗಳಲ್ಲಿ ಬೆಳೆಯುವ ತರಕಾರಿಗಳಲ್ಲಿ ಸೀಸ ಸೇರಿದಂತೆ ಭಾರಿ ಲೋಹದ ಅಂಶಗಳು ಮತ್ತು ಕ್ರಿಮಿನಾಶಕ ಅವಶೇಷ ಕಂಡು ಬಂದಿರುವ ಕಾರಣ ಅದನ್ನು ಸರಿಪಡಿಸಲು ಕೆಲವು ಶಿಫಾರಸುಗಳನ್ನು ಮಾಡಿದೆ. 19 ತರಕಾರಿ ಮಾದರಿಗಳಲ್ಲಿ ಮಿತಿಗಿಂತ ಹೆಚ್ಚು ಸೀಸದ ಅಂಶ ಕಂಡು ಬಂದಿದ್ದು, ಇದರ ಮೂಲವನ್ನು ಪತ್ತೆಹಚ್ಚಲು ಕೃಷಿ ಇಲಾಖೆ ಮತ್ತು ಆಹಾರ ಸುರಕ್ಷತಾ ಇಲಾಖೆಯಿಂದ ಹೆಚ್ಚಿನ ತನಿಖೆ ನಡೆಸಬಹುದು.

- ದಪ್ಪ ಮೆಣಸಿನಕಾಯಿ, ಬಜ್ಜಿ ಮೆಣಸಿನಕಾಯಿ, ಸೌತೆಕಾಯಿ ಮತ್ತು ಶುಂಠಿಯಲ್ಲಿ ನಿಗದಿಪಡಿಸಿದ ಮಿತಿಗಳಿಗಿಂತ ಹೆಚ್ಚಿನ ಪ್ರಮಾಣದ ಕೀಟನಾಶಕ ಅವಶೇಷಗಳು ಪತ್ತೆಯಾಗಿವೆ. ರೈತರು ತರಕಾರಿಗಳಿಗೆ ಅವೈಜ್ಞಾನಿಕವಾಗಿ ಮತ್ತು ಅತಿಯಾದ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸುವುದನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

-ಮಿತಿಯಲ್ಲಿ ಕ್ರಿಮಿನಾಶಕಗಳ ಬಳಕೆಯ ಬಗ್ಗೆ ಕೃಷಿ ಇಲಾಖೆಯು ರೈತರಿಗೆ ಜಾಗೃತಿ, ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

- ತರಕಾರಿ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಬೆಳೆಯುವಾಗ ಹೊಲಗಳಲ್ಲಿ ಕೀಟನಾಶಕಗಳ ಮಿತಿ ಮತ್ತು ನಿಯಂತ್ರಿತ ಬಳಕೆಗೆ ಉತ್ತೇಜನ ನೀಡಬೇಕು.

- ಪರಿಸರ ಸ್ನೇಹಿ ಕೀಟನಾಶಕಗಳ ಬಳಕೆ.

- ಸುಸ್ಥಿರ ಮತ್ತು ಪರಿಸರ ಪೂರಕ ತಂತ್ರಜ್ಞಾನಗಳನ್ನು ಬಳಸಿ ಕೀಟ ನಿಯಂತ್ರಣ.

- ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಅಥವಾ ಗ್ರಾಹಕರಿಗೆ ಕಳುಹಿಸುವ ಮೊದಲು ಅವುಗಳನ್ನು ಸ್ವಚ್ಛಗೊಳಿಸಲು, ತೊಳೆಯಲು ಆದ್ಯತೆ ನೀಡಬೇಕು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ದಿನಪತ್ರಿಕೆಗಳನ್ನು ಹಂಚುತ್ತಿದ್ದ ಹುಡುಗ ಈಗ ಜಡ್ಜ್
ಧಾರ್ಮಿಕ ಸಾಮರಸ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