236ರ ಪೈಕಿ 190 ತಾಲೂಕಲ್ಲಿ ಮಳೆ ಕೊರತೆ - 101 ತಾಲೂಕು ಬರಪೀಡಿತ

Published : Aug 28, 2026, 06:55 AM IST
Karnataka 101 Drought Taluks

ಸಾರಾಂಶ

ರಾಜ್ಯದಲ್ಲಿ ಮಳೆ ಕೊರತೆಯಿಂದ ತೀವ್ರ ಬರಗಾಲ ಎದುರಾಗಿದೆ. ಕೇಂದ್ರ ಸರ್ಕಾರದ ‘ಡ್ರಾಟ್‌ ಮ್ಯಾನುವೆಲ್‌ 2020ರ’ ಪ್ರಕಾರ ರಾಜ್ಯದಲ್ಲಿ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುತ್ತಿದೆ

ಬೆಂಗಳೂರು : ರಾಜ್ಯದಲ್ಲಿ ಮಳೆ ಕೊರತೆಯಿಂದ ತೀವ್ರ ಬರಗಾಲ ಎದುರಾಗಿದೆ. ಕೇಂದ್ರ ಸರ್ಕಾರದ ‘ಡ್ರಾಟ್‌ ಮ್ಯಾನುವೆಲ್‌ 2020ರ’ ಪ್ರಕಾರ ರಾಜ್ಯದಲ್ಲಿ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ, ಕಂದಾಯ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಜೂ.1ರಿಂದ ಆ.26ರ ವರೆಗೆ 666 ಮಿ.ಮೀ. ಮಳೆ ಬದಲು ಕೇವಲ 465 ಮಿ.ಮೀ. ಮಳೆಯಾಗಿದೆ. ಇದರಿಂದ ಶೇ.30ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದ 29 ಜಿಲ್ಲೆಗಳು ಹಾಗೂ 190 ತಾಲೂಕುಗಳು ಮಳೆ ಕೊರತೆ ಮತ್ತು ತೀವ್ರ ಮಳೆ ಕೊರತೆ ವ್ಯಾಪ್ತಿಯಲ್ಲಿವೆ. ಈ ಪೈಕಿ 12 ತಾಲೂಕುಗಳು ತೀವ್ರ ಮಳೆ ಕೊರತೆ ಅನುಭವಿಸುತ್ತಿವೆ. ಆ.26ರ ವೇಳೆಗೆ ಮಳೆ ಇಲ್ಲದೆ ಸತತ 3ಕ್ಕಿಂತ ಹೆಚ್ಚು ವಾರಗಳ ಕಾಲ ಒಣಹವೆ ಅನುಭವಿಸಿದ 134 ತಾಲೂಕುಗಳನ್ನು ಗುರುತಿಸಲಾಗಿದೆ. ಅವು ಟ್ರಿಗರ್-1 ಅಡಿಯಲ್ಲಿ ಮೌಲ್ಯಮಾಪನಕ್ಕೆ ಅಹರ್ತೆ ಪಡೆದಿವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ಡ್ರಾಟ್‌ ಮ್ಯಾನುವೆಲ್‌ 2020ರ ಪ್ರಕಾರ ಬರಪೀಡಿತ ತಾಲೂಕು ಎಂದು ಘೋಷಿಸಲು ಹಲವು ಟ್ರಿಗರ್‌ ಪಾಯಿಂಟ್‌ಗಳ ಅವಶ್ಯಕತೆ ಇದೆ. ಟ್ರಿಗರ್‌ 1 ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಾರಗಳಲ್ಲಿ ಮಳೆ ಆಗದಿರುವುದು ಮತ್ತು ಟ್ರಿಗರ್‌-2 ಬಿತ್ತನೆಯ ಪ್ರಮಾಣ, ಬಿತ್ತಿದ ಬೆಳೆಗಳ ಸ್ಥಿಗತಿ, ಮಣ್ಣಿನ ತೇವಾಂಶ, ಅಂತರ್ಜಲ ಪ್ರಮಾಣ, ಕೆರೆಕಟ್ಟೆಗಳು, ಅಣೆಕಟ್ಟೆಗಳಲ್ಲಿನ ನೀರಿನ ಪ್ರಮಾಣ ಇದರಲ್ಲಿ ಬರುತ್ತವೆ. ಈ ಎರಡೂ ಅಂಶಗಳನ್ನು ಆಧರಿಸಿ ನಾವು ಮೌಲ್ಯಮಾಪನ ಮಾಡಿದ್ದೇವೆ. ಗ್ರೌಂಡ್‌ ಟ್ರೂಥಿಂಗ್‌ ಮಾಡಿದ್ದೇವೆ. 134 ತಾಲೂಕುಗಳು ಟ್ರಿಗರ್‌-1 ಪ್ರಕಾರ ಅರ್ಹತೆ ಪಡೆದಿವೆ. ಗ್ರೌಂಡ್‌ ಟ್ರೂಥಿಂಗ್‌ ಮಾಡಿದಾಗ ಸದ್ಯಕ್ಕೆ 101 ತಾಲೂಕುಗಳು ಬರಪೀಡಿತ ಎಂದು ಘೋಷಿಸಲು ಅರ್ಹತೆ ಪಡೆದಿವೆ. ಉಳಿದ 32 ತಾಲೂಕುಗಳು ಟ್ರಿಗರ್‌-1 ಪ್ರಕಾರ ಅರ್ಹತೆ ಪಡೆದಿವೆ. ಅವುಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದರು.

