ವೃದ್ಧ ಪೋಷಕರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದರೆ ಆಸ್ತಿ, ಉಯಿಲು ರದ್ದು : ಸರ್ಕಾರ

Published : Mar 17, 2025, 06:55 AM IST
affair in old age

ಸಾರಾಂಶ

 ಸಂಧ್ಯಾಕಾಲದಲ್ಲಿ ಹೆತ್ತ ತಂದೆ-ತಾಯಿಯನ್ನು ಸಾಕಿ ಸಲಹದೆ ಈ ರೀತಿ ಅಮಾನವೀಯ ನಡೆ ಅನುಸರಿಸುತ್ತಿರುವವರಿಗೆ ಅವರ ಪೋಷಕರಿಂದ ವರ್ಗಾವಣೆ ಆಗಿರುವ ಆಸ್ತಿ, ಬರೆಸಿಕೊಂಡಿರುವ ವಿಲ್‌ ಅನ್ನು ರದ್ದುಪಡಿಸಲು ಕ್ರಮ ವಹಿಸುವಂತೆ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ.

 ಬೆಂಗಳೂರು : ವಯಸ್ಸಾದ ಪೋಷಕರನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಗಳಿಗೆ ಕರೆತಂದು ಮಕ್ಕಳು ಬಿಟ್ಟು ನಾಪತ್ತೆಯಾಗುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿವೆ. ಹಾಗಾಗಿ ಸಂಧ್ಯಾಕಾಲದಲ್ಲಿ ಹೆತ್ತ ತಂದೆ-ತಾಯಿಯನ್ನು ಸಾಕಿ ಸಲಹದೆ ಈ ರೀತಿ ಅಮಾನವೀಯ ನಡೆ ಅನುಸರಿಸುತ್ತಿರುವವರಿಗೆ ಅವರ ಪೋಷಕರಿಂದ ವರ್ಗಾವಣೆ ಆಗಿರುವ ಆಸ್ತಿ, ಬರೆಸಿಕೊಂಡಿರುವ ವಿಲ್‌ ಅನ್ನು ರದ್ದುಪಡಿಸಲು ಕ್ರಮ ವಹಿಸುವಂತೆ ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ.

ಪೋಷಕರನ್ನು ಅನಾಥವಾಗಿ ಬಿಟ್ಟು ಹೋಗಿರುವ ಮಕ್ಕಳ ವಿರುದ್ಧ ‘ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007’ ರ ಅಡಿ ವೈದ್ಯಕೀಯ ಸಂಸ್ಥೆಗಳ ನಿರ್ದೇಶಕರು ಸಂಬಂಧಪಟ್ಟ ಕಂದಾಯ ವಿಭಾಗದ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಿ ಅವರಿಗೆ ವರ್ಗಾವಣೆ ಆಗಿರುವ ಆಸ್ತಿಗೆ ಸಂಬಂಧಿಸಿದ ವಿಲ್‌, ದಾನಪತ್ರ ರದ್ದುಪಡಿಸಲು ಕ್ರಮ ವಹಿಸಬೇಕೆಂದು ಸೂಚಿಸಲಾಗಿದೆ.

ವೈದ್ಯಕೀಯ ಶಿಕ್ಷಣ ಇಲಾಖೆ ಆಸ್ಪತ್ರೆಗಳಲ್ಲಿ ಇಂಥ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್‌ ಪ್ರಕಾಶ್‌ ಪಾಟೀಲ್‌ ಅವರು ಕಳೆದ ಒಂದು ವಾರದಿಂದ ವಿಕಾಸಸೌಧದಲ್ಲಿ ರಾಜ್ಯದ ವಿವಿಧ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಇತರ ಸದಸ್ಯರ ಸಭೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

