ಜಿ-ರಾಮ್‌ಜಿಯಿಂದ ದುರ್ಬಲರ ಹಕ್ಕಿಗೆ ಕುತ್ತು: ಪ್ರಧಾನಿಗೆ ಸಿದ್ದರಾಮಯ್ಯ ಪತ್ರ

Published : Dec 31, 2025, 05:36 AM IST
Siddaramaiah

ಸಾರಾಂಶ

ಮನರೇಗಾ ಯೋಜನೆ ಬದಲಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಿದ ಜಿ ರಾಮ್‌ ಜಿ ಕಾಯ್ದೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳವಳ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಪತ್ರ ಬರೆದಿದ್ದಾರೆ.

 ದ ಜಿ ರಾಮ್‌ ಜಿ ಕಾಯ್ದೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ

 ಮನರೇಗಾ ಯೋಜನೆ ಬದಲಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಿದ ಜಿ ರಾಮ್‌ ಜಿ ಕಾಯ್ದೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಿಂದಿನ ಯೋಜನೆಗೂ ಈಗಿನ ಯೋಜನೆಗೂ ಇರುವ ವ್ಯತ್ಯಾಸ, ಇದರಿಂದ ಗ್ರಾಮೀಣ ಭಾಗದ ಜನರಿಗೆ ಉಂಟಾಗುವ ಆರ್ಥಿಕ ನಷ್ಟ, ಅವರ ಜೀವನದ ಮೇಲೆ ಪರಿಣಾಮ, ರಾಜ್ಯದ ಮೇಲಿನ ಆರ್ಥಿಕ ಹೊರೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಪತ್ರ ಬರೆದಿದ್ದಾರೆ. ಜೊತೆಗೆ ಜಿ ರಾಮ್‌ ಜಿ ರದ್ದುಪಡಿಸಿ ಹಿಂದಿನ ಮನರೇಗಾ ಪುನರ್‌ಜಾರಿಗೆ ಒತ್ತಾಯಿಸಿದ್ದಾರೆ.

 ಜಿ-ರಾಮ್‌ಜಿಯಿಂದ ದುರ್ಬಲರ ಹಕ್ಕಿಗೆ ಕುತ್ತು 

ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್‌ ಅಜೀವಿಕ ಮಿಶನ್‌ (ಗ್ರಾಮೀಣ) (ವಿಬಿ-ಜಿ ರಾಮ್‌ ಜಿ) ಕಾಯ್ದೆ ಹಾಗೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಪರಿಣಾಮಕಾರಿ ರದ್ದತಿ ಕುರಿತು ತಮ್ಮ ಗಮನ ಸೆಳೆಯಲು ಬಯಸುತ್ತೇನೆ.

ಹೊಸ ಕಾನೂನಿನ ಅಪಾಯಗಳು ಉದ್ಯೋಗ ಖಾತ್ರಿಯ ಮೂಲ ಉದ್ದೇಶಕ್ಕೆ ಧಕ್ಕೆ ತರುತ್ತವೆ. ಮೂಲ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಜನರ ಉದ್ಯೋಗದ ಬೇಡಿಕೆ ಮತ್ತು ಹಕ್ಕು ಆಧಾರಿತವಾಗಿತ್ತು. ಹೊಸ ಕಾಯ್ದೆಯು ಉದ್ಯೋಗದ ದಿನಗಳನ್ನು 100 ರಿಂದ 125ಕ್ಕೆ ಹೆಚ್ಚಳ ಮಾಡಿದೆ. ಆದರೂ, ಯೋಜನೆ ಅನುಷ್ಠಾನದಲ್ಲಿ ಕೇಂದ್ರದ ನಿಗದಿತ ಅನುದಾನದ ಖಾತ್ರಿಯಿರುವುದಿಲ್ಲ. ಕೇಂದ್ರ ಸರ್ಕಾರದ ಹಣಕಾಸು ಹೊಣೆಗಾರಿಕೆಯನ್ನು ಪ್ರತಿ ರಾಜ್ಯದ ‘ಅಧಿಸೂಚಿತ’ ಪ್ರದೇಶಕ್ಕೆ ‘ಮಾನದಂಡ ಹಂಚಿಕೆ’ಗೆ ಸೀಮಿತಗೊಳಿಸಲಾಗಿದೆ. ಇದರಲ್ಲಿ ಕೇಂದ್ರವು 60% ಮಾತ್ರ ನೀಡುತ್ತದೆ (ಬಹುತೇಕ ರಾಜ್ಯಗಳಲ್ಲಿ). ಇದರಿಂದಾಗಿ, 125 ದಿನಗಳ ಕಾಯ್ದೆಬದ್ಧ ಭರವಸೆಗೆ ಬದ್ಧವಾಗಿರುವುದಿಲ್ಲ. ಬದಲಿಗೆ ಕೇಂದ್ರವು ನಿಗದಿ ಮಾಡುವ ಹಣಕಾಸು ಮಿತಿಗೆ ಒಳಪಟ್ಟಿರುತ್ತದೆ. ಇದರಿಂದ ಅನೇಕ ಗ್ರಾಪಂಗಳಲ್ಲಿ ನಿಜವಾದ ಬೇಡಿಕೆ ಇದ್ದರೂ ಹಣದ ಅಭಾವದಿಂದ ಯೋಜನೆ ಸದುಪಯೋಗ ಪಡೆಯಲಾಗದೆ ಹಿಂದುಳಿಯಬಹುದು.

