20 ಭಾಷೆಗಳಲ್ಲಿ ಭರ್ಜರಿ 48000 ಹಾಡು ಹಾಡಿದ ಸಾಧಕಿ

Published : Jul 12, 2026, 09:39 AM IST
s janaki

ಸಾರಾಂಶ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಗ್ರಾಮದಲ್ಲಿ ಜನಿಸಿದ ಜಾನಕಿ ಅವರು, ಕೇವಲ ಮೂರನೇ ವಯಸ್ಸಿನಲ್ಲೇ ಸಂಗೀತಾಭ್ಯಾಸ ಆರಂಭಿಸಿದ್ದರು. ಇಪ್ಪತ್ತರ ಹರೆಯದಲ್ಲಿ ಚಿಕ್ಕಪ್ಪನ ಸಲಹೆಯಂತೆ ಚೆನ್ನೈಗೆ ತೆರಳಿ, ಎಂ.ಎಸ್. ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ಆರ್. ಸುದರ್ಶನಂ ಅವರ ಬಳಿ ಗಾಯಕಿಯಾಗಿ ಕೆಲಸ ಆರಂಭಿಸಿದರು

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಗ್ರಾಮದಲ್ಲಿ ಜನಿಸಿದ ಜಾನಕಿ ಅವರು, ಕೇವಲ ಮೂರನೇ ವಯಸ್ಸಿನಲ್ಲೇ ಸಂಗೀತಾಭ್ಯಾಸ ಆರಂಭಿಸಿದ್ದರು. ಇಪ್ಪತ್ತರ ಹರೆಯದಲ್ಲಿ ಚಿಕ್ಕಪ್ಪನ ಸಲಹೆಯಂತೆ ಚೆನ್ನೈಗೆ ತೆರಳಿ, ಎಂ.ಎಸ್. ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶಕ ಆರ್. ಸುದರ್ಶನಂ ಅವರ ಬಳಿ ಗಾಯಕಿಯಾಗಿ ಕೆಲಸ ಆರಂಭಿಸಿದರು. 1957ರಲ್ಲಿ ತಮಿಳು ಚಿತ್ರ ‘ವಿಧಿಯಿನ್ ವಿಳಯಾಟ್ಟು’ವಿನ ಮೂಲಕ ಹಿನ್ನೆಲೆ ಗಾಯನಕ್ಕೆ ಪದಾರ್ಪಣೆ ಮಾಡಿದ ಜಾನಕಿ, ಅದೇ ವರ್ಷ ಆರು ಭಾಷೆಗಳಲ್ಲಿ ಹಾಡಿ ಗಮನ ಸೆಳೆದಿದ್ದರು. ಇದು ಬಹುಶಃ ಆ ಕಾಲಕ್ಕೆ ಅಪರೂಪದ ಸಾಧನೆಯಾಗಿತ್ತು.

ಮುಂದೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48,000ಕ್ಕೂ ಅಧಿಕ ಹಾಡುಗಳನ್ನು ಹಾಡಿದ ಜಾನಕಿ, ವಿಶ್ವದ ಅತಿ ಹೆಚ್ಚು ಹಾಡುಗಳನ್ನು ಹಾಡಿದ ಗಾಯಕಿಯರಲ್ಲಿ ಒಬ್ಬರೆಂಬ ಹೆಗ್ಗಳಿಕೆಗೂ ಪಾತ್ರರಾದರು.

ಕನ್ನಡ ಚಿತ್ರರಂಗದ ಜೊತೆ ಅವಿನಾಭಾವ ನಂಟು

1957ರಲ್ಲೇ ಮೊದಲ ಕನ್ನಡ ಹಾಡು ಹಾಡಿದ ಜಾನಕಿ, 1970-80ರ ದಶಕಗಳಲ್ಲಿ ಕನ್ನಡ ಚಿತ್ರರಂಗದ ನಂಬರ್ ಒನ್ ಗಾಯಕಿಯಾಗಿ ಮೆರೆದರು. ಜಿ.ಕೆ. ವೆಂಕಟೇಶ್‌ರಿಂದ ಹಿಡಿದು ರಾಜನ್-ನಾಗೇಂದ್ರ, ಹಂಸಲೇಖ ಮುಂತಾದ ಬಹುತೇಕ ಎಲ್ಲಾ ಸಂಗೀತ ನಿರ್ದೇಶಕರೂ ತಮ್ಮ ಶ್ರೇಷ್ಠ ಸಂಯೋಜನೆಗಳನ್ನು ಜಾನಕಿಗೇ ಒಪ್ಪಿಸುತ್ತಿದ್ದರು. ಡಾ. ರಾಜ್‌ಕುಮಾರ್ ಅವರೊಂದಿಗೆ ಅತಿ ಹೆಚ್ಚು ಯುಗಳ ಗೀತೆಗಳನ್ನು ಹಾಡಿದ ದಾಖಲೆ ಜಾನಕಿ ಅವರದ್ದು. ಕುತೂಹಲದ ಸಂಗತಿಯೆಂದರೆ, ರಾಜ್‌ಕುಮಾರ್ ಖಳನಾಯಕನ ಪಾತ್ರದಲ್ಲಿ ನಟಿಸಿದ ‘ಮಹಿಷಾಸುರ ಮರ್ದಿನಿ’ ಚಿತ್ರದ ‘ತುಂಬಿತು ಮನವಾ’ ಗೀತೆಯೇ ಇಬ್ಬರ ಮೊದಲ ಯುಗಳ ಗೀತೆಯಾಗಿತ್ತು. ‘ಯುಗ ಯುಗಾದಿ ಕಳೆದರೂ’, ‘ನೋಡು ಬಾ ನೋಡು ಬಾ ನಮ್ಮೂರ’, ‘ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು’ ಮುಂತಾದ ಅಸಂಖ್ಯಾತ ಗೀತೆಗಳು ಇಂದಿಗೂ ಕನ್ನಡಿಗರ ನಾಲಿಗೆಯ ಮೇಲಿವೆ.

ಸ್ವರ ವೈವಿಧ್ಯದಲ್ಲಿ ಜಾನಕಿಗೆ ಜಾನಕಿಯೇ ಸಾಟಿ ಎಂಬಂತಿತ್ತು ಅವರ ಪ್ರತಿಭೆ. ಸಣ್ಣ ಮಗುವಿನ ಧ್ವನಿಯಿಂದ ಹಿಡಿದು ಗಂಭೀರ ಭಕ್ತಿಗೀತೆಗಳವರೆಗೆ, ಎಲ್ಲಾ ಬಗೆಯ ಭಾವಗಳನ್ನೂ ಅಷ್ಟೇ ಸಲೀಸಾಗಿ ಹಾಡಬಲ್ಲ ಸಾಮರ್ಥ್ಯ ಅವರಲ್ಲಿತ್ತು. ‘ಸನಾದಿ ಅಪ್ಪಣ್ಣ’ ಚಿತ್ರದ ‘ಕರೆದರು ಕೇಳದೆ’ ಗೀತೆ, ಶಾಸ್ತ್ರೀಯ ವಾದ್ಯ ಮತ್ತು ಚಿತ್ರಗೀತೆಯ ಅಪೂರ್ವ ಸಂಗಮವೆಂದೇ ಸಂಗೀತ ಪ್ರಿಯರಲ್ಲಿ ಇಂದಿಗೂ ಸ್ಮರಣೀಯ.

ಪ್ರಶಸ್ತಿ ತಿರಸ್ಕರಿಸಿದ ಸ್ವಾಭಿಮಾನಿ ಗಾಯಕಿ

ಜಾನಕಿ ಅವರ ಬದುಕಿನಲ್ಲಿ ಒಂದು ಕುತೂಹಲಕರ ಹಾಗೂ ಎಲ್ಲರ ಗಮನ ಸೆಳೆದ ಘಟನೆಯೆಂದರೆ, 2013ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಪದ್ಮಭೂಷಣ ಪ್ರಶಸ್ತಿಯನ್ನು ಅವರು ನಿರಾಕರಿಸಿದ್ದು. ಪದ್ಮ ಪ್ರಶಸ್ತಿಗಳ ಆಯ್ಕೆಯಲ್ಲಿ ದಕ್ಷಿಣ ಭಾರತೀಯ ಕಲಾವಿದರ ಬಗ್ಗೆ ತಾರತಮ್ಯ ನಡೆಯುತ್ತಿದೆ ಎಂದು ಆಕ್ಷೇಪಿಸಿ, ಇಷ್ಟು ವರ್ಷ ತಡವಾಗಿ ಬಂದ ಗೌರವವನ್ನು ಸ್ವೀಕರಿಸಲು ಅವರು ನಿರಾಕರಿಸಿದ್ದರು. ಇದು ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ತಮ್ಮ ವೃತ್ತಿಬದುಕಿನಲ್ಲಿ ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಮತ್ತು 28ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿಗಳನ್ನು ಜಾನಕಿ ತಮ್ಮ ಮುಡಿಗೇರಿಸಿಕೊಂಡಿದ್ದರು. ಕರ್ನಾಟಕ ಸರ್ಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದರೆ, ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೆಟ್ ನೀಡಿ ಸನ್ಮಾನಿಸಿತ್ತು.

ಬಾಲಿವುಡ್ ಪ್ರವೇಶ ಮತ್ತು ಎ.ಆರ್. ರೆಹಮಾನ್ ಜೊತೆ ನಂಟು

ಪ್ರಸಾದ್ ಸ್ಟುಡಿಯೋಗೆ ಭೇಟಿ ನೀಡಿದ್ದ ಸಂಗೀತ ನಿರ್ದೇಶಕ ಬಪ್ಪಿ ಲಹರಿ, ಜಾನಕಿ ಹಾಡಿದ ಹಿಂದಿ ಹಾಡೊಂದನ್ನು ಕೇಳಿ ಮಾರುಹೋಗಿ, ಅವರನ್ನು ಬಾಲಿವುಡ್‌ಗೆ ಪರಿಚಯಿಸಿದ್ದರು. ಕಿಶೋರ್ ಕುಮಾರ್ ಅವರೊಂದಿಗೂ ಹಲವು ಯುಗಳ ಗೀತೆಗಳನ್ನು ಹಾಡಿದ ಜಾನಕಿ, 1990ರ ದಶಕದಲ್ಲಿ ಯುವ ಸಂಗೀತ ನಿರ್ದೇಶಕರಾಗಿದ್ದ ಎ.ಆರ್. ರೆಹಮಾನ್ ಅವರ ಜೊತೆಗೂ ಕೆಲಸ ಮಾಡಿ, ‘ಒಟ್ಟಗತ್ತ ಕಟ್ಟಿಕೋ’, ‘ಮುದಲ್ವಾನೆ’ ಮುಂತಾದ ಜನಪ್ರಿಯ ಗೀತೆಗಳಿಗೆ ಧ್ವನಿಯಾಗಿದ್ದರು.

ನಿವೃತ್ತಿ ಮತ್ತು ಕೊನೆಯ ದಿನಗಳು

ಆರು ದಶಕಗಳ ಸುದೀರ್ಘ ಸಂಗೀತ ಪಯಣಕ್ಕೆ 2017ರ ಅಕ್ಟೋಬರ್ 28ರಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದೊಂದಿಗೆ ವಿದಾಯ ಹೇಳಿದ ಜಾನಕಿ, ಮಲಯಾಳಂ ಚಿತ್ರ ‘10 ಕಲ್ಪನಕಳ್’ ಚಿತ್ರದ ಜೋಗುಳ ಗೀತೆ ‘ಅಮ್ಮ ಪೂವಿನುಂ’ ಅನ್ನು ತಮ್ಮ ಕೊನೆಯ ಹಾಡಾಗಿ ಆಯ್ಕೆ ಮಾಡಿಕೊಂಡಿದ್ದು ಗಮನಾರ್ಹ. ತಾಯಿಯ ಪ್ರೀತಿಯ ಕುರಿತ ಹಾಡಿನೊಂದಿಗೇ ವೃತ್ತಿಜೀವನ ಮುಗಿಸಿದ್ದು ಒಂದು ಭಾವನಾತ್ಮಕ ಸಂಕೇತವಾಗಿತ್ತು.

1959ರಲ್ಲಿ ವಿ. ರಾಮಪ್ರಸಾದ್ ಅವರನ್ನು ವಿವಾಹವಾಗಿದ್ದ ಜಾನಕಿ, 1997ರಲ್ಲಿ ಪತಿಯನ್ನು ಕಳೆದುಕೊಂಡ ನಂತರ ಮೈಸೂರಿನ ಬೋಗಾದಿಯಲ್ಲಿ ಪುತ್ರ ಮುರಳಿ ಕೃಷ್ಣ ಅವರೊಂದಿಗೆ ನೆಲೆಸಿದ್ದರು. ಈ ವರ್ಷದ ಆರಂಭದಲ್ಲಿ ಪುತ್ರನ ಅಗಲಿಕೆಯ ನೋವನ್ನು ಅನುಭವಿಸಿದ್ದರು.

ಸ್ವರ ನಿಂತರೂ ನಿಲ್ಲದ ಪ್ರತಿಧ್ವನಿ

ಈ ಮಾಂತ್ರಿಕ ಗಾಯಕಿ 48 ಸಾವಿರಕ್ಕೂ ಹೆಚ್ಚು ಹಾಡುಗಳ ಅಜರಾಮರ ಸಂಪತ್ತನ್ನು ಬಿಟ್ಟುಹೋಗಿದ್ದಾರೆ. ಅವರ ಕಂಠ ಇಂದು ನಿಶ್ಶಬ್ದವಾಗಿದೆ. ಆದರೆ ಪ್ರತಿ ಯುಗಾದಿಗೂ, ಪ್ರತಿ ಮದುವೆಯ ಮಂಟಪದಲ್ಲೂ, ಪ್ರತಿ ರೇಡಿಯೋ ಹಾಡಿನ ಕಾರ್ಯಕ್ರಮದಲ್ಲೂ ಜಾನಕಿಯವರ ಸ್ವರ ಮಾತ್ರ ಶಾಶ್ವತವಾಗಿ ಮೊಳಗುತ್ತಲೇ ಇರಲಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸರಳರಲ್ಲಿ ಸರಳಾಗಿದ್ದ ಹಾಡುಗಳಿಂದಲೇ ಕನ್ನಡ ಉಳಿಸಿದವರು
ಜಾನಕಿಯಂತಹ ಗಾಯಕಿ ಬೇರೊಬ್ಬರು ಇಲ್ಲ