ಭೈರಪ್ಪ ಸಾಧನೆ ಅನನ್ಯ - 100 ವರ್ಷವಾದರೂ ಎಸ್‌ಎಲ್‌ಬಿ ಸಾಹಿತ್ಯ ಪ್ರಸ್ತುತ : ಮಾಜಿ ಸಿಎಂ ಬೊಮ್ಮಾಯಿ

Published : Jun 15, 2025, 06:37 AM IST
Dr SL Bhyrappa

ಸಾರಾಂಶ

ಯಾವುದೇ ಸಾಧಕರ ಸಾವು ಅವರ ಅಂತ್ಯವಲ್ಲ. ಅವರ ಸಾವಿನಂತರವೂ ಅವರ ಸಾಧನೆ ಅವರನ್ನು ಜೀವಂತವಾಗಿರಿಸುತ್ತದೆ. ಅದೇ ರೀತಿಯ ಸಾಧಕ ಎಸ್‌.ಎಲ್‌. ಭೈರಪ್ಪ ಅವರು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು: ಯಾವುದೇ ಸಾಧಕರ ಸಾವು ಅವರ ಅಂತ್ಯವಲ್ಲ. ಅವರ ಸಾವಿನಂತರವೂ ಅವರ ಸಾಧನೆ ಅವರನ್ನು ಜೀವಂತವಾಗಿರಿಸುತ್ತದೆ. ಅದೇ ರೀತಿಯ ಸಾಧಕ ಎಸ್‌.ಎಲ್‌. ಭೈರಪ್ಪ ಅವರು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಬಿಎಂಎಸ್‌ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಎಸ್‌.ಎಲ್‌.ಭೈರಪ್ಪ ಪ್ರತಿಷ್ಠಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಇನ್ನು ನೂರಾರು ವರ್ಷಗಳಾದರೂ ಭೈರಪ್ಪ ಸಾಹಿತ್ಯ ಕೃಷಿ ಜೀವಂತವಾಗಿದ್ದು, ಆಯಾ ಕಾಲಘಟ್ಟಕ್ಕೆ ಪ್ರಸ್ತುತವಾಗಿರುತ್ತದೆ. ನಮ್ಮ ನಡುವಿನ ಹಲವು ಸಾಹಿತಿಗಳ ಬರವಣಿಗೆ ಮತ್ತು ಅವರ ಬದುಕು ವಿಭಿನ್ನವಾಗಿರುತ್ತದೆ. ಆದರೆ, ಭೈರಪ್ಪ ಅವರ ಜೀವನ ಎರಡೂ ಒಂದೇ ರೀತಿಯಿದೆ. ತಾವು ಬದುಕುವಂತೆಯೇ ಸಾಹಿತ್ಯ ರಚಿಸುವುದು ದೊಡ್ಡ ಸಾಧನೆ. ಹೀಗಾಗಿ ಭೈರಪ್ಪ ಅವರ ಬದುಕು ಮತ್ತು ಸಾಹಿತ್ಯದ ಬಗ್ಗೆ ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ. ಸ್ವಾಮಿ ವಿವೇಕಾನಂದ ಅವರ ಲೈಫ್‌ ಆಫ್ಟರ್‌ ಡೆತ್‌ ಪುಸ್ತಕದಲ್ಲಿ ಸಾಧಕರಿಗೆ ಸಾವಿಲ್ಲ, ಸಾವಿನ ನಂತರವೂ ಅವರು ಬದುಕುತ್ತಾರೆ ಎಂದು ತಿಳಿಸಿದ್ದಾರೆ. ಅಂತಹ ಸಾಧಕರ ಸಾಲಿನಲ್ಲಿ ಎಸ್‌.ಎಲ್‌. ಭೈರಪ್ಪ ಅವರು ಸೇರುತ್ತಾರೆ ಎಂದರು.

