ಯತ್ನಾಳ್‌ ಸವಾಲು ಒಪ್ಪಿ ಶಿವಾನಂದ ರಾಜೀನಾಮೆ

Published : May 03, 2025, 12:21 PM IST
Shivananda patil

ಸಾರಾಂಶ

ಯತ್ನಾಳ್‌ ಅವರ ಸವಾಲು ಸ್ವೀಕರಿಸಿ ಸಚಿವ ಶಿವಾನಂದ ಪಾಟೀಲ್‌ ರಾಜೀನಾಮೆ ನೀಡಿದ್ದು, ಅದನ್ನು ಸ್ಪೀಕರ್‌ ಯು.ಟಿ. ಖಾದರ್‌ ತಿರಸ್ಕರಿಸಿದ ಪ್ರಹಸನ ಶುಕ್ರವಾರ ನಡೆಯಿತು.

ಬೆಂಗಳೂರು : ತಮ್ಮ ವಿರುದ್ಧ ಚುನಾವಣೆಗೆ ಸ್ಪರ್ಧಿಸಿ ಎಂಬ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಸವಾಲು ಸ್ವೀಕರಿಸಿ ಸಚಿವ ಶಿವಾನಂದ ಪಾಟೀಲ್‌ ರಾಜೀನಾಮೆ ನೀಡಿದ್ದು, ಅದನ್ನು ಸ್ಪೀಕರ್‌ ಯು.ಟಿ. ಖಾದರ್‌ ತಿರಸ್ಕರಿಸಿದ ಪ್ರಹಸನ ಶುಕ್ರವಾರ ನಡೆಯಿತು.

ಯತ್ನಾಳ್‌ ಸವಾಲಿಗೆ ಪ್ರತಿಸವಾಲು ಎಂಬಂತೆ ರಾಜೀನಾಮೆಗೆ ಮುಂದಾದ ಶಿವಾನಂದ ಪಾಟೀಲ್‌ ಷರತ್ತಿನೊಂದಿಗೆ ರಾಜೀನಾಮೆ ಪತ್ರವನ್ನು ಸ್ಪೀಕರ್ ಅವರಿಗೆ ನೀಡಿದ್ದರು. ತಮಗೆ ಸವಾಲು ಹಾಕಿರುವ ಯತ್ನಾಳ್‌ ಅವರು ರಾಜೀನಾಮೆ ನೀಡಿದರೆ ತಮ್ಮ ಪತ್ರವನ್ನು ಅಂಗೀಕರಿಸಿ ಎಂಬುದೇ ಈ ಷರತ್ತಾಗಿತ್ತು. ಆದರೆ, ಯತ್ನಾಳ್‌ ರಾಜೀನಾಮೆ ನೀಡದ ಕಾರಣ ಹಾಗೂ ಷರತ್ತುಬದ್ಧ ರಾಜೀನಾಮೆ ಹಿನ್ನೆಲೆಯಲ್ಲಿ ಅಂಗೀಕರಿಸಲು ಸಾಧ್ಯವಿಲ್ಲ ಸ್ಪೀಕರ್‌ ಅವರು ಪಾಟೀಲ್ ಅವರ ರಾಜೀನಾಮೆಯನ್ನು ತಿರಸ್ಕರಿಸಿದರು.

ಶುಕ್ರವಾರ ಮಧ್ಯಾಹ್ನ ಇದ್ದಕ್ಕಿದ್ದಂತೆ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರನ್ನು ಭೇಟಿ ಮಾಡಿದ ಶಿವಾನಂದ ಪಾಟೀಲ್‌ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಪತ್ರದಲ್ಲಿ ‘ವಿಜಯಪುರ ಶಾಸಕರಾದ ಬಸನಗೌಡ ಆರ್. ಪಾಟೀಲ್ ಯತ್ನಾಳ್ ಅವರು ತಮ್ಮ ವಿಜಯಪುರ ಮತ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ನನ್ನ ವಿರುದ್ಧ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸವಾಲು ಹಾಕಿದ್ದಾರೆ. ನಾನು ಅವರ ಸವಾಲನ್ನು ಸ್ವೀಕರಿಸಿದ್ದು, ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಯತ್ನಾಳ್‌ ಕೂಡ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಅವರ ರಾಜೀನಾಮೆ ಅಂಗೀಕಾರವಾದರೆ ಮಾತ್ರ ನನ್ನ ರಾಜೀನಾಮೆಯನ್ನೂ ಅಂಗೀಕರಿಸುವಂತೆ ತಮ್ಮಲ್ಲಿ ಕೋರುತ್ತೇನೆ’ ಎಂದು ಶಿವಾನಂದ ಪಾಟೀಲ್‌ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದರು.

ನನ್ನ ಕುಟುಂಬ ನಿಂದಿಸಿದ್ದಾರೆ- ಪಾಟೀಲ್‌:

ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಶಿವಾನಂದ ಪಾಟೀಲ್‌ ಅವರು, ಬಸನಗೌಡ ಪಾಟೀಲ್‌ ಯತ್ನಾಳ್ ಅವರು ವಿನಾಕಾರಣ ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ನನ್ನ ತಂದೆ ಹಾಗೂ ಪೂರ್ವಜರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನನ್ನ ಕುಟುಂಬದ ತೇಜೋವಧೆ ಮಾಡಿ ನಿಮ್ಮ ಅಪ್ಪನಿಗೆ ಹುಟ್ಟಿದ್ದರೆ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದ್ದಾರೆ. ಹೀಗಾಗಿ ನಾನು ರಾಜೀನಾಮೆ ನೀಡಿ ಅವರಿಗೆ ಉಪ ಚುನಾವಣೆಗೆ ಸವಾಲು ಹಾಕುತ್ತಿದ್ದೇನೆ ಎಂದು ಹೇಳಿದರು.

ಇತ್ತೀಚೆಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮೊಹ್ಮದ್ ಪೈಗಂಬರ್ ಬಗ್ಗೆ ಮಾತನಾಡಿದ್ದರು. ಇದನ್ನು ಖಂಡಿಸಿ ಮುಸ್ಲಿಮರು ಏರ್ಪಡಿಸಿದ್ದ ಸಭೆಯಲ್ಲಿ ನಾನು ಭಾಗವಹಿಸಿ ಯತ್ನಾಳ್ ಹೇಳಿಕೆ ಖಂಡನೆ ಮಾಡಿದ್ದೆ‌. ಯತ್ನಾಳ್‌ ತಂದೆ ಹಾಗೂ ನನ್ನ ತಂದೆ ವ್ಯಾಪಾರದಲ್ಲಿ ಭಾಗೀದಾರರಾಗಿದ್ದರು. ವಿನಾಕಾರಣ ನನ್ನ ಕುಟುಂಬದ ಬಗ್ಗೆ ಅವರು ಮಾಡಿರುವ ನಿಂದನೆಗೆ ನೊಂದು ಈ ತೀರ್ಮಾನ ಮಾಡಿದ್ದೇನೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿಲ್ಲ ಎಂದು ತಿಳಿಸಿದರು.

ಷರತ್ತುಬದ್ಧ ರಾಜೀನಾಮೆ ಅಂಗೀಕಾರವಿಲ್ಲ: ಖಾದರ್

ಶಿವಾನಂದ ಪಾಟೀಲ್‌ ಅವರು ಷರತ್ತುಬದ್ಧ ರಾಜೀನಾಮೆ ನೀಡಿದ್ದರು. ವಿಧಾನಸಭೆ ನಿಯಮಗಳ ಪ್ರಕಾರ ಷರತ್ತುಬದ್ಧ ರಾಜೀನಾಮೆ ಅಂಗೀಕರಿಸಲು ಸಾಧ್ಯವಿಲ್ಲ. ಈ ವಿಷಯವನ್ನು ಶಿವಾನಂದ ಪಾಟೀಲ್‌ ಅವರಿಗೂ ಮನವರಿಕೆ ಮಾಡಿಕೊಡಲಾಗಿದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಬಿಜೆಪಿ- ದಳ ಶಾಸಕರಿಗೆ ಇಂದು ಚೌಹಾಣ್‌ ಜಿ ರಾಮ್‌ ಜಿ ಪಾಠ!
ರಾಜ್ಯ ಸರ್ಕಾರಿ ನೇಮಕಾತಿ ವಯೋಮಿತಿ 5 ವರ್ಷಗಳ ಕಾಲ ಸಡಿಲ?