‘ಪಹಲ್ಗಾಂ’ ಹೋಲಿಕೆಗೆ ವಿಷಾದ ಬದಲು ತಾನು ಮಾಡಿದ್ದೇ ಸರಿ ಎಂದ ಗಾಯಕ ಸೋನು

Published : May 04, 2025, 11:46 AM IST
Sonu Nigam Disappointed Over Padma Awards Snub to Alka Yagnik and Shreya Ghoshal

ಸಾರಾಂಶ

ಕಾರ್ಯಕ್ರಮದಲ್ಲಿ ಆ ನಾಲ್ಕು ಮಂದಿ ಗೂಂಡಾಗಿರಿ ಮಾಡಿದ್ದಕ್ಕೆ ನಾನು ತಿರುಗೇಟು ನೀಡಬೇಕಾಯಿತು’ ಎಂದು ಗಾಯಕ ಸೋನು ನಿಗಮ್ ವೀಡಿಯೋ ಮೂಲಕ ತಿಳಿಸಿದ್ದಾರೆ.

 ಬೆಂಗಳೂರು : ಕನ್ನಡ ಹಾಡು ಬೇಕು ಎಂದು ಪ್ರೀತಿಯಲ್ಲಿ ಕೇಳುವುದಕ್ಕೂ ಕನ್ನಡ ಕನ್ನಡ ಎಂದು ಧಮ್ಕಿ ಹಾಡುವುದಕ್ಕೂ ವ್ಯತ್ಯಾಸ ಇದೆ. ಕನ್ನಡಿಗರು ಬಹಳ ಒಳ್ಳೆಯವರು. ನನಗೆ ಅವರ ಬಗ್ಗೆ ಗೌರವ, ಪ್ರೀತಿ ಇದೆ. ಆದರೆ ಕಾರ್ಯಕ್ರಮದಲ್ಲಿ ಆ ನಾಲ್ಕು ಮಂದಿ ಗೂಂಡಾಗಿರಿ ಮಾಡಿದ್ದಕ್ಕೆ ನಾನು ತಿರುಗೇಟು ನೀಡಬೇಕಾಯಿತು’ ಎಂದು ಗಾಯಕ ಸೋನು ನಿಗಮ್ ವೀಡಿಯೋ ಮೂಲಕ ತಿಳಿಸಿದ್ದಾರೆ.

ತೀವ್ರ ವಿವಾದಕ್ಕೆ ಕಾರಣವಾಗಿದ್ದ ತಮ್ಮ ''ಪಹಲ್ಗಾಂ'' ಹೇಳಿಕೆ ಕುರಿತು ವಿಷಾದ ಕೋರದೆ, ತಾನು ಮಾಡಿದ್ದೇ ಸರಿ ಎಂಬಂತೆ ಉದ್ಧಟತನ ಪ್ರದರ್ಶಿಸಿರುವ ಸೋನು ನಿಗಮ್‌ ಈ ನಡೆಗೆ ಇದೀಗ ಮತ್ತೆ ಆಕ್ರೋಶ ವ್ಯಕ್ತವಾಗಿದೆ.

ಈಗಾಗಲೇ ಸೋನು ನಿಗಮ್‌ ಕುರಿತು ಭಾರಿ ವಿರೋಧ ವ್ಯಕ್ತವಾಗಿದ್ದು, ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್‌ ಮಾಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಅಲ್ಲಿಯವರೆಗೂ ಈ ಕುರಿತು ಮೌನವಾಗಿದ್ದ ಸೋನು ನಿಗಮ್ ಬ್ಯಾನ್‌ ಕೂಗು ಬಲವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣ ಮೂಲಕ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

