2.0 ಮೂಲಕ ಆಸ್ತಿ ವಿಭಜನೆ ಸರಳ: ಕೃಷ್ಣ

Published : Oct 18, 2026, 10:41 AM IST
Krishna Byre Gowda

ಸಾರಾಂಶ

ಜಂಟಿ ಮಾಲೀಕತ್ವದ ಆಸ್ತಿಗಳ ಖಾತಾದಲ್ಲಿ ಉಪ ವಿಭಜನೆ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಇ-ಖಾತಾ ಪಡೆಯುವ ಸಂದರ್ಭದಲ್ಲಿ ಜಂಟಿ ಮಾಲೀಕತ್ವ ಮತ್ತು ಉಪ ವಿಭಜನೆ ಮಾಹಿತಿ ಸಲ್ಲಿಸಿ ಪ್ರತ್ಯೇಕ ಇ-ಖಾತಾ ಪಡೆಯಲು ಅವಕಾಶ ಕಲ್ಪಿಸಲಾಗಿದೆ

ಬೆಂಗಳೂರು : ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿನ ಜಂಟಿ ಮಾಲೀಕತ್ವದ ಆಸ್ತಿಗಳ ಖಾತಾದಲ್ಲಿ ಉಪ ವಿಭಜನೆ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಇ-ಖಾತಾ ಪಡೆಯುವ ಸಂದರ್ಭದಲ್ಲಿ ಜಂಟಿ ಮಾಲೀಕತ್ವ ಮತ್ತು ಉಪ ವಿಭಜನೆ ಮಾಹಿತಿ ಸಲ್ಲಿಸಿ ಪ್ರತ್ಯೇಕ ಇ-ಖಾತಾ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಕಾಸಸೌಧದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷ್ಣ ಬೈರೇಗೌಡ, ಹಲವು ವರ್ಷಗಳಿಂದ ಆಸ್ತಿಗಳ ವಿಭಜನೆಯಾಗುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಬರುತ್ತಿತ್ತು. ಅದನ್ನು ನಿವಾರಿಸುವ ಉದ್ದೇಶದಿಂದ ಜಂಟಿ ಮಾಲೀಕತ್ವ ಹೊಂದಿದ ಅರ್ಧ ಎಕರೆ (21,500 ಚ.ಅಡಿ)ಗೂ ಕಡಿಮೆ ಭೂಮಿಯ ಇ-ಖಾತಾ ಪಡೆಯುವ ಸಂದರ್ಭದಲ್ಲಿ ಆಸ್ತಿ ಉಪ ವಿಭಜನೆ ಮಾಹಿತಿ ಸಲ್ಲಿಸಿ ಆನ್‌ಲೈನ್‌ ಮೂಲಕ ಪ್ರತ್ಯೇಕ ಇ-ಖಾತಾ ಪಡೆಯಬಹುದಾಗಿದೆ. ಈ ಪ್ರಕ್ರಿಯೆಯನ್ನು ಇ-ಆಸ್ತಿ 2.0 ತಂತ್ರಾಂಶದ ಮೂಲಕ ಮಾಡಿಕೊಳ್ಳಬಹುದಾಗಿದ್ದು, ನಗರ ಯೋಜನೆ ವಿಭಾಗದ ಅನುಮತಿಯ ಅವಶ್ಯಕತೆಯಿಲ್ಲ ಎಂದರು.

ಅರ್ಧ ಎಕರೆ ಆಸ್ತಿಯ ಈ ಉಪ ವಿಭಜನೆ ಮಾಡುವಾಗ ರಸ್ತೆಗೆ ಪ್ರತ್ಯೇಕ ಭೂಮಿಯನ್ನು ಬಿಟ್ಟು ಆಸ್ತಿ ಉಪ ವಿಭಜನೆ ಮಾಡಿಕೊಳ್ಳಬೇಕಿದೆ. ಅದನ್ನು ಜಿಬಿಎಗೆ ಬಿಟ್ಟುಕೊಡುವ ಅವಶ್ಯಕೆಯಿಲ್ಲ. ರಸ್ತೆ ಪ್ರಮಾಣದ ಭೂಮಿಯನ್ನು ಆಯಾ ಆಸ್ತಿ ಮಾಲೀಕರ ಹೆಸರಿಗೆ ಖಾತಾ ಮಾಡಿಕೊಡಲಾಗುತ್ತದೆ. ಒಂದು ವೇಳೆ ಆಸ್ತಿ ಉಪ ವಿಭಜನೆ ರದ್ದು ಮಾಡಿಕೊಂಡು, ಒಟ್ಟುಗೂಡಿಸಿಕೊಂಡರೆ ಆ ರಸ್ತೆಯ ಆಸ್ತಿ ಮಾಲೀಕತ್ವವೂ ಯಾರ ಹೆಸರಿಗೆ ಆಸ್ತಿ ಇರುತ್ತದೆಯೋ ಅವರ ಹೆಸರಿಗೆ ಬರಲಿದೆ ಎಂದು ವಿವರಿಸಿದರು.

