ಛಾಯಾಚಿತ್ರಗಳು ಸಮಾಜದ ಕನ್ನಡಿ. ಜೀವನದ ಅಮೂಲ್ಯ ಕ್ಷಣಗಳನ್ನು, ಸುಖ-ದು;ಖದ ಸನ್ನಿವೇಶಗಳನ್ನು ಸೆರೆಹಿಡಿದು, ಅವುಗಳ ನೆನಪು ಸದಾ ಮರುಕಳಿಸುವಂತೆ ಮಾಡುವ ಮಾಂತ್ರಿಕರು ಛಾಯಾಗ್ರಾಹಕರು ಎಂದು ಶಾಸಕಿ ಅನ್ನಪೂರ್ಣ ಈ. ತುಕಾರಾಮ್ ಅಭಿಪ್ರಾಯಪಟ್ಟರು.

ಸಂಡೂರು: ಛಾಯಾಚಿತ್ರಗಳು ಸಮಾಜದ ಕನ್ನಡಿ. ಜೀವನದ ಅಮೂಲ್ಯ ಕ್ಷಣಗಳನ್ನು, ಸುಖ-ದು;ಖದ ಸನ್ನಿವೇಶಗಳನ್ನು ಸೆರೆಹಿಡಿದು, ಅವುಗಳ ನೆನಪು ಸದಾ ಮರುಕಳಿಸುವಂತೆ ಮಾಡುವ ಮಾಂತ್ರಿಕರು ಛಾಯಾಗ್ರಾಹಕರು ಎಂದು ಶಾಸಕಿ ಅನ್ನಪೂರ್ಣ ಈ. ತುಕಾರಾಮ್ ಅಭಿಪ್ರಾಯಪಟ್ಟರು.

ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂಡೂರು ಫೋಟೋಗ್ರಾಫರ್ಸ್‌ ಮತ್ತು ವೀಡಿಯೋಗ್ರಾಫರ್ಸ್‌ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಇಂದು ಮೊಬೈಲ್ ಬಳಸುವವರೆಲ್ಲರೂ ಛಾಯಾಗ್ರಾಹಕರಾಗಿದ್ದಾರೆ. ಛಾಯಾಗ್ರಹಣ ತಂತ್ರಜ್ಞಾನ ಬೆಳೆದು ಬಂದ ದಾರಿ ಕುತೂಹಲಕಾರಿ ಹಾಗೂ ರೋಮಾಂಚಕಾರಿಯಾಗಿದೆ. ವಿಶ್ವದೆಲ್ಲೆಡೆ ನಡೆಯುವ ಘಟನೆಗಳನ್ನು ಜನರಿಗೆ ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್‌ಗಳು ತಲುಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ. ಈ ಉದ್ಯಮದಲ್ಲೂ ಇಂದು ಸ್ಪರ್ಧೆ ಇದೆ. ಛಾಯಾಗ್ರಹಣ ಕ್ಷೇತ್ರದಲ್ಲಾಗಿರುವ ತಂತ್ರಜ್ಞಾನ, ವೈವಿಧ್ಯತೆ, ನಾವಿನ್ಯತೆ, ಬದಲಾವಣೆಗಳನ್ನು ಛಾಯಾಗ್ರಾಹಕರು ತಿಳಿದುಕೊಂಡು, ಅವುಗಳನ್ನು ಅಳವಡಿಸಿಕೊಂಡಾಗ ಇಂದಿನ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂದರು.

ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕ ಡಾ.ಪಿ.ಎಸ್. ಹರ್ಷ ಮಾತನಾಡಿ, ಛಾಯಾಗ್ರಹಣಕ್ಕೆ ವಯಸ್ಸಿನ ನಿರ್ಬಂಧಗಳಿಲ್ಲ. ಇದೊಂದು ಕಲೆಯಾಗಿದ್ದು, ಎಲ್ಲರೂ ಕಲಿಯಬಹುದಾಗಿದೆ. ಜನತೆ ಇದನ್ನು ಹವ್ಯಾಸ ಅಥವಾ ಉದ್ಯೋಗವನ್ನಾಗಿ ತೆಗೆದುಕೊಳ್ಳಬಹುದಾಗಿದೆ ಎಂದರು.

ಛಾಯಾಗ್ರಹಣ ಸಹಕಾರಿ

ಸಾನ್ನಿಧ್ಯ ವಹಿಸಿದ್ದ ಸಂಡೂರಿನ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿ, ಇತಿಹಾಸ ತಿಳಿಯಲು ಛಾಯಾಗ್ರಹಣ ಸಹಕಾರಿಯಾಗಿದೆ. ಛಾಯಾಚಿತ್ರಗಳು ನಮ್ಮ ನೆನಪಿನ ಬುತ್ತಿಯನ್ನು ಕಟ್ಟಿಕೊಡುತ್ತವೆ ಎಂದರು.

ಶಿರಹಟ್ಟಿ ಹಾಗೂ ಬಾಳೇಹೊಸೂರು ಶ್ರೀಜಗದ್ಗುರು ಭಾವೈಕ್ಯತಾ ಸಂಸ್ಥಾನಪೀಠದ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಕಣ್ಣುಗಳು ಭಗವಂತ ನೀಡಿದ ಅದ್ಭುತ ಕ್ಯಾಮೆರಾಗಳು. ಬಾಲ್ಯದ ಫೋಟೋಗಳು ಬಹಳ ಖುಷಿಕೊಡುತ್ತವೆ. ಕೆಲವು ಬಾರಿ ಕೆಲ ಛಾಯಾಚಿತ್ರಗಳು ಸಮಸ್ಯೆಯನ್ನುಂಟು ಮಾಡುತ್ತವೆ. ಛಾಯಾಚಿತ್ರಗಳನ್ನು ನೋಡುವ ದೃಷ್ಟಿಕೋನ ಬಹಳ ಮುಖ್ಯ. ಎಲ್ಲರಲ್ಲಿ ಅದ್ಭುತ ಶಕ್ತಿ ಇದೆ. ಯುವಜನತೆ ಹೊರಗಿನ ಸೌಂದರ್ಯಕ್ಕಿಂತ ಒಳಗಿನ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಜೀವನದಲ್ಲಿ ಉತ್ತಮ ಸಾಧನೆ ಮಾಡುವ ಸಂಕಲ್ಪವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ತಿಳಿಸಿದರು.

ಕರ್ನಾಟಕ ಫೋಟೋಗ್ರಾಫರ್ಸ್‌ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಎಚ್.ಎಸ್. ನಾಗೇಶ್ ಮಾತನಾಡಿದರು. ಸಂಡೂರು ಫೋಟೋಗ್ರಾಫರ್ಸ್‌ ಮತ್ತು ವಿಡಿಯೋಗ್ರಾಫರ್ಸ್‌ ಅಸೋಸಿಯೇಷನ್ ತಾಲೂಕು ಘಟಕದ ಅಧ್ಯಕ್ಷ ವಿನಯಕುಮಾರ ಸಾರಂಗಮಠ ಅಧ್ಯಕ್ಷತೆಯನ್ನು ವಹಿಸಿದ್ದರು.

ಸಂಘದ ತಾಲೂಕು ಘಟಕದ ಕಾರ್ಯದರ್ಶಿ ಎ. ಕಾಶಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿನೋದ್ ಎಂ. ನಿರೂಪಿಸಿದರು. ರುಕುಮಾ ಪಾಂಡುರಂಗ, ಟಿ. ವೆಂಕಟೇಶ್ ಹಾಗೂ ಕೆ. ಉಮೇಶ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಬಿ. ನಾಗನಗೌಡ, ಫೋಟೋಗ್ರಾಫರ್ಸ್‌ ಅಸೋಸಿಯೇಷನ್ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ನಾಡಗೌಡ ಚಂದ್ರಮೋಹನ್, ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್‌ಕುಮಾರ್, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಸಂಡೂರು ಫೋಟೋಗ್ರಾಫರ್ಸ್‌ ಮತ್ತು ವಿಡಿಯೋಗ್ರಾಫರ್ಸ್‌ ಸಂಘದ ಸದಸ್ಯರು, ಅವರು ಕುಟುಂಬ ವರ್ಗದವರು ಉಪಸ್ಥಿತರಿದ್ದರು.