19 ವರ್ಷಗಳ ಹಿಂದಿನ ನೇಮಕಾತಿಗೆ ಕೆಪಿಎಸ್ಸಿ ಚಾಲನೆ! - ಮೋಟಾರು ವಾಹನ ನಿರೀಕ್ಷಕರ ಹುದ್ದೆ

Published : Mar 17, 2025, 10:22 AM IST
KPSC New 02

ಸಾರಾಂಶ

ವಿಳಂಬ ನೇಮಕ ಪ್ರಕ್ರಿಯೆಗೆ ಹೆಸರುವಾಸಿಯಾಗಿರುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಬರೋಬ್ಬರಿ 19 ವರ್ಷಗಳ ಹಿಂದಿನ ನೇಮಕಾತಿಗೆ ಕೋರ್ಟ್ ಆದೇಶದ ಮೇರೆಗೆ ಮರುಚಾಲನೆ ನೀಡಿದೆ!

ಬೆಂಗಳೂರು : ವಿಳಂಬ ನೇಮಕ ಪ್ರಕ್ರಿಯೆಗೆ ಹೆಸರುವಾಸಿಯಾಗಿರುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಬರೋಬ್ಬರಿ 19 ವರ್ಷಗಳ ಹಿಂದಿನ ನೇಮಕಾತಿಗೆ ಕೋರ್ಟ್ ಆದೇಶದ ಮೇರೆಗೆ ಮರುಚಾಲನೆ ನೀಡಿದೆ!

ಬಹುತೇಕ ಎರಡು ದಶಕ ಕಳೆದಿರುವ ಹಿನ್ನೆಲೆಯಲ್ಲಿ ಈಗ ಆ ಹುದ್ದೆಗಳ ಬಗ್ಗೆ ಅಭ್ಯರ್ಥಿಗಳಿಗೆ ಆಸಕ್ತಿ ಇದೆಯೋ? ಇಲ್ಲವೋ?, ನಿವೃತ್ತರಾಗಿದ್ದಾರಾ?, ಬದುಕಿದ್ದಾರಾ ಎಂದು ತಿಳಿಯಲು ‘ಆಸಕ್ತಿಯ ಅರ್ಜಿ’ ಆಹ್ವಾನಿಸಿದೆ.

2006ರ ಆ.18ರಂದು ಸಾರಿಗೆ ಇಲಾಖೆಯಲ್ಲಿನ ಮೋಟಾರು ವಾಹನ ನಿರೀಕ್ಷಕರು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಶೈಕ್ಷಣಿಕ ಅರ್ಹತೆ ವಿಚಾರವಾಗಿ ಅಸ್ಪಷ್ಟತೆಯ ಕಾರಣ ಅಭ್ಯರ್ಥಿಗಳು ಆಡಳಿತ ನ್ಯಾಯ ಮಂಡಳಿ ಮೊರೆ ಹೋಗಿದ್ದರು. ಬಳಿಕ ಪ್ರಕರಣ ತಾರ್ಕಿಕ ಅಂತ್ಯ ಕಾಣದೇ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು. ಸುಧೀರ್ಘ ಅವಧಿಯ ಬಳಿಕ ಇದೇ ಫೆಬ್ರವರಿಯಲ್ಲಿ ಮಧ್ಯಂತರ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ನೇಮಕ ಪ್ರಕ್ರಿಯೆ ಪ್ರಶ್ನಿಸಿರುವ ಎಲ್ಲ ಅಭ್ಯರ್ಥಿಗಳ ದೂರುಗಳನ್ನು ಪರಿಶೀಲನೆ ನಡೆಸುವಂತೆ ಕೆಪಿಎಸ್‌ಸಿಗೆ ನಿರ್ದೇಶನ ನೀಡಿದೆ.

ಈ ಹಿನ್ನೆಲೆಯಲ್ಲಿ 2006 ಅಧಿಸೂಚನೆಯ ನೇಮಕ ಪ್ರಕ್ರಿಯೆಯಲ್ಲಿ ಮುಂದುವರೆಯಲು ಆಸಕ್ತಿ, ಸ್ವಇಚ್ಛೆ ಇದ್ದಲ್ಲಿ ನಿಗದಿತ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ ಮಾ.24ರ ಒಳಗೆ ಕೆಪಿಎಸ್‌ಸಿಗೆ ಅರ್ಜಿ ಸಲ್ಲಿಸಬೇಕು. ಇಲ್ಲದಿದ್ದರೆ ಹುದ್ದೆಗಳಿಗೆ ಆಸಕ್ತಿ ಇಲ್ಲ ಎಂದು ಪರಿಗಣಿಸಿ ಪ್ರಕ್ರಿಯೆಯಿಂದ ಕೈಬಿಡಲಾಗುತ್ತದೆ ಎಂದು ಕೆಪಿಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ. 

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