ಜಾನಕಿಯಂತಹ ಗಾಯಕಿ ಬೇರೊಬ್ಬರು ಇಲ್ಲ

Published : Jul 12, 2026, 08:42 AM IST
anant nag

ಸಾರಾಂಶ

ನಾನು ಅ‍ವರನ್ನು ಮೊದಲು ಭೇಟಿ ಮಾಡಿದ್ದು ‘ಬಯಲುದಾರಿ’ ಚಿತ್ರದ ಸಂದರ್ಭದಲ್ಲಿ. ಎಂಥಾ ಗಾಯಕಿ, ಎಂಥಾ ವ್ಯಕ್ತಿತ್ವ. ಅವರು ನನ್ನ ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಹಾಡಿದ್ದಾರೆ. ಅದರಲ್ಲಿ ಬಹುತೇಕ ಹಾಡುಗಳು ಸೂಪರ್‌ಹಿಟ್‌ ಆಗಿವೆ.

ಅನಂತನಾಗ್‌, ಹಿರಿಯ ನಟ

ನಾನು ಅ‍ವರನ್ನು ಮೊದಲು ಭೇಟಿ ಮಾಡಿದ್ದು ‘ಬಯಲುದಾರಿ’ ಚಿತ್ರದ ಸಂದರ್ಭದಲ್ಲಿ. ಎಂಥಾ ಗಾಯಕಿ, ಎಂಥಾ ವ್ಯಕ್ತಿತ್ವ. ಅವರು ನನ್ನ ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಹಾಡಿದ್ದಾರೆ. ಅದರಲ್ಲಿ ಬಹುತೇಕ ಹಾಡುಗಳು ಸೂಪರ್‌ಹಿಟ್‌ ಆಗಿವೆ. ಅವರನ್ನು ನೋಡುವ, ಭೇಟಿ ಮಾಡುವ, ಅವರ ಹಾಡು ಕೇಳುವ ಕಾಲದಲ್ಲಿ ನಾವಿದ್ದೆವು ಅನ್ನುವುದೇ ನಮ್ಮ ಅದೃಷ್ಟ. ಅವರ ಹಾಡುಗಳ ಜೊತೆ ಬದುಕುವ ಅವಕಾಶ ಸಿಕ್ಕಿದ್ದೇ ನಮ್ಮ ಸಾರ್ಥಕತೆ.

ಅಂಥಾ ಅದ್ಭುತ ಗಾಯಕಿ ಅವರು. ಅವರಂಥಾ ಗಾಯಕಿಯನ್ನು ನಾನು ಬೇರೆ ಕೇಳಿಲ್ಲ, ನೋಡಿಲ್ಲ. ಗೀತಪ್ರಿಯ ಬರೆದ, ರಾಜನ್ ನಾಗೇಂದ್ರ ಸಂಗೀತ ಸಂಯೋಜಿಸಿದ್ದ ‘ಹೂವಿಂದ ಹೂವಿಗೆ ಹಾರುವ ದುಂಬಿ’ ಎಂಬ ಹಾಡು ನನ್ನ ಅತ್ಯಂತ ಇಷ್ಟ ಗೀತೆಗಳಲ್ಲಿ ಒಂದಾಗಿತ್ತು. ‘ಮುದುಡಿದ ತಾವರೆ ಅರಳಿದೆ’ ಹಾಡನ್ನು ಎಷ್ಟು ಸೊಗಸಾಗಿ ಹಾಡಿದ್ದರು. ಅವರಿಗೆ ಯಾವುದೇ ಹಾಡು ಕೊಟ್ಟರೂ ಅದನ್ನು ಮಂತ್ರಮುಗ್ಧಗೊಳಿಸುವಂತೆ ಹಾಡುವ ಕಲೆ ಅವರಿಗಿತ್ತು. ಅವರನ್ನು ಯಾರ ಜೊತೆಗೂ ಹೋಲಿಸುವುದು ಸಾಧ್ಯವೇ ಇರಲಿಲ್ಲ.

. ಹಾಡು ಮುಗಿದಾಗ ಮುಗಿದೇಹೋಯಿತು ಎಂದು ಬೇಸರವಾಗುವಂತಹ ಹಾಡುಗಾರಿಕೆ

ಅವರು ಹಾಡುವಾಗ ಸುಮ್ಮನೆ ಕೇಳುತ್ತಾ, ಎವೆಯಿಕ್ಕದೆ ನೋಡುತ್ತಾ ನಿಂತುಕೊಳ್ಳಬೇಕು ಅನ್ನಿಸುತ್ತದೆ. ಹಾಡು ಮುಗಿದಾಗ ಮುಗಿದೇಹೋಯಿತು ಎಂದು ಬೇಸರವಾಗುವಂತಹ ಹಾಡುಗಾರಿಕೆ. ಇನ್ನು ಎಂಥಾ ಅದ್ಭುತ ವ್ಯಕ್ತಿತ್ವ ಅವರದು. ಬಿಳಿ ಸೀರೆ, ದೊಡ್ಡ ಕುಂಕುಮ, ದೈವಿಕ ವ್ಯಕ್ತಿತ್ವ. ಅಂಥಾ ಪ್ರತಿಭೆಗೆ ಕಾಲು ಮುಟ್ಟಿ ನಮಸ್ಕರಿಸುವ ಒಂದು ದಿವ್ಯ ಅವಕಾಶ ನನಗೆ ಸಿಕ್ಕಿತ್ತು ಅನ್ನುವುದೇ ನನ್ನ ಪುಣ್ಯ.

ಯಾರಿಗೇ ಆದರೂ ಕಾಲು ಮುಟ್ಟಿ ನಮಸ್ಕರಿಸಬೇಕು ಅಂತನ್ನಿಸುವ ವ್ಯಕ್ತಿತ್ವ ಅವರದು. ಇತ್ತೀಚೆಗೆ ಅವರ ಆರೋಗ್ಯ ಸರಿ ಇಲ್ಲದೇ ಇರುವ ಮಾಹಿತಿ ನನ್ನ ಕಿವಿಗೆ ಬಿದ್ದಿತ್ತು. ಆದರೆ ಅಂಥಾ ಆಲೋಚನೆಯೇ ಬೇಡವೆಂದುಕೊಳ್ಳುತ್ತಿದ್ದೆ.

ಅಂತಿಮವಾಗಿ ಅವರು ನಮ್ಮನ್ನು ಅಗಲಿದ್ದಾರೆ. ಅವರ ಹಾಡು ಮುಗಿದ ಕ್ಷಣದ ನೀರವ ಮೌನವೊಂದು ಕಾಡುತ್ತಿದೆ.

 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸೈಕಲ್‌ನಲ್ಲಿ ತಿರುಪತಿಗೆ ಶಾಸಕ ಸುರೇಶ್‌
ಚಿಲ್ಲರೆ ನೀಡದ್ದಕ್ಕೆ ಬಸ್‌ನಿಂದ ಸಾರಿಗೆ ಸಚಿವರನ್ನೇ ಕೆಳಗೆ ಇಳಿಸಿದ ಕಂಡಕ್ಟರ್