ಭೈರಪ್ಪ ಜೀವನ ಸಿದ್ದು ಬಜೆಟ್‌ ಇದ್ದ ಹಾಗೆ:

ಎಸ್‌.ಎಲ್‌. ಭೈರಪ್ಪ ಅವರ ಆರ್ಥಿಕ ವ್ಯವಹಾರ ಸಿದ್ದರಾಮಯ್ಯ ಅವರ ಬಜೆಟ್‌ ರೀತಿಯಿದೆ. ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಲಕ್ಷಾಂತರ ಕೋಟಿ ರು. ತೆರಿಗೆ ವಸೂಲಿಯಾಗುತ್ತಿದೆ ಎನ್ನುತ್ತಾರೆ. ಕೊನೆಗೆ ಸಾಲ ಮಾಡಿ, ಕೊರತೆ ಬಜೆಟ್‌ ಮಂಡಿಸುತ್ತಾರೆ. ಅದೇ ರೀತಿ ಭೈರಪ್ಪ ಅವರಿಗೆ ಅವರ ಪುಸ್ತಕದಿಂದ ದೇಶದಲ್ಲಿಯೇ ಅತಿ ಹೆಚ್ಚು ರಾಯಲ್ಟಿ ಬರುತ್ತದೆ. ಆದರೆ, ಅದೆಲ್ಲವನ್ನೂ ಸಮಾಜ ಸೇವೆಗೆ ಬಳಸಿ ಕೊನೆಗೆ ತಮ್ಮ ಲೆಕ್ಕಪತ್ರವನ್ನು ಸರಿದೂಗಿಸುತ್ತಾರೆ ಎಂದು ಬೊಮ್ಮಾಯಿ ಹೇಳಿದರು.

ಭೈರಪ್ಪ ಅವರ ಕೃತಿಗಳಲ್ಲಿ ಮೌಲ್ಯಮೀಮಾಂಸೆ ವಿಷಯದ ಕುರಿತು ಮಾತನಾಡಿದ ಶತಾವಧಾನಿ ಅವರು, ಡಾ.ರಾ.ಗಣೇಶ್‌, ಕುವೆಂಪು, ದ.ರಾ.ಬೇಂದ್ರೆ, ಎಸ್‌.ಎಲ್‌.ಭೈರಪ್ಪ ಸೇರಿ ಹಲವು ಸಾಹಿತಿಗಳ ಸಾಹಿತ್ಯ ಕೃಷಿಯು ಕನ್ನಡವನ್ನು ಗಟ್ಟಿಯಾಗಿಸುತ್ತಿದೆ. ಕನ್ನಡವು ಗಟ್ಟಿಯಾಗಿದ್ದರೆ ಕನ್ನಡ ನಾಡು ಕೂಡ ಗಟ್ಟಿಯಾಗಿರುತ್ತದೆ. ಭೈರಪ್ಪ ಅವರು ತಮ್ಮ ಸಾಹಿತ್ಯದ ಮೂಲಕ ಕನ್ನಡದ ಗಟ್ಟಿತನವನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಹಿರಿಯ ಸಾಹಿತಿ ಡಾ. ಎಸ್. ಎಲ್. ಭೈರಪ್ಪ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌, ಎಸ್‌.ಎಲ್‌. ಭೈರಪ್ಪ ಪ್ರತಿಷ್ಠಾನದ ಅಧ್ಯಕ್ಷ ಸಾಹಿತ್ಯ ಭಂಡಾರ ಪ್ರಕಾಶನದ ಅರುಣ್‌, ಕಾರ್ಯದರ್ಶಿ ಸಾಹಿತಿ ಸಹನಾ, ಖಜಾಂಚಿ ಕೃಷ್ಣ ಪ್ರಸಾದ್‌ ಇತರರಿದ್ದರು.

ತಮ್ಮ ಜೀವನದಲ್ಲಿ ಸಂಪಾದಿಸಿ ಹಣವನ್ನು ಸಮಾಜ ಸೇವೆಗೆ ಬಳಸಬೇಕು ಎಂಬ ಭೈರಪ್ಪ ಅವರ ಕನಸು ನನಸಾಗಿಸಲು ಎಸ್‌.ಎಲ್‌.ಭೈರಪ್ಪ ಪ್ರತಿಷ್ಠಾಪನ ಸ್ಥಾಪಿಸಲಾಗಿದೆ. ಪ್ರತಿಷ್ಠಾಪನದ ಮೂಲಕ ಅವರ ಉಳಿತಾಯದ ಹಣವನ್ನು ಸಮಾಜ ಸೇವೆಗೆ ಬಳಸಲು ಸೂಚಿಸಿದ್ದಾರೆ. ಸಮಾಜ ಸೇವೆ, ವಿದ್ಯಾ ಸೇವೆ, ವೈದ