;Resize=(412,232))
ಗುರುವೇ ಇಲ್ಲದೆ ಬೆಳೆದ ಸಾಧಕಿ
ಜಾನಕಿಯವರು ಯಾವುದೇ ದೊಡ್ಡ ಸಂಗೀತ ಗುರುಗಳ ಬಳಿ ಹೋಗಿ ವರ್ಷಾನುಗಟ್ಟಲೆ ಶಾಸ್ತ್ರೀಯ ಸಂಗೀತವನ್ನು ಔಪಚಾರಿಕವಾಗಿ ಕರಗತ ಮಾಡಿಕೊಂಡವರಲ್ಲ. ಬಾಲ್ಯದಲ್ಲಿ ನಾಥಮುನಿ ಎಂಬುವರಿಂದ ಕೇವಲ ಒಂದು ವರ್ಷದ ಅವಧಿಗೆ ಸಂಗೀತದ ಪ್ರಾಥಮಿಕ ಪಾಠಗಳನ್ನು ಕಲಿತಿದ್ದರು. ಉಳಿದಂತೆ ಅವರಲ್ಲಿದ್ದದ್ದು ಜನ್ಮಜಾತ ಪ್ರತಿಭೆ ಮತ್ತು ಕೇಳಿ ಕಲಿಯುವ ಅದ್ಭುತ ಏಕಾಗ್ರತೆ
1957ರಲ್ಲಿ ತಮಿಳಿನ ‘ವಿಧಿಯಿನ್ ವಿಳಯಾಟ್ಟು’ ಚಿತ್ರದ ಮೂಲಕ ಅವರು ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದರು. ಆ ಮೊದಲ ಹಾಡಿಗೆ ಅವರಿಗೆ ಸಿಕ್ಕಿದ್ದ ಸಂಭಾವನೆ 50 ರುಪಾಯಿ.
ಜಾನಕಮ್ಮನವರ ಧ್ವನಿ ವೈವಿಧ್ಯತೆ ಎಷ್ಟು ಅದ್ಭುತವಾಗಿತ್ತೆಂದರೆ, ತೆಲುಗಿನ ‘ನವಗ್ರಹ ಪೂಜಾ ಮಹಿಮಾ’ ಎಂಬ ಚಿತ್ರದ ಹಾಡೊಂದರಲ್ಲಿ ಅವರು ಒಬ್ಬರೇ ಸುಮಾರು 20ಕ್ಕೂ ಹೆಚ್ಚು ವಿಭಿನ್ನ ಶೈಲಿ ಹಾಗೂ ಸ್ವರ ವ್ಯತ್ಯಾಸಗಳನ್ನು ತಂದು ಹಾಡಿದ್ದರು. ಇಂತಹ ಪ್ರಯೋಗ ಭಾರತೀಯ ಚಿತ್ರರಂಗದಲ್ಲೇ ಅಪರೂಪ.---
‘ಶಿವ ಶಿವ’ ಜಾನಕಿ ಕಷ್ಟದ ಹಾಡು
ಕನ್ನಡದ ಚಿತ್ರ ‘ಹೇಮಾವತಿ’ಯಲ್ಲಿ ಅವರು ಹಾಡಿರುವ ‘ಶಿವ ಶಿವ ಎನ್ನದ ನಾಲಿಗೆ ಏಕೆ?’ ಎಂಬ ಅನನ್ಯಗೀತೆಯು ಇಡೀ ಭಾರತ ದೇಶದ ಅತ್ಯಂತ ತ್ರಾಸದಾಯಕ ಗೀತೆ ಎನಿಸಿದೆ. ಜಾನಕಿಯವರು ‘ಈ ಹಾಡು ನನ್ನ ಸಂಗೀತ ಜೀವನದಲ್ಲಿ ಭಯಪಟ್ಟು ಹಾಡಿದ ಹಾಡು, ಮತ್ತೆ ಹಾಡಲೂ ಆಗದ ಹಾಡು’ ಎಂದು ಹೇಳುತ್ತಿದ್ದರು. ಆ ನಂತರದಲ್ಲಿ ಅವರು ಹಾಡಿರುವ ಗೀತೆಗಳ ಸಂಖ್ಯೆ 50000 ಮೀರಿದೆ.----
‘ಅಕ್ಕ’ ಎನ್ನುತ್ತಿದ್ದರು ಡಾ। ರಾಜ್
ಡಾ. ರಾಜ್‌ಕುಮಾರ್ ಅವರ ಗಾಯನ ಪ್ರತಿಭೆಯನ್ನು ಮೊದಲ ಬಾರಿ ಗುರುತಿಸಿ, ಅವರು ಹಿನ್ನೆಲೆ ಗಾಯಕರಾಗುವಂತೆ ಪ್ರೇರೇಪಿಸಿದವರಲ್ಲಿ ಜಾನಕಮ್ಮ ಪ್ರಮುಖರು. ರಾಜ್‌ಕುಮಾರ್ ಅವರು ಜಾನಕಿಯವರನ್ನು ಅತ್ಯಂತ ಗೌರವದಿಂದ ‘ಅಕ್ಕ’ ಎಂದೇ ಕರೆಯುತ್ತಿದ್ದರು. ಇವರಿಬ್ಬರ ಕಾಂಬಿನೇಷನ್ ಕನ್ನಡ ಚಿತ್ರರಂಗದ ಸುವರ್ಣ ಯುಗವನ್ನು ಸೃಷ್ಟಿಸಿತು.
