ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗುರುವಾರ ವಿವಿಧ ಸಂಘಟನೆಗಳು ನಮ್ಮ ಉದ್ಯಾನಗಳನ್ನು ಹಾಗೆಯೇ ಉಳಿಸಿ ಎಂಬ ಬ್ಯಾನರ್ ಪ್ರದರ್ಶಿಸಿದವು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಉದ್ಯಾನವನಗಳಲ್ಲಿ ಶೇ5ರಷ್ಟು ಜಾಗವನ್ನು ವಾಣಿಜ್ಯೀಕರಣಕ್ಕಾಗಿ ಬಳಸುವ ಸರ್ಕಾರದ ಪ್ರಸ್ತಾವಕ್ಕೆ ನಗರದ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ನಾಗರಿಕರು, ಸಂಘಟನೆಗಳು, ಪರಿಸರ ಸಂಘಟನೆಗಳು ಮತ್ತು ನಗರ ನಿವಾಸಿಗಳ ಸಂಘಗಳು, ಕರ್ನಾಟಕ ಸರ್ಕಾರದ ಉದ್ಯಾನವನಗಳ (ಸಂರಕ್ಷಣೆ) ಕಾಯ್ದೆ, 1975ಕ್ಕೆ ತಿದ್ದುಪಡಿ ತರುವ ನಿರ್ಧಾರವನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿವೆ.

ಈ ತಿದ್ದುಪಡಿಯಿಂದ ಉದ್ಯಾನವನಗಳ ಕೆಲ ಭಾಗಗಳನ್ನು ಕಾಂಕ್ರಿಟ್‌ ಆಧಾರಿತ ಮೂಲಸೌಕರ್ಯ ಯೋಜನೆಗಳಿಗೆ ಬಳಸಲು ಅವಕಾಶ ದೊರೆಯಲಿದೆ. ಹೀಗಾಗಿ ಈ ಪ್ರಸ್ತಾವ ವಿರೋಧಿಸಿ ಬೆಂಗಳೂರಿನ ಲಾಲ್‌ಬಾಗ್ ಬಟಾನಿಕಲ್ ಗಾರ್ಡನ್‌ನಲ್ಲಿ ಗುರುವಾರ ಸಭೆ ಸೇರಿದ ಸಂಘಟನೆಗಳು ಶೇ. 5 ಬೇಡ. 1 ಇಂಚೂ ಬೇಡ. ನಮ್ಮ ಉದ್ಯಾನಗಳನ್ನು ಹಾಗೆಯೇ ಉಳಿಸಿ ಎಂಬ ಬ್ಯಾನರ್ ಪ್ರದರ್ಶಿಸಿದವು. ಸಾರ್ವಜನಿಕ ಹಸಿರು ಪ್ರದೇಶಗಳನ್ನು ನಗರದಲ್ಲಿ ಹೆಚ್ಚುವರಿಯಾಗಿ ಲಭ್ಯವಿರುವ ಭೂಮಿ ಎಂಬಂತೆ ನೋಡುವುದನ್ನು ನಿಲ್ಲಿಸಿ, ಅವುಗಳನ್ನು ಪರಿಸರ ರಕ್ಷಣೆಗೆ ಅಗತ್ಯ ಮೂಲಸೌಕರ್ಯವೆಂದು ಗುರುತಿಸಬೇಕು ಎಂದು ಗ್ರೀನ್‌ಪೀಸ್ ಇಂಡಿಯಾ ಹವಾಮಾನ ಮತ್ತು ಇಂಧನ ಕ್ಯಾಂಪೇನರ್‌ ಸೆಲೋಮಿ ಗರ್ನಾಯಕ್ ವಿರೋಧಿಸಿದ್ದಾರೆ.

ಈ ಸಂಬಂಧ ಸಿಎಂಗೆ ಸಲ್ಲಿಸಿದ ಪತ್ರದಲ್ಲಿ, ನಗರದ ಹಸಿರು ಪ್ರದೇಶಗಳನ್ನು ರಕ್ಷಿಸುವಂತೆ ಒತ್ತಾಯಿಸಿವೆ, ಈ ಸಂಬಂಧ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿರುವ ಸಂಘಟನೆಗಳು, ಎಲ್ಲಾ ಮೂಲಸೌಕರ್ಯ ಯೋಜನೆಗಳು ಅಸ್ತಿತ್ವದ ಉದ್ಯಾನವನಗಳು ಅಥವಾ ಹಸಿರು ಪ್ರದೇಶಗಳನ್ನು ಹೊರತುಪಡಿಸಿದ ಪರ್ಯಾಯ ಮಾರ್ಗಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಸಾರ್ವಜನಿಕ ಹಸಿರು ಪ್ರದೇಶದ ಮೇಲೆ ಪರಿಣಾಮ ಬೀರುವ ಯಾವುದೇ ಪ್ರಸ್ತಾವವನ್ನು ಪರಿಗಣಿಸುವ ಮೊದಲು ಪಾರದರ್ಶಕ ಸಾರ್ವಜನಿಕ ಸಮಾಲೋಚನೆ ಕಡ್ಡಾಯಗೊಳಿಸಬೇಕು. ಅಸ್ತಿತ್ವದ ಉದ್ಯಾನವನಗಳ ಮೇಲೆ ಪರಿಣಾಮ ಬೀರಬಹುದಾದ ಯಾವುದೇ ಪ್ರಸ್ತಾವನೆಗೆ ಸಮಗ್ರ ಪರಿಸರ, ಸಾಮಾಜಿಕ, ಆರೋಗ್ಯ ಮತ್ತು ಸಾರ್ವಜನಿಕ ಯೋಗಕ್ಷೇಮ ಮೌಲ್ಯಮಾಪನ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರದ ಈ ಕ್ರಮವನ್ನು ಟೀಕಿಸಿದ ಸಿವಿಕ್‌ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್, ಉದ್ಯಾನಗಳ (ಸಂರಕ್ಷಣೆ) ಕಾಯ್ದೆ, 1975ರ ಉದ್ದೇಶವೇ ಉದ್ಯಾನಗಳನ್ನು ‘ಸಂರಕ್ಷಿಸುವುದು’.ಕಾಯ್ದೆಯ ಮೂಲ ಉದ್ದೇಶಕ್ಕೇ ವಿರುದ್ಧವಾಗಿ ಉದ್ಯಾನದ 5 ಶೇಕಡಾ ಭಾಗವನ್ನು ಇತರ ಉದ್ದೇಶಗಳಿಗೆ ವರ್ಗಾಯಿಸುವಂತೆ ತಿದ್ದುಪಡಿ ತರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಕಾನ್ಷಿಯಸ್ ಕಮ್ಯೂನಿಟೀಸ್ ಸಂಸ್ಥಾಪಕ ಸಂದೀಪ್ ಅನಿರುಧನ್, ಈ ಕ್ರಮವನ್ನು ಇದು ಬೆಂಗಳೂರನ್ನು ಶವಪೆಟ್ಟಿಗೆಯಲ್ಲಿಟ್ಟು ಅದಕ್ಕೆ ಹೊಡೆಯುತ್ತಿರುವ ಮತ್ತೊಂದು ಮೊಳೆ ಎಂದು ಟೀಕಿಸಿದರು.

ಉದ್ಯಾನಗಳು ಮತ್ತು ಹಸಿರು ಪ್ರದೇಶಗಳು ನಗರದಲ್ಲಿ ಗುಣಮಟ್ಟದ ಜೀವನ ನಡೆಸಲು ಅತ್ಯಗತ್ಯವಾಗಿದ್ದು, ಅವು ನಗರದ ಜನರ ಮೂಲಭೂತ ಹಕ್ಕು. ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಹಾಗೂ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರವನ್ನು ಮೇಲ್ವಿಚಾರಣೆ ಮಾಡುವ ಸಾಂವಿಧಾನಿಕ ಸಂಸ್ಥೆ ಬೆಂಗಳೂರು ಮೆಟ್ರೋಪಾಲಿಟನ್ ಪ್ಲಾನಿಂಗ್ ಕಮಿಟಿ ಯಂತಹ ಸಂಸ್ಥೆಗಳ ಮೂಲಕ ಸೂಕ್ತ ಪ್ರಕ್ರಿಯೆ ಅನುಸರಿಸಬೇಕು. ಯೋಜನೆಗಳು, ಗುತ್ತಿಗೆದಾರರು ಮತ್ತು ಸ್ವಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಕಾನೂನುಗಳನ್ನು ದುರ್ಬಲಗೊಳಿಸುವುದು ಸಂವಿಧಾನ ಮತ್ತು ನಮ್ಮ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ವಿವಿಧ ಸಂಘಟನೆಗಳ ಪರವಾಗಿ ಮಾತನಾಡಿದ ಬೆಂಗಳೂರು ಎನ್ವಿರಾನ್‌ಮೆಂಟ್ ಫೋರಂ ಲಿಯಾನ್ ಅಭಿಪ್ರಾಯಪಟ್ಟರು.

ಈಗಾಗಲೆ ನಗರದಲ್ಲಿ ಹಸಿರು ಪ್ರದೇಶ ಕಾಣೆಯಾಗುತ್ತಿದೆ. ರಾಜಾಜಿನಗರ, ಜಯನಗರ, ಮಲ್ಲೇಶ್ವರಂ ಪ್ರದೇಶ ಸೇರಿದಂತೆ 28 ವಿಧಾನಸಭಾ ಕ್ಷೇತ್ರಗಳಲ್ಲಿ ಹಸಿರು ಇಲ್ಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಗರದ ನಾಗರಿಕರಿಗೆ ಉಸಿರಾಡಲು ಗಾಳಿ ಸಿಗದಂತಹ ಪರಿಸ್ಥಿತಿಗೆ ಸರ್ಕಾರ ದೂಡಲು ಪ್ರಯತ್ನಿಸುತ್ತಿದೆ. ರಸ್ತೆ ಬದಿಯಲ್ಲಿ ಮರ ಬೆಳೆಸುವುದಕ್ಕಿಂತ ಉದ್ಯಾನವನದಲ್ಲಿ ಮರಬೆಳೆಸುವುದು ಮುಖ್ಯವಾದುದು ಏಕೆಂದರೆ, ಹೆಚ್ಚಿನ ಮರಗಳು ಬೆಳೆಯಲು ಅವಕಾಶ ಸಿಗುವುದು ಉದ್ಯಾನವನದಲ್ಲಿ. ಅಲ್ಲಿಯೂ ವಾಣಿಜ್ಯ ಕಟ್ಟಡಗಳು ತಲೆಎತ್ತಿದರೆ, ಗಾಳಿ ಉತ್ಪಾದನೆಗೆ ಅವಕಾಶವಿಲ್ಲದಂತಾಗುತ್ತದೆ ಎಂದು ಬಿಜೆಪಿ ಮುಖಂಡ ನೆ.ಲ.ನರೇಂದ್ರಬಾಬು ಅಭಿಪ್ರಾಯಪಟ್ಟಿದ್ದಾರೆ.