ಈ ಸಂಬಂಧ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಸಚಿವರು, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಐಎಂಎಸ್)ವೊಂದರಲ್ಲೇ 150ಕ್ಕೂ ಹೆಚ್ಚು ಹಿರಿಯ ನಾಗರಿಕರನ್ನು ಮಕ್ಕಳು ಬಿಟ್ಟು ಹೋಗಿರುವ ಪ್ರಕರಣಗಳು ವರದಿಯಾಗಿವೆ. ರಾಜ್ಯಾದ್ಯಂತ ಇತರ ವೈದ್ಯಕೀಯ ಸಂಸ್ಥೆಗಳಲ್ಲೂ ಇಂಥ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ವಯಸ್ಸಾದ ಕಾಲದಲ್ಲಿ ತಂದೆ-ತಾಯಿಯನ್ನೇ ಅನಾಥರನ್ನಾಗಿ ಮಾಡುತ್ತಿರುವ ಮಕ್ಕಳಿಗೆ ತಕ್ಕಪಾಠ ಕಲಿಸಲು ನಿರ್ಧರಿಸಲಾಗಿದ್ದು, ಅವರು ಪೋಷಕರಿಂದ ವರ್ಗಾವಣೆ ಮಾಡಿಕೊಂಡಿರುವ ಆಸ್ತಿ, ವಿಲ್‌ ರದ್ದುಪಡಿಸುವಂತೆ ಆಯಾ ಕಂದಾಯ ಉಪವಿಭಾಗದ ಸಹಾಯಕ ಆಯುಕ್ತರಿಗೆ ದೂರು ಸಲ್ಲಿಸಲು ನಮ್ಮ ಇಲಾಖಾ ನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಯಾವ್ಯಾವ ಕಾರಣಕ್ಕೆ ಬಿಟ್ಟುಹೋಗಿದ್ದಾರೆ?

ಹೆತ್ತವರನ್ನು ಯಾವ ಕಾರಣಕ್ಕೆ ಮಕ್ಕಳು ಆಸ್ಪತ್ರೆಗಳಲ್ಲಿ ಬಿಟ್ಟು ಹೋಗುತ್ತಿದ್ದಾರೆ ಎಂದು ಅಧಿಕಾರಿಗಳು ಸಂಗ್ರಹಿಸಿದ ಮಾಹಿತಿಯನ್ನು ಸಚಿವರ ಗಮನಕ್ಕೆ ತಂದಿದ್ದಾರೆ. ಆ ಪ್ರಕಾರ, ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡ ಬಳಿಕ, ವಯೋಸಹಜ ಅನಾರೋಗ್ಯ, ಆರ್ಥಿಕ ಸಂಕಷ್ಟದಿಂದ ನೋಡಿಕೊಳ್ಳಲಾಗದೆ, ಮತ್ತೆ ಕೆಲವರು ಸರ್ಕಾರಿ ಆಸ್ಪತ್ರೆಗಳಲ್ಲಿ ಊಟ, ವಸತಿ, ಆಶ್ರಯ ಉಚಿತವಾಗಿ ಸಿಗುತ್ತದೆ ಎಂಬ ಕಾರಣಕ್ಕೆ ಪೋಷಕರನ್ನು ಇಲ್ಲಿ ಬಿಟ್ಟು ಹೋಗಿದ್ದಾರೆಂದು ತಿಳಿಸಿದ್ದಾರೆ. ಅಂಥ ಪೋಷಕರಿಗೆ ಬೆಳಗಾವಿ ಮತ್ತು ಸುತ್ತಮುತ್ತಲಿನ 70 ಹಿರಿಯ ನಾಗರಿಕರ ನಿವೃತ್ತಿ ಗೃಹಗಳಲ್ಲಿ, ವೃದ್ಧಾಶ್ರಮಗಳಲ್ಲಿ ಆಶ್ರಯ ಕಲ್ಪಿಸಿಕೊಟ್ಟಿದ್ದೇವೆ. ಇನ್ನೂ ಅನೇಕರು ಆಸ್ಪತ್ರೆಗಳಲ್ಲೇ ಇದ್ದಾರೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದ್ದಾರೆ.

ರಾಜ್ಯಾದ್ಯಂತ ಮಾಹಿತಿ ಸಂಗ್ರಹ

ಹೆತ್ತವರನ್ನು ಈ ರೀತಿ ಬಿಟ್ಟುಹೋಗುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ರಾಜ್ಯಾದ್ಯಂತ ಇಂಥ ಎಷ್ಟು ಪ್ರಕರಣಗಳಿವೆ ಎಂದು ನಿರ್ದಿಷ್ಟ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರಿಗೆ ಆರ್ಥಿಕ ಮತ್ತು ವೈದ್ಯಕೀಯ ಬೆಂಬಲ ಒದಗಿಸಬೇಕು. ಹಾಗಾಗಿ ನಿಯಮಾನುಸಾರ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

- ಡಾ.ಶರಣ್‌ ಪ್ರಕಾಶ್‌ ಪಾಟೀಲ್‌, ವೈದ್ಯಕೀಯ ಶಿಕ್ಷಣ ಸಚಿವ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