ಇನ್ನು, ಅರ್ಧ ಎಕರೆಯಿಂದ 1 ಎಕರೆವರೆಗಿನ ಆಸ್ತಿಗಳು ವಿಭಜನೆ ಮಾಡಿಕೊಳ್ಳಬೇಕಾದರೆ ನಗರ ಯೋಜನೆ ವಿಭಾಗದಲ್ಲಿ ಅರ್ಜಿ ಸಲ್ಲಿಸಿಯೇ ಮಾಡಿಕೊಳ್ಳಬೇಕಿದೆ. 1 ಎಕರೆವರೆಗಿನ ಭೂಮಿಯಲ್ಲಿ ಲೇಔಟ್‌ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯ ಮಾಡಬೇಕಾದರೆ ಸದ್ಯ ನಿಯಮದಂತೆ ಶೇ.15ರಷ್ಟು ಸಾರ್ವಜನಿಕ ಬಳಕೆಗೆ ಬಿಟ್ಟುಕೊಡಬೇಕಿದೆ. ಅದರಿಂದ ತಮ್ಮ ಒಡೆತನದ ಭೂಮಿಯ ಪ್ರಮಾಣ ಕಡಿಮೆಯಾಗಲಿದೆ ಎಂಬ ಅಳಲು ಸಾರ್ವಜನಿಕರದ್ದಾಗಿದೆ. ಹೀಗಾಗಿ ಇನ್ನು ಮುಂದೆ 1 ಎಕರೆವರೆಗಿನ ಭೂಮಿಯಲ್ಲಿ ಅಭಿವೃದ್ಧಿ ಮಾಡುವಾಗ ಶೇ.15ರಷ್ಟು ಭೂಮಿ ಸಾರ್ವಜನಿಕ ಬಳಕೆಗೆ ಬಿಟ್ಟುಕೊಡುವ ಬದಲು ಅದರ ಮಾರ್ಗಸೂಚಿ ದರವನ್ನು ನಿಗದಿತ ಪ್ರಾಧಿಕಾರಕ್ಕೆ ಪಾವತಿಸಬಹುದಾಗಿದೆ. ಆನಂತರ ಶೇ.15ರಷ್ಟು ಭೂಮಿಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಉಪ ವಿಭಜನೆಗೆ ಅರ್ಜಿ ಸಲ್ಲಿಸುವ ವಿಧಾನ

ಜಂಟಿ ಮಾಲೀಕತ್ವದ ಆಸ್ತಿಯ ಉಪ ವಿಭಜನೆಗೆ www.GBAeAasthi.karnataka.gov.inಗೆ ಭೇಟಿ ನೀಡಿ ಎ-ಖಾತಾದ ಉಪ ವಿಭಜನೆ/ವಿಭಜನೆ ಸೇವೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಸ್ತಿಯ ಜಂಟಿ ಮಾಲೀಕರ ವಿವರಗಳನ್ನು ನಮೂದಿಸಿ, ವಾಸ್ತುಶಿಲ್ಪಿಯಿಂದ ಸಿದ್ಧಪಡಿಸಲಾದ ನಕ್ಷೆಯನ್ನು ಅಪ್ಲೋಡ್‌ ಮಾಡಬೇಕು. ಪ್ರತಿ ಉಪ ವಿಭಜಿತ ನಿವಶನದ ವಿಸ್ತೀರ್ಣ ಮತ್ತು ಇತರ ವಿವರಗಳನ್ನು ನಮೂದಿಸಬೇಕು. ಅನುಮೋದನೆಯ ನಂತರ ಅನ್ವಯವಾಗುವ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಇ-ಖಾತಾ ಸಾರ್ವತ್ರಿಕ ಸಹಾಯವಾಣಿ ಸಂಖ್ಯೆ 9480683695ನ್ನು ಸಂಪರ್ಕಿಸಬಹುದಾಗಿದೆ.

ಶುಲ್ಕದ ವಿವರ:

ನಿವೇಶನ ಬಳಕೆ ಉಪ-ವಿಭಜನೆ ಶುಲ್ಕ

ವಸತಿ ಮಾರ್ಗಸೂಚಿ ಮೌಲ್ಯದ ಶೇ.02ರಷ್ಟು

ಕೈಗಾರಿಕೆ ಮಾರ್ಗಸೂಚಿ ಮೌಲ್ಯದ ಶೇ.03ರಷ್ಟು

ವಸತಿಯೇತರ ಮಾರ್ಗಸೂಚಿ ಮೌಲ್ಯದ ಶೇ.05ರಷ್ಟು

ಇತರ ಮಾರ್ಗಸೂಚಿ ಮೌಲ್ಯದ ಶೇ.02ರಷ್ಟು

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸ್ಟಿಂಗ್‌ ತನಿಖೆಗಾಗಿ ಮೊದಲ ಬಾರಿ ಬೀದಿ ಹೋರಾಟ
ಜೋಶಿ ಮನೆ ಮುಂದೆ ರೈತ ಹೋರಾಟಕ್ಕೆ ಕೋರ್ಟ್‌ ಬ್ರೇಕ್‌