ಜಪಾನಿ ಭಾಷೆಯಲ್ಲೂ ಹಾಡಿದ್ದರು
ಜಾನಕಿ ಅವರು ಭಾರತೀಯ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ 20 ಭಾಷೆಗಳಲ್ಲಿ ಹಾಡಿರುವುದು ಗೊತ್ತು. ಆದರೆ ಅವರು ಜಪಾನಿ ಭಾಷೆಯಲ್ಲೂ ಒಂದು ಹಾಡನ್ನು ರೆಕಾರ್ಡ್ ಮಾಡಿದ್ದರು.
ಮಿಮಿಕ್ರಿಯಲ್ಲೂ ಎತ್ತಿದ ಕೈ
ಹಾಡುವುದಷ್ಟೇ ಅಲ್ಲದೆ, ಜಾನಕಿಯವರಿಗೆ ಮಿಮಿಕ್ರಿ ಕಲೆಯೂ ಕರಗತವಾಗಿತ್ತು. ವಿಶೇಷವಾಗಿ ಸಣ್ಣ ಮಕ್ಕಳ ಧ್ವನಿ, ಪಕ್ಷಿಗಳ ಕಲರವ ಮತ್ತು ವಿವಿಧ ಪ್ರಾಣಿಗಳ ಧ್ವನಿಯನ್ನು ಅವರು ಲೀಲಾಜಾಲವಾಗಿ ಅನುಕರಿಸುತ್ತಿದ್ದರು. ಚಿತ್ರಗಳಲ್ಲಿ ಬರುವ ಹಲವು ಮಕ್ಕಳ ಹಾಡುಗಳಿಗೆ (ಉದಾಹರಣೆಗೆ ಮಗುವಿನ ಅಳು ಅಥವಾ ನಗು) ಅವರೇ ಧ್ವನಿ ನೀಡುತ್ತಿದ್ದರು.
ಇಳಯರಾಜಾ ಅವರ ‘ಸಂಗೀತ ದೇವತೆ’
ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಅವರು ಜಾನಕಿಯವರ ಧ್ವನಿಯ ಬಹುದೊಡ್ಡ ಆರಾಧಕರು. ಜಾನಕಮ್ಮನವರ ಧ್ವನಿಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಇಳಯರಾಜಾ ಅವರು ನೂರಾರು ಕಠಿಣವಾದ ಕ್ಲಾಸಿಕಲ್ ಟ್ಯೂನ್‌ಗಳನ್ನು ಸಂಯೋಜಿಸುತ್ತಿದ್ದರು. ಜಾನಕಿಯವರು ತಮಗೆ ‘ಸಂಗೀತ ದೇವತೆ’ ಇದ್ದಂತೆ ಎಂದು ಇಳಯರಾಜಾ ಹಲವು ಬಾರಿ ಹೇಳಿಕೊಂಡಿದ್ದಾರೆ.
