ರಾಜ್ಯ ಸರ್ಕಾರವೇ ನಡೆಸಿದ ತನಿಖೆಯಲ್ಲಿ ಅಚ್ಚರಿಯ ಮಾಹಿತಿ - ಇ20ಯಲ್ಲಿ 31.2% ಎಥೆನಾಲ್‌!

Published : Nov 07, 2026, 05:41 AM IST
ethanol blended petrol e20 petrol

ಸಾರಾಂಶ

‘ರಾಜ್ಯಾದ್ಯಂತ ಪೆಟ್ರೋಲ್‌ ಬಂಕ್‌ಗಳಲ್ಲಿ ಶೇ.20 (ಇ20) ಮಿತಿ ಮೀರಿ ಅಕ್ರಮವಾಗಿ ಎಥೆನಾಲ್‌ ಮಿಶ್ರಣ ಮಾಡುತ್ತಿರುವುದು ಬಯಲಾಗಿದ್ದು, ಶೇ.31.2% ವರೆಗೆ ಎಥೆನಾಲ್ ಬೆರೆಸುತ್ತಿರುವ ಆಘಾತಕಾರಿ ವಿಷಯ ಬಹಿರಂಗಗೊಂಡಿದೆ’

ಬೆಂಗಳೂರು : ‘ರಾಜ್ಯಾದ್ಯಂತ ಪೆಟ್ರೋಲ್‌ ಬಂಕ್‌ಗಳಲ್ಲಿ ಶೇ.20 (ಇ20) ಮಿತಿ ಮೀರಿ ಅಕ್ರಮವಾಗಿ ಎಥೆನಾಲ್‌ ಮಿಶ್ರಣ ಮಾಡುತ್ತಿರುವುದು ಬಯಲಾಗಿದ್ದು, ಶೇ.31.2% ವರೆಗೆ ಎಥೆನಾಲ್ ಬೆರೆಸುತ್ತಿರುವ ಆಘಾತಕಾರಿ ವಿಷಯ ಬಹಿರಂಗಗೊಂಡಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವ ರಿಜ್ವಾನ್‌ ಅರ್ಷದ್‌ ಹೇಳಿದ್ದಾರೆ.

ಪೆಟ್ರೋಲ್‌, ಡೀಸೆಲ್‌ನಲ್ಲಿ ಎಥೆನಾಲ್‌ ಪ್ರಮಾಣ ಶೇ.20ಕ್ಕಿಂತ ಕಡಿಮೆ ಇರಬೇಕು. ಆದರೆ, ಎನ್‌ಎಬಿಎಲ್‌ ಮಾನ್ಯತೆ ಪಡೆದ ಪ್ರಯೋಗಾಲಯಗಳ ವರದಿಯಲ್ಲಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗಳಲ್ಲಿ ಶೇ.31.2 ಹಾಗೂ ಎಚ್‌ಪಿಸಿಎಲ್‌ ಬಂಕ್‌ಗಳಲ್ಲಿ ಶೇ.30.5ರವರೆಗೆ ಎಥೆನಾಲ್‌ ಮಿಶ್ರಣ ಖಚಿತವಾಗಿದೆ ಎಂದು ತಿಳಿಸಿದರು.

ಈ ಬಗ್ಗೆ ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಅಕ್ರಮವಾಗಿ ಹೆಚ್ಚು ಪ್ರಮಾಣದಲ್ಲಿ ಎಥೆನಾಲ್‌ ಮಿಶ್ರಣದಿಂದ ವಾಹನಗಳ ಮೈಲೇಜ್‌ ಕಡಿಮೆಯಾಗುವ ಜತೆಗೆ ಅವು ಪದೇಪದೇ ರಿಪೇರಿಗೆ ಬರುತ್ತಿರುವುದು ಗೊತ್ತಾಗಿದೆ. ಪರಿಣಾಮ ಪರೋಕ್ಷವಾಗಿ ಗ್ರಾಹಕರಿಗೆ ಹೆಚ್ಚುವರಿ ಬರೆ ಬೀಳುತ್ತಿದೆ ಎಂದು ದೂರಿದರು.

ಅಂತಾರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಆದರೂ ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಬೆಲೆ ಕಡಿಮೆ ಮಾಡುತ್ತಿಲ್ಲ. ಜತೆಗೆ ಅಕ್ರಮ ಪ್ರಮಾಣದ ಎಥೆನಾಲ್‌ ಮಿಶ್ರಣ ಮಾಡುತ್ತಿದ್ದರೂ ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದೆ ಕಂಪನಿಗಳೇ ಲೂಟಿ ಹೊಡೆಯುತ್ತಿವೆ. ಜತೆಗೆ ಇದರಿಂದ ವಾಹನಗಳು ಹಾಳಾಗಿ ಸಾರ್ವಜನಿಕರು ನಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದ್ದಾರೆ.

1 ಲಕ್ಷ ಕೋಟಿ ರು. ಹೊರೆ:

‘ಗ್ರಾಹಕರ ದೂರಿನ ಮೇರೆಗೆ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ ಇರುವ ಪ್ರಮುಖ ತೈಲ ಕಂಪನಿಗಳಿಂದ 65 ಪೆಟ್ರೋಲ್‌ ಮಾದರಿಗಳನ್ನು ಸಂಗ್ರಹಿಸಿ, ತೈಲ ಕಂಪನಿಗಳ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಆದರೆ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹಾಗಾಗಿ, ನಾವೇ (ಇಲಾಖೆ) ಎನ್‌ಎಬಿಎಲ್‌ ಮಾನ್ಯತೆ ಪಡೆದ ಐಎಸ್‌ಒ ಪ್ರಮಾಣಿತ ಪ್ರಯೋಗಾಲಯಗಳಿಗೆ ಕಳುಹಿಸಿದೆವು. ಬಹುತೇಕ ಎಲ್ಲ ತೈಲ ಕಂಪನಿಗಳು ಮಿತಿಮೀರಿ ಅಕ್ರಮವಾಗಿ ಎಥೆನಾಲ್‌ ಮಿಶ್ರಣ ಮಾಡುವ ಮೂಲಕ ಗ್ರಾಹಕರಿಗೆ ಮೋಸ ಮಾಡುತ್ತಿರುವುದು ದೃಢಪಟ್ಟಿದೆ. ತೈಲ ಕಂಪನಿಗಳ ಈ ವಂಚನೆಯಿಂದ ದೇಶಾದ್ಯಂತ ಗ್ರಾಹಕರಿಗೆ ವಾರ್ಷಿಕ ಒಂದು ಲಕ್ಷ ಕೋಟಿ ರು. ಹೊರೆಬೀಳುತ್ತಿದೆ ಎಂದು ರಿಜ್ವಾನ್‌ ತಿಳಿಸಿದರು.

15 ಮಾದರಿಗಳ ಪರೀಕ್ಷಾ ವರದಿ ಬಹಿರಂಗ:

ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಮತ್ತು ತುಮಕೂರಿನ ಪ್ರಮುಖ ತೈಲ ಕಂಪನಿಗಳಿಂದ ಸಂಗ್ರಹಿಸಿದ 15 ಮಾದರಿಗಳ ಪರೀಕ್ಷಾ ವರದಿಗಳನ್ನು ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದರು.

14 ಪ್ರಮುಖ ತೈಲ ಕಂಪನಿಗಳ ಪೈಕಿ 11 ಕಂಪನಿಗಳು ಕೇಂದ್ರ ಸರ್ಕಾರ ನಿಗದಿಪಡಿಸಿದ ಶೇ.20ಕ್ಕಿಂತ ಹೆಚ್ಚು ಎಥೆನಾಲ್‌ ಮಿಶ್ರಣ ಮಾಡಿರುವುದು ಕಂಡುಬಂದಿದೆ. ಕನಿಷ್ಠ ಶೇ.20.6ರಿಂದ ಗರಿಷ್ಠ 31.2ರಷ್ಟು ಎಥೆನಾಲ್‌ ಮಿಶ್ರಣ ಮಾಡುತ್ತಿವೆ ಎಂದು ಆರೋಪಿಸಿದರು.

ದೇಶದಲ್ಲಿ 35 ಕೋಟಿ ವಾಹನಗಳಿವೆ. ಪ್ರತಿ ವರ್ಷ 6,200 ಕೋಟಿ ಲೀಟರ್‌ ಇಂಧನ ಬಳಕೆಯಾಗುತ್ತದೆ. ಲೀಟರ್‌ಗೆ 100 ರು. ಇದ್ದು, ಮಿತಿಮೀರಿದ ಎಥೆನಾಲ್‌ ಮಿಶ್ರಣದಿಂದ ಶೇ.10ರಷ್ಟು ಮೈಲೇಜ್‌ ಕಡಿಮೆಯಾಗುತ್ತಿದೆ ಎಂದು ಲೆಕ್ಕಹಾಕಿದರೂ ಗ್ರಾಹಕರ ಜೇಬಿಗೆ ವಾರ್ಷಿಕ 62 ಸಾವಿರ ಕೋಟಿ ರು. ಹೊರೆಬೀಳುತ್ತದೆ. ಇನ್ನು ಇಂಧನ ಬಳಕೆಗೆ ಹೊಂದಿಕೊಳ್ಳದ ವಾಹನಗಳ ಫಿಲ್ಟರ್‌, ಫ್ಯುಯಲ್‌ ಪಂಪ್‌, ಇಂಜೆಕ್ಟರ್‌, ಪೈಪ್‌, ಸೀಲ್‌ಗಳು ಆಗಾಗ್ಗೆ ಹಾನಿಗೊಳಲಾಗುತ್ತವೆ. ಅವುಗಳ ರಿಪೇರಿಗೆ 39 ಸಾವಿರ ಕೋಟಿ ಹೆಚ್ಚುವರಿ ಖರ್ಚಾಗುತ್ತದೆ ಎಂದು ವಿವರಿಸಿದರು.

ಎಥೆನಾಲ್‌ ಮಿಶ್ರಣದಿಂದ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ ಎಂದು ಕೇಂದ್ರ ಸರ್ಕಾರ ವಾದ ಮುಂದಿಡಬಹುದು. ಆದರೆ, ಅದರ ಲಾಭ ಗ್ರಾಹಕರಿಗೆ ತಲುಪುತ್ತಿಲ್ಲ. ಇತ್ತ ಅತಿಯಾದ ಎಥೆನಾಲ್‌ ಮಿಶ್ರಣದಿಂದ ಹೆಚ್ಚುವರಿ ಹೊರೆಯೂ ತಪ್ಪುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮುಖ್ಯವಾಗಿ ಮಧ್ಯಮ ವರ್ಗದ ಜನರಿಗೆ ಈ ‘ಹೆಚ್ಚುವರಿ ಹೊಡೆತ’ ಬೀಳುತ್ತಿದೆ ಎಂದು ದೂರಿದರು.

ತೈಲ ಕಂಪನಿಗಳ ಮೇಲೆ ಕ್ರಮಕ್ಕೆ ಆಗ್ರಹ

ದೇಶಾದ್ಯಂತ 2023ರ ಏಪ್ರಿಲ್‌ ನಂತರವಷ್ಟೇ ಇ20 (ಶೇ.20ರಷ್ಟು ಎಥೆನಾಲ್ ಮಿಶ್ರಣದಲ್ಲಿ ಚಲಿಸುವ) ವಾಹನಗಳು ಮಾರುಕಟ್ಟೆ ಬಂದಿವೆ. ಬಹುತೇಕ ವಾಹನಗಳು ಇ20 ಎಥೆನಾಲ್‌ ತಡೆದುಕೊಳ್ಳುವ ಸಾಮರ್ಥ್ಯವನ್ನೂ ಹೊಂದಿಲ್ಲ. ಹೀಗಿರುವಾಗಿ ಶೇ.30ರಷ್ಟು ಎಥೆನಾಲ್‌ ಮಿಶ್ರಣ ಮಾಡಿ ವಂಚಿಸಲಾಗುತ್ತಿದೆ. ಈ ಬಗ್ಗೆ ನಿಖರ ಸಾಕ್ಷ್ಯಾಧಾರಗಳು ಲಭ್ಯವಿರುವುದರಿಂದ ಕೇಂದ್ರ ಸರ್ಕಾರ ತೈಲ ಕಂಪನಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹಾನಿಗೊಳಗಾದ ಮಾಲಿಕರಿಗೆ ಕಡ್ಡಾಯವಾಗಿ ನಷ್ಟ ಪರಿಹಾರ ಕಲ್ಪಿಸಬೇಕು. ವಾಹನಗಳಿಗಾಗುವ ಈ ಹಾನಿಯನ್ನೂ ವಿಮೆ ವ್ಯಾಪ್ತಿಗೊಳಪಡಿಸಬೇಕು ಎಂದು ಸಚಿವ ರಿಜ್ವಾನ್‌ ಅರ್ಷದ್‌ ಆಗ್ರಹಿಸಿದರು.

ಎಥೆನಾಲ್‌ ಮಿಶ್ರಣ ಪಟ್ಟಿ:

ಕಂಪನಿ- ಇಂಧನ - ಎಥೆನಾಲ್‌ ಪ್ರಮಾಣ (ಶೇ)

ಐಒಸಿಎಲ್‌ (ಇಂಡಿಯನ್‌ ಆಯಿಲ್‌) - ಪೆಟ್ರೋಲ್‌ (ಎಂಎಸ್‌) - 31.2

ಎಚ್‌ಪಿಸಿಎಲ್‌ - ಪೆಟ್ರೋಲ್‌ (ಎಂಎಸ್‌-ಪವರ್) - 30.5

ಎಚ್‌ಪಿಸಿಎಲ್‌ - ಪೆಟ್ರೋಲ್‌ - 27

ಬಿಪಿಸಿಎಲ್‌ - ಪೆಟ್ರೋಲ್‌ (ಎಂಎಸ್‌-ಸ್ಪೀಡ್) - 26.5

ನಯಾರಾ - ಪೆಟ್ರೋಲ್‌ (ಎಂಎಸ್‌) - 26.1

ಶೆಲ್‌ - (ಪೆಟ್ರೋಲ್‌ -ಎಂಎಸ್‌) - ಶೇ.25.5

ಬಿಪಿಸಿಎಲ್‌ - ಪೆಟ್ರೋಲ್‌ (ಎಂಎಸ್‌) - 24.2

ಗೊತ್ತಾಗಿದ್ದು ಹೇಗೆ?

- ಗ್ರಾಹಕರ ದೂರಿನ ಹಿನ್ನೆಲೆಯಲ್ಲಿ 65 ಪೆಟ್ರೋಲ್‌ ಮಾದರಿ ಸಂಗ್ರಹಿಸಿ ತೈಲ ಕಂಪನಿಗಳ ಲ್ಯಾಬ್‌ಗೆ ಕಳುಹಿಸಿದ್ದ ಸರ್ಕಾರ

- ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಎನ್‌ಎಬಿಎಲ್‌ ಮಾನ್ಯತೆ ಪಡೆದ ಪ್ರಯೋಗಾಲಯಗಳಿಗೆ ತೈಲದ ಮಾದರಿಗಳ ರವಾನೆ

- ಕನಿಷ್ಠ ಶೇ.20.6ರಿಂದ ಗರಿಷ್ಠ 31.2ರಷ್ಟು ಎಥೆನಾಲ್‌ ಅನ್ನು ಪೆಟ್ರೋಲ್‌- ಡೀಸೆಲ್‌ಗೆ ಮಿಶ್ರಣ ಮಾಡುತ್ತಿರುವುದು ಬೆಳಕಿಗೆ

- ನಿಗದಿತ ಮಿತಿ ಮೀರಿ ಎಥೆನಾಲ್‌ ಮಿಶ್ರಣ ಮಾಡಿರುವ ತೈಲ ಮಾರುವ ಮೂಲಕ ಗ್ರಾಹಕರಿಗೆ ಮೋಸ: ಸಚಿವ ರಿಜ್ವಾನ್‌

ನಷ್ಟದ ಲೆಕ್ಕ ಹೇಗೆ?

- ದೇಶದಲ್ಲಿ 35 ಕೋಟಿ ವಾಹನಗಳು ಪ್ರತಿ ವರ್ಷ 6200 ಕೋಟಿ ಲೀಟರ್‌ ಇಂಧನವನ್ನು ಬಳಕೆ ಮಾಡುತ್ತವೆ

- ಎಥೆನಾಲ್‌ ಮಿಶ್ರಣದಿಂದ ಶೇ.10ರಷ್ಟು ಮೈಲೇಜ್‌ ಕುಸಿದರೂ ಗ್ರಾಹಕರಿಗೆ 62000 ಕೋಟಿ ರುಪಾಯಿ ನಷ್ಟ

- ಇಂಧನ ಬಳಕೆಗೆ ಹೊಂದಿಕೊಳ್ಳದೆ ವಾಹನಗಳ ಫಿಲ್ಟರ್‌, ಫ್ಯುಯೆಲ್‌ ಪಂಪ್‌, ಇನ್ನಿತರೆ ಬಿಡಿಭಾಗಗಳಿಗೆ ಹಾನಿ

- ಅವುಗಳ ರಿಪೇರಿಗೆ ವಾರ್ಷಿಕ 39 ಸಾವಿರ ಕೋಟಿ ರು. ಹೆಚ್ಚು ಖರ್ಚು: ಗ್ರಾಹಕ ವ್ಯವಹಾರಗಳ ಸಚಿವ ಅರ್ಷದ್‌

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಳ್ತಂಗಡಿ : ಸಿಬ್ಬಂದಿಗೆ 1ಕೋಟಿ ಮೌಲ್ಯದ ಇವಿ ಕಾರು, ಬೈಕ್‌ ದೀಪಾವಳಿ ಗಿಫ್ಟ್‌ ಕೊಟ್ಟ ಕಂಪನಿ
ನಂದಿನಿ ಜತೆ ಅಮೂಲ್‌ ದರ ಸಮರ - ಮೊಸರು 10 ರು. ಇಳಿಕೆ