ಬೆಂಗಳೂರು : ಕರ್ತವ್ಯ ನಿರತ ಸಂಚಾರ ಮಹಿಳಾ ಪಿಎಸ್‌ಐ ಹಾಗೂ ಸಿಬ್ಬಂದಿಯೊಂದಿಗೆ ಮದ್ಯದ ಅಮಲಿನಲ್ಲಿ ಅನುಚಿತ ವರ್ತನೆ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಿಹಾರ ಮೂಲದ ವ್ಯಕ್ತಿಯನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಕ್ಷಯ ನಗರ ನಿವಾಸಿ ಆದಿತ್ಯ ಅಗರ್ವಾಲ್ (29) ಬಂಧಿತ. ಆರೋಪಿ ಸೆ.25 ರಂದು ಮಧ್ಯರಾತ್ರಿ ಸುಮಾರು 12 ಗಂಟೆಗೆ ಜೆ.ಬಿ.ನಗರ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಕವಿತಾ ಮತ್ತು ಸಿಬ್ಬಂದಿ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಪಾನಮತ್ತ ಆದಿತ್ಯ ಅಗರ್ವಾಲ್, ಪಿಎಸ್‌ಐ ಕವಿತಾ ಹಾಗೂ ಸಿಬ್ಬಂದಿ ಜತೆಗೆ ಅನುಚಿತ ವರ್ತನೆ ತೋರಿ, ಹಿಂದಿ-ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಕೂಗಾಡಿ, ಅಸಭ್ಯ ಪದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ. ಈ ಸಂಬಂಧ ಪಿಎಸ್ಐ ಕವಿತಾ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಘಟನೆ ವಿವರ:
ಪಿಎಸ್‌ಐ ಕವಿತಾ ಮತ್ತು ಸಿಬ್ಬಂದಿ ಸೆ.25ರಂದು ಮಧ್ಯರಾತ್ರಿ ಇಂದಿರಾನಗರ ಠಾಣಾ ವ್ಯಾಪ್ತಿಯಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಪಾನಮತ್ತ ಆದಿತ್ಯ ಕಾರು ಚಲಾಯಿಸಿಕೊಂಡು ಅಲ್ಲಿಗೆ ಬಂದಿದ್ದಾನೆ. ಪೊಲೀಸರನ್ನು ಕಂಡು ರಸ್ತೆಯಲ್ಲೇ ಕಾರು ಬಿಟ್ಟು ಸಮೀಪದ ಪಬ್‌ವೊಂದಕ್ಕೆ ಓಡಿ ಹೋಗಿದ್ದಾನೆ. ಬಳಿಕ ಸಂಚಾರ ಪೊಲೀಸರ ಸೂಚನೆ ಮೇರೆಗೆ ಪಬ್ ಸಿಬ್ಬಂದಿ ಆದಿತ್ಯನನ್ನು ಹಿಡಿದು ಹೊರಗೆ ಕರೆತಂದಿದ್ದಾರೆ.
ಈ ವೇಳೆ ಪಿಎಸ್ಐ ಕವಿತಾ ಅವರು ಆಲ್ಕೋ ಮೀಟರ್‌ನಲ್ಲಿ ಬ್ಲೋ ಮಾಡುವಂತೆ ಆದಿತ್ಯನಿಗೆ ಸೂಚಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಆದಿತ್ಯ ಏಕಾಏಕಿ ಹಿಂದಿ ಭಾಷೆಯಲ್ಲಿ ಪಿಎಸ್ಐ ಕವಿತಾ ಅವರನ್ನು ನಿಂದಿಸಿದ್ದಾನೆ. ಪೊಲೀಸ್ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆಸಿ ಅವಾಚ್ಯ ಶಬ್ಧಗಳಿಂದ ಬೈದಿದ್ದಾನೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಈ ಸಂಬಂಧ ಪಿಎಸ್ಐ ಕವಿತಾ ಅವರು ಇಂದಿರಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಆದಿತ್ಯನನ್ನು ಬಂಧಿಸಿದ್ದಾರೆ. ಮದ್ಯ ಸೇವಿಸಿ ಕಾರು ಚಲಾಯಿಸಿದ ಆರೋಪದಡಿ ಜೆ.ಬಿ.ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆವಾಜ್ ವೈರಲ್ ಆರೋಪಿ ಆದಿತ್ಯ ಅಗರ್ವಾಲ್ ಮದ್ಯದ ಅಮಲಿನಲ್ಲಿ ಕರ್ತವ್ಯ ನಿರತ ಸಂಚಾರ ಪೊಲೀಸರಿಗೆ ನಡು ರಸ್ತೆಯಲ್ಲಿ ಆವಾಜ್ ಹಾಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಿಂದಿ, ಇಂಗ್ಲಿಷ್‌ನಲ್ಲಿ ಮಾತನಾಡು ಎಂದು ಪಿಎಸ್‌ಐ ಕವಿತಾ ಅವರಿಗೆ ಆರೋಪಿ ಆದಿತ್ಯ ಏರಿದ ದನಿಯಲ್ಲಿ ಕೂಗಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಅನ್ಯಭಾಷಿಕರ ದಬ್ಬಾಳಿಕೆ ಹಾಗೂ ಉದ್ಧಟತನ ಹೆಚ್ಚಾಗಿದೆ. ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.