Clear road encroachment: Poor farmers demand

-ಬಡದಾಳ ರೈತರಿಂದ ತಹಸೀಲ್ದಾರ್‌ ಸಂಜೀವಕುಮಾರ ದಾಸರ್ ಅವರಿಗೆ ಮನವಿ

--

ಕನ್ನಡಪ್ರಭ ವಾರ್ತೆ ಅಫಜಲಪುರ ಸರ್ಕಾರಿ ಗೈರಾಣ ಭೂಮಿ ಹಾಗೂ ರಸ್ತೆ ಒತ್ತುವರಿ ತೆರವುಗೊಳಿಸಿ, ಹೊಲಗದ್ದೆಗಳಿಗೆ ಸುಗಮವಾಗಿ ತೆರಳಲು ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ಬಡದಾಳ ಗ್ರಾಮದ ರೈತರು ತಹಸೀಲ್ದಾರ್‌ ಸಂಜೀವಕುಮಾರ ದಾಸರ್ ಅವರಿಗೆ ಮನವಿ ಸಲ್ಲಿಸಿದರು.

ಬಡದಾಳ ಗ್ರಾಮದ ಸರ್ವೆ ನಂ. 368ರಲ್ಲಿ 51 ಎಕರೆ 38 ಗುಂಟೆ ಸರ್ಕಾರಿ ಗೈರಾಣ ಭೂಮಿಯಿದ್ದು, ಇಲ್ಲಿ ಅನೇಕರು ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಮನೆಗಳ ಬಳಕೆಯ ನೀರನ್ನು ಮುಖ್ಯ ರಸ್ತೆಗೆ ಹರಿಸುತ್ತಿದ್ದು, ಕೆಲವರು ಶೌಚಾಲಯ ಸೆಪ್ಟಿಕ್‌ ಟ್ಯಾಂಕ್‌ಗಳನ್ನು ಕೂಡ ರಸ್ತೆಯಲ್ಲಿಯೇ ನಿರ್ಮಿಸಿಕೊಂಡಿದ್ದಾರೆ. ಇದರಿಂದ ರಸ್ತೆಯಲ್ಲಿ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ರೈತರು ದೂರಿದರು.

ಕೆಲವರು ಉದ್ದೇಶಪೂರ್ವಕವಾಗಿ ರಸ್ತೆ ಒತ್ತುವರಿ ಮಾಡಿಕೊಂಡಿದ್ದರಿಂದ ರೈತರು ತಮ್ಮ ಹೊಲಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ.

ಕಬ್ಬು ಸಾಗಣೆ ಸೇರಿದಂತೆ ಕೃಷಿ ಉತ್ಪನ್ನಗಳನ್ನು ಸಾಗಿಸಲು ಹಾಗೂ ರಾಶಿ ಮಾಡಲು ತೊಂದರೆಯಾಗುತ್ತಿದೆ. ಅನಧಿಕೃತ ಬಡಾವಣೆಯ ನಿವಾಸಿಗಳಿಂದ ರೈತಾಪಿ ವರ್ಗ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.

ಸರ್ಕಾರಿ ಗೈರಾಣದ ಮೂಲಕ ರೈತರ ಹೊಲಗಳಿಗೆ, ಮೆಂದಿಸಾಬ್ ದರ್ಗಾಕ್ಕೆ, ದುಧನಿ ಮತ್ತು ನಿಂಬಾಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಪುರಾತನ ಕಾಲದಿಂದಲೂ ಬಳಕೆಯಲ್ಲಿದ್ದು, ಇಲಾಖೆಯ ನಕಾಶೆಯಲ್ಲೂ ದಾಖಲಾಗಿದೆ. ನಕಾಶೆಯಲ್ಲಿರುವ ರಸ್ತೆಯನ್ನು ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಂಡು, ರಸ್ತೆ ಒತ್ತುವರಿ ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್‌ ಸಂಜೀವಕುಮಾರ ದಾಸರ್ ಮಾತನಾಡಿ, ಸರ್ಕಾರಿ ಜಾಗ ಹಾಗೂ ರಸ್ತೆ ಒತ್ತುವರಿ ಮಾಡಿಕೊಂಡಿರುವ ಕುರಿತು ತನಿಖೆ ನಡೆಸಿ, ನಿಯಮಾನುಸಾರ ಒತ್ತುವರಿ ತೆರವುಗೊಳಿಸಲಾಗುವುದು. ಕಾನೂನು ಉಲ್ಲಂಘಿಸಿರುವುದು ಕಂಡುಬಂದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಭಾಗಪ್ಪ ಚಾಂಬಾರ, ರೈತರಾದ ಚಂದ್ರಶೇಖರ ಜಮಾಣಿ, ಹಣಮಂತ ಖೈರಾಟ್, ಸಂತೋಷ ನಿಂಬಾಳ, ಚಂದ್ರಶಾ ಜಮಾದಾರ, ಶಿವಪ್ಪ ಪಕಾಲಿ, ಸಂಗಪ್ಪ ಪರೀಟ್, ಜಾವೀದ್ ಮುಜಾವರ, ಶಿವು ಮೇತ್ರೆ, ಶಿವಲಿಂಗಪ್ಪ ನಿಂಬಾಳ, ರೇವಂತ ನಿಂಬಾಳ ಹಾಗೂ ಸಿದ್ದಪ್ಪ ಬಸ್ತಾಳ ಇದ್ದರು.

ಫೋಟೋ- ಸಂಜೀವ ದಾಸರ್‌