ಉತ್ತರ ಕರ್ನಾಟಕದ ಕೈಮಗ್ಗ ಪರಂಪರೆಯ ಸಂಕೇತವಾಗಿರುವ ‘ಪಟ್ಟೇದ ಅಂಚು’ ಸೀರೆಗೆ ಭೌಗೋಳಿಕ ಗುರುತು (ಜಿಐ ಟ್ಯಾಗ್) ನೀಡಲಾಗಿದೆ.
ಬೆಂಗಳೂರು : ಉತ್ತರ ಕರ್ನಾಟಕದ ಕೈಮಗ್ಗ ಪರಂಪರೆಯ ಸಂಕೇತವಾಗಿರುವ ‘ಪಟ್ಟೇದ ಅಂಚು’ ಸೀರೆಗೆ ಭೌಗೋಳಿಕ ಗುರುತು (ಜಿಐ ಟ್ಯಾಗ್) ನೀಡಲಾಗಿದೆ.
ಗಜೇಂದ್ರಗಡ ನೇಕಾರರ ಸಹಕಾರಿ ಉತ್ಪಾದಕ ಸಂಘಕ್ಕೆ ಈ ಟ್ಯಾಗ್ ದೊರಕಿದೆ. ರಾಮಯ್ಯ ಕಾಲೇಜ್ ಆಫ್ ಲಾ ಸೆಂಟರ್ ಫಾರ್ ಇಂಟಲೆಕ್ಟುವಲ್ ಪ್ರಾಪರ್ಟಿ ರೈಟ್ಸ್ (ಆರ್‌ಸಿಐಪಿಆರ್) ಸಹಯೋಗದಲ್ಲಿ ಕರ್ನಾಟಕದ ಜಿಐ ಟ್ಯಾಗ್ ನೋಡಲ್ ಏಜೆನ್ಸಿಯಾಗಿರುವ ದಿ ವಿಶ್ವೇಶ್ವರಯ್ಯ ಪ್ರಮೋಷನ್ ಸೆಂಟರ್‌ನಿಂದ (ವಿಟಿಪಿಸಿ) ಜಿಐ ಟ್ಯಾಗ್ ನೋಂದಣಿ ಮಾಡಲಾಗಿದೆ.
ಕರ್ನಾಟಕದ ಶ್ರೀಮಂತ ಜವಳಿ ಪರಂಪರೆಯನ್ನು ಸಂರಕ್ಷಿಸಲು ಹಾಗೂ ಸಾಂಪ್ರದಾಯಿಕ ನೇಕಾರರನ್ನು ಪ್ರೋತ್ಸಾಹಿಸಲು ಜಿಐ ಟ್ಯಾಗ್ ಮಹತ್ವದ ಪಾತ್ರ ವಹಿಸುತ್ತದೆ. ಪಟ್ಟೇದ ಅಂಚು ಸೀರೆಯು ಗಾಢವಾದ ಬಣ್ಣ ಹಾಗೂ ವಿಶಿಷ್ಟವಾದ ಅಂಚಿಗೆ ಹೆಸರುವಾಸಿಯಾಗಿದೆ.
ಆರ್‌ಸಿಐಪಿಆರ್ ಜತೆಗೆ ರಾಜ್ಯ ಜವಳಿ ಅಭಿವೃದ್ಧಿ ಆಯುಕ್ತರು, ಕೈಮಗ್ಗ ಮತ್ತು ಜವಳಿ ನಿರ್ದೇಶಕರು, ವಿಟಿಪಿಸಿ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಮಹತ್ವದ ಮಾರ್ಗದರ್ಶನ ಸಿಕ್ಕಿದೆ. ಶಿವಾರಪಟ್ಟಣದ ಶಿಲ್ಪಕಲೆ, ಬೆಳಗಾವಿ ಕುಂದ, ಕರದಂಟು ಸೇರಿ 50ಕ್ಕೂ ಹೆಚ್ಚು ಉತ್ಪನ್ನಗಳಿಗೆ ಜಿಐ ಟ್ಯಾಗ್ ದೊರಕಿಸಿಕೊಡುವಲ್ಲಿ ರಾಮಯ್ಯ ಕಾನೂನು ಕಾಲೇಜು ಕೆಲಸ ನಿರ್ವಹಿಸಿದೆ ಎಂದು ಆರ್‌ಸಿಐಪಿಆರ್ ಪ್ರಕಟಣೆಯಲ್ಲಿ ತಿಳಿಸಿದೆ.