ದ್ವಿತೀಯ ಪಿಯುಸಿ ಫಲಿತಾಂಶ - ಉನ್ನತ ಶ್ರೇಣಿಯಲ್ಲಿ 1 ಲಕ್ಷ ಮಕ್ಕಳು ಪಾಸು : 8400 ಮಂದಿ ಕೃಪಾಂಕದಿಂದ ಉತ್ತೀರ್ಣ

Published : Apr 09, 2025, 09:43 AM IST
Shahi Bhagatsingh PG University Peon marks exam papers

ಸಾರಾಂಶ

  1,00,571 ವಿದ್ಯಾರ್ಥಿಗಳು ಶೇ.85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.  

 ಬೆಂಗಳೂರು :  ಈ ಬಾರಿ 1,00,571 ವಿದ್ಯಾರ್ಥಿಗಳು ಶೇ.85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. 2.78 ಲಕ್ಷಕ್ಕೂ ಹೆಚ್ಚು ಮಕ್ಕಳು ಶೇ.60 ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಪ್ರಥಮ ದರ್ಜೆ, 70,969 ವಿದ್ಯಾರ್ಥಿಗಳು ಶೇ.50ಕ್ಕಿಂತ ಹೆಚ್ಚು ಅಂಕ ಪಡೆದು ದ್ವಿತೀಯ ದರ್ಜೆ ಮತ್ತು 18,845 ಮಂದಿ ಶೇ.35ಕ್ಕಿಂತ ಹೆಚ್ಚು ಅಂಕ ಪಡೆದು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಷಯವಾರು ಕನ್ನಡ ಭಾಷೆಯಲ್ಲಿ 5,424 ಮಂದಿ ನೂರಕ್ಕೆ ನೂರು ಅಂಕ ಪಡೆದಿದ್ದಾರೆ. ಅದೇ ರೀತಿ ಗಣಿತದಲ್ಲಿ 4,038, ಜೀವಶಾಸ್ತ್ರದಲ್ಲಿ 2,346, ಸಂಸ್ಕೃತದಲ್ಲಿ 2,536, ಸಂಖ್ಯಾಶಾಸ್ತ್ರದಲ್ಲಿ 2,013, ಗಣಕ ವಿಜ್ಞಾನದಲ್ಲಿ 1,137 ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶ ಪಡೆದಿದ್ದಾರೆ. ಅತಿ ಕಡಿಮೆ ಮಲಯಾಳಂ ಭಾಷಾ ವಿಷಯದಲ್ಲಿ ಒಬ್ಬ, ಇಂಗ್ಲೀಷ್‌ ಭಾಷೆಯಲ್ಲಿ 11 ಮಂದಿ ಮಾತ್ರ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.

8400 ಮಂದಿ ಕೃಪಾಂಕದಿಂದ ಉತ್ತೀರ್ಣ

ಈ ಬಾರಿಯೂ ಗರಿಷ್ಠ ಎರಡು ವಿಷಯಗಳಲ್ಲಿ ಬೆರಳೆಣಿಕೆಯಷ್ಟು ಅಂಕಗಳಿಂದ ಅನುತ್ತೀರ್ಣ ಹಂತದಲ್ಲಿದ್ದ 8,400 ವಿದ್ಯಾರ್ಥಿಗಳಿಗೆ ಪ್ರತಿ ವಿಷಯದಲ್ಲಿ ಶೇ.5ರಷ್ಟು ಕೃಪಾಂಕ ನೀಡಿ ಪಾಸುಮಾಡಲಾಗಿದೆ. ಫಲಿತಾಂಶ ಹೆಚ್ಚಿಸಲು ಸರ್ಕಾರ 2014ರಿಂದ ಒಂದು ವಿಷಯದಲ್ಲಿ ಕೃಪಾಂಕ ನೀಡುವ ಪದ್ಧತಿ ಜಾರಿಗೊಳಿಸಿತ್ತು. ನಂತರ ಕೋವಿಡ್ ವರ್ಷದಿಂದ ಇದನ್ನು ಎರಡು ವಿಷಯಗಳಿಗೆ ಹೆಚ್ಚಿಸಿ ಮುಂದುವರೆಸಿದೆ. 2024ರಲ್ಲಿ 9200 ವಿದ್ಯಾರ್ಥಿಗಳು, 2023ರಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿತ್ತು.

ಶೂನ್ಯ ಫಲಿತಾಂಶ ಕಾಲೇಜುಗಳ ಸಂಖ್ಯೆ ಮೂರು ಪಟ್ಟು ಹೆಚ್ಚಳ

13 ಸರ್ಕಾರಿ, 3 ಅನುದಾನಿತ ಮತ್ತು 103 ಅನುದಾನರಹಿತ ಸೇರಿ ಒಟ್ಟು 134 ಪಿಯು ಕಾಲೇಜುಗಳಲ್ಲಿ ಪರೀಕ್ಷೆ ಬರೆದಿದ್ದ ಎಲ್ಲ ಮಕ್ಕಳೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ ಈ ಸಂಖ್ಯೆ 463 ಇತ್ತು. ಅದೇ ರೀತಿ ಎಂಟು ಸರ್ಕಾರಿ ಕಾಲೇಜುಗಳು, 20 ಅನುದಾನಿತ ಮತ್ತು 90 ಅನುದಾನ ರಹಿತ ಸೇರಿ ಒಟ್ಟು 123 ಕಾಲೇಜುಗಳಲ್ಲಿ ಒಬ್ಬರೂ ಪಾಸಾಗಿಲ್ಲ. ಕಳೆದ ವರ್ಷ ಶೂನ್ಯ ಫಲಿತಾಂಶದ ಕಾಲೇಜುಗಳ ಸಂಖ್ಯೆ 34 ಮಾತ್ರ ಇತ್ತು.

