ಬೆಂಗಳೂರು : ಬೀದಿ ಕಾಮಣ್ಣರ ಹಾವಳಿ ಸೇರಿದಂತೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ತಡೆಗೆ ಉತ್ತರ ವಿಭಾಗದಲ್ಲಿ ‘ರಾಣಿ ಚೆನ್ನಮ್ಮ ಪಡೆ’ ಯನ್ನು ಕಟ್ಟಿ ಡಿಸಿಪಿ ಬಿ.ಎಸ್.ನೇಮಗೌಡ ಕಾರ್ಯಾಚರಣೆಗಿಳಿಸಿದ್ದಾರೆ.
ನಗರದ ಮಲ್ಲೇಶ್ವರದ ಮೈದಾನದಲ್ಲಿ ಚೆನ್ನಮ್ಮ ಪಡೆಗೆ ಶುಕ್ರವಾರ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಸಿರು ನಿಶಾನೆ ತೋರಿದರು. ಈ ವೇಳೆ ಜಂಟಿ ಆಯುಕ್ತ (ಪಶ್ಚಿಮ) ವಂಶಿ ಕೃಷ್ಣ, ಚಲನಚಿತ್ರ ನಟಿ ಸುಧಾರಾಣಿ ಹಾಗೂ ಡಿಸಿಪಿ ನೇಮಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.
ರಾಣಿ ಚೆನ್ನಮ್ಮ ಪಡೆಯಲ್ಲಿ ಓರ್ವ ಮಹಿಳಾ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ 3 ಸಬ್ ಇನ್ಸ್‌ಪೆಕ್ಟರ್‌ಗಳು,15 ಪೊಲೀಸರು ಇರುವರು., ಮಹಿಳೆಯರ ರಕ್ಷಣೆ ಮಾತ್ರವಲ್ಲದೆ ಮಹಿಳೆಯರಿಗೆ ಕಾನೂನು ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಈ ಪಡೆ ನಡೆಸಲಿದೆ ಎಂದು ಡಿಸಿಪಿ ನೇಮಗೌಡ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಈ ಪಡೆಗೆ ಸ್ವಯಂ ರಕ್ಷಣೆ ಕಲೆಗಳ ಕುರಿತು ನುರಿತ ತರಬೇತುದಾರರಿಂದ ತರಬೇತಿ ಸಹ ನೀಡಲಾಗಿದೆ. ಇದೇ ರೀತಿಯ ಸ್ವಯಂ ರಕ್ಷಣೆ ಬಗ್ಗೆ ಶಾಲಾ-ಕಾಲೇಜು ಮಟ್ಟದಲ್ಲಿ ಚೆನ್ನಮ್ಮ ಪಡೆ ಮೂಲಕ ವಿದ್ಯಾರ್ಥಿನಿಯರಿಗೆ ತರಬೇತಿ ಕಾರ್ಯಾಗಾರ ರೂಪಿಸಲಾಗುತ್ತದೆ. ಅಲ್ಲದೆ ಶಾಲಾ-ಕಾಲೇಜುಗಳು ಹಾಗೂ ಬಸ್ ನಿಲ್ದಾಣಗಳು ಸೇರಿದಂತೆ ಜನಸಂದಣಿ ಪ್ರದೇಶಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಚೆನ್ನಮ್ಮ ಪಡೆ ಗಸ್ತು ನಡೆಸಲಿದೆ. ಈ ವೇಳೆ ಮಹಿಳೆಯರಿಗೆ ಚೂಡಾಡಿಸುವುದು ಅಥವಾ ಕಿರುಕುಳ ನೀಡುವ ಕಿಡಿಗೇಡಿಗಳನ್ನು ದಸ್ತಗಿರಿ ಮಾಡಲಿದ್ದಾರೆ ಎಂದು ಡಿಸಿಪಿ ಮಾಹಿತಿ ನೀಡಿದರು.