ಇನ್ನು, ಹೊಸ ಕಾಯ್ದೆಯ ಪ್ರಕಾರ ಕೇಂದ್ರ ಸರ್ಕಾರವು ‘ವಸ್ತುನಿಷ್ಠ ನಿಯತಾಂಕಗಳ’ ಆಧಾರದ ಮೇಲೆ ರಾಜ್ಯವಾರು ಮಾನದಂಡ ಹಂಚಿಕೆ ನಿಗದಿ ಮಾಡುತ್ತದೆ. ಈ ನಿಯತಾಂಕಗಳು ಕಾಯ್ದೆಯಲ್ಲಿ ಸೇರಿರದೆ, ಯಾವುದೇ ಸಮಯದಲ್ಲಿ ಬದಲಾಯಿಸಬಹುದು.

ಕಾನೂನು ನಿಬಂಧನೆಗಳು ಇಲ್ಲ

ಇದಕ್ಕೆ ಕಾನೂನು ನಿಬಂಧನೆಗಳು ಇಲ್ಲ. ಹೀಗಾಗಿ ಇವುಗಳನ್ನು ಯಾವುದೇ ಸಮಯದಲ್ಲಿ ರಾಜ್ಯಗಳೊಂದಿಗೆ ಪೂರ್ವ ಸಮಾಲೋಚನೆ ಇಲ್ಲದೆ ಬದಲಿಸಬಹುದು. ಇದು ರಾಜ್ಯದ ವೈವಿಧ್ಯಮಯ ಬೇಡಿಕೆ ಈಡೇರಿಸಲು ಪೂರಕವಾಗಿಲ್ಲ. ಅದೇ ರಾಜ್ಯದ ಗ್ರಾಮೀಣ ಭಾಗದ ಅಗತ್ಯಗಳನ್ನೂ ಈಡೇರಿಸುವುದಿಲ್ಲ. ಇದು ಮೂಲ ಕಾಯ್ದೆಯಲ್ಲಿರುವ ಸಹಭಾಗಿತ್ವದ ವಿಧಾನಕ್ಕೆ (ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಮಿಕ ಬಜೆಟ್, ಗ್ರಾಮಗಳ ಬೇಡಿಕೆಗೆ ಅನುಗುಣವಾದ ಹಂಚಿಕೆ) ವಿರುದ್ಧವಾಗಿದೆ.

ಹೊಸ ಕಾಯ್ದೆಯಲ್ಲಿನ ಹಣಕಾಸು ಹಂಚಿಕೆಯೂ ಸಹ ಕಳವಳಕಾರಿಯಾಗಿದೆ. ಮೂಲ ಕಾಯ್ದೆಯ ಚೌಕಟ್ಟಿನಲ್ಲಿ ಹೆಚ್ಚಿನ ರಾಜ್ಯಗಳಲ್ಲಿ 90:10 (ಕೇಂದ್ರ-ರಾಜ್ಯ) ಹಂಚಿಕೆ ಇದೆ. ಹೊಸ ಕಾಯ್ದೆಯು ಇದನ್ನು 60:40 ಗೆ ಬದಲಾಯಿಸಿ, ಕಾನೂನುಬದ್ಧ ಭರವಸೆಯನ್ನು ಸಾಮಾನ್ಯ ಯೋಜನೆಯಾಗಿ ಮಾರ್ಪಡಿಸುತ್ತದೆ. ಇದು ರಾಜ್ಯ ಹಣಕಾಸಿನ ಮೇಲೆ ಹೆಚ್ಚುವರಿ ಹೊರೆ ಹೇರುತ್ತದೆ. ರಾಜ್ಯ ಸರ್ಕಾರಗಳೊಂದಿಗೆ ಅರ್ಥಪೂರ್ಣ ಸಮಾಲೋಚನೆ ಇಲ್ಲದೆ ಈ ಬದಲಾವಣೆ ಮಾಡಲಾಗಿದೆ.

