ಸರಳರಲ್ಲಿ ಸರಳಾಗಿದ್ದ ಹಾಡುಗಳಿಂದಲೇ ಕನ್ನಡ ಉಳಿಸಿದವರು

Published : Jul 12, 2026, 08:49 AM IST
Jayant Kaikini

ಸಾರಾಂಶ

ಎಸ್. ಜಾನಕಿ ಅವರು ಕನ್ನಡ ನುಡಿಯ ಸಂಯುಕ್ತ, ಕೌಟುಂಬಿಕ ದನಿಯಾಗಿಯೂ ವೈಯಕ್ತಿಕ ವಿಶೇಷ ದನಿಯಾಗಿಯೂ ಸದಾ ಜಾಗೃತ. ಕನ್ನಡದಲ್ಲಿ ಆರು ದಶಕಗಳಿಗಿಂತ ಹೆಚ್ಚಿನ ಕಾಲ ಅವರು ಹಾಡಿದ್ದಾರೆ. ಅದೆಷ್ಟು ಸಂಗೀತ ನಿರ್ದೇಶಕರಿಗೆ, ಅದೆಷ್ಟು ರೀತಿಯ ಚಿತ್ರಗಳಿಗೆ ಅವರು ಅವರು ಧ್ವನಿಯಾಗಿದ್ದಾರೆ!

 ಜಯಂತ ಕಾಯ್ಕಿಣಿ

ಎಸ್. ಜಾನಕಿ ಅವರು ಕನ್ನಡ ನುಡಿಯ ಸಂಯುಕ್ತ, ಕೌಟುಂಬಿಕ ದನಿಯಾಗಿಯೂ ವೈಯಕ್ತಿಕ ವಿಶೇಷ ದನಿಯಾಗಿಯೂ ಸದಾ ಜಾಗೃತ. ಕನ್ನಡದಲ್ಲಿ ಆರು ದಶಕಗಳಿಗಿಂತ ಹೆಚ್ಚಿನ ಕಾಲ ಅವರು ಹಾಡಿದ್ದಾರೆ. ಅದೆಷ್ಟು ಸಂಗೀತ ನಿರ್ದೇಶಕರಿಗೆ, ಅದೆಷ್ಟು ರೀತಿಯ ಚಿತ್ರಗಳಿಗೆ ಅವರು ಅವರು ಧ್ವನಿಯಾಗಿದ್ದಾರೆ!

ಇನ್ನೊಂದು ಆಸಕ್ತಿಕರ ವಿಷಯ ಅಂದರೆ ಸಾಮಾಜಿಕ, ಕೌಟುಂಬಿಕ, ಪೌರಾಣಿಕ, ಕಾದಂಬರಿ ಆಧರಿತ, ಐತಿಹಾಸಿಕ ಹೀಗೆ ನಾನಾ ವೈವಿಧ್ಯಮಯ ರೀತಿಯ ಚಿತ್ರಗಳು ಬರುತ್ತಿದ್ದ ಕಾಲವದು. ಹಾಡುಗಳಲ್ಲೂ ವೈವಿಧ್ಯಗಳಿರುತ್ತಿದ್ದವು. ಆಗ ಅವುಗಳ ಮಹತ್ವ ತಿಳಿಯುತ್ತಿರಲಿಲ್ಲ. ಈಗ ನೋಡಿದಾಗ ತಿಳಿಯುತ್ತದೆ. ಜೋಗುಳ, ಮಕ್ಕಳು ಬೆಳೆಯುವಾಗ ಹಾಡುವ ಹಾಡುಗಳು, ಪ್ರೇಮ ಗೀತೆಗಳು.. ಹೀಗೆ ನಾನಾ ರೀತಿಯ ಹಾಡುಗಳು. ಅವೆಲ್ಲವಕ್ಕೂ ಈ ಗಾಯಕಿ ಬೇರೆ ಬೇರೆ ಬಗೆಯಲ್ಲಿ ದನಿಯಾಗುತ್ತಿದ್ದರು.