ತಾಲೀಮು ಇಲ್ಲದೆ ಮಲಯಾಳಂ ಉಚ್ಚಾರಣೆ
ಮಲಯಾಳಂ ಭಾಷೆಯ ಉಚ್ಚಾರಣೆ ಅತ್ಯಂತ ಕಠಿಣವಾದದ್ದು. ಆದರೆ ಜಾನಕಿಯವರು ಮಲಯಾಳಂನಲ್ಲಿ ಎಷ್ಟು ಸ್ಪಷ್ಟವಾಗಿ ಹಾಡುತ್ತಿದ್ದರೆಂದರೆ, ಕೇರಳದ ಜನತೆ ಅವರು ತಮ್ಮದೇ ರಾಜ್ಯದವರು ಎಂದು ನಂಬಿದ್ದರು. ಅವರು ಕೇರಳ ಸರ್ಕಾರದಿಂದಲೇ 11 ಬಾರಿ ಅತ್ಯುತ್ತಮ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ ಎಂಬುದು ಅವರ ಭಾಷಾ ಶುದ್ಧಿಗೆ ಸಾಕ್ಷಿ.
20 ವರ್ಷ ಮುಂಚೆಯೇ ನಿವೃತ್ತಿಯ ನಿರ್ಧಾರ
2016ರಲ್ಲಿ ಅವರು ತಮ್ಮ ಗಾಯನ ವೃತ್ತಿಗೆ ಅಧಿಕೃತ ವಿದಾಯ ಹೇಳಿದರಾದರೂ, ತಾವು 50 ವರ್ಷ ತುಂಬುವಷ್ಟರಲ್ಲಿಯೇ ನಿವೃತ್ತಿ ಹೊಂದಬೇಕು ಎಂದು ಅವರು ವೃತ್ತಿಜೀವನದ ಆರಂಭದಲ್ಲೇ ನಿರ್ಧರಿಸಿದ್ದರಂತೆ. ಆದರೆ ಚಿತ್ರರಂಗ ಮತ್ತು ಅಭಿಮಾನಿಗಳ ಒತ್ತಾಯ ಹಾಗೂ ಸಂಗೀತದ ಮೇಲಿನ ಪ್ರೀತಿಯಿಂದಾಗಿ ಅವರು ಆರು ದಶಕಗಳ ಕಾಲ ಹಾಡಬೇಕಾಯಿತು.
ಬಾಲ್ಯದಿಂದಲೂ ಇತ್ತು ಅಸ್ತಮಾ
ಬಾಲ್ಯದಿಂದ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಜಾನಕಿ ಅವರು ಉಸಿರಾಟದ ಸಮಸ್ಯೆಯನ್ನು ನಿರಂತರವಾಗಿ ಜೊತೆಗೇ ಇಟ್ಟುಕೊಂಡು ಬಂದವರು. ಆದರೆ ಕೆಲವೊಮ್ಮೆ ಕೊರತೆಗಳೇ ಹೇಗೆ ವ್ಯಕ್ತಿಯ ಪ್ರತಿಭೆಯನ್ನು ಬೆಳಗಿಸುತ್ತವೆ ಅನ್ನುವುದಕ್ಕೆ ಅವರಿಗಿಂತ ಸಾಕ್ಷಿ ಮತ್ತೊಬ್ಬರಿಲ್ಲ. ವಾಯ್ಸ್ ಕಂಟ್ರೋಲ್ ನಲ್ಲಿ ಜಾನಕಿ ಅವರು ಸಿದ್ಧಹಸ್ತರು, ಕೊನೆಯ ದಿನಗಳಲ್ಲೂ ಅವರ ಧ್ವನಿಯ ನಿಯಂತ್ರಣ ಅದ್ಭುತವಾಗಿತ್ತು. ಉಸಿರು ಕಟ್ಟಿ ಎಂಥ ಕಷ್ಟದ ಸಂಗತಿಯನ್ನಾದರೂ, ಕಷ್ಟಕರ ಸಂಯೋಜನೆಯನ್ನಾದರೂ ಅವರು ಹಾಡಬಲ್ಲವರಾಗಿದ್ದರು. ಗಗನವು ಎಲ್ಲೋ, ಬಂದ ಬಂದ ಮೇಘರಾಜ, ಭಾರತ ಭೂಶಿರ, ಆಚಾರವಿಲ್ಲದ ನಾಲಗೆ, ಚಿಲಿಪಿಲಿ ಗುಟ್ಟುವ ಹಕ್ಕಿಯ ಕಂಠದಿ ಇಂಪನು ಇಟ್ಟವರಾರು- ಹೀಗೆ ಅದೆಷ್ಟೋ ಕಷ್ಟಕರ ಹಾಡನ್ನು ಲೀಲಾಜಾಲವಾಗಿ ಹಾಡಿದ್ದರ ಹಿಂದೆ ಅವರ ಅಸ್ತಮಾ ಖಾಯಿಲೆಯ ಅಡೆತಡೆ ಇದೆ. ಆದರೆ ಅದನ್ನು ಅವರು ಮೀರುತ್ತಿದ್ದರು.
