ಸರ್ಕಾರಿ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ ವಿತರಣೆ

Published : Jul 14, 2026, 12:46 PM IST
Govt schools

ಸಾರಾಂಶ

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಿ ಒಂದೂವರೆ ತಿಂಗಳ ಬಳಿಕ ಶೂ ಮತ್ತು ಸಾಕ್ಸ್ ವಿತರಣೆ ಆರಂಭಗೊಂಡಿದ್ದು, ತರಗತಿ ವಾರು ಸಮರ್ಪಕವಾಗಿ ಹಂಚುವ ಹೊಣೆ ಮುಖ್ಯೋಪಾಧ್ಯಾಯರಿಗೆ ನೀಡಲಾಗಿದೆ.

 ಬೆಂಗಳೂರು : ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗಿ ಒಂದೂವರೆ ತಿಂಗಳ ಬಳಿಕ ಶೂ ಮತ್ತು ಸಾಕ್ಸ್ ವಿತರಣೆ ಆರಂಭಗೊಂಡಿದ್ದು, ತರಗತಿ ವಾರು ಸಮರ್ಪಕವಾಗಿ ಹಂಚುವ ಹೊಣೆ ಮುಖ್ಯೋಪಾಧ್ಯಾಯರಿಗೆ ನೀಡಲಾಗಿದೆ.

1 ರಿಂದ 10ನೇ ತರಗತಿ ವರೆಗಿನ 36.56 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾವಿಕಾಸ ಯೋಜನೆಯಡಿ ಉಚಿತವಾಗಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್‌ ವಿತರಿಸಲಾಗುತ್ತದೆ. ಕಳೆದ ಸಾಲಿನ ವರೆಗೆ ಶೂ, ಸಾಕ್ಸ್‌ ವಿತರಣೆ ಜವಾಬ್ದಾರಿಯನ್ನು ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ಸರ್ಕಾರ ನೀಡಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ಸರ್ಕಾರವೇ ನೇರವಾಗಿ ಶೂ, ಸಾಕ್ಸ್‌ ಖರೀದಿಸಿ ಶಾಲೆಗಳಿಗೆ ಸರಬರಾಜು ಮಾಡುತ್ತಿದೆ. ಈ ವರ್ಷ ಒಬ್ಬರೇ ಪೂರೈಕೆದಾರರಿಂದ ಶೂ, ಸಾಕ್ಸ್ ಖರೀದಿಸಲಾಗುತ್ತಿದೆ. ಪ್ರತಿ ಜತೆ ಶೂಗೆ 195 ರು. ನಿಗದಿಪಡಿಸಿದ್ದು, ಸುಮಾರು 30 ಕೋಟಿ ರು. ಸರ್ಕಾರಕ್ಕೆ ಉಳಿತಾಯ ಆಗಲಿದೆ ಎನ್ನುತ್ತಾರೆ ಅಧಿಕಾರಿಗಳು. ಹೊಸ ಕ್ರಮದಿಂದಾಗಿ ವಿತರಣೆ ತಿಂಗಳ ಕಾಲ ತಡವಾಗಿದೆ.

ಅಂದಾಜು 104 ಕೋಟಿ ರು. ವೆಚ್ಚದಲ್ಲಿ ಶೂ, ಸಾಕ್ಸ್‌ ಹಾಗೂ ಕರಾವಳಿ ಸೇರಿ ಅಗತ್ಯವಿರುವೆಡೆ ಚಪ್ಪಲಿ ಖರೀದಿಸಿ ನೀಡಲಾಗುತ್ತಿದೆ. ಇನ್ನು ಎರಡು ಮೂರು ದಿನಗಳಲ್ಲಿ ಬಹುತೇಕ ಎಲ್ಲ ಶಾಲೆಗಳಿಗೂ ಶೂ, ಸಾಕ್ಸ್‌ ತಲುಪಲಿದ್ದು, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ತಲುಪಿಸಲು ಕ್ರಮ ವಹಿಸಬೇಕು. ಶಾಲೆಗೆ ಬಂದ ಶೂ, ಸಾಕ್ಸ್‌ಗಳನ್ನು ಮುಖ್ಯೋಪಾಧ್ಯಾಯರು ಮಕ್ಕಳ ಕಾಲಿನ ಅಳತೆಗೆ ಅನುಗುಣವಾಗಿ ಬಾಕ್ಸ್‌ ಮಾಡಿ ವಿತರಿಸಲು ಸರಬರಾಜುದಾರರಿಗೆ ಸ್ಥಳಾವಕಾಶ ಮಾಡಿಕೊಡಬೇಕೆಂದು ಸೂಚಿಸಲಾಗಿದೆ.

ಪಿಯು ಕಾಲೇಜು ಮಕ್ಕಳಿಗೆ ಇನ್ನೂ ತಲುಪದ ಪಠ್ಯಪುಸ್ತಕ:

ಶೈಕ್ಷಣಿಕ ವರ್ಷ ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಇನ್ನೂ ಕೂಡ ಪಠ್ಯಪುಸ್ತಕಗಳು ಪೂರ್ಣ ಪ್ರಮಾಣದಲ್ಲಿ ಸರಬರಾಜಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳ ವಲಯದಲ್ಲೇ ಈ ಸಂಬಂಧ ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಶಾಲಾ ಮಕ್ಕಳ ಜೊತೆಗೆ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳೂ ಸರ್ಕಾರ ಈ ಬಾರಿ ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡುತ್ತಿದೆ. ಮಾಹಿತಿ ಪ್ರಕಾರ ಇದುವರೆಗೆ ಸುಮಾರು ಶೇ.60ರಷ್ಟು ಪುಸ್ತಕಗಳು ಮಾತ್ರ ಮಕ್ಕಳ ಕೈ ಸೇರಿವೆ. ಇನ್ನೂ ಶೇ.35ರಿಂದ 40ರಷ್ಟು ಪುಕಸ್ತಗಳು ಸರಬರಾಜಾಗುವುದು ಬಾಕಿ ಇದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ನಿರ್ದೇಶಕ ಎಸ್‌.ಭರತ್‌ ಅವರು, ಬಾಕಿ ಪುಸ್ತಕಗಳ ಸರಬರಾಜು ಇನ್ನೊಂದು ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ಶಾಲೆಗಳಿಗೆ ಶೂ ಮತ್ತು ಸಾಕ್ಸ್‌ ಸರಬರಾಜು ಪ್ರಕ್ರಿಯೆ ಆರಂಭಗೊಂಡಿದೆ. ಜು.31ರೊಳಗೆ ಬಹುತೇಕ ಎಲ್ಲ ಶಾಲಾ ಮಕ್ಕಳಿಗೂ ಶೂ, ಸಾಕ್ಸ್‌ ತಲುಪಲಿವೆ.

- ವಿಕಾಸ್‌ ಕಿಶೋರ್‌ ಸುರಳ್ಕರ್‌, ಶಾಲಾ ಶಿಕ್ಷಣ ಇಲಾಖೆ ಆಯುಕ್ತ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

16,000 ಗರ್ಭ ನಾಪತ್ತೆ ತನಿಖೆ ಆಗಲಿ : ಬಿಜೆಪಿ
ಬೆಂಗಳೂರು : ಮಳೆಗಾಲದಲ್ಲೂ 32.4 ಡಿ.ಸೆ. ತಾಪಮಾನ ದಾಖಲು