;Resize=(412,232))
ಬೆಂಗಳೂರು : ಬೆಳಗಾವಿಯಲ್ಲಿ 1 ಸಾವಿರ ಎಕರೆ ವಿಸ್ತೀರ್ಣದ ಕೈಗಾರಿಕಾ ಪಾರ್ಕ್ ಸ್ಥಾಪನೆ, ಕೇಂದ್ರ ಸರ್ಕಾರದ ಕುಸುಮ್-ಸಿ ಮಾದರಿಯಲ್ಲಿ ಮುಖ್ಯಮಂತ್ರಿ ಸೌರ ಕೃಷಿ ಯೋಜನೆ ಸೇರಿ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಹತ್ತು ಹಲವು ನೂತನ ಯೋಜನೆಗಳನ್ನು ಘೋಷಿಸಲಾಗಿದೆ.
ಜನಸಾಮಾನ್ಯರಿಗೆ ಅನುಕೂಲವಾಗುವಂತಹ, ರಾಜ್ಯದ ಅಭಿವೃದ್ಧಿಗೆ ಪೂರಕವಾಗುವ ಹೊಸ ಯೋಜನೆಗಳನ್ನು ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಪ್ರಮುಖವಾಗಿ ಕುಸುಮ್ ಸಿ ಮಾದರಿಯಲ್ಲಿ ಮುಖ್ಯಮಂತ್ರಿ ಸೌರ ಕೃಷಿ ಯೋಜನೆ ಅನುಷ್ಠಾನ ಬಗ್ಗೆ ತಿಳಿಸಿದ್ದಾರೆ. ಅದರ ಮೂಲಕ ಕೆಪಿಟಿಸಿಎಲ್ ಉಪಕೇಂದ್ರಗಳಲ್ಲಿ 10,500 ಕೋಟಿ ರು. ವೆಚ್ಚದಲ್ಲಿ 3 ಸಾವಿರ ಮೆ.ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರ ಸ್ಥಾಪಿಸಲಾಗುತ್ತಿದೆ.
ಕೇರಳ ಮಾದರಿಯಲ್ಲಿ ದೀರ್ಘಕಾಲೀನ, ಗಂಭೀರ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಗೃಹಾಧಾರಿತ ಆರೈಕೆ ಉಪಶಮನ ಕಲ್ಪಿಸುವ ಯೋಜನೆ ಅನುಷ್ಠಾನ ಕುರಿತು ಪ್ರಸ್ತಾಪಿಸಲಾಗಿದೆ. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಎಲ್ಲಾ ರೋಗಿಗಳ ನೋಂದಣಿ ಹಾಗೂ ಆರೋಗ್ಯ ದಾಖಲೆಗಳ ನಿರ್ವಹಣೆ ಡಿಜಟಲೀಕರಣ, ನಗದು ಪಾವತಿಗೆ ಪರದಾಟ ತಪ್ಪಿಸಲು ಯುಪಿಐ ಆಧಾರಿತ ಶುಲ್ಕ ಪಾವತಿ ವ್ಯವಸ್ಥೆ ಜಾರಿ ಮಾಡಲಾಗುತ್ತದೆ.
ಕಾನೂನುಗಳ ವಿವರಗಳ ಲಭ್ಯತೆ ಕನ್ನಡದಲ್ಲಿ ಕಡಿಮೆಯಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ರಚಿಸಲ್ಪಡುವ ಎಲ್ಲ ಕಾನೂನುಗಳ ವಿವರ ಕನ್ನಡದಲ್ಲಿ ಸಿದ್ಧಪಡಿಸುವುದು ಮತ್ತು ಕೇಂದ್ರ ಸರ್ಕಾರ ಈವರೆಗೆ ಜಾರಿಗೊಳಿಸಿರುವ ಕಾನೂನುಗಳನ್ನು ಕನ್ನಡಕ್ಕೆ ಭಾಷಾಂತರಿಸುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.
ಪ್ರವಾಸೋದ್ಯಮಕ್ಕೆ ಹೊಸ ಚೇತರಿಕೆ:
ರಾಜ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಹೊಸ ಆಯಾಮ ನೀಡುವ ಉದ್ದೇಶದೊಂದಿಗೆ ಹಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಅದರಂತೆ ಬೆಂಗಳೂರಿನ ಹೆಸರಘಟ್ಟ ಕೆರೆಯಲ್ಲಿ ಪಿಪಿಪಿ ಮಾದರಿಯಲ್ಲಿ ಕಯಾಕಿಂಗ್, ಕ್ಯಾನೋಯಿಂಗ್ ಎಕ್ಸೆಲೆನ್ಸ್ ಕೇಂದ್ರ ಸ್ಥಾಪನೆ, ಸಶಕ್ತ ಕರ್ನಾಟಕ ಯೋಜನೆ ಅಡಿ ಬೆಳಗಾವಿ, ಗೋಕರ್ಣ, ಚಿತ್ರದುರ್ಗ, ಹಂಪಿಯಲ್ಲಿ ರಾಷ್ಟ್ರಮಟ್ಟದ ಮ್ಯಾರಥಾನ್‌ಗಳನ್ನು ಆಯೋಜಿಸುವುದಾಗಿ ಹೇಳಲಾಗಿದೆ. ಜತೆಗೆ ಕಲ್ಯಾಣ ಕರ್ನಾಟಕ ಭಾಗದ ಕ್ರೀಡಾಪಟುಗಳಿಗೆ ಉತ್ತಮ ಕ್ರೀಡಾ ವಿಜ್ಞಾನ ಸೇವೆಗಳನ್ನು ಒದಗಿಸಲು ಪಿಪಿಪಿ ಮಾದರಿಯಲ್ಲಿ ಕಲಬುರಗಿಯಲ್ಲಿ ಆಧುನಿಕ ಕ್ರೀಡಾ ವಿಜ್ಞಾನ ಕೇಂದ್ರ ಆರಂಭಿಸುವ ಕುರಿತು ಘೋಷಿಸಲಾಗಿದೆ.
ಆನ್‌ಲೈನ್ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ:
ವಸತಿ ಯೋಜನೆ ಅಡಿ ಗ್ರಾಮೀಣ ಭಾಗದಲ್ಲಿ ಅರ್ಹ ಫಲಾನುಭವಿಗಳ ಆಯ್ಕೆಗೆ ಮ್ಯಾನುವೆಲ್ ಲಾಟರಿ ಬದಲಿಗೆ ಗ್ರಾಮಸಭೆಗಳಲ್ಲಿ ಆನ್‌ಲೈನ್ ಲಾಟರಿ ಮೂಲಕ ಆಯ್ಕೆ ಮಾಡುವ ವ್ಯವಸ್ಥೆ ಜಾರಿಗೊಳಿಸುವುದಾಗಿ ಪ್ರಸ್ತಾಪಿಸಲಾಗಿದೆ.
ಇನ್ನು ಕರ್ನಾಟಕ ಗೃಹ ಮಂಡಳಿಯಿಂದ ಕೆಎಚ್‌ಬಿ ಸೂರ್ಯ ಕ್ರೀಡಾ ಗ್ರಾಮ ಹೆಸರಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ 80 ಸಾವಿರ ಆಸನ ಸಾಮರ್ಥ್ಯದ ಕ್ರಿಕೆಟ್ ಕ್ರೀಡಾಂಗಣ ಮತ್ತು ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣ, ಕೆಎಚ್‌ಬಿಯಿಂದ ‘ನಮ್ಮ ಮನೆ’ ಯೋಜನೆಯಡಿ ಮುಂದಿನ ಎರಡು ವರ್ಷಗಳಲ್ಲಿ ರಿಯಾಯಿತಿ ದರದಲ್ಲಿ 50 ಸಾವಿರ ನಿವೇಶನಗಳ ಹಂಚಿಕೆ ಮಾಡುವುದಾಗಿ ತಿಳಿಸಲಾಗಿದೆ.
62 ಶ್ರಮಿಕ ವಸತಿ ಶಾಲೆಗಳು:
ಕಾರ್ಮಿಕರ ಅಭಿವೃದ್ಧಿಗೆ ಮತ್ತು ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಪಡೆಯಲು ವಸತಿ ಸಮಸ್ಯೆ ಉದ್ಭವವಾಗದಂತೆ ಮಾಡಲು ರಾಜ್ಯದಲ್ಲಿ 62 ಶ್ರಮಿಕ ವಸತಿ ಶಾಲೆ ಆರಂಭಿಸುವ ಪ್ರಸ್ತಾಪ ಮಾಡಲಾಗಿದೆ. ನೋಂದಾಯಿತ ಕಾರ್ಮಿಕರ ಮತ್ತು ಅವರ ಅವಲಂಬಿತರ ಮಕ್ಕಳಿಗೆ ಕೌಶಲ್ಯ ತರಬೇತಿಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆಯಂತಹ ಯೋಜನೆಗಳನ್ನು ಘೋಷಿಸಲಾಗಿದೆ.
ವಿಜಯಪುರದಲ್ಲೂ ವಿಮಾನ ತರಬೇತಿ ಶಾಲೆ:
ವಿಮಾನ ಸೇವಾ ಕ್ಷೇತ್ರದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಶಿವಮೊಗ್ಗ ಮಾದರಿಯಲ್ಲಿ ವಿಜಯಪುರ ವಿಮಾನನಿಲ್ದಾಣದ ಆವರಣದಲ್ಲಿ ಪಿಪಿಪಿ ಮಾದರಿಯಲ್ಲಿ ಫ್ಲೈಟ್ ಟ್ರೈನಿಂಗ್ ಸ್ಕೂಲ್ ಆರಂಭಿಸುವುದಾಗಿ ತಿಳಿಸಲಾಗಿದೆ. ಜತೆಗೆ ಶಿವಮೊಗ್ಗದಲ್ಲಿ ಮ್ಯಾನುಫ್ಯಾಕ್ಚರಿಂಗ್/ಅಸೆಂಬ್ಲಿ ಆಫ್ ಏರ್‌ಕ್ರಾಫ್ಟ್ ಚಟುವಟಿಕೆ ಸ್ಥಾಪನೆಯನ್ನೂ ಪ್ರಸ್ತಾಪಿಸಲಾಗಿದೆ. ಅದರೊಂದಿಗೆ ಬಂದರು ಮತ್ತು ಸರಕು ಸಾಗಣೆ ವಲಯದ ಅಭಿವೃದ್ಧಿಗಾಗಿ ಸಮಗ್ರ ಮಲ್ಟಿ ಮಾಡೆಲ್ ಲಾಜಿಸ್ಟಿಕ್ಸ್ ನೀತಿ, ಪಂಜರ ಮೀನು ಸಾಕಣೆ, ನವೀಕರಬಹುದಾದ ಇಂಧನ ಉತ್ಪಾದನೆಗೆ ಒತ್ತು ನೀಡಲು ಕರ್ನಾಟಕ ಸ್ಟೇಟ್ ಆಫ್ ಶೋರ್ಸ್ ರಿಸೋರ್ಸ್ ಡೆವಲಪ್‌ಮೆಂಟ್ ಆ್ಯಂಡ್ ಯುಟಿಲೈಸೇಷನ್ ಪಾಲಿಸಿ ರೂಪಿಸುವುದಾಗಿಯೂ ತಿಳಿಸಲಾಗಿದೆ.
15 ಸಾವಿರ ಶಿಕ್ಷಕರ ನೇಮಕ:
ಶಿಕ್ಷಣ ಇಲಾಖೆಯಲ್ಲಿ ಖಾಲಿ ಹುದ್ದೆಗಳಿಂದಾಗುತ್ತಿರುವ ಸಮಸ್ಯೆ ತಪ್ಪಿಸಲು 2026-27ರಲ್ಲಿ 15 ಸಾವಿರ ಶಿಕ್ಷಕ ಮತ್ತು ಉಪನ್ಯಾಸಕ ಹುದ್ದೆ ಮತ್ತು 3 ಸಾವಿರ ಸಹ ಪ್ರಾಧ್ಯಾಪಕ ಹುದ್ದೆ ಭರ್ತಿಯ ಪ್ರಸ್ತಾಪ ಮಾಡಲಾಗಿದೆ. ಪೂರ್ವ ಪ್ರಾಥಮಿಕ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ ವಿತರಣೆ, ಎಂಟು ಹೊಸ ಪದವಿ ಕಾಲೇಜು, ವಚನ ವಿಶ್ವವಿದ್ಯಾಲಯ ಸ್ಥಾಪನೆ, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧ, ವಿದ್ಯಾರ್ಥಿ ನಾಯಕತ್ವ ಬೆಳೆಸಲು ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆ, ಮಾದಕ ವಸ್ತು ವ್ಯಸನ ತಪ್ಪಿಸಲು ಶಾಲೆ, ಕಾಲೇಜುಗಳಲ್ಲಿ ಜಾಗೃತಿ ಶಿಕ್ಷಣ ನೀಡುವುದಾಗಿ ಘೋಷಿಸಲಾಗಿದೆ.
ಉದ್ಯೋಗ ಸೃಷ್ಟಿಗೆ ಹಲವು ಕ್ರಮ:
ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಬಜೆಟ್‌ನಲ್ಲಿ ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಲಾಗಿದೆ. ಬೆಳಗಾವಿಯಲ್ಲಿ 1 ಸಾವಿರ ಎಕರೆ ಪ್ರದೇಶದಲ್ಲಿ ಬೃಹತ್ ಕೈಗಾರಿಕಾ ಪಾರ್ಕ್ ಸ್ಥಾಪನೆ, ಧಾರವಾಡ ಕೈಗಾರಿಕಾ ನೋಡ್‌ಗಾಗಿ ಒಂದು ಸಾವಿರ ಎಕರೆ ಭೂಸ್ವಾಧೀನ ಮತ್ತು ಅದರಿಂದ ಅಂದಾಜು 75 ಸಾವಿರ ಉದ್ಯೋಗ ಸೃಷ್ಟಿ, ಮೈಸೂರು ವಿಮಾನ ನಿಲ್ದಾಣದಲ್ಲಿ ಬಳಿ ಏರೋಸ್ಪೇಸ್ ಪಾರ್ಕ್ ನಿರ್ಮಾಣ, ಮಂಡ್ಯದಲ್ಲಿ ಮೂಲಸೌಕರ್‍ಯ ಸಲಕರಣೆ ಪರೀಕ್ಷಾ ಘಟಕ ಸ್ಥಾಪನೆ, ಮೈಸೂರು ಲ್ಯಾಂಪ್‌ವರ್ಕ್ಸ್ ಆವರಣದಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ ಸ್ಥಾಪನೆಯಂತಹ ಹಲವು ಪ್ರಮುಖ ಯೋಜನೆಗಳ ಅನುಷ್ಠಾನಗೊಳಿಸುವುದಾಗಿ ತಿಳಿಸಲಾಗಿದೆ.
ಹೆಚ್ಚುವರಿ ಸಮವಸ್ತ್ರ:
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗಾಗಿ ಹೆಚ್ಚುವರಿ ಸಮವಸ್ತ್ರ ನೀಡುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ. ಆಮೂಲಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 1.39 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ 2026-27ನೇ ಸಾಲಿನಿಂದ ಹೆಚ್ಚುವರಿಯಾಗಿ ಒಂದು ಜತೆ ಸಮವಸ್ತ್ರ ವಿತರಿಸಲಾಗುತ್ತದೆ.