ಯಾವ ದನಿಗಾದರೂ ಸೈ
ಗಂಡು, ಹೆಣ್ಣು, ಮುದುಕಿ, ಮಗು- ಹೀಗೆ ಜಾನಕಿ ಅವರು ತಮ್ಮ ಧ್ವನಿಯನ್ನ ಹೇಗೆ ಬೇಕಾದರೂ ಬದಲಾಯಿಸಿಕೊಂಡು ಹಾಡಬಲ್ಲ ಗಾಯಕಿ. ನಿಜ ಹೇಳುವೆನು ಅಮ್ಮ ನಿನ್ನ ಕಂಡರೆ ಪ್ರೀತಿ ಅನ್ನುವ ಒಂದು ಹಾಡಿನಲ್ಲಿ ಅವರು ಮಗುವಿನ ಥರ ಹಾಡಿದ್ದಾರೆ, ತಮಿಳಿನ ಒಂದು ಹಾಡನ್ನು ಗಂಡಸಿನ ಧ್ವನಿಯಲ್ಲಿ ಹಾಡಿದ್ದಾರೆ.
ಪ್ರಶಸ್ತಿ ಸಿಗದೇ ಹೋಗಿದ್ದಕ್ಕೆ ಬೇಸರ
ಜಾನಕಿ ಅವರೇ ಹೇಳಿಕೊಂಡ ಹಾಗೆ ಅವರು ಅತಿ ಹೆಚ್ಚು ಹಾಡುಗಳನ್ನು, ಅತ್ಯಂತ ಶ್ರೇಷ್ಠ ಹಾಡುಗಳನ್ನು ಹಾಡಿದ್ದು ಕನ್ನಡದಲ್ಲಿ. ಆದರೆ ಕನ್ನಡದಲ್ಲಿ ಅವರ ಗೀತೆಗಳಿಗೆ ಯಾವುದೇ ಪ್ರಶಸ್ತಿ ದೊರೆಯದೇ ಹೋದಾಗ ಅವರು ಬಹಳ ಬೇಸರಗೊಂಡು ಕನ್ನಡದಲ್ಲಿ ಹಾಡುವುದನ್ನು ಕೆಲ ವರ್ಷಗಳ ಕಾಲ ನಿಲ್ಲಿಸಿದ್ದರು, ಕಡೆಗೆ ಅವರಿಗೆ ಕರ್ನಾಟಕ ಸರ್ಕಾರ ಪ್ರಶಸ್ತಿಯನ್ನು ಕೊಟ್ಟು, ಸನ್ಮಾನಿಸಿ ಗೌರವಿಸಿತ್ತು. ಆ ಸಂದರ್ಭದಲ್ಲಿ ಅವರು ಭಾಷಣ ಮಾಡಿ, ನಾನು ಪ್ರಶಸ್ತಿಗೋಸ್ಕರ ಹಠ ಮಾಡಿದ್ದಲ್ಲ, ಗಾಯಕರನ್ನು ಕಡೆಗಣಿಸಬಾರದೆನ್ನುವ ಕಾಳಜಿಯಿಂದ ಆ ತೀರ್ಮಾನ ತೆಗೆದುಕೊಂಡಿದ್ದೆ ಅಂತ ಹೇಳಿಕೊಂಡಿದ್ದರು.