2 ವಾರ ನಡುವೆ ಮಧ್ಯೆ ಮಳೆಯಾದರೂ ಅನರ್ಹ:

ಮೊದಲ ಹಂತದಲ್ಲಿ 101 ತಾಲೂಕುಗಳು ಬರ ಘೋಷಣೆ ಮಾಡಿದ್ದೇವೆ. ಪ್ರತಿ 15 ದಿನಕ್ಕೆ ಪರಿಶೀಲನೆ ನಡೆಸುತ್ತೇವೆ. ಹೋಬಳಿವಾರು ಗ್ರೌಂಡ್‌ ಟ್ರೂಥಿಂಗ್‌ ನಡೆಸಿರುವ ಮಾಹಿತಿ ಇದೆ. ಅದನ್ನು ಪರಿಗಣಿಸಿ ಬರಪೀಡಿತ ಎಂದು ಪರಿಗಣಿಸಲಾಗಿದೆ. ಕೆಲ ತಾಲೂಕುಗಳಲ್ಲಿ ಎರಡು ವಾರ ಮಳೆ ಇಲ್ಲದೆ ಮಧ್ಯದಲ್ಲಿ ಒಮ್ಮೆ ಮಳೆ ಬಂದರೂ ಅದು ಟ್ರಿಗರ್‌ 1 ವಿಚಾರದಲ್ಲಿ ಅರ್ಹತೆ ಕಳೆದುಕೊಳ್ಳುತ್ತವೆ. ಆದರೆ ಅಲ್ಲಿ ಬೆಳೆಯಾಗಿರುವುದಿಲ್ಲ. ಆದರೂ ಬರಪೀಡಿತ ಎಂದು ಘೋಷಿಸಲು ಆಗುವುದಿಲ್ಲ. ಇಂತಹ ಮಾನದಂಡ ಸರಿಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದೇವೆ. ಅವರು ತಲೆಕೆಡಿಸಿಕೊಳ್ಳುತ್ತಿಲ್ಲ. ಹೀಗಾಗಿ ಹಂತ ಹಂತವಾಗಿ ನಾವು ಬರ ಘೋಷಣೆ ಮಾಡಬೇಕಾಗಿದೆ ಎಂದು ಡಾ.ಪರಮೇಶ್ವರ್‌ ಹೇಳಿದರು.

