27ರಿಂದ ರಾಜ್ಯದಲ್ಲಿ ಆಸ್ತಿ ನೋಂದಣಿಗೆ ಸಮಸ್ಯೆ? - ಸೇವೆ ಬಹಿಷ್ಕರಿಸಿ ಸಬ್‌ ರಿಜಿಸ್ಟ್ರಾರ್‌ಗಳ ಮುಷ್ಕರ

ಸಾರಾಂಶ

ರಾಜ್ಯ ಉಪ ನೋಂದಣಿ ಅಧಿಕಾರಿ ಹಾಗೂ ಸಿಬ್ಬಂದಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.27 ರಿಂದ ರಾಜ್ಯಾದ್ಯಂತ ಆಸ್ತಿ ದಸ್ತಾವೇಜು ನೋಂದಣಿ ಸೇರಿ ಎಲ್ಲಾ ಸೇವೆಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ನಿರ್ಧಾರ ಮಾಡಿದ್ದಾರೆ.

 ಬೆಂಗಳೂರು : ರಾಜ್ಯ ಉಪ ನೋಂದಣಿ ಅಧಿಕಾರಿ ಹಾಗೂ ಸಿಬ್ಬಂದಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.27 ರಿಂದ ರಾಜ್ಯಾದ್ಯಂತ ಆಸ್ತಿ ದಸ್ತಾವೇಜು ನೋಂದಣಿ ಸೇರಿ ಎಲ್ಲಾ ಸೇವೆಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ನಿರ್ಧಾರ ಮಾಡಿದ್ದಾರೆ.

ಈ ಸಂಬಂಧ ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೌಕರರ ಸಂಘ ಶುಕ್ರವಾರ ಕಂದಾಯ ಸಚಿವ ಕೃಷ್ಣಬೈರೇಗೌಡ, ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಸಲ್ಲಿಸಿದ್ದು, ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆ.27 ರಿಂದ ಮುಷ್ಕರ ಹೂಡುವುದಾಗಿ ಹೇಳಿದೆ.

ಕಾವೇರಿ-2 ತಂತ್ರಾಂಶದಲ್ಲಿನ ಸಮಸ್ಯೆ, ಫೇಸ್‌ಲೆಸ್‌ ರಿಜಿಸ್ಟ್ರೇಷನ್‌, ಇಸಿ, ಸಿಸಿ ವಿತರಿಸಲು ಉಂಟಾಗುತ್ತಿರುವ ಸರ್ವರ್‌ ಸಮಸ್ಯೆ, ಐಟಿ ಅಧಿಕಾರಿಗಳು ಮಾಹಿತಿ ಹೆಸರಿನಲ್ಲಿ ಉಪ ನೋಂದಣಾಧಿಕಾರಿಗಳಿಗೆ ನೀಡುತ್ತಿರುವ ಕಿರುಕುಳದ ವಿರುದ್ಧ ಹಾಗೂ ಉಪ ನೋಂದಣಾಧಿಕಾರಿಗಳ ವರ್ಗಾವಣೆಗಳೂ ಪ್ರತ್ಯೇಕ ನಿಯಮಗಳನ್ನು ರೂಪಿಸಲು ಆಗ್ರಹಿಸಿ ಮುಷ್ಕರ ಹೂಡಲಾಗುತ್ತಿದೆ.

ಇನ್ನು ಕರ್ನಾಟಕ ನೋಂದಣಿ ಕಾಯ್ದೆಗೆ 22 ಬಿ ಕಲಂ ಸೇರಿಸಿ ನೋಂದಣಿಯಾದ ದಸ್ತಾವೇಜುಗಳಲ್ಲಿನ ತಪ್ಪುಗಳಿಗೆ ಉಪ ನೋಂದಣಾದಿಕಾರಿಗಳೇ ಹೊಣೆ ಮಾಡಲಾಗುತ್ತಿದೆ. ಇದು ಅಮಾನವೀಯವಾದ ನಿರ್ಣಯ. ಈ ಅಂಶ ಹಿಂಪಡೆಯಬೇಕು. ಜತೆಗೆ ಐಟಿ ಇಲಾಖೆ ಅಧಿಕಾರಿಗಳು ಮಾಹಿತಿ ಹೆಸರಿನಲ್ಲಿ ಉಪ ನೋಂದಣಾಧಿಕಾರಿಗಳಿಗೆ ಕಿರುಕುಳ ನೀಡುವುದನ್ನು ತಪ್ಪಿಸಿ ಯಾವುದೇ ಮಾಹಿತಿ ಇದ್ದರೂ ಕೇಂದ್ರ ಕಚೇರಿಯಲ್ಲಿ ಪಡೆಯುವಂತೆ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಉಪ ನೋಂದಣಾಧಿಕಾರಿಗಳು ನೋಂದಣಿ ಕಾಯ್ದೆ 1908ರ ಕಲಂ ಹಾಗೂ ಕರ್ನಾಟಕ ನೋಂದಣಿ ನಿಯಮಗಳು-1965ರ ನಿಯಮಗಳ ಅನ್ವಯ ಕಾರ್ಯನಿರ್ವಹಿಸಬೇಕು. ಆದರೆ, ಈ ನಿಯಮಗಳನ್ನು ಮೀರಿ ಕಾವೇರಿ-2 ತಂತ್ರಾಂಶದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗಿದೆ. ಇದರಲ್ಲಿ ಉಂಟಾಗುವ ಸಮಸ್ಯೆಗಳಿಗೆ ಉಪ ನೋಂದಣಾಧಿಕಾರಿಗಳು ತಮ್ಮ ಪ್ರಮೇಯವೇ ಇಲ್ಲದೆ ನ್ಯಾಯಾಲಯಗಳಲ್ಲಿ ನಿಲ್ಲುವಂತಾಗಿದೆ. ಪದೇ ಪದೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ವರ್ಗಾವಣೆ ನೀತಿ ಜಾರಿ ಮಾಡಿ: ವೈದ್ಯಕೀಯ ಅಧಿಕಾರಿಗಳು, ಪೊಲೀಸರು, ಶಿಕ್ಷಕರ ವರ್ಗಾವಣೆಗೆ ಪ್ರತ್ಯೇಕ ಸಿಬ್ಬಂದಿ ವರ್ಗಾವಣೆ ಕಾಯ್ದೆಗಳಿವೆ. ಆದರೆ ಉಪ ನೋಂದಣಾಧಿಕಾರಿಗಳ ವರ್ಗಾವಣೆಗೆ ಯಾವುದೇ ನಿಯಮಗಳಿಲ್ಲ. ಹೀಗಾಗಿ ಪ್ರತ್ಯೇಕ ನಿಯಮ ರೂಪಿಸಬೇಕು ಎಂದು ಆಗ್ರಹಿಸಲಾಗಿದೆ.

ಅಧಿಕಾರಿಗಳಿಂದ ಅಹೋರಾತ್ರಿ ಧರಣಿ

ಹೈಕೋರ್ಟ್‌ ವಿಭಾಗೀಯ ಪೀಠದ ಆದೇಶವಿದ್ದರೂ ಕರ್ತವ್ಯ ನಿರ್ವಹಿಸಲು ಚಲನಾದೇಶ ಹಾಗೂ ಲಾಗಿನ್‌ ಐಡಿ ನೀಡದ ಹಿನ್ನೆಲೆಯಲ್ಲಿ ಹಲವು ಹಿರಿಯ ಉಪ ನೋಂದಣಾಧಿಕಾರಿಗಳು ಗುರುವಾರ ರಾತ್ರಿ ನೋಂದಣಿ ಇಲಾಖೆ ಕೇಂದ್ರ ಕಚೇರಿಯಲ್ಲಿ ಅಹೋರಾತ್ರಿ ಧರಣಿ ನಡೆಸಿದರು.

ಕಂದಾಯ ಭವನದಲ್ಲಿರುವ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ ಅವರು, ಡಿ.10 ರಂದು ಹೊರಡಿಸಿರುವ ವರ್ಗಾವಣೆ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿದೆ. ಹೀಗಿದ್ದರೂ ವಾಪಸ್‌ ತಮ್ಮ ತಮ್ಮ ಸ್ಥಾನಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ವರ್ಗಾವಣೆಗೊಂಡಿದ್ದ ನೋಂದಣಾಧಿಕಾರಿಗಳಿಗೆ ಅವಕಾಶ ನೀಡುತ್ತಿಲ್ಲ. ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಹಾಗೂ ಆಯುಕ್ತ ಕೆ.ದಯಾನಂದ್‌ ದ್ವೇಷ ಸಾಧಿಸುತ್ತಿದ್ದಾರೆ ಎಂದು ಪ್ರತಿಭಟನಾನಿರತ ಅಧಿಕಾರಿಗಳು ದೂರಿದರು. ಈ ಬಗ್ಗೆ ಕಂದಾಯ ಸಚಿವರಿಗೆ ದೂರು ನೀಡಿ ಶುಕ್ರವಾರ ಸಂಜೆ ಧರಣಿ ಹಿಂಪಡೆದಿದ್ದು, ಫೆ.27ರಿಂದ ಮುಷ್ಕರದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.

Share this article