ಅಭಿಮಾನಿಗಳ ಜೊತೆಗೆ ಘರ್ಷಣೆ
ಎಸ್.ಜಾನಕಿ ಅವರು ಹಾಡಿರುವ ಒಂದು ಹಾಡು ಅಶ್ಲೀಲವಾಗಿದೆ, ಇಂಥದ್ದನ್ನು ಹಾಡಕೂಡದು ಅಂತ ತೆಲುಗು ಹಾಡೊಂದಕ್ಕೆ ಅಭಿಮಾನಿಗಳು ಸಿಟ್ಟಾಗಿದ್ದರು. ಆ ಸಂದರ್ಭದಲ್ಲಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದ ಜಾನಕಿ ಅವರು, ಒಬ್ಬ ಗಾಯಕಿಯಾಗಿ ತಾನು ಎಲ್ಲಾ ಥರದ ಹಾಡುಗಳನ್ನು ಹಾಡಿದ್ದೇನೆ, ಭಕ್ತಿಗೀತೆ, ಪ್ರಣಯ ಗೀತೆಗಳ ಹಾಗೇ ಕ್ಯಾಬರೆ ಥರದ ಹಾಡುಗಳನ್ನೂ ಹಾಡಿದ್ದೇನೆ. ಅದರಲ್ಲಿ ಮಡಿ ಮೈಲಿಗೆ ಇರಬಾರದು ಅಂತ ಹೇಳಿ ಅವರು ಅಭಿಮಾನಿಗಳ ಬಾಯಿ ಮುಚ್ಚಿಸಿದ್ದರು.
ಸಂಗೀತ ನಿರ್ದೇಶಕರ ಕಣ್ಮಣಿ
ಜಾನಕಿ ಅವರು ಎಲ್ಲಾ ಭಾಷೆಗಳ ಚಿತ್ರರಂಗದ ಒಂದು ಯುಗವನ್ನೇ ಆಳಿದವರು. ಬಹಳ ಮುಖ್ಯವಾಗಿ ಸಂಗೀತ ನಿರ್ದೇಶಕರ ಕಣ್ಮಣಿಯೇ ಆಗಿದ್ದರು. ಕನ್ನಡದಲ್ಲಿ ಜಿ.ಕೆ. ವೆಂಕಟೇಶ್, ರಾಜನ್- ನಾಗೇಂದ್ರ, ಉಪೇಂದ್ರ ಕುಮಾರ್, ವಿಜಯ ಭಾಸ್ಕರ್, ಟಿ.ಜಿ. ಲಿಂಗಪ್ಪ, ಸಿ. ಅಶ್ವತ್ಥ್, ಹಂಸಲೇಖ- ಹೀಗೆ ಪ್ರತಿಯೊಬ್ಬ ಸಂಗೀತ ನಿರ್ದೇಶಕರೂ ಜಾನಕಿ ಅವರನ್ನು ಮನದಲ್ಲಿಟ್ಟುಕೊಂಡೇ ಸಂಯೋಜನೆ ಮಾಡುತ್ತಿದ್ದರು. ಒಬ್ಬೊಬ್ಬ ಸಂಗೀತ ನಿರ್ದೇಶಕರ ಕಂಪೋಸಿಂಗ್ ರೀತಿ ಬೇರೆ, ಅವರು ಗಾಯಕರಿಂದ ಬಯಸುವ ಪ್ರತಿಭೆ ಬೇರೆ. ಜಾನಕಮ್ಮ ಅವರು ಎಲ್ಲಾ ಸಂಗೀತ ನಿರ್ದೇಶಕರ ಮನೋಧರ್ಮಕ್ಕೆ ತಕ್ಕಂತೆ ಹಾಡಿ, ಹಾಡನ್ನು ಗೆಲ್ಲಿಸಿ ಕೊಡುವ ಸಾಮರ್ಥ್ಯ ಹೊಂದಿದ್ದವರು. ತಮಿಳಿನ ಎಂ ಎಸ್ ವಿಶ್ವನಾಥನ್, ಇಳಯರಾಜ, ಮಲಯಾಳಂನ ದೇವರಾಜ್ ಮಾಸ್ಟರ್- ಹೀಗೆ ಯಾವ ಸಂಗೀತ ನಿರ್ದೇಶಕರಾಗಲೀ ಜಾನಕಿ ಅವರಿಲ್ಲದೇ ಹಾಡನ್ನು ಕಲ್ಪಿಸಿಕೊಂಡವರೇ ಅಲ್ಲ.