ಬೇರೆ ಬೇರೆ ನಟಿಯರ ಹಾವಭಾವಗಳಿಗೆ ತಕ್ಕಂತೆ ಹಾಡಿ ವಿಭಿನ್ನತೆ ಮೆರೆದವರು. ಇವತ್ತಿನ ಕೆಲವು ಗಾಯಕರು ಹಾಡಿನಲ್ಲಿ ಪಲ್ಲವಿ ಮರುಕಳಿಸಿದಾಗ ಅಲ್ಲಿ ತಮ್ಮದೇನೋ ಛಾಪು ಮೂಡಿಸಲು ಹೊರಡುತ್ತಾರೆ. ಆದರೆ ಚಿತ್ರಕ್ಕೆ ಅದು ಬೇಕಾಗಿರುವುದಿಲ್ಲ. ಜನಸಾಮಾನ್ಯನೊಬ್ಬ ಅಲ್ಲಿ ಗಾಯಕನ ಪಾಂಡಿತ್ಯಕ್ಕಾಗಿ ಸಿನಿಮಾ ನೋಡಲು ಬರುವುದಿಲ್ಲ. ಕಥೆಯ ಹರಿವಿಗೆ ಪೂರಕ ಅಭಿವ್ಯಕ್ತಿಯಾಗಿ ಹಾಡನ್ನು ಕೇಳುತ್ತಾರೆ.

ಎಸ್‌. ಜಾನಕಿ ಅವರು ಶಾಸ್ತ್ರೀಯವಾಗಿ ಬಹಳ ನುರಿತ ಗಾಯಕಿ

ಎಸ್‌. ಜಾನಕಿ ಅವರು ಶಾಸ್ತ್ರೀಯವಾಗಿ ಬಹಳ ನುರಿತ ಗಾಯಕಿ. ಹಾಡಿನಲ್ಲಿ ಅವರು ಏನು ಬೇಕಾದರೂ ತೋರಿಸಬಹುದಿತ್ತು. ಆದರೆ ಅವರು ಆ ಹಾಡಿಗೆ ಎಷ್ಟು ಬೇಕೋ ಅಷ್ಟೇ ಮಿನಿಮಲಿಸ್ಟಿಕ್‌ ಆಗಿ ಹಾಡುತ್ತಾರೆ. ಉದಾಹರಣೆಗೆ ‘ಬಯಲುದಾರಿ’ ಚಿತ್ರದ ‘ಬಾನಲ್ಲು ನೀನೆ ಭುವಿಯಲ್ಲು ನೀನೆ’ ಹಾಡು ತೆಗೆದುಕೊಂಡರೆ ಅದರಲ್ಲಿ ಪಲ್ಲವಿ ಪ್ರತೀ ಸಲ ಮರುಕಳಿಸಿದಾಗ ಮತ್ತೆ ಅದೇ ಟೋನ್‌ನಲ್ಲೇ ಹಾಡುತ್ತಾರೆ. ಕೊನೆಯಲ್ಲಿ ಬಹಳ ಸೂಕ್ಷ್ಮವಾಗಿ ಸಣ್ಣ ಬದಲಾವಣೆ ಮಾಡಿದ್ದಾರೆ. ಮನಸ್ಸು ಮಾಡಿದ್ದರೆ ಅವರಿಗೆ ಅಲ್ಲಲ್ಲಿ ಗಾಳಿಪಟ ಹಾರಿಸಬಹುದಿತ್ತು. ಯಾಕೆ ಮಾಡಿಲ್ಲ ಅಂದರೆ ಅವರಿಗೆ ಗೊತ್ತಿತ್ತು, ಇಲ್ಲಿ ಎಲ್ಲರನ್ನೂ ತಲುಪಬೇಕಾದದ್ದು ಕಥನ. ಬುದ್ಧಿವಂತ, ಸಾಮಾನ್ಯ ಬುದ್ಧಿಯವ, ಸಿಕ್ಕಾಪಟ್ಟೆ ಸುಶಿಕ್ಷಿತ ಹೀಗೆ ಎಲ್ಲರನ್ನೂ ಆ ಕಥನದ ಮೂಲಕ ಹಾಡು ತಲುಪುತ್ತದೆ ಅಂತ. ಹೀಗೆ ಔಚಿತ್ಯ ಅರಿತು ಹಾಡುವುದೇ ಇವರ ಹೆಗ್ಗುರುತಾಗಿತ್ತು. ಇವರು ಅಂತಲ್ಲ, ಎಸ್‌ಪಿ ಬಾಲಸುಬ್ರಹ್ಮಣ್ಯಂ, ಪಿ.ಬಿ. ಶ್ರೀನಿವಾಸ್‌, ರಫಿ ಎಲ್ಲರದೂ ಇದೇ ಮನಸ್ಥಿತಿ. ಅವರು ಸರಳರಲ್ಲಿ ಸರಳರಾಗಿರುತ್ತಿದ್ದರು.