ಸರ್ಕಾರಿ ಕಾಲೇಜು, ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಫಲಿತಾಂಶ ಪಾತಾಳಕ್ಕೆ

ಸರ್ಕಾರಿ ಪಿಯು ಕಾಲೇಜುಗಳಲ್ಲಿ ಹಾಗೂ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಫಲಿತಾಂಶ ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ. ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕಳೆದ ಬಾರಿ ಶೇ.75.29ರಷ್ಟು ಇದ್ದ ಫಲಿತಾಂಶ ಈ ಬಾರಿ ಶೇ.57.11ಕ್ಕೆ ಇಳಿದಿದೆ. ಅದೇ ರೀತಿ ಅನುದಾನಿತ ಕಾಲೇಜಿನಲ್ಲಿ ಫಲಿತಾಂಶ ಶೇ.62.69ಕ್ಕೆ, ಅನುದಾನ ರಹಿತ ಖಾಸಗಿ ಕಾಲೇಜುಗಳಲ್ಲಿ ಶೇ.82.66, ಬಿಬಿಎಂಪಿ ಕಾಲೇಜುಗಳಲ್ಲಿ ಶೇ.68.66, ವಿಭಜಿತ ಕಾಲೇಜುಗಳಲ್ಲಿ ಶೇ.78.58 ಮತ್ತು ವಸತಿ ಶಾಲಾ ಪಿಯು ಕಾಲೇಜುಗಳಲ್ಲಿ ಶೇ.86.18ಕ್ಕೆ ಇಳಿಕೆಯಾಗಿದೆ.

ಇನ್ನು, ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದಿದ್ದ 2.08 ಲಕ್ಷ ವಿದ್ಯಾರ್ಥಿಗಳಲ್ಲಿ 1.17 ಲಕ್ಷ ಮಂದಿ ಉತ್ತೀರ್ಣರಾಗಿದ್ದು ಶೇ.56.37 ರಷ್ಟು ಫಲಿತಾಂಶ ಬಂದಿದೆ. ಇದು ಕಳೆದ ಬಾರಿ 70.41ರಷ್ಟಿತ್ತು. ಆಂಗ್ಲ ಮಾಧ್ಯಮದಲ್ಲಿ 4.29 ಲಕ್ಷ ಮಕ್ಕಳು ಪರೀಕ್ಷೆ ಬರೆದಿದ್ದು 3.50 ಲಕ್ಷ ಮಂದಿ (ಶೇ.81.75) ಪಾಸಾಗಿದ್ದಾರೆ. ಕಳೆದ ಬಾರಿ ಇದು ಶೇ.87.40 ಇತ್ತು.

ಕೂಲಿ ತಾಯಿಯ ಶ್ರಮಕ್ಕೆ ಬೆಲೆ ತಂದ ಮಾನ್ಯ!

ಕೂಲಿ ಮಾಡುವ ಕುಟುಂಬದಲ್ಲಿ, ಗುಡಿಸಲಿನಂತಹ ಮನೆಯಲ್ಲಿಯೂ ಪ್ರತಿಭೆಗಳಿರುತ್ತವೆ ಎಂದು ತೋರಿಸಿದ್ದಾಳೆ ಮಂದಾರ್ತಿಯ ಮಾನ್ಯಾ ಪೂಜಾರಿ.

ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಟೆಂಪಲ್‌ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಮಾನ್ಯಾ ಎಸ್‌.ಪೂಜಾರಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95.16 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಮಾನ್ಯ, ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡವಳು. ತಾಯಿ ವಿನೋದಾ, ಮನೆ ಸಮೀಪದ ಗೇರು ಬೀಜ ಕಾರ್ಖಾನೆಯಲ್ಲಿ ದಿನಗೂಲಿ ಮಾಡುತ್ತಾರೆ. ಅವರು ತನಗೆ ಎಷ್ಟೇ ಕಷ್ಟವಾದರೂ ಪರವಾಗಿಲ್ಲ, ತನ್ನಿಬ್ಬರು ಮಕ್ಕಳನ್ನು ಅವರು ಬಯಸುವಷ್ಟು ಓದಿಸಬೇಕು ಎಂಬಾಸೆಯಿಂದ ಹಗಲು ರಾತ್ರಿ ದುಡಿಯುತ್ತಿದ್ದಾರೆ.

ಅವರಾಸೆಯನ್ನು ನಿರಾಸೆ ಮಾಡದ ಮಾನ್ಯ, ಯಾವುದೇ ಟ್ಯೂಷನ್‌ ಪಡೆಯುವುದಕ್ಕೆ ಆಗದಿದ್ದರೂ, ತನ್ನ ಪ್ರಾಧ್ಯಾಪಕರಿಂದಲೇ ಸಹಾಯ ಪಡೆದು, ಶ್ರದ್ಧೆಯಿಂದ ಓದಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಮುಂದೆ ಲೆಕ್ಕಪರಿಶೋಧಕಿ (ಚಾರ್ಟೆಡ್ ಅಕೌಂಟೆಂಟ್) ಆಗಬೇಕು ಎನ್ನುವ ಆಕಾಂಕ್ಷೆಯಿಂದ ಮಾನ್ಯ, ಸಿದ್ಧತೆ ಮಾಡಿಕೊಂಡಿದ್ದಾಳೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...