ಅಂತ್ಯಕ್ಕೆ ಸಾಕ್ಷಿಯಾಗಿದ್ದು ಮೈಸೂರು
ಮೈಸೂರಿನಲ್ಲಿ ಕೊನೆಯುಸಿರೆಳೆದ ಜಾನಕಿ ಅವರು, ಈ ಹಿಂದೆ ಮೈಸೂರಿನ ಕಾರ್ಯಕ್ರಮವೊಂದರಲ್ಲಿ ತನ್ನ ಗಾಯನ ನಿವೃತ್ತಿಯನ್ನು ಘೋಷಿಸಿದ್ದರು. ಮೈಸೂರಿನಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾರತಿ ವಿಷ್ಣುವರ್ಧನ್ ಸೇರಿದಂತೆ ಕನ್ನಡದ ದಿಗ್ಗಜ ನಟರ ಸಮ್ಮುಖದಲ್ಲಿ ಹಾಡಿ, ಅನುಭವವನ್ನು ಹಂಚಿಕೊಂಡು ತಮ್ಮ ನಿವೃತ್ತಿಯನ್ನು ಘೋಷಿಸಿದ್ದರು.
ಕರವಸ್ತ್ರ ಇರಲೇಬೇಕು
ತಮಾಷೆಯ ವಿಷಯವೆಂದರೆ ಮೈಕ್ ಮುಂದೆ ಯಾವ ದೈಹಿಕ ಹಾವಭಾವ ಪ್ರದರ್ಶಿಸದೇ ತುಟಿ ಚಲನೆಯಲ್ಲೇ ಎಂಥ ಕಷ್ಟದ ಹಾಡನ್ನಾದರೂ ಹೇಳಿ, ಕೇವಲ ಕಂಠದಲ್ಲಿ ಎಂಥ ಭಾವನೆಯನ್ನಾದರೂ ಸುಲಭವಾಗಿ ಹೊಮ್ಮಿಸಬಲ್ಲವರಾಗಿದ್ದ ಜಾನಕಿ ಅವರಿಗೆ ವಿಚಿತ್ರವೆಂದರೆ ಕೈಲೊಂದು ಕರವಸ್ತ್ರ ಇರಬೇಕಾಗಿರುತ್ತಿತ್ತು. ಜಾನಕಿ ಅವರ ಪಾಲಿಗೆ ಮಗನೇ ಆಗಿದ್ದ ಮತ್ತೊಬ್ಬ ದಿಗ್ಗಜ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಬೇಕೆಂದೇ ಕರವಸ್ತ್ರವನ್ನು ಬಚ್ಚಿಟ್ಟು ಕಾಡಿಸುತ್ತಿದ್ದರಂತೆ. ಸಾಮಾನ್ಯವಾಗಿ ಕೋಪಗೊಳ್ಳದ ಜಾನಕಿ ಅವರು, ತಮ್ಮ ಕರವಸ್ತ್ರ ಕಾಣದೇ ಹೋದರೆ ಮಾತ್ರಾ ಅಸಾಧ್ಯ ಕುಪಿತರಾಗುತ್ತಿದ್ದರಂತೆ. ಈ ವಿಷಯವನ್ನು ಬಹಳ ಕಾರ್ಯಕ್ರಮಗಳಲ್ಲಿ ಜಾನಕಿ ಅವರೇ ಎಸ್‌ಪಿಬಿ ಅವರ ಜೊತೆಗೇ ಈ ವಿಷಯವನ್ನು ಹಂಚಿಕೊಂಡಿದ್ದರು.