ಮೀರಿ ಖರ್ಚು ಮಾಡಿದಲ್ಲಿ ರಾಜ್ಯ ಸರ್ಕಾರವೇ ಭರಿಸಬೇಕು

ಹೊಸ ಕಾಯ್ದೆಯು ರಾಜ್ಯವು ತನ್ನ ಮಾನದಂಡ ಹಂಚಿಕೆ ಮೀರಿ ಖರ್ಚು ಮಾಡಿದಲ್ಲಿ, ಆ ಖರ್ಚನ್ನು ಕೇಂದ್ರ ನಿಗದಿ ಮಾಡುವ ವಿಧಾನದ ಪ್ರಕಾರ ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಹೇಳುತ್ತದೆ. ಇದರಿಂದ ಕೇಂದ್ರ ನಿಗದಿ ಮಿತಿಗಿಂತ ಹೆಚ್ಚಿನ ಬೇಡಿಕೆಗಳ ಅನುಷ್ಠಾನಕ್ಕೆ ರಾಜ್ಯಗಳು ಶೇ.100ರಷ್ಟು ಹೊಣೆಗಾರಿಕೆ ಹೊರಬೇಕಾಗುತ್ತದೆ.

ಕಾಯ್ದೆಯು ರಾಜ್ಯಗಳು ಬಿತ್ತನೆ ಮತ್ತು ಬೆಳೆ ಕಟಾವಿನ ಅವಧಿಯ 60 ದಿನಗಳಲ್ಲಿ ವಿಬಿ-ಜಿ ರಾಮ್‌ ಜಿ ಅನುಷ್ಠಾನ ಮಾಡಬಾರದು. ಈ ಬಗ್ಗೆ ಮುಂಚಿತವಾಗಿ ಅಧಿಸೂಚಿಸಬೇಕು ಎಂದು ನಿರ್ದೇಶಿಸುತ್ತದೆ. ಈ ಅವಧಿಯಲ್ಲಿ ಕೃಷಿ ಚಟುವಟಿಕೆಗಳು ಹೆಚ್ಚಾಗಿರಬಹುದಾದರೂ, ಇದು ಕೃಷಿ ಕಾರ್ಮಿಕರ, ಆದಿವಾಸಿ, ದುರ್ಬಲ ಸಮುದಾಯಗಳ ಮಜೂರಿ ಕೂಲಿಯ ಹಕ್ಕು ಕಸಿಯುವ ಸಾಧ್ಯತೆಯಿದೆ. ಇದರಿಂದ ಜೀವನೋಪಾಯಕ್ಕಾಗಿ ಒತ್ತಡದಿಂದ ಕಡಿಮೆ ಕೂಲಿಗೆ ಕೆಲಸ ಮಾಡುವ, ಆ ಮೂಲಕ ನಗರಗಳಿಗೆ ವಲಸೆ ಹೋಗುವ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ.

ಹೊಸ ಕಾಯ್ದೆ ಮೂಲ ಉದ್ಯೋಗ ಖಾತ್ರಿ ಯೋಜನೆಯ ಆಶಯಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಹೊಸ ಕಾಯ್ದೆ ‘ಕೆಲಸದ ಹಕ್ಕು’ ನಿಂದ ‘ಅನುಮತಿ ಇದ್ದರೆ ಮಾತ್ರ ಕೆಲಸ’ ಕ್ಕೆ, ‘ಗ್ರಾಮೀಣ ಪ್ರದೇಶಗಳಾದ್ಯಂತ ಕೆಲಸ’ದಿಂದ ‘ಅನುಮತಿ ಇರುವೆಡೆ ಮಾತ್ರ ಕೆಲಸ’ ಕ್ಕೆ, ಮತ್ತು ‘ವರ್ಷದ ಪೂರ್ತಿ ಕೆಲಸ’ದಿಂದ ‘ಕೃಷಿ ಚಟುವಟಿಕೆ ಋತುವಿನಲ್ಲಿ ಕೆಲಸವಿಲ್ಲ’ ಎಂಬ ನಿಯಮಾವಳಿ ಸೃಷ್ಟಿಸಿದೆ. ಇದು ಗ್ರಾಮೀಣ ಭಾಗದಲ್ಲಿ ಸಂಪನ್ಮೂಲ ಸೃಷ್ಟಿಯ ಆಶಯವನ್ನು ಗುತ್ತಿಗೆದಾರರ ಕೇಂದ್ರಿತ ಮಾದರಿಗೆ ದಾರಿ ಮಾಡಿಕೊಡುವ ಅಪಾಯವಿದೆ.

ಹೊಸ ಕಾಯ್ದೆಯಲ್ಲಿ ಹೆಚ್ಚಿನ ತಾಂತ್ರಿಕ ಹಸ್ತಕ್ಷೇಪಕ್ಕೆ ಅವಕಾಶವಿದ್ದು, ಇದರಿಂದ ಬಡತನ ರೇಖೆಗಿಂತ ಕೆಳಗಿರುವ ಮತ್ತು ಡಿಜಿಟಲ್ ಸೌಲಭ್ಯವಿಲ್ಲದ ಗ್ರಾಮೀಣ ನಾಗರಿಕರನ್ನು, ವಿಶೇಷವಾಗಿ ದಲಿತ ಮತ್ತು ಆದಿವಾಸಿ ಸಮುದಾಯಗಳನ್ನು ಯೋಜನೆಯಿಂದ ದೂರ ಮಾಡಬಹುದು.

ವಿಬಿ-ಜಿ ರಾಮ್ ಜಿ ಕಾಯ್ದೆಯ ಜಾರಿ ಸಂವಿಧಾನದ 258 ಮತ್ತು 280ನೇ ವಿಧಿಗಳನ್ನು ಉಲ್ಲಂಘಿಸುತ್ತದೆ. ಸಂವಿಧಾನದ ಈ ವಿಧಿಗಳು ಕೇಂದ್ರ ಪ್ರಾಯೋಜಿತ ಯೋಜನೆಗಳಡಿ ಹಣಕಾಸು ಚೌಕಟ್ಟು ವಿಧಿಸುವ ಮುನ್ನ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ, ಹಣಕಾಸು ಒಕ್ಕೂಟ, ಮತ್ತು ಸ್ಥಳೀಯ ಆಡಳಿತ ಬಲಗೊಳಿಸುವಿಕೆಗೆ ಮಹತ್ವ ನೀಡುತ್ತದೆ. ಆದರೆ ಕೇಂದ್ರ ಸರ್ಕಾರದ ಧೋರಣೆ ಸಹಕಾರಿ ಒಕ್ಕೂಟದ ಅಡಿಪಾಯಕ್ಕೆ ಅಪಾಯಕಾರಿ.

ಉದ್ಯೋಗ ಭರವಸೆ ಕಾನೂನು ಕೇವಲ ಒಂದು ಕಲ್ಯಾಣ ಕ್ರಮವಲ್ಲ; ಇದೊಂದು ಐತಿಹಾಸಿಕ, ವಿಶ್ವಮಾನ್ಯತೆ ಪಡೆದ, ಹಕ್ಕು-ಆಧಾರಿತ ಶಾಸನ. ಇದು ಗ್ರಾಮ ಸ್ವರಾಜ್ ಮತ್ತು ಅಂತ್ಯೋದಯದ ಪ್ರತೀಕವಾದ ಮಹಾತ್ಮಾ ಗಾಂಧೀಜಿಯ ಹೆಸರನ್ನು ಹೊಂದಿರುವುದು ಅರ್ಥಪೂರ್ಣವಾಗಿದೆ. ಆದರೆ ಪ್ರಸ್ತುತ ಕಾನೂನಿನಲ್ಲಿ ಮಹಾತ್ಮಾ ಗಾಂಧಿ ಅವರ ಹೆಸರನ್ನು ತೆಗೆದುಹಾಕಿರುವುದು ದುರದೃಷ್ಟಕರ ಸಂದೇಶ ನೀಡುತ್ತಿದ್ದು, ಹೊಸ ಕಾಯ್ದೆಯ ನೈತಿಕ ಅಧಿಕಾರವನ್ನು ದುರ್ಬಲಗೊಳಿಸಿದೆ.

ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ವಿಬಿ-ಜಿ ರಾಮ್ ಜಿ ಕಾಯ್ದೆಯ ಅನುಷ್ಠಾನವನ್ನು ತಡೆಹಿಡಿಯಲು, ಜೀವನೋಪಾಯದ ಹಕ್ಕನ್ನು ಬಲಪಡಿಸಲು ಮತ್ತು ಸಂವಿಧಾನಬದ್ಧವಾಗಿ ರಾಜ್ಯ ಸರ್ಕಾರಗಳೊಂದಿಗಿನ ಸಮಾಲೋಚನೆಗಳನ್ನು ನಡೆಸುವ ನಿಟ್ಟಿನಲ್ಲಿ ತಾವು ವೈಯಕ್ತಿಕವಾಗಿ ಮುಂದಾಗಬೇಕು.

ಹೃತ್ಪೂರ್ವಕ ವಂದನೆಗಳೊಂದಿಗೆ,

- ಸಿದ್ದರಾಮಯ್ಯ, ಮುಖ್ಯಮಂತ್ರಿ, ಕರ್ನಾಟಕ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪಾಕ್‌ ಜತೆ ರಾಜ್ಯ ಕಾಂಗ್ರೆಸ್‌ ಕೈಜೋಡಿಸಿದೆಯೇ? : ಬಿಜೆಪಿ
ಕನ್ಯಾಕುಮಾರಿಗೆ ಸುರೇಶ್‌ ಕುಮಾರ! ಸೈ‘ಕ್ಲಿಂಗ್‌’!