ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ಬಾರಿ ನಡೆಸಿದ ಸಿಇಟಿ ಪರೀಕ್ಷೆ ತೀವ್ರ ಗೊಂದಲಕ್ಕೆ ಕಾರಣವಾಗಿದ್ದು, ನಾಲ್ಕು ವಿಷಯಗಳಲ್ಲಿ ಒಟ್ಟು 50ಕ್ಕೂ ಹೆಚ್ಚು ಸಿಲೆಬಸ್‌ನಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಈ ಬಾರಿ ನಡೆಸಿದ ಸಿಇಟಿ ಪರೀಕ್ಷೆ ತೀವ್ರ ಗೊಂದಲಕ್ಕೆ ಕಾರಣವಾಗಿದ್ದು, ನಾಲ್ಕು ವಿಷಯಗಳಲ್ಲಿ ಒಟ್ಟು 50ಕ್ಕೂ ಹೆಚ್ಚು ಸಿಲೆಬಸ್‌ನಲ್ಲಿ ಇಲ್ಲದ ಪ್ರಶ್ನೆಗಳನ್ನು ಕೇಳಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆದ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳ ಪರೀಕ್ಷೆಯಲ್ಲಿ ಸುಮಾರು 31 ಪಠ್ಯೇತರ ಪ್ರಶ್ನೆಗಳನ್ನು ಕೇಳಲಾಗಿದೆ. ಗುರುವಾರ ನಡೆದ ಜೀವಶಾಸ್ತ್ರ ಮತ್ತು ಗಣಿತ ವಿಷಯಗಳ ಪರೀಕ್ಷೆಗಳಲ್ಲಿ 20ಕ್ಕೂ ಹೆಚ್ಚು ಪಠ್ಯೇತರ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಒಟ್ಟು ಎರಡು ದಿನದ ನಾಲ್ಕು ಪರೀಕ್ಷೆಗಳಲ್ಲಿ ಪಠ್ಯದಲ್ಲಿಲ್ಲದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ವಿದ್ಯಾರ್ಥಿಗಳು ಕಂಗಾಲಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರ ಬೆನ್ನಲ್ಲೇ, ಖಾಸಗಿ ಶಾಲಾ-ಕಾಲೇಜು ಪೋಷಕರ ಸಮನ್ವಯ ವೇದಿಕೆ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು, ವಿವಿಧ ಖಾಸಗಿ ಪಿಯು ಕಾಲೇಜುಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳು ಸಿಇಟಿ ಪರೀಕ್ಷೆ ರದ್ದುಪಡಿಸಿ ಮರು ಪರೀಕ್ಷೆಗೆ ಒತ್ತಾಯಿಸಿವೆ. ಜೊತೆಗೆ ಈ ಬಾರಿ ಗೊಂದಲಕ್ಕೆ ಕಾರಣವಾಗಿರುವ ಕೆಇಎ ಅಧಿಕಾರಿಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿವೆ.
ಇಂತಹ ದೊಡ್ಡ ಮಟ್ಟದ ಎಡವಟ್ಟು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಇತಿಹಾಸದಲ್ಲೇ ನಡೆದಿಲ್ಲ ಎನ್ನಲಾಗಿದೆ.
ಪರೀಕ್ಷೆ ಬರೆದು ಹೊರಬರುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ವಲಯದಲ್ಲಿ ತೀವ್ರ ಅಸಮಾಧಾನ, ಆಕ್ರೋಶ ವ್ಯಕ್ತವಾಯಿತು. ರಸಾಯನಶಾಸ್ತ್ರ ವಿಷಯದಲ್ಲಿ ಕೇಳಿರುವ 60 ಪ್ರಶ್ನೆಗಳಲ್ಲಿ 20ಕ್ಕೂ ಹೆಚ್ಚು ಪ್ರಶ್ನೆಗಳು ಪಠ್ಯದಲ್ಲೇ ಇಲ್ಲ. ಭೌತಶಾಸ್ತ್ರದಲ್ಲೂ 10ಕ್ಕೂ ಹೆಚ್ಚು ಪ್ರಶ್ನೆಗಳನ್ನು ಪಠ್ಯೇತರವಾಗಿ ಕೇಳಲಾಗಿದೆ. ಪ್ರಾಧಿಕಾರದವರು ಯಾವ ಆಧಾರದಲ್ಲಿ ಈ ರೀತಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಬಹುಶಃ ಅಧಿಕಾರಿಗಳು ಪ್ರಸಕ್ತ ಸಾಲಿನ ಪಠ್ಯಕ್ರಮ ಪರಿಶೀಲಿಸಿ ಪ್ರಶ್ನೆ ಪತ್ರಿಕೆ ತಯಾರಿಸದೆ, ಈ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳಿಂದ ಕೆಲ ಪ್ರಶ್ನೆಗಳನ್ನು ಆಯ್ಕೆ ಮಾಡಿ ಪ್ರಶ್ನೆಪತ್ರಿಕೆ ತಯಾರಿಸಿದಂತೆ ಕಾಣುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು
ರಮ್ಯಾ ವಿರುದ್ಧ ತನಿಖೆಗೆ ಸರ್ಕಾರಕ್ಕೆ ಪತ್ರ
ಈ ಬಾರಿಯ ಸಿಇಟಿಯಲ್ಲಿ ಆಗಿರುವ ಎಲ್ಲ ಸಮಸ್ಯೆ, ಗೊಂದಲಗಳಿಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಹಣಾ ನಿರ್ದೇಶಕಿ ರಮ್ಯಾ ಅವರೇ ನೇರ ಹೊಣೆ. ಅವರ ವಿರುದ್ಧ ಸೂಕ್ತ ತನಿಖೆಗೆ ಆದೇಶ ಮಾಡಬೇಕೆಂದು ಕರ್ನಾಟಕ ಖಾಸಗಿ ಶಾಲಾ, ಕಾಲೇಜು ಪೋಷಕರ ಸಮನ್ವಯ ವೇದಿಕೆ ಸರ್ಕಾರವನ್ನು ಆಗ್ರಹಿಸಿದೆ.
ಅಲ್ಲದೆ, ಸಿಇಟಿ ಪರೀಕ್ಷೆ ರದ್ದು ಮಾಡಿ ದ್ವಿತೀಯ ಪಿಯುಸಿ ಅಂಕಗಳ ಆಧಾರದಲ್ಲೇ ಈ ಬಾರಿ ರ್‍ಯಾಂಕಿಂಗ್ ಪ್ರಕಟಿಸಬೇಕೆಂದು ವೇದಿಕೆಯ ಅಧ್ಯಕ್ಷ ಬಿ.ಎನ್.ಯೋಗಾನಂದ ಆಗ್ರಹಿಸಿದ್ದಾರೆ.
ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಶ್ರೀಕರ್ ಅವರಿಗೆ ಪತ್ರ ಬರೆದಿರುವ\B ಅವರು, \Bಸಿಇಟಿಯ ಎಲ್ಲ ವಿಷಯಗಳ ಪರೀಕ್ಷೆಗಳಲ್ಲೂ ಹಲವು ಪಠ್ಯೇತರ ಪ್ರಶ್ನೆಗಳನ್ನು ಕೇಳುವ ಮೂಲಕ 3.5 ಲಕ್ಷಕ್ಕೂ ಹೆಚ್ಚು ಮಕ್ಕಳ ಭವಿಷ್ಯ ಅತಂತ್ರವಾಗಲು ಕೆಇಎ ಜವಾಬ್ದಾರಿಯುತ ಸ್ಥಾನದಲ್ಲಿರುವ ರಮ್ಯಾ ಅವರೇ ನೇರ ಹೊಣೆ. ಹಾಗಾಗಿ ಕೈಬಿಟ್ಟ ಪಠ್ಯದ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಸೇರಿಸಿದ್ದು ಯಾರು? ಯಾರಿಗೆ ಲಾಭ ಮಾಡಿಕೊಡಲು ಈ ರೀತಿ ಮಾಡಲಾಗಿದೆ? ಈ ಪ್ರಶ್ನೆಗಳಿಗೆ ಕೃಪಾಂಕ ನೀಡಿದರೆ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗುತ್ತದೆ. ಜೊತೆಗೆ ಇಷ್ಟು ದೊಡ್ಡ ಸಂಖ್ಯೆಯ ಪ್ರಶ್ನೆಗಳಿಗೆ ಕೃಪಾಂಕ ನೀಡಲು ಕಾನೂನಲ್ಲಿ ಅವಕಾಶವೂ ಇರಲಿಕ್ಕಿಲ್ಲ. ಇದಕ್ಕೆ ಸ್ಪಷ್ಟ ಉತ್ತರವನ್ನು ಅಧಿಕಾರಿಗಳೇ ನೀಡಬೇಕು. ಈ ಬಾರಿ ಪರೀಕ್ಷೆಗೆ 3.5 ಲಕ್ಷ ಮಕ್ಕಳಿಂದ ತಲಾ 600 ರು.ನಂತೆ 20 ಕೋಟಿ ರು. ಪಡೆಯಲಾಗಿದೆ. ಒಂದು ವೇಳೆ ಪರೀಕ್ಷೆ ಮರು ಪರೀಕ್ಷೆ ನಡೆಸಬೇಕಾಗಿ ಬಂದರೆ ಈ ಹಣಕ್ಕೆ ಹೊಣೆ ಯಾರು? ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಅನ್ಯಾಯಕ್ಕೊಳಗಾಗಿರುವ ಮಕ್ಕಳಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ.
ಎಲ್ಲಾ ಸರಿಯಿದೆ ಎಂದ ಕೆಇಎ!
ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಎಲ್ಲೆಡೆ ಸುಗಮವಾಗಿ ಸಿಇಟಿ ಪರೀಕ್ಷೆ ಮುಕ್ತಾಯಗೊಂಡಿದೆ ಎಂದು ತಿಳಿಸಿದ್ದಾರೆ. ಪರೀಕ್ಷೆಗೆ ನೀಡಿದ್ದ ಪ್ರಶ್ನೆಗಳಿಗೆ ಯಾವುದೇ ಆಕ್ಷೇಪಣೆಗಳಿದ್ದರೆ ಏ.27ರ ಸಂಜೆ 5.30ರೊಳಗೆ keaugcet24@gmail.com ಗೆ ಇ-ಮೇಲ್ ಮೂಲಕ ಸಲ್ಲಿಸುವಂತೆ ಸೂಚಿಸಿದ್ದಾರೆ.
--------
ಸರ್ಕಾರ ನ್ಯಾಯ ನೀಡಲಿ: ಶಿಕ್ಷಕರು
ಈ ಬಾರಿ ಸಿಇಟಿಯ ಪ್ರತಿಯೊಂದು ವಿಷಯದ ಪರೀಕ್ಷೆಯಲ್ಲೂ ಹತ್ತಾರು ಪಠ್ಯೇತರ ಪ್ರಶ್ನೆಗಳನ್ನು ಕೇಳಿರುವುದರಿಂದ ಮಕ್ಕಳಿಗೆ ತೀವ್ರ ಗೊಂದಲ ಉಂಟಾಗಿದೆ. ತೀವ್ರ ಆತಂಕ, ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಸರ್ಕಾರ ನ್ಯಾಯ ಒದಗಿಸಬೇಕು.