10. ಹಮ್ಮಿಂಗ್‌ಗೆ ಪ್ರಸಿದ್ಧಿ
ಲೆಜೆಂಡ್ ಸಂಗೀತ ನಿರ್ದೇಶಕರಾದ ಇಳಯರಾಜಾ, ಹಂಸಲೇಖ ಮತ್ತು ಎ ಆರ್ ರೆಹಮಾನ್ ಅವರೇ ಒಪ್ಪಿಕೊಂಡ ಪ್ರಕಾರ ಜಾನಕಿ ಅವರು ಕೇವಲ ಗಾಯಕರಷ್ಟೇ ಅಲ್ಲ, ಅವರು ಹಾಡಿನಲ್ಲಿ ಪ್ರಾರಂಭದಲ್ಲಿ, ಮಧ್ಯೆಮಧ್ಯೆ ಬರುವ ಹಮ್ಮಿಂಗ್‌ಗೆ ಜಾನಕಮ್ಮನವರನ್ನೇ ಹೆಚ್ಚಾಗಿ ಅವಲಂಬಿಸುತ್ತಿದ್ದರು. ಬಹಳ ಅದ್ಭುತವಾಗಿ ಭಾವನೆಗಳೊಂದಿಗೆ, ಹಾಡಿನ ಔಚಿತ್ಯವನ್ನು ಕೊಡುವಂಥ ಹಮ್ಮಿಂಗ್ ಕೊಡುವುದರಲ್ಲಿ ಜಾನಕಿ ಅವರನ್ನು ಮೀರಿಸಿದವರಿಲ್ಲ. ನನ್ನೆದೆ ಕೋಗಿಲೆಯ ಹಾಡಲ್ಲಾಗಲೀ, ಏನೇ ಕೇಳು ಕೊಡುವೆ ನಾನೀಗ ಹಾಡಲ್ಲಾಗಲೀ ಜಾನಕಿ ಅವರು ಕೊಟ್ಟ ಹಮ್ಮಿಂಗ್ ಬೇರೆಯದೇ ರೀತಿಯಲ್ಲಿ ಪ್ರಭಾವಿಸಿದೆ. ಬಹಳ ಮುಖ್ಯವಾಗಿ ಇಳಯರಾಜಾ ಅವರ ಸಾವಿರಾರು ತಮಿಳು ಹಾಡುಗಳಲ್ಲಿ ಜಾನಕಿ ಅವರ ಹಮ್ಮಿಂಗೇ ಹೈಲೈಟು. ತಂಗಚ್ಚಂಗಿಲಿ, ಪೊನ್ ವಾನಂ ಪನ್ನೀರ್ತೂವುದು ಮೊದಲಾದ ಗೀತೆಗಳ ಹಮ್ಮಿಂಗ್ ಗೆ ಅಭಿಮಾನಿಗಳು ಈಗಲೂ ಹುಚ್ಚಾಗುತ್ತಾರೆ.
ಕವಿಗೀತೆಗಳ ಧ್ವನಿ
ಜಾನಕಿ ಅವರು ಕನ್ನಡದ ಹಲವಾರು ಕವಿಗಳ ಹಾಡಿಗೆ ದನಿಯಾದವರು, ಕವಿ ಹಾಡುಗಳನ್ನು ಜೀವಂತವಾಗಿಟ್ಟವರು. ತೆರೆದಿದೆ ಮನೆ ಓ ಬಾ ಅತಿಥಿ, ಯಾವ ಜನ್ಮದ ಮೈತ್ರಿ, ದೋಣಿ ಸಾಗಲಿ ಮುಂದೆ ಹೋಗಲಿ, ಮೂಡಲ ಮನೆಯ ಮುತ್ತಿನ ನೀರಿನ, ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು- ಹೀಗೆ ಕನ್ನಡದ ಸಾಕಷ್ಟು ಶ್ರೇಷ್ಠ ಕವಿಗೀತೆಗಳಿಗೆ ದನಿಯಾದವರು ಜಾನಕಿ ಅವರು.
ಅದಲ್ಲದೇ ಭಾವಗೀತೆಗಳನ್ನೂ ಕೂಡ ಅವರು ಹಾಡಿ ಕನ್ನಡ ಕವಿಗಳ ಸಾಹಿತ್ಯವನ್ನು ಸಮೃದ್ಧಗೊಳಿಸಿದವರು. ಅಶ್ವತ್ಥ್ ಅವರ ನೆಚ್ಚಿನ ಗಾಯಕಿಯಾಗಿದ್ದ ಜಾನಕಿ ಅವರು, ‘ಆಕೆ ಹಾಡಿಗೆ ತುಂಬುವ ಭಾವವನ್ನು ಬೇರೆ ಯಾರೂ ತುಂಬಲಾರರು’ ಅಂತ ಅಶ್ವತ್ಥ್ ಅವರಿಂದ ಹೊಗಳಿಸಿಕೊಂಡಿದ್ದರು.