ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿರುವ ಕರ್ನಾಟಕ ಮೂಲ ಪ್ರವಾಸಿಗರು ಮತ್ತು ನಾಗರಿಕರನ್ನು ಸುರಕ್ಷಿತವಾಗಿ ಕರೆತರಲು ನೇಪಾಳ ರಾಜಧಾನಿ ಕಠ್ಮಂಡುಗೆ ಹಿರಿಯ ಅಧಿಕಾರಿಗಳನ್ನು ಕಳುಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು : ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿರುವ ಕರ್ನಾಟಕ ಮೂಲ ಪ್ರವಾಸಿಗರು ಮತ್ತು ನಾಗರಿಕರನ್ನು ಸುರಕ್ಷಿತವಾಗಿ ಕರೆತರಲು ನೇಪಾಳ ರಾಜಧಾನಿ ಕಠ್ಮಂಡುಗೆ ಹಿರಿಯ ಅಧಿಕಾರಿಗಳನ್ನು ಕಳುಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ನೇಪಾಳದಲ್ಲಿ ಬುಧವಾರ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ರಾಜ್ಯದ ನಿವಾಸಿಗಳು ಸಿಲುಕಿರುವ ಶಂಕೆಯಿದೆ. ಸದ್ಯ ಬೆಂಗಳೂರು ಮೂಲದ 8 ಮಂದಿ ನೇಪಾಳದಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿಯಿದೆ. ಆದರೆ, ಅವರ ಪೂರ್ಣ ವಿವರ ಇನ್ನೂ ಲಭ್ಯವಾಗಿಲ್ಲ. ಹೀಗಾಗಿಯೇ ರಾಜ್ಯ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಸಂತ್ರಸ್ತರು ಮತ್ತು ಅವರ ಕುಟುಂಬದವರಿಗೆ ನೆರವು ನೀಡುವ ಉದ್ದೇಶದೊಂದಿಗೆ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ತೆರೆದಿದೆ.

ಅದರ ಪ್ರಕಾರ ಸಾರ್ವಜನಿಕರು 1070 (ಟೋಲ್‌ಫ್ರೀ) ಅಥವಾ 080 2253707ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಕರೆ ಮಾಡಲು ಸಾಧ್ಯವಾಗದಿದ್ದರೆ seockarnataka@gmail.com ಈಮೇಲ್‌ಗೆ ಸಂತ್ರಸ್ತರ ಮಾಹಿತಿಯನ್ನು ಕಳುಹಿಸಬಹುದಾಗಿದೆ. ನೇಪಾಳದಲ್ಲಿ ಕುಟುಂಬದವರು, ಸ್ನೇಹಿತರು ಅಥವಾ ಪರಿಚಿತರು ನಾಪತ್ತೆಯಾಗಿದ್ದಾರೆಂದು ಶಂಕೆಯಿದ್ದರೆ ಅವರ ಪೂರ್ಣ ಹೆಸರು, ಮೊಬೈಲ್‌ ಸಂಖ್ಯೆ, ಕೊನೆಯದಾಗಿ ಸಂಪರ್ಕಿಸಿದ ಸ್ಥಳ, ಸಮಯ ಮತ್ತು ಖಾಯಂ ವಿಳಾಸದ ವಿವರಗಳೊಂದಿಗೆ ಮಾಹಿತಿಯನ್ನು ನೀಡಬೇಕು ಎಂದು ಸರ್ಕಾರ ಕೋರಿದೆ.

8 ಜನರು ಸಿಲುಕಿರುವ ಮಾಹಿತಿ:

ನೇಪಾಳದ ಮಾನಸ ಸರೋವರಕ್ಕೆ ಪ್ರವಾಸಕ್ಕೆ ತೆರಳಿದ್ದ ನಾಲ್ವರು ಸೇರಿ ಕರ್ನಾಟಕ ಮೂಲದ ಒಟ್ಟು 8 ಮಂದಿ ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಿದೆ. ಅವರ ಜತೆಗೆ ಇನ್ನಷ್ಟು ಜನರು ನೇಪಾಳದಲ್ಲಿ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿರುವ ಅನುಮಾನವಿದೆ. ಹೀಗಾಗಿ ಕನ್ನಡಿಗರ ರಕ್ಷಣೆಗಾಗಿ ರಾಜ್ಯ ಸರ್ಕಾರ ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಪಾಳಕ್ಕೆ ಕಳುಹಿಸಲು ಮುಂದಾಗಿದೆ.

ನೇಪಾಳದಲ್ಲಿನ ಕನ್ನಡಿಗರ ಮಾಹಿತಿ ಪಡೆಯಲು ಕೇಂದ್ರ ಗೃಹ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ರಾಜ್ಯ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ನಾಪತ್ತೆ ಕುರಿತು ರಾಜ್ಯ ಸರ್ಕಾರಕ್ಕೆ ಮಾಹಿತಿ ದೊರೆತ ಕೂಡಲೇ ಅದನ್ನು ಕೇಂದ್ರ ಸಚಿವಾಲಯಗಳಿಗೆ ಕಳುಹಿಸಿ ಪತ್ತೆಗೆ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

ನೇಪಾಳದಲ್ಲಿ ರಾಜ್ಯದ 8 ಮಂದಿ ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ಲಭ್ಯವಾಗಿದೆ. ಅವರನ್ನು ಪತ್ತೆ ಮಾಡಿ, ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಠ್ಮಂಡುಗೆ ರಾಜ್ಯದ ಹಿರಿಯ ಅಧಿಕಾರಿಗಳನ್ನು ಕಳುಹಿಸಲಾಗುತ್ತದೆ. ಮುಂದಿನ ಮಾಹಿತಿಗಳನ್ನಾಧರಿಸಿ ಕ್ರಮ ಕೈಗೊಳ್ಳಲಾಗುವುದು. ದೆಹಲಿಯ ರೆಸಿಡೆಂಟ್‌ ಕಮಿಷನರ್‌ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ರಾಜ್ಯದವರನ್ನು ಸುರಕ್ಷಿತವಾಗಿ ಕರೆತರಲಾಗುವುದು.

ಡಾ. ಜಿ.ಪರಮೇಶ್ವರ್‌,

ಉಪಮುಖ್ಯಮಂತ್ರಿ