84.10 ಲಕ್ಷ ಹೆಕ್ಟರ್‌ ಬದಲು 60 ಲಕ್ಷ ಹೆಕ್ಟರ್‌ ಬಿತ್ತನೆ:

ಆ.21 ರವರೆಗೆ ರಾಜ್ಯದಲ್ಲಿ ಶೇ.71 ರಷ್ಟು ಬಿತ್ತನೆಯಾಗಿದೆ. 84.10 ಲಕ್ಷ ಹೆಕ್ಟೇರುಗಳಷ್ಟು ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ ಕೇವಲ 60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಒಟ್ಟು 240 ತಾಲೂಕುಗಳ ಪೈಕಿ 104 ತಾಲೂಕುಗಳಲ್ಲಿ ಶೇ.75ಕ್ಕಿಂತ ಕಡಿಮೆ ಬಿತ್ತನೆಯಾಗಿದ್ದು, ಅದರಲ್ಲಿ 42 ತಾಲೂಕುಗಳಲ್ಲಿ ಶೇ.25ಕ್ಕಿಂತಲೂ ಕಡಿಮೆ ಬಿತ್ತನೆಯಾಗಿದೆ. ತೋಟಗಾರಿಕೆ ಬೆಳೆಗಳು ಆ.25ರ ವರೆಗೆ 4.36 ಲಕ್ಷ ಹೆಕ್ಟೇರ್ ಪೈಕಿ ಕೇವಲ 3.04 ಲಕ್ಷ ಹೆಕ್ಟೇರ್‌ (ಶೇ.69) ಮಾತ್ರ ಬಿತ್ತನೆಯಾಗಿದೆ. ಬಿತ್ತನೆಯಾದ ಬೆಳೆಗಳಿಗೂ ಕೂಡ ಮಳೆ ಸಾಲದೆ ನಿರೀಕ್ಷಿತ ಬೆಳವಣಿಗೆ ಸಾಧ್ಯವಾಗುತ್ತಿಲ್ಲ. ಮಳೆ ಕೊರತೆಯ ನಡುವೆ ಬೆಳೆಯುವ ಅಲ್ಪಾವಧಿ ತಳಿಗಳನ್ನು ಬೆಳೆಯುವಂತೆ ತಿಳಿವಳಿಕೆ ನೀಡಿ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗಿದೆ ಎಂದು ಕಂದಾಯ ಸಚಿವರು ಹೇಳಿದರು.

132 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿತ:

ರಾಜ್ಯದ 132 ತಾಲೂಕುಗಳಲ್ಲಿ ಕಳೆದ ದಶಕದ ಸರಾಸರಿಗೆ ಹೋಲಿಸಿದರೆ ಅಂತರ್ಜಲ ಮಟ್ಟ ಕುಸಿದಿದ್ದು, ಮುಂದಿನ ದಿನಗಳಲ್ಲಿ ಅದು ಇನ್ನಷ್ಟು ಕುಸಿಯುವ ಆತಂಕವಿದೆ. ಹಾಗಾಗಿ ಸರ್ಕಾರ ಅಂತರ್ಜಲ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದೆ. ರಾಜ್ಯದ ಜನತೆ ಕೂಡ ಪರಿಸ್ಥಿತಿಯ ಗಂಭೀರತೆ ಅರಿತು ಅಂತರ್ಜಲ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯಗಳಲ್ಲಿ 815.70 ಟಿಎಂಸಿಗಳಷ್ಟು ನೀರು ಸಂಗ್ರಹವಾಗಿತ್ತು. ಈ ವರ್ಷ ಆ.26ರ ವರೆಗೆ ಕೇವಲ 684.09 ಟಿಎಂಸಿಗಳಷ್ಟು ಮಾತ್ರ ಸಂಗ್ರಹವಾಗಿದೆ ಎಂದರು.

33 ವಾರಕ್ಕಷ್ಟೇ ಮೇವು ಸಂಗ್ರಹ:

ಜಿಲ್ಲಾಧಿಕಾರಿಗಳು ಹಾಗೂ ಪಶುಸಂಗೋಪನಾ ಇಲಾಖೆ ನೀಡಿದ ಮಾಹಿತಿ ಪ್ರಕಾರ, ರಾಜ್ಯದಲ್ಲಿ 151 ಲಕ್ಷ ಟನ್‌ಗಳಷ್ಟು ಮೇವಿನ ಸಂಗ್ರಹವಿದೆ. ಇದು 33 ವಾರಗಳಿಗೆ ಸಾಕಾಗುತ್ತದೆ. 49 ತಾಲೂಕುಗಳಲ್ಲಿ 25 ವಾರಗಳಿಗೆ ಹಾಗೂ 18 ತಾಲೂಕುಗಳಲ್ಲಿ 20 ವಾರಗಳಿಗಿಂತ ಕಡಿಮೆ ಅವಧಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ. ಇದರ ನಡುವೆ ನೀರಿನ ಆಸರೆ ಹೊಂದಿರುವ ರೈತರಿಗೆ ಮೇವಿನ ಬೀಜದ ಕಿಟ್‌ಗಳನ್ನು ನೀಡಲು 25 ಕೋಟಿ ರು. ಬಿಡುಗಡೆ ಮಾಡಿದ್ದೇವೆ. ಕೆಎಂಎಫ್ ಕಡೆಯಿಂದಲೂ ಕಿಟ್‌ಗಳನ್ನು ನೀಡುತ್ತಿದ್ದೇವೆ. ಮೇವು ಬೆಳೆದ ರೈತರು ಅದನ್ನು ಜೋಪಾನ ಮಾಡುವಂತೆ ಸಚಿವರು ಮನವಿ ಮಾಡಿದರು.

ತೀವ್ರ ಬರ ಘೋಷಿತ 89 ತಾಲೂಕುಗಳು:

ಬೆಂಗಳೂರು ನಗರ ಜಿಲ್ಲೆಯ- ಆನೇಕಲ್‌, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಯಲಹಂಕ. ಬೆಂಗಳೂರು ಗ್ರಾಮಾಂತರ ಜಿಲ್ಲೆ- ಹೊಸಕೋಟೆ, ನೆಲಮಂಗಲ. ಬೆಂಗಳೂರು ದಕ್ಷಿಣ ಜಿಲ್ಲೆ- ಮಾಗಡಿ, ರಾಮನಗರ. ಕೋಲಾರ ಜಿಲ್ಲೆ- ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್‌. ಚಿಕ್ಕಬಳ್ಳಾಪುರ ಜಿಲ್ಲೆ- ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟ, ಚೇಳೂರು, ಮಂಚೇನಹಳ್ಳಿ. ತುಮಕೂರು ಜಿಲ್ಲೆ- ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್‌, ಮಧುಗಿರಿ, ಪಾವಗಡ, ಸಿರಾ, ತುಮಕೂರು, ತುರುವರೆಕೆರೆ. ಚಿತ್ರದುರ್ಗ ಜಿಲ್ಲೆ-ಹಿರಿಯೂರು, ಹೊಸದುರ್ಗ. ದಾವಣೆಗೆರೆ ಜಿಲ್ಲೆ- ಚನ್ನಗಿರಿ, ನ್ಯಾಮತಿ, ಹೊನ್ನಾಳಿ. ಚಾಮರಾಜನಗರ ಜಿಲ್ಲೆ- ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರು, ಹನೂರು. ಮೈಸೂರು ಜಿಲ್ಲೆ- ಎಚ್‌.ಡಿ.ಕೋಟೆ, ಮೈಸೂರು, ನಂಜನಗೂಡು, ಟಿ.ನರಸೀಪುರ, ಸರಗೂರು, ಸಾಲಿಗ್ರಾಮ. ಮಂಡ್ಯ ಜಿಲ್ಲೆ- ಕೆ.ಆರ್.ಪೇಟೆ, ಮಳವಳ್ಳಿ, ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ. ಬಳ್ಳಾರಿ ಜಿಲ್ಲೆ- ಬಳ್ಳಾರಿ, ಸಂಡೂರು, ಕುರುಗೋಡು, ಕಂಪ್ಲಿ. ಕೊಪ್ಪಳ ಜಿಲ್ಲೆ- ಕನಕಗಿರಿ, ಗಂಗಾವತಿ, ಕೂಕನೂರು. ರಾಯಚೂರು ಜಿಲ್ಲೆ- ದೇವದುರ್ಗ, ಮಸ್ಕಿ, ಅರಕೇರ. ಬೀದರ್‌ ಜಿಲ್ಲೆ- ಬೀದರ್‌, ಬಸವಕಲ್ಯಾಣ, ಹುಮ್ನಾಬಾದ್‌, ಚಿತ್ತಗುಪ್ಪ. ಬಾಗಲಕೋಟೆ ಜಿಲ್ಲೆ- ಬಾಗಲಕೋಟೆ, ಬೀಳಗಿ, ಜಮಖಂಡಿ, ಗುಳೇದಗುಡ್ಡ, ಇಳಕ್ಕಲ್‌. ವಿಜಯಪುರ ಜಿಲ್ಲೆ- ವಿಜಯಪುರ, ನಿಡಗುಂದಿ, ಕೊಲ್ಹಾರಾ. ಗದಗ ಜಿಲ್ಲೆ-ಗಜೇಂದ್ರಗಢ. ಹಾಸನ ಜಿಲ್ಲೆ- ಅರಕಲಗೂಡು, ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ. ಚಿಕ್ಕಮಗಳೂರು ಜಿಲ್ಲೆ- ಅಜ್ಜಂಪುರ. ಯಾದಗಿರಿ- ಶಹಪುರ. ವಿಜಯನಗರ ಜಿಲ್ಲೆ- ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪ್ಪನಹಳ್ಳಿ.

ಸಾಧಾರಣ ಬರ ಘೋಷಿತ 12 ತಾಲೂಕುಗಳು: ಬೆಂಗಳೂರು ಗ್ರಾಮಾಂತರ ಜಿಲ್ಲೆ- ದೇವನಹಳ್ಳಿ. ದಾವಣಗೆರೆ ಜಿಲ್ಲೆ- ದಾವಣಗೆರೆ. ಮಂಡ್ಯ ಜಿಲ್ಲೆ- ಪಾಂಡವಪುರ, ಮದ್ದೂರು. ರಾಯಚೂರು ಜಿಲ್ಲೆ- ಲಿಂಗಸೂಗೂರು, ರಾಯಚೂರು. ಚಿಕ್ಕಮಗಳೂರು ಜಿಲ್ಲೆ- ಕೊಪ್ಪ, ನರಸಿಂಹರಾಜಪುರ, ತರೀಕೆರೆ. ಕೊಡಗು ಜಿಲ್ಲೆ- ಸೋಮವಾರಪೇಟೆ. ಉತ್ತರಕನ್ನಡ ಜಿಲ್ಲೆ- ಮುಂಡಗೋಡ, ಯಲ್ಲಾಪುರ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನೇಪಾಳ ಪ್ರವಾಹದಲ್ಲಿ ಸಿಕ್ಕಿಬಿದ್ದ 8 ಕನ್ನಡಿಗರು - ಕನ್ನಡಿಗರ ರಕ್ಷಣೆಗೆ ಸರ್ಕಾರದ ಕ್ರಮ
ಸುಪ್ರೀಂ ಕೋರ್ಟ್‌ ಸಿಜೆ ಭಾಗಿಗೆ ವಿರೋಧ:ಕಾನೂನು ಶಾಲೆಯ ಘಟಿಕೋತ್ಸವವೇ ರದ್ದು