ಬಳ್ಳಾರಿ ನಗರದ ಫುಟ್‌ಪಾತ್‌ಗಳಲ್ಲಿ ಓಡಾಡುವಾಗ ನಿಮ್ಮ ಗಮನ ನೆಲದ ಮೇಲೆಯೇ ಇರಲಿ. ಒಂದುವೇಳೆ ನೆಲ ಬಿಟ್ಟು ಆಕಡೆ-ಈಕಡೆ ನೋಡಿದರೆ ಎಡವಿ ಬೀಳುವ, ಕಾಲು ಮುರಿಯುವ ಇಲ್ಲವೇ ಗಂಭೀರವಾಗಿ ಗಾಯಗೊಳ್ಳುವ ಅಪಾಯ ಖಚಿತ.

ವಿಶೇಷ ವರದಿ

ಬಳ್ಳಾರಿ: ಬಳ್ಳಾರಿ ನಗರದ ಫುಟ್‌ಪಾತ್‌ಗಳಲ್ಲಿ ಓಡಾಡುವಾಗ ನಿಮ್ಮ ಗಮನ ನೆಲದ ಮೇಲೆಯೇ ಇರಲಿ. ಒಂದುವೇಳೆ ನೆಲ ಬಿಟ್ಟು ಆಕಡೆ-ಈಕಡೆ ನೋಡಿದರೆ ಎಡವಿ ಬೀಳುವ, ಕಾಲು ಮುರಿಯುವ ಇಲ್ಲವೇ ಗಂಭೀರವಾಗಿ ಗಾಯಗೊಳ್ಳುವ ಅಪಾಯ ಖಚಿತ.

ಹೌದು. ನೀವೊಮ್ಮೆ ನಗರದಲ್ಲಿ ಒಂದು ಸುತ್ತು ಹಾಕಿ ಫುಟ್‌ಪಾತ್‌ಗಳ ಸ್ಥಿತಿಗತಿಗಳನ್ನು ಅವಲೋಕಿಸಿದರೆ ಫುಟ್‌ಪಾತ್ ಗಳ ಮೇಲೆ ಓಡಾಡಿದರೆ ಕೈ-ಕಾಲುಗಳು ಏನಾಗಬಹುದು? ಎಷ್ಟರ ಮಟ್ಟಿಗೆ ಸುರಕ್ಷಿತವಾಗಿ ಉಳಿಯಬಲ್ಲವು ಎಂಬ ಅಂದಾಜು ಸಿಗುತ್ತದೆ!

ನಗರದ ಬಹುತೇಕ ಫುಟ್‌ಪಾತ್‌ಗಳು ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಬದಲಾಗಿ ಅವಘಡ ತಾಣಗಳಾಗಿ ಮಾರ್ಪಟ್ಟಿರುವುದರಿಂದ ಫುಟ್ಪಾತ್‌ಗಳ ಮೇಲೆ ಓಡಾಡಲು ಜನರು ಆತಂಕ ಪಡುವಂತಾಗಿದೆ. ಅಷ್ಟೇ ಅಲ್ಲ, ರಸ್ತೆ ಗುಂಡಿಗಳ ಊರು ಎಂದೇ ಕುಖ್ಯಾತಿಗೊಂಡಿರುವ ಬಳ್ಳಾರಿಯಲ್ಲೀಗ ಫುಟ್‌ಪಾತ್‌ಗಳ ದುಸ್ಥಿತಿಯೂ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದೆ.

ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿರುವ ಫುಟ್‌ಪಾತ್‌ಗಳನ್ನು ಅಂಗಡಿಗಳು, ಹೋಟೆಲ್‌ಗಳು, ತಳ್ಳುಗಾಡಿಗಳು ಹಾಗೂ ವಿವಿಧ ವ್ಯಾಪಾರಸ್ಥರು ಆಕ್ರಮಿಸಿಕೊಂಡಿರುವ ಪರಿಣಾಮ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯಲ್ಲೇ ಸಂಚರಿಸಬೇಕಾಗಿದೆ. ಉಳಿದಿರುವ ಕೆಲವೇ ಫುಟ್‌ಪಾತ್‌ಗಳೂ ಅಲ್ಲಲ್ಲಿ ಗುಂಡಿ ಬಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿರುವುದರಿಂದ ಪಾದಚಾರಿಗಳು ಆತಂಕದಲ್ಲಿಯೇ ಹುಷಾರಾಗಿ ಹೆಜ್ಜೆ ಇಡುವಂತಾಗಿದೆ.

