;Resize=(412,232))
ಬೆಂಗಳೂರು : ಪುತ್ರಿಯರಿಬ್ಬರಿಗೆ ಸರ್ಕಾರಿ ಕೆಲಸ ಕೊಡಿಸಲು ಸುಳ್ಳು ದಾಖಲೆ ಒದಗಿಸಿರುವ ಆರೋಪ ಹೊತ್ತಿರುವ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರನ್ನು ರಾಜ್ಯಪಾಲರು ಅಮಾನತು ಮಾಡಿದ್ದಾರೆ. ಶಿವಶಂಕರಪ್ಪ ಅವರ ಪಕ್ಷಪಾತ ಮತ್ತು ಅಕ್ರಮಗಳ ಕುರಿತು ತನಿಖೆಯನ್ನು ಸುಪ್ರೀಂ ಕೋರ್ಟ್‌ಗೆ ವಹಿಸಲು ಕೋರಿ ಭಾರತದ ರಾಷ್ಟ್ರಪತಿಗಳಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಶಿಫಾರಸ್ಸು ಕಳುಹಿಸಿದ್ದಾರೆ.
ಅಮಾನತು ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಆಯೋಗದಲ್ಲಿರುವ ಹಿರಿಯ ಸದಸ್ಯರು ಕೆಪಿಎಸ್ಸಿಯ ಹಂಗಾಮಿ ಅಧ್ಯಕ್ಷರಾಗಿ ಮುಂದವರೆಯುವಂತೆ ರಾಜ್ಯಪಾಲರು ಆದೇಶಿಸಿದ್ದಾರೆ. ಇದರನ್ವಯ ಆಯೋಗದ ಹಿರಿಯ ಸದಸ್ಯರಾದ ಬಿ. ಪ್ರಭುದೇವ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
‘ಕನ್ನಡಪ್ರಭ’ ಪತ್ರಿಕೆ ಇದೇ ಜು.1ರಂದು ಕೆಪಿಎಸ್ಸಿ ಅಧ್ಯಕ್ಷರ ಪಕ್ಷಪಾತ ಹಾಗೂ ಅಕ್ರಮ ದಾಖಲೆ ಸಲ್ಲಿಕೆ ಕುರಿತು ವಿಶೇಷ ವರದಿ ಪ್ರಕಟಿಸಿ ಹಗರಣವನ್ನು ಬಯಲಿಗೆಳೆದಿತ್ತು. ಇದಾದ ನಂತರ ಪ್ರಕರಣದ ಪ್ರತಿ ಬೆಳವಣಿಗೆಯನ್ನೂ ಕನ್ನಡಪ್ರಭವು ಬೆನ್ನತ್ತಿ ವರದಿ ಮಾಡಿದ್ದನ್ನು ಲೋಕಭವನ ಗಂಭೀರವಾಗಿ ಪರಿಗಣಿಸಿರುವುದು ಅಮಾನತು ಆದೇಶದಿಂದ ಸ್ಪಷ್ಟವಾಗಿದೆ.
ಪುತ್ರಿಯರಿಗೆ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಆಯ್ಕೆ ಬಯಸಿದಾಗ ಕೆಪಿಎಸ್ಸಿ ಅಧ್ಯಕ್ಷರು ಆ ನೇಮಕಾತಿ ಪ್ರಕ್ರಿಯೆಯಿಂದ ದೂರ ಉಳಿದಿಲ್ಲ. ಜೊತೆಗೆ ಹಿತಾಸಕ್ತಿ ಸಂಘರ್ಷ ಘೋಷಿಸುವಲ್ಲೂ ಅಧ್ಯಕ್ಷರು ವಿಫಲವಾಗಿದ್ದಾರೆ ಎಂದು ಲೋಕಭವನದ ಪತ್ರಿಕಾ ಪ್ರಕಟಣೆ ಪ್ರತಿಪಾದಿಸಿದೆ.
ಅಧ್ಯಕ್ಷರ ಪುತ್ರಿಯು ತಮ್ಮ ಪೋಷಕರ ವಾರ್ಷಿಕ 40 ಸಾವಿರ ರು. ಎಂದು ಸುಳ್ಳು ಮಾಹಿತಿ ನೀಡಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ತಮ್ಮ ತಂದೆ ಆಯೋಗದ ಅಧ್ಯಕ್ಷರು ಎಂದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಸತ್ಯಾಂಶಗಳನ್ನು ಮರೆಮಾಚಿ, ತಿರುಚಿದ ಕಡಿಮೆ ಆದಾಯದ ಘೋಷಣೆ ಬಳಸಿದ್ದಾರೆ. ಈ ಮೂಲಕ ಕ್ರೀಮಿಲೇಯರ್ ವಿನಾಯ್ತಿ ಜೊತೆಗೆ ಹಿಂದುಳಿದ ವರ್ಗಗಳ ಮೀಸಲಾತಿ ಕೋರಿರುವ ಸಾಕ್ಷಿಗಳಿವೆ. ಆಯೋಗದ ಮುಖ್ಯಸ್ಥರ ಆಡಳಿತಾತ್ಮಕ ಮೇಲ್ವಿಚಾರಣೆ ಕೊರತೆ ಹಾಗೂ ಉದ್ದೇಶಪೂರ್ವಕ ನಿರ್ಲಕ್ಷ್ಯವಿಲ್ಲದೆ ಇಂಥ ಕೃತ್ಯ ನಡೆಯಲು ಸಾಧ್ಯವಿಲ್ಲ. ಪ್ರಕರಣದ ಸತ್ಯಾಂಶಗಳು, ಸನ್ನಿವೇಶಗಳನ್ನು ಪರಿಗಣಿಸಿದಾಗ ಇದು ಕೆಪಿಎಸ್ಸಿ ಅಧ್ಯಕ್ಷರ ದುರ್ನಡತೆಗೆ ಸಮಾನ ಎಂದು ರಾಜ್ಯಪಾಲರು ತೀರ್ಮಾನಿಸಿ ಅಮಾನತು ಆದೇಶ ಹೊರಡಿಸಿದ್ದಾರೆ.
ಆಯೋಗದ ಸದಸ್ಯರ ಸಭೆ ನಡಾವಳಿಗೆ ಮೊನ್ನೇ ಸ್ಟೇ ಆಗಿತ್ತು. ಈಗ ರಾಜ್ಯಪಾಲರು ಯಾವ ಆಧಾರದಲ್ಲಿ ನಿರ್ಧಾರ ಕೈಗೊಂಡಿದ್ದಾರೋ ಗೊತ್ತಿಲ್ಲ. ನಾನು ದೆಹಲಿಯಲ್ಲಿದ್ದೇನೆ. ದಾಖಲೆಗಳ ಪರಿಶೀಲನೆ ಮಾಡೋದು ಆಫೀಸ್ ಕೆಲಸ. ಮೆರಿಟ್ ಮತ್ತು ರಿಸರ್ವೇಶನ್ ಆಧಾರದಲ್ಲಿ ಪ್ರಕಟ ಆಗುತ್ತೆ. ಸಂದರ್ಶನ ಇದ್ದಾಗ ಮಾತ್ರ ನಮ್ಮ ಬಳಿ ಬರುತ್ತೆ. ನೋಡೋಣ ಮುಂದೇನಾಗುತ್ತೆ ಅಂತ. ಗವರ್ನರ್ ಆದೇಶದ ಪೂರ್ಣ ವಿವರ ತೆಗೆದುಕೊಂಡ ನಂತರ ಮಾತನಾಡುತ್ತೇನೆ ಎಂದು ಅಮಾನತುಗೊಂಡಿರುವ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಪ್ರತಿಕ್ರಿಯಿಸಿದ್ದಾರೆ.
ಕನ್ನಡಪ್ರಭ ಸರಣಿ ವರದಿ
ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಅವರು ತಮ್ಮ ಮಕ್ಕಳಿಗೆ ಸರ್ಕಾರಿ ನೌಕರಿ ಕೊಡಿಸಲು ಅಕ್ರಮ ಎಸಗಿದ ಬಗ್ಗೆ ಜು.1ರಿಂದ ‘ಕನ್ನಡಪ್ರಭ’ ಸರಣಿ ವರದಿ ಪ್ರಕಟಿಸಿತ್ತು.
ವಿಸ್ತರಣಾಧಿಕಾರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ?
ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ನಡೆದ ಬಹುಆಯ್ಕೆ ಮಾದರಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತಾ ಎಂಬ ಅನುಮಾನವೂ ಶುರುವಾಗಿದೆ. ಈಗಾಗಲೇ ಈ ಹುದ್ದೆಗೆ ಹೈದರಾಬಾದ್ ಕರ್ನಾಟಕ ಸಾಮಾನ್ಯ ಮಹಿಳಾ ಕೋಟಾದಡಿ ಕೆಪಿಎಸ್ಸಿ ಅಧ್ಯಕ್ಷರ ಪುತ್ರಿ ಅನುರಾಧ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ. ಪಟ್ಟಿಯಲ್ಲಿ ಇವರದೇ ಎರಡನೇ ಹೆಸರು. ಕೆಪಿಎಸ್ಸಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಕೃಷ್ಣ ಹಾಗೂ ಗೌಪ್ಯಶಾಖೆಯ ಸಹಾಯಕ ಕಾರ್ಯದರ್ಶಿ ನೀತಾ ಕುಮಾರಿ ಸ್ವಯಂ ನಿವೃತ್ತಿ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ವಿವಾದಕ್ಕೆ ಕಾರಣವಾಗಿರುವ ನೇಮಕಾತಿಗಳ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದ ಈ ಇಬ್ಬರ ಸ್ವಯಂ ನಿವೃತ್ತಿ ಅರ್ಜಿ ತಡೆ ಹಿಡಿಯುವಂತೆ ಸಾಮಾಜಿಕ ಹೋರಾಟಗಾರ ಮರಿಲಿಂಗಗೌಡ ಮಾಲಿಪಾಟೀಲ್ ಅವರು ಈಗಾಗಲೇ ದೂರು ಸಲ್ಲಿಸಿದ್ದಾರೆ. ಹೀಗಾಗಿ, ಕೈಗಾರಿಕಾ ವಿಸ್ತರಣಾಧಿಕಾರಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಆಗಿರಬಹುದೇ ಎಂಬ ಅನುಮಾನ ಎದ್ದಿದೆ. ಈ ಕುರಿತು ಆಯೋಗ ಗಂಭೀರ ಪರಿಶೀಲನೆ ನಡೆಸುತ್ತಿದೆ.