‘ಆ ಕಾರ್ಯಕ್ರಮದಲ್ಲಿ ಆರಂಭದಿಂದಲೇ ಆ ನಾಲ್ವರು ಟೀನೇಜ್‌ ಹುಡುಗರು ಗುರಾಯಿಸುವಂತೆ ನೋಡುತ್ತಿದ್ದರು. ವೇದಿಕೆ ಮುಂಭಾಗಕ್ಕೆ ಬಂದು ಕನ್ನಡ ಕನ್ನಡ... ಎಂದು ಕಿರುಚುತ್ತಾ ಧಮ್ಕಿ ಹಾಕುತ್ತಿದ್ದರು. ಇಂಥವರನ್ನು ಹತೋಟಿಗೆ ತರದಿದ್ದರೆ ಕಾರ್ಯಕ್ರಮ ಮುಂದುವರಿಸುವುದು ಕಷ್ಟವಾಗುತ್ತದೆ. ಹೀಗಾಗಿ ಅವರನ್ನು ತಡೆಯಲು ಆ ರೀತಿ ಮಾತನಾಡಬೇಕಾಯಿತು. ಕನ್ನಡಿಗರನ್ನು ಕಂಡರೆ ನನಗೆ ಬಹಳ ಪ್ರೀತಿ ಇದೆ’ ಎಂದು ಸೋನು ನಿಗಮ್‌ ಹೇಳಿದ್ದಾರೆ.

‘ಯಾವುದೇ ರಾಜ್ಯಕ್ಕೆ ಹೋದರೂ ಈ ರೀತಿಯ ನಾಲ್ಕೈದು ಕೆಟ್ಟವರು ಇರುತ್ತಾರೆ. ಪ್ರಪಂಚವೇ ಪ್ರೀತಿಯಿಂದ ನಡೆಸಿಕೊಳ್ಳುವಾಗ, ನೀವು ಹಾಡಬೇಕು ಎಂದು ಯಾರೊಬ್ಬರೂ ಬೆದರಿಕೆ ಹಾಕಬಾರದು. ಎಲ್ಲಾ ಕನ್ನಡಿಗರೂ ಹೀಗೆ ಎಂದುಕೊಳ್ಳಬೇಡಿ. ಕನ್ನಡಿಗರು ಬಹಳ ಒಳ್ಳೆಯವರು. ನಾನು ಯಾವಾಗಲೂ ಕನ್ನಡ ಹಾಡು ಹಾಡಲು ರೆಡಿ ಆಗಿ ಬಂದಿರುತ್ತೇನೆ. ಆದರೆ, ಈ ರೀತಿ ಗೂಂಡಾಗಿರಿ ಮಾಡುವವರು ಯಾರೇ ಆದರೂ ಅಲ್ಲೇ ತಡೆಯಬೇಕು’ ಎಂದೂ ಸೋನು ನಿಗಮ್ ಹೇಳಿದ್ದಾರೆ.

ಸೋನು ನಿಗಮ್‌ ವಿಡಿಯೋ ಸ್ಪಷ್ಟನೆಗೆ ಮತ್ತೆ ವಿರೋಧ ವ್ಯಕ್ತವಾಗಿದ್ದು, ಅವರು ದುರಹಂಕಾರದಿಂದ ಮಾತನಾಡಿದ್ದಾರೆ ಎಂದು ಬಹಳಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್‌ ಅವರು ಕನ್ನಡ ಹಾಡು ಹೇಳಿ ಎಂದು ಕೆಲವರು ಪಟ್ಟುಹಿಡಿದಿದ್ದರಿಂದ ಸಿಟ್ಟಿಗೆದ್ದು ತೀವ್ರ ಕಾರ್ಯಕ್ರಮದ ನಡುವೆಯೇ ಅಸಮಾಧಾನ ಹೊರಹಾಕಿದ್ದರು. ಈ ರೀತಿಯ ಪಟ್ಟು ಸರಿಯಲ್ಲ ಎಂದು ಹೇಳುವ ಭರದಲ್ಲಿ ಕನ್ನಡಾಭಿಮಾನವನ್ನು ಪಹಲ್ಗಾಂ ದಾಳಿಗೆ ಹೋಲಿಕೆ ಮಾಡಿದ್ದರು. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಸೋನು ನಿಗಮ್‌ ವಿರುದ್ಧ ಕೇಸ್‌ ಕೂಡ ದಾಖಲಾಗಿದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