ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ರಾಹುಲ್ ಗಾಂಧಿ ಪ್ರಧಾನಮಂತ್ರಿ ಆಗುತ್ತಾರೆ ಎಂದು ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದ್ದಾರೆ.
ಬೆಂಗಳೂರು : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು ರಾಹುಲ್ ಗಾಂಧಿ ಪ್ರಧಾನಮಂತ್ರಿ ಆಗುತ್ತಾರೆ ಎಂದು ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ಸೋಮವಾರ ಯುವ ಕಾಂಗ್ರೆಸ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ‘ಯುವ ಸಂಕಲ್ಪ’ದಲ್ಲಿ ಮಾತನಾಡಿದ ಅವರು, ಸುಭದ್ರ ರಾಷ್ಟ್ರ ಮತ್ತು ಜಾತ್ಯತೀತ ಸಮಾಜ ನಿರ್ಮಾಣ ಯುವಕರಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಪಕ್ಷವು ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ದೇಶದ ಅತ್ಯಂತ ಬಲಿಷ್ಠ ಯುವ ಸಂಘಟನೆಯಾದ ಯುವ ಕಾಂಗ್ರೆಸ್ ಸಂಘಟನೆಯು ಕಾಂಗ್ರೆಸ್ ಪಕ್ಷದ ಭದ್ರ ಬುನಾದಿಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ, ಇತಿಹಾಸ ಹಾಗೂ ದೇಶದ ಐಕ್ಯತೆಗಾಗಿ ಪ್ರಾಣ ತ್ಯಾಗ ಮಾಡಿದ ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ವಿಚಾರಧಾರೆಗಳನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು. 18 ವಯಸ್ಸಿನವರಿಗೆ ಮತದಾನದ ಹಕ್ಕು ನೀಡಿ, ಭಾರತದ ಐಟಿ ಮತ್ತು ಟೆಲಿಕಮ್ಯೂನಿಕೇಷನ್‌ನಲ್ಲಿ ಕ್ರಾಂತಿ ಮಾಡಿದ್ದ ರಾಜೀವ್ ಗಾಂಧಿ ಯುವ ಜನತೆಗೆ ಆದರ್ಶವಾಗಿದ್ದಾರೆ ಎಂದು ಸಲೀಂ ಅಹ್ಮದ್ ನುಡಿದರು.