ಆಳ ತಿಳಿಯುವುದಿಲ್ಲ

ಫುಟ್‌ಪಾತ್‌ಗಳ ಮೇಲಿನ ಗುಂಡಿಗಳು ರಾತ್ರಿ ವೇಳೆ ಕಾಣಿಸುವುದಿಲ್ಲ. ಮಳೆ ಬಂದಾಗ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತದೆ. ಗುಂಡಿಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ಆಳ ಎಷ್ಟಿದೆ ಎಂಬುದು ತಿಳಿಯುವುದಿಲ್ಲ. ನೀರು ತುಂಬಿದ ಗುಂಡಿಗೆ ಕಾಲಿಟ್ಟರೆ ಎಡವಿ ಬಿದ್ದು ಕೈ ಕಾಲು ಮುರಿದುಕೊಂಡ ಘಟನೆಗಳು ಸಾಕಷ್ಟಿವೆ. ಮಕ್ಕಳು ಮತ್ತು ವೃದ್ಧರಿಗೆ ಇಂತಹ ಸ್ಥಳಗಳು ಇನ್ನಷ್ಟು ಅಪಾಯಕಾರಿಯಾಗಿವೆ. ಪುಟ್ಪಾತ್‌ಗಳಲ್ಲಿ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಮಹಾನಗರ ಪಾಲಿಕೆ ಈ ವರೆಗೆ ಮುಂದಾಗಿಲ್ಲ. ಹೀಗಾಗಿ ರಸ್ತೆಗಳ ಜೊತೆಗೆ ಅಲ್ಲಲ್ಲಿ ಫುಟ್‌ಪಾತ್ ಗುಂಡಿಗಳೂ ಬಾಯಿ ತೆಗೆದುಕೊಂಡು ಕುಳಿತಿವೆ. ಕೂಡಲೇ ಇದನ್ನು ಸರಿಪಡಿಸಬೇಕು ಎಂಬ ಆಗ್ರಹಗಳು ಬಹುದಿನಗಳಿಂದಲೂ ಕೇಳಿಬರುತ್ತಿದೆ.ಬರೀ ಬಣ್ಣ ಬಳಿದರೆ ಸಾಕಾಗುವುದಿಲ್ಲ

ನಗರ ಸೌಂದರ್ಯೀಕರಣದ ಹೆಸರಿನಲ್ಲಿ ಫುಟ್‌ಪಾತ್‌ಗಳಿಗೆ ಬಣ್ಣ ಬಳಿಯುವುದು, ಅಲಂಕಾರಿಕ ಕಲ್ಲು ಅಳವಡಿಸುವುದು ಅಥವಾ ಹೊಸ ವಿನ್ಯಾಸ ರೂಪಿಸುವುದಷ್ಟೇ ಸಾಕಾಗುವುದಿಲ್ಲ. ಅವು ನಿಜವಾಗಿ ಪಾದಚಾರಿಗಳಿಗೆ ಅನುಕೂಲವಾಗುವಂತೆ ಇರಬೇಕು. ಫುಟ್‌ಪಾತ್‌ಗಳ ಅಗಲ, ಎತ್ತರ, ಚರಂಡಿ ಮುಚ್ಚಳ, ಇಳಿಜಾರು, ವಿದ್ಯುತ್‌ ಕಂಬಗಳ ಸ್ಥಾನ, ವಾಹನ ನಿಲುಗಡೆ ಸೇರಿದಂತೆ ಪ್ರತಿಯೊಂದು ಅಂಶವನ್ನು ವೈಜ್ಞಾನಿಕವಾಗಿ ಪರಿಗಣಿಸಬೇಕಿದೆ. ಅಂಗವಿಕಲರು ಮತ್ತು ವೃದ್ಧರು ಸುಲಭವಾಗಿ ಬಳಸುವಂತೆಯೂ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಫುಟ್‌ಪಾತ್‌ಗಳು ಬಾಯಿ ತೆರೆದುಕೊಂಡು ಪಾದಚಾರಿಗಳನ್ನು ನುಂಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದರೆ ಸಣ್ಣಪುಟ್ಟ ಗುಂಡಿಗಳು ದೊಡ್ಡ ಅಪಘಾತಗಳಿಗೆ ಕಾರಣವಾಗುವ ದಿನ ದೂರವಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರಮುಖ ರಸ್ತೆಗಳು ಸದಾ ವಾಹನಗಳಿಂದ ತುಂಬಿರುತ್ತವೆ. ಇಂತಹ ಸಂದರ್ಭದಲ್ಲಿ ಪಾದಚಾರಿಗಳು ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕು. ಫುಟ್‌ಪಾತ್‌ಗಳು ಬಾಯಿ ತೆರೆದುಕೊಂಡರೆ ಓಡಾಡುವ ಜನರ ಗತಿಯೇನು? ಜಿಲ್ಲಾಡಳಿತ ಗಮನ ಹರಿಸಬೇಕು ಎಂದು ನಿವೃತ್ತ ಆರೋಗ್ಯ ಇಲಾಖೆ ಸಿಬ್ಬಂದಿ ವೇಮನರಾವ್‌ ಆಗ್ರಹಿಸಿದ್ದಾರೆ.

ಫುಟ್‌ಪಾತ್‌ಗಳು ಸುಸ್ಥಿತಿಯಲ್ಲಿದ್ದರೆ ಪಾದಚಾರಿಗಳು ಸುರಕ್ಷಿತವಾಗಿ ಸಂಚರಿಸಬಹುದಾಗಿದೆ. ಇದರಿಂದ ರಸ್ತೆಯ ಮೇಲಿನ ವಾಹನ ದಟ್ಟಣೆಯೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಆದರೆ, ಫುಟ್‌ಪಾತ್‌ಗಳೇ ಸರಿಯಿಲ್ಲದಿದ್ದರೆ ಹೇಗೆ ಓಡಾಡಬೇಕು? ಕಾರುಗಳಲ್ಲಿ ಓಡಾಡುವ ಅಧಿಕಾರಿಗಳಿಗೆ ಇದು ಹೇಗೆ ಗೊತ್ತಾಗಬೇಕು ಎನ್ನುತ್ತಾರೆ ಸರ್‌ಎಂವಿ ನಗರದ ಖಾಸಗಿ ಉದ್ಯೋಗಿ ಎಸ್‌.ವಿ. ಮಾರುತಿ.