ಹೆಚ್ಚು ಅಪಘಾತದ 20 ಹೈವೇಗಳಲ್ಲಿ ಸುರಕ್ಷತಾ ಕ್ರಮ - ಸ್ಪೀಡ್‌ ಬ್ರೆಕರ್‌, ಸೋಲಾರ್‌ ದೀಪ, ವಿಭಜಕ ಅಳವಡಿಕೆಗೆ ಕ್ರಮ

Published : Oct 16, 2024, 10:28 AM IST
Bangalore Mysore Express Highway

ಸಾರಾಂಶ

ರಾಜ್ಯ ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಅಪಘಾತ ತೆಡೆಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್‌)ಯು ಅತಿಹೆಚ್ಚು ಅಪಘಾತ ಸಂಭವಿಸುತ್ತಿರುವ 20 ರಸ್ತೆಗಳನ್ನು ಗುರುತಿಸಿ, ಅಲ್ಲಿ ರಸ್ತೆ ಸುರಕ್ಷತಾ ಕ್ರಮ ಅಳವಡಿಕೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

ಗಿರೀಶ್‌ ಗರಗ

 ಬೆಂಗಳೂರು : ರಾಜ್ಯ ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಅಪಘಾತ ತೆಡೆಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್‌)ಯು ಅತಿಹೆಚ್ಚು ಅಪಘಾತ ಸಂಭವಿಸುತ್ತಿರುವ 20 ರಸ್ತೆಗಳನ್ನು ಗುರುತಿಸಿ, ಅಲ್ಲಿ ರಸ್ತೆ ಸುರಕ್ಷತಾ ಕ್ರಮ ಅಳವಡಿಕೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿಯಂತೆ 2022-23ನೇ ಸಾಲಿನಲ್ಲಿ ದೇಶದಲ್ಲಿ 4.61 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 1.68 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಹೀಗೆ ಅಪಘಾತದ ಸಂಖ್ಯೆಯಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದ್ದು, 2022-23ನೇ ಸಾಲಿನಲ್ಲಿ ಒಟ್ಟು 39,762 ಅಪಘಾತಗಳು ಸಂಭವಿಸಿವೆ. ಆಪೈಕಿ ರಾಜ್ಯ ಹೆದ್ದಾರಿಯಲ್ಲಿಯೇ 10 ಸಾವಿರಕ್ಕೂ ಹೆಚ್ಚಿನ ಅಪಘಾತ ದಾಖಲಾಗಿದೆ. ಹೀಗೆ ಪದೇಪದೆ ಅಪಘಾತಕ್ಕೀಡಾಗುವ ರಾಜ್ಯ ಹೆದ್ದಾರಿಗಳನ್ನು ಗುರುತಿಸಿರುವ ಕೆಶಿಪ್‌, ಅವುಗಳಲ್ಲಿ ಅಪಘಾತ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಅದರ ಭಾಗವಾಗಿ ಸದ್ಯ 20 ರಸ್ತೆಗಳಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

2 ಭಾಗವಾಗಿ ಕ್ರಮಗಳ ಅಳವಡಿಕೆ:

ಕೆಶಿಪ್‌ ರೂಪಿಸಿರುವ ಯೋಜನೆಯಂತೆ ಉತ್ತರ ಮತ್ತು ಈಶಾನ್ಯ ಹಾಗೂ ದಕ್ಷಿಣ ಮತ್ತು ಕೇಂದ್ರ ವಲಯದಲ್ಲಿನ 20 ರಸ್ತೆಗಳನ್ನು ಗುರುತಿಸಿ ಅಪಘಾತ ನಿಯಂತ್ರಣ ಕೆಲಸ ಮಾಡಲು ನಿರ್ಧರಿಸಲಾಗಿದೆ. ಅದರಲ್ಲಿ ಕೆಶಿಪ್‌ನ ಉತ್ತರ ಮತ್ತು ಈಶಾನ್ಯ ವಲಯ ವ್ಯಾಪ್ತಿಯಲ್ಲಿ 10 ಹಾಗೂ ದಕ್ಷಿಣ ಮತ್ತು ಕೇಂದ್ರ ವಲಯ ವ್ಯಾಪ್ತಿಯಲ್ಲಿನ 10 ರಸ್ತೆಗಳಲ್ಲಿ ಸುರಕ್ಷತಾ ಕ್ರಮ ಅಳವಡಿಸಲು ನಿರ್ಧರಿಸಲಾಗಿದೆ.

ಹಲವು ಸುರಕ್ಷತಾ ಕ್ರಮಗಳ ಅನುಷ್ಠಾನ:

ಕಳೆದ ಕೆಲ ವರ್ಷಗಳಿಂದೀಚೆಗೆ ಸಂಭವಿಸಿರುವ ಅಪಘಾತ ಪ್ರಕರಣಗಳನ್ನಾಧರಿಸಿ ಪದೇಪದೆ ಅಪಘಾತ ಸಂಭವಿಸುವ ರಸ್ತೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೆ, ಅಪಘಾತ ಸಂಭವಿಸುತ್ತಿರುವ ರಸ್ತೆಗಳ ಪೈಕಿ ಹೆಚ್ಚಿನವು ರಾಜ್ಯ ಹೆದ್ದಾರಿಗೆ ಸಣ್ಣ ರಸ್ತೆಗಳು ಸಂಪರ್ಕಿಸುವ ಸ್ಥಳಗಳಾಗಿವೆ. ಆ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಕೆಶಿಪ್‌ ಮುಂದಾಗಿದೆ. ಸಂಚಾರಿ ನಿಯಮ ಫಲಕಗಳ ಅಳವಡಿಕೆ ಹಾಗೂ ಮುಂಜಾಗ್ರತೆಯನ್ನು ನೀಡುವ ಫಲಕಗಳನ್ನು ಅಳವಡಿಸುವುದು. ಪಾದಚಾರಿಗಳು ಹೆಚ್ಚಾಗಿ ಓಡಾಡುವ ರಸ್ತೆಗಳಲ್ಲಿ ಸ್ಪೀಡ್‌ ಬ್ರೇಕರ್‌ಗಳ ಅಳವಡಿಕೆಯಂತಹ ಕ್ರಮಗಳನ್ನು ಅನುಷ್ಠಾನಗೊಳಸಲಾಗುತ್ತದೆ.

ಜತೆಗೆ ಅಪಘಾತ ಹೆಚ್ಚಿರುವ ರಸ್ತೆಯುದ್ದಕ್ಕೂ ಸೋಲಾರ್‌ ಪವರ್‌ನಲ್ಲಿ ಬೆಳಗುವ ವಿದ್ಯುತ್‌ ದೀಪಗಳ ಅಳವಡಿಕೆ, ರಸ್ತೆ ವಿಭಜಕಗಳ ಅಳವಡಿಕೆ, ಈಗಾಗಲೇ ಇರುವ ಅಪ್ರಸ್ತುತ ಎನಿಸುವ ರಸ್ತೆ ಫಲಕಗಳನ್ನು ತೆರವು ಮಾಡಿ, ಸೂಕ್ತ ಮತ್ತು ಸಮರ್ಪಕ ಫಲಕಗಳನ್ನು ಅಳವಡಿಸುವುದು, ರಸ್ತೆ ವಿಭಜಕ ಇಲ್ಲದ ಕಡೆಗಳಲ್ಲಿ ಸೋಲಾರ್‌ ಸ್ಟಡ್ಸ್‌ಗಳನ್ನು ಅಳವಡಿಸಲಾಗುತ್ತದೆ.

ಅಪಘಾತ ಪ್ರಕರಣಗಳ ಕುರಿತು ವಿಶ್ಲೇಷಣೆ

ಸುರಕ್ಷತಾ ಕ್ರಮಗಳನ್ನು ಅಳವಡಿಸುವುದಕ್ಕೆ ಮುನ್ನ ಮತ್ತು ಅಳವಡಿಸಿದ ನಂತರ ಅಪಘಾತ ಪ್ರಮಾಣದ ಕುರಿತು ವಿಶ್ಲೇಷಿಸಲು ಕೆಶಿಪ್‌ ನಿರ್ಧರಿಸಿದೆ. ಅಪಘಾತ ಸಂಭವಿಸಲು ಇರುವ ಕಾರಣಗಳನ್ನು ಮೊದಲು ತಿಳಿದುಕೊಂಡು ಅದಕ್ಕೆ ತಕ್ಕಂತೆ ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಅಳವಡಿಸಬೇಕು ಎಂಬುದನ್ನು ನಿರ್ಧರಿಸಿ ಕ್ರಮ ಕೈಗೊಳ್ಳಲು ಕೆಶಿಪ್‌ ಮುಂದಾಗಿದೆ. ಅದಕ್ಕಾಗಿ ಖಾಸಗಿ ಸಂಸ್ಥೆಯನ್ನು ನೇಮಿಸಲಾಗುತ್ತಿದೆ. ಒಮ್ಮೆ ಸಂಸ್ಥೆ ನೇಮಕಗೊಂಡ ನಂತರ ಅಧ್ಯಯನ ನಡೆಸಿ ಸುರಕ್ಷತಾ ಕ್ರಮಗಳ ಅಳವಡಿಕೆ ಕಾರ್ಯ ಆರಂಭವಾಗಲಿದೆ.

ಯಾವೆಲ್ಲ ರಸ್ತೆಗಳಲ್ಲಿ ಸುರಕ್ಷತಾ ಕ್ರಮಗಳ ಅಳವಡಿಕೆ?

ನೆಲಮಂಗಲ, ಅತ್ತಿಬೆಲೆ, ಅರಕಲಗೂಡು, ಕೆಆರ್‌ ಪೇಟೆ, ಚನ್ನರಾಯಪಟ್ಟಣ, ಚಾಮರಾಜನಗರ, ನಂಜನಗೂಡು, ಹೊಸದುರ್ಗ, ಮಂಡ್ಯದ ಕಿರಗಾವಲು ಸಂತೆಮಾಳ, ಬೆಳಗಾವಿಯ ಹಾರೂಗೇರಿ, ಸಂಕೇಶ್ವರ, ಪಂತ್‌ ಬಾಳೇಕುಂದ್ರಿ, ಬೈಲಹೊಂಗಲ, ಕುಡಚಿ, ಬೀದರ್‌ನ ಖಾನಾಪುರ, ತಲ್ವಾಡ, ಕಲಬುರಗಿಯ ಶ್ರೀನಿವಾಸ್‌ ಸರಾದ್ಗಿ, ರಾಯಚೂರಿನ ಸಿಂಧನೂರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