ಆದರೆ ಎಲ್ಲಿ ಶಾಸ್ತ್ರೀಯ ಸಂಗೀತವೇ ವಿಷಯವೇ ಪ್ರಧಾನವಾಗಿತ್ತೋ ಅಲ್ಲಿ ತಮ್ಮ ಸಂಪೂರ್ಣ ಶಕ್ತಿ ಧಾರೆ ಎರೆದು ಹಾಡುತ್ತಿದ್ದರು. ‘ಉಪಾಸನೆ’ ಚಿತ್ರದಲ್ಲಿ ‘ಭಾರತ ಭೂಶಿರ’ ಅದೆಷ್ಟು ಚೆನ್ನಾಗಿ ಹಾಡಿದ್ದಾರೆ. ‘ಎರಡು ಕನಸು’ ಚಿತ್ರದ ‘ಇಂದು ಎನಗೆ ಗೋವಿಂದ’ ಹಾಡಿನ ಮಾಧುರ್ಯವೂ ಬಲು ಸೊಗಸು.

ಒಟ್ಟಿನಲ್ಲಿ ಜಾನಕಿ ಸದ್ದಿಲ್ಲದೇ ಕನ್ನಡವನ್ನು ಉಳಿಸಿದ್ದಾರೆ. ಕನ್ನಡ ಉಳಿಸುವ ಬಗ್ಗೆ ನಾವು ದೊಡ್ಡ ಭಾಷಣ ಮಾಡಬಹುದು, ಆದರೆ ಇವರು ಬೇರೆ ಭಾಷೆಯಿಂದ ಬಂದವರಾದರೂ ಕನ್ನಡ ಸಾಹಿತ್ಯವನ್ನು ಅದರ ಸೂಕ್ಷ್ಮತೆ ಅರಿತುಕೊಂಡು ಹಾಡಿದವರು. ಕನ್ನಡ ಮಾತ್ರವಲ್ಲ, ಅವರು ಅನೇಕ ಭಾಷೆಗಳಲ್ಲಿ ಹಾಡಿದ್ದಾರೆ. ಆದರೆ ಹಾಡಿದ ಭಾಷೆಗಳಲ್ಲೆಲ್ಲ ಅದರ ಬನಿಯೊಂದಿಗೆ ಹಾಡಿ ಆ ಭಾಷೆಗೆ ದೊಡ್ಡ ಕೊಡುಗೆ ನೀಡಿದ್ದಾರೆ.

ಇಂಥವರು ಇಲ್ಲ ಅನ್ನಲಿಕ್ಕಾಗುವುದೇ ಇಲ್ಲ. ಅವರಿಗೆ ದೊಡ್ಡ ಕೃತಜ್ಞತೆಯ ನಮಸ್ಕಾರ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಜಾನಕಿಯಂತಹ ಗಾಯಕಿ ಬೇರೊಬ್ಬರು ಇಲ್ಲ
ಸೈಕಲ್‌ನಲ್ಲಿ ತಿರುಪತಿಗೆ ಶಾಸಕ ಸುರೇಶ್‌