ಎಸ್ಸಿಎಸ್ಟಿ/ಟಿಎಸ್‌ಪಿ 13 ಸಾವಿರ ಕೋಟಿ ಅನುದಾನ ‘ಗ್ಯಾರಂಟಿ’ಗೆ ಬಳಕೆ

Published : Aug 21, 2025, 05:31 AM IST
HC mahadevappa

ಸಾರಾಂಶ

ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ಸಿಎಸ್ಟಿ/ಟಿಎಸ್‌ಪಿ ಅಡಿ ನೀಡಲಾಗಿರುವ ₹42 ಸಾವಿರ ಕೋಟಿ ಅನುದಾನ ಪೈಕಿ ‘ಪಂಚ ಗ್ಯಾರಂಟಿ ಯೋಜನೆ’ಗಳಿಗೆ ₹13.43 ಸಾವಿರ ಕೋಟಿ ಹಂಚಿಕೆ

ವಿಧಾನಸಭೆ : ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ 2025-26ನೇ ಸಾಲಿನ ಬಜೆಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್ಸಿಎಸ್ಟಿ/ಟಿಎಸ್‌ಪಿ ಅಡಿ ನೀಡಲಾಗಿರುವ ₹42 ಸಾವಿರ ಕೋಟಿ ಅನುದಾನ ಪೈಕಿ ‘ಪಂಚ ಗ್ಯಾರಂಟಿ ಯೋಜನೆ’ಗಳಿಗೆ ₹13.43 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ। ಎಚ್‌.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಎಂ.ಚಂದ್ರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ಕಲಂ 7(ಸಿ) ಅಡಿ ಗ್ಯಾರಂಟಿ ಯೋಜನೆಗಳಿಗೆ ಈ ಅನುದಾನ ನೀಡಿದ್ದೇವೆ. ಅಂದರೆ, ಸಾಮಾನ್ಯ ಸಾಮಾಜಿಕ ವಲಯದ ಯೋಜನೆಗಳಿಗೆ ಪರಿಶಿಷ್ಟ ಜಾತಿಗಳು ಅಥವಾ ಪರಿಶಿಷ್ಟ ಪಂಗಡದ ವ್ಯಕ್ತಿಗಳಿಗೆ ಅಥವಾ ಪರಿಶಿಷ್ಟ ಕುಟುಂಬಗಳಿಗೆ ಇತರರ ಜೊತೆ ಪ್ರಯೋಜನವಾಗುವುದಾದರೆ, ಯೋಜನಾ ವೆಚ್ಚವನ್ನು ಎಸ್‌ಸಿ-ಎಸ್‌ಟಿ ಜನಸಂಖ್ಯೆ ಅಥವಾ ಫಲಾನುಭವಿಗಳ ಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಈ ಅನುದಾನ ಹಂಚಿಕೆ ಮಾಡಲಾಗಿದೆ ಎಂದರು.

34 ಇಲಾಖೆಗಳಿಗೆ ₹42,000 ಕೋಟಿ:

ಕೇಂದ್ರ ಸರ್ಕಾರ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ಎಸ್ಸಿಎಸ್ಟಿ/ಟಿಎಸ್‌ಪಿ ಅನುದಾನ ಬೇರೆ ಇಲಾಖೆಗಳಿಗೆ ಹಂಚಿಕೆ ಮಾಡಿರುವ ನಿದರ್ಶನಗಳಿವೆ. ಅದರಂತೆ ಪ್ರಸಕ್ತ ಸಾಲಿನಲ್ಲಿ ರಾಜ್ಯದ 34 ಇಲಾಖೆಗಳಿಗೆ ಎಸ್ಸಿಎಸ್ಟಿ/ಟಿಎಸ್‌ಪಿ ಅಡಿ ಒಟ್ಟು ₹42 ಸಾವಿರ ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

ದಲಿತ ವರ್ಗಗಳಿಗೆ ಅನ್ಯಾಯ:

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಎಂ.ಚಂದ್ರಪ್ಪ, ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿಯಡಿ ₹42 ಸಾವಿರ ಕೋಟಿ ಅನುದಾನ ನೀಡಿದೆ ಎಂದು ಡಂಗೂರ ಹೊಡೆದು ಈಗ ಆ ಅನುದಾನ ಬೇರೆ ಇಲಾಖೆಗೆ ಹೇಗೆ ಕೊಟ್ಟಿದ್ದೀರಿ? ಶಕ್ತಿ ಯೋಜನೆಗೂ ಹಣ ಕೊಟ್ಟು ಬಳಿಕ ಸಾರಿಗೆ ಇಲಾಖೆಗೆ ₹1,814 ಕೋಟಿ ಅನುದಾನ ನೀಡಿರುವುದು ಯಾವ ಪುರುಷಾರ್ಥಕ್ಕೆ? ನಿಮ್ಮ ಸರ್ಕಾರ ದಲಿತ ವರ್ಗಗಳಿಗೆ ಅನ್ಯಾಯ ಮಾಡಿದೆ ಎಂದು ಅಸಮಾಧಾನ ಹೊರಹಾಕಿದರು.

ಕಾಯ್ದೆಯ ಉಲ್ಲಂಘನೆ:

ಬಿಜೆಪಿ ಶಾಸಕ ವಿ.ಸುನೀಲ್‌ ಕುಮಾರ್‌, ಈ ಅನುದಾನವನ್ನು ಗ್ಯಾರಂಟಿ ಯೋಜನೆಗಳು ಸೇರಿ 34 ಇಲಾಖೆಗಳಿಗೆ ನೀಡಿದ್ದೀರೆಂದರೆ, ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ದುರುಪಯೋಗವಾಗಿದೆ. ಕಾಯ್ದೆಯ ಉಲ್ಲಂಘನೆಯಾಗಿದೆ. ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆ ಜನರಲ್‌ ಯೋಜನೆ. ಇದಕ್ಕೆ ಈ ಹಣ ಹೇಗೆ ಬಳಸಿದ್ದೀರಿ? ಕಾಯ್ದೆಯಲ್ಲಿ ಅವಕಾಶ ಇದೆ ಎಂದು ಹೇಳುವುದಾದರೆ, ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಪೈಕಿ ಎಸ್‌ಸಿ-ಎಸ್ಟಿ ಜನರನ್ನು ಹೇಗೆ ಗುರುತಿಸಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಇದರಲ್ಲಿ ದೊಡ್ಡ ಪ್ರಮಾಣದ ದುರ್ಬಳಕೆಯಾಗಿದೆ ಎಂದು ಆರೋಪಿಸಿದರು. ಇದಕ್ಕೆ ಬಿಜೆಪಿ ಸದಸ್ಯರಾದ ಅರಗ ಜ್ಞಾನೇಂದ್ರ, ಸುರೇಶ್‌ ಗೌಡ, ಸುರೇಶ್‌ ಕುಮಾರ್‌ ದನಿಗೂಡಿಸಿದರು.

ದಲಿತರಿಗೆ ಪ್ರತಿ ವರ್ಷ ಅನ್ಯಾಯ:

ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಮಾತನಾಡಿ, ಈ ಎಸ್‌ಸಿಎಸ್‌ಪಿ/ಟಿಎಸ್‌ಪಿ ಅನುದಾನ ಬಳಕೆ ವಿಚಾರದಲ್ಲಿ ನಿಮ್ಮ ಸರ್ಕಾರದಲ್ಲಿ ಪ್ರತಿ ವರ್ಷ ಅನ್ಯಾಯವಾಗುತ್ತಿದೆ. ದಲಿತರ ಹಣವನ್ನು ಬೇರೆ ಇಲಾಖೆಗಳಿಗೆ ನೀಡುವುದು ಎಷ್ಟು ಸರಿ? ನಿಮ್ಮ ಗ್ಯಾರಂಟಿಗಳಿಗೆ ವಾರಂಟಿ ಇಲ್ಲ. ಇದರ ಹೆಸರಿನಲ್ಲಿ ದಲಿತರ ಹಣ ನುಂಗಲು ನಿಮಗೆ ಎಷ್ಟು ಧೈರ್ಯ? ಇದೇ ಕೆಲಸ ಬೇರೆಯವರು ಮಾಡಿದ್ದರೆ ನೀವು ಬಿಡುತ್ತಿದ್ದಿರಾ ಎಂದು ಪ್ರಶ್ನಿಸಿದರು.

ಅನುದಾನ ದುರ್ಬಳಕೆ ಇಲ್ಲ:

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ। ಎಚ್‌.ಸಿ.ಮಹದೇವಪ್ಪ, ಎಸ್ಸಿಎಸ್ಟಿ/ಟಿಎಸ್‌ಪಿ ಕಾಯ್ದೆಯಡಿ ಬೇರೆ ಇಲಾಖೆಗಳಿಗೆ ಅನುದಾನ ಹಂಚಿಕೆ ಮಾಡಿದ್ದೇವೆ. ಹಿಂದೆ ನಿಮ್ಮ ಸರ್ಕಾರ ಸಹ ₹8 ಸಾವಿರ ಕೋಟಿ ಬಳಕೆ ಮಾಡಿತ್ತು. ಸಮುದಾಯಗಳಿಗೆ ಯೋಜನೆ ಮಾಡಲು ಬಳಕೆ ಮಾಡಿದ್ದೇವೆ. ಇದರಲ್ಲಿ ದುರ್ಬಳಕೆ ಇಲ್ಲ. ಸರ್ವಾನುಮತದ ಒಪ್ಪಿಗೆ ಪಡೆದೇ ಈ ಎಸ್ಸಿಎಸ್ಟಿ/ಟಿಎಸ್‌ಪಿ ಕಾಯ್ದೆ ಮಾಡಲಾಗಿತ್ತು. ಇದಕ್ಕೆ ವಿರುದ್ಧವಾಗಿ ಯೋಜನೆಗಳಿಗೆ ಹಣ ಹಂಚಿಕೆ ಮಾಡಿಲ್ಲ. ಗ್ಯಾರಂಟಿ ಯೋಜನೆಗಳಲ್ಲೂ ಈ ಹಣ ಫಲಾನುಭವಿಗಳಿಗೆ ಹೋಗುತ್ತದೆ ಎಂದು ಹೇಳಿದರು.

ಇದಕ್ಕೆ ಬಿಜೆಪಿಯ ಸುನೀಲ್‌ ಕುಮಾರ್‌ ಪ್ರತಿಕ್ರಿಯಿಸಿ, ಹಾಗಾದರೆ, ಶಕ್ತಿ ಯೋಜನೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳ ಪಟ್ಟಿ ಕೊಡಿ ಎಂದು ಕೇಳಿದರು. ಇದಕ್ಕೆ ಸಚಿವ ಮಹದೇವಪ್ಪ, ಬಜೆಟ್‌ ಮಾಡುವಾಗ ಯಾವ ಯೋಜನೆ, ಯಾವ ಜಾತಿಗಳಿಗೆ ಎಷ್ಟು ಹೋಗುತ್ತದೆ ಎಂದು ಮಾಹಿತಿ ನೀಡುವಂತೆ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಗ್ಯಾರಂಟಿ ಯೋಜನೆಗಳಿಗೆ

ಎಸ್ಸಿಎಸ್ಟಿ/ಟಿಎಸ್‌ಪಿ ಅನುದಾನ ಹಂಚಿಕೆ

ಯೋಜನೆ ಎಸ್ಸಿಎಸ್ಟಿ ಟಿಎಸ್‌ಪಿ ಅನುದಾನ(ಕೋಟಿ ₹)

ಗೃಹಲಕ್ಷ್ಮೀ 5,364 2,074.08 7,438.08

ಅನ್ನಭಾಗ್ಯ 1,156.68 514,08 1,670.76

ಗೃಹಜ್ಯೋತಿ 1,818 808 2,626

ಶಕ್ತಿ 1,060 477 1,537

ಯುವನಿಧಿ 114 48 162

ಒಟ್ಟು 9,512.68 3,921.16 13,433.84

PREV
Read more Articles on

Recommended Stories

ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕೆರೆ ಜಾಗ ಒತ್ತುವರಿ ಮುಲಾಜಿಲ್ಲದೆ ತೆರವು : ಸಿಎಂ