ನೇಪಾಳದಲ್ಲಿ ಸಂಭವಿಸಿದ ಭೀಕರ ಜಲಪ್ರಳಯದಲ್ಲಿ ಸಿಲುಕಿರುವ ಹಾವೇರಿ, ಧಾರವಾಡ ಹಾಗೂ ಕಲಬುರಗಿ ಜಿಲ್ಲೆಯ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ನೇಪಾಳದಲ್ಲಿ ಸಂಭವಿಸಿದ ಭೀಕರ ಜಲಪ್ರಳಯದಲ್ಲಿ ಸಿಲುಕಿರುವ ಹಾವೇರಿ, ಧಾರವಾಡ ಹಾಗೂ ಕಲಬುರಗಿ ಜಿಲ್ಲೆಯ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

ನೇಪಾಳ ಪ್ರವಾಸದಲ್ಲಿದ್ದ ಹಾವೇರಿ ಜಿಲ್ಲೆ ರಟ್ಟೀಹಳ್ಳಿಯ 6 ಕುಟುಂಬದ 12 ಮಂದಿ ಸುರಕ್ಷಿತವಾಗಿದ್ದಾರೆ, ಇನ್ನೆರಡು ದಿನಗಳಲ್ಲಿ ವಾಪಸ್‌ ಊರಿಗೆ ಬರಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬೆಂಗಳೂರಿನಿಂದ ವಿಮಾನದ ಮೂಲಕ ಫೋಖ್ರಾಕ್ಕೆ ತೆರಳಿ, ಅಲ್ಲಿಂದ ಕಟ್ಮಂಡು ಸೇರಿ ನೇಪಾಳದ ಪ್ರೇಕ್ಷಣೀಯ ಸ್ಥಳಗಳು ಹಾಗೂ ದೇವಾಲಯಗಳ ವೀಕ್ಷಣೆಗೆಂದು ಈ ಕುಟುಂಬಗಳು ತೆರಳಿದ್ದವು. ಪ್ರವಾಹ ಉಂಟಾದ್ದರಿಂದ ಪ್ರವಾಸವನ್ನು ಮೊಟಕುಗೊಳಿಸಿ, ಸುರಕ್ಷಿತ ಪ್ರದೇಶದಲ್ಲಿರುವುದಾಗಿ ವಿಡಿಯೋ ಹಾಗೂ ದೂರವಾಣಿ ಮೂಲಕ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ನೇಪಾಳದ ಜಲಪ್ರಳಯದಲ್ಲಿ ಧಾರವಾಡದ ರಾಕೇಶ ನಾಯಕ್‌ (45) ಎಂಬುವರು ಸಿಲುಕಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಕೇಂದ್ರ ಸರ್ಕಾರದಿಂದ ಕುಟುಂಬಸ್ಥರಿಗೆ ಬಂದಿದೆ. ಆದರೆ, ಅವರು ಕುಟುಂಬ ಸದಸ್ಯರ ಫೋನ್‌ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದು ಕುಟುಂಬಸ್ಥರನ್ನು ಆತಂಕಕ್ಕೆ ಈಡು ಮಾಡಿದೆ.

ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ರಾಕೇಶ್‌, ಕಳೆದ ಹತ್ತು ವರ್ಷದಿಂದ ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ವಾಸವಿದ್ದಾರೆ. ಇಶಾ ಫೌಂಡೇಷನ್‌ನೊಂದಿಗೆ ಆ.10ರಂದು ಮಾನಸ ಸರೋವರ ಪ್ರವಾಸಕ್ಕೆ ಅವರು ತೆರಳಿದ್ದರು. ಆ.12ರಂದು ಪೋಷಕರೊಂದಿಗೆ ಹಾಗೂ ಆ. 25ರವರೆಗೆ ಪತ್ನಿ ಜತೆಗೂ ಸಂಪರ್ಕದಲ್ಲಿದ್ದರು. ಆದರೆ, ಬುಧವಾರದಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ.

ಇದೇ ವೇಳೆ, ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕೋಡ್ಲಿ ಗ್ರಾಮದ ಮಲ್ಲಿನಾಥ ಪಾಟೀಲ್ ಕೋಲ್ಕುಂದಿ ಮತ್ತು ಕನಕಪುರ ಗ್ರಾಮದ ಸಂಗಮೇಶ್ ಪಾಟೀಲ್ ಎಂಬುವರು ನೇಪಾಳದಲ್ಲಿ ಸಿಲುಕಿದ್ದು, ತಾವು ಸುರಕ್ಷಿತವಾಗಿ ಇರುವುದಾಗಿ ಬಂಧುಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಾವಿದ್ದ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಬಸ್ ಗೆ ಯಾವುದೇ ಹಾನಿ ಆಗಿಲ್ಲ. ಇಬ್ಬರೂ ಸುರಕ್ಷಿತವಾಗಿದ್ದು, ತಮ್ಮನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ ಎಂದು ಅವರು ತಿಳಿಸಿದ್ದಾರೆ.ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗ ಮಲ್ಲಿನಾಥ್ ಜತೆ ಸಿಎಂ ವಿಡಿಯೋ ಕಾಲ್‌:

ಧೈರ್ಯವಾಗಿರಿ, ಸುರಕ್ಷಿತ ಸ್ಥಳದಲ್ಲಿ ಇರುವುದರಿಂದ ಹೊರಬರುವ ಪ್ರಯತ್ನ ಮಾಡುವುದು ಬೇಡ. ನಿಮ್ಮ ಜೊತೆ ನಮ್ಮ ಸರ್ಕಾರವಿದೆ. ನಿಮ್ಮ ಸಂಕಷ್ಟಕ್ಕೆ ನಾವು ಸ್ಪಂದಿಸುತ್ತೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗ ಮಲ್ಲಿನಾಥ್ ಅವರಿಗೆ ಧೈರ್ಯ ತುಂಬಿದರು.

ದೆಹಲಿ ಪ್ರವಾಸದಲ್ಲಿರುವ ಸಿಎಂ, ಗುರುವಾರ ವಿಡಿಯೋ ಕರೆ ಮಾಡಿ ಸಂಕಷ್ಟದಲ್ಲಿರುವ ಮಲ್ಲಿನಾಥ್‌ಗೆ ಧೈರ್ಯ ತುಂಬಿದರು. ಕರ್ನಾಟಕದಿಂದ ನೇಪಾಳ ಪ್ರವಾಸಕ್ಕೆ ಹೊರಟವರ ಸಂಪರ್ಕ ಕಡಿತವಾಗಿದೆ. ಹುಡುಕಾಟದ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಯಾರೂ ಕೂಡ ಎದೆಗುಂದುವ ಅಗತ್ಯವಿಲ್ಲ. ನಾವೆಲ್ಲ ಕನ್ನಡಿಗರು. ನಮ್ಮ ಸರ್ಕಾರ ನಿಮ್ಮ ಜೊತೆಯಲ್ಲಿರುತ್ತದೆ ಎಂದರು.

ಸಂಕಷ್ಟದ ಸಮಯದಲ್ಲಿ ಕನ್ನಡಿಗರ ರಕ್ಷಣೆಗೆ ನಮ್ಮ ಸರ್ಕಾರ ಅತ್ಯಂತ ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಿದ್ದು, ಸಂಕಷ್ಟದಲ್ಲಿರುವ ಪ್ರತಿಯೊಬ್ಬ ಕನ್ನಡಿಗನನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆ ತರಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸಿಎಂ ತಿಳಿಸಿದರು.

ಕರ್ನಾಟಕದಿಂದ ಕೆಲವರು ನೇಪಾಳ ಪ್ರವಾಸಕ್ಕೆ ತೆರಳಿದ್ದಾರೆ. ಕೆಲವು ಜನರ ಲೊಕೇಶನ್ ಸಿಕ್ಕಿದೆ, ಇನ್ನೂ ಕೆಲವರ ಮಾಹಿತಿ ಸಿಕ್ಕಿಲ್ಲ.

ಎಲ್ಲರ ಹುಡುಕಾಟವನ್ನು ಮಾಡುವ ಪ್ರಯತ್ನ ಮಾಡ್ತಿದ್ದೇವೆ. ಕೇಂದ್ರ ಗೃಹ ಸಚಿವಾಲಯದ ಜೊತೆ ಸಂಪರ್ಕದಲ್ಲಿದ್ದೇವೆ. ವಾಪಸ್ ಬಂದವರಿಗೆ ಕರ್ನಾಟಕ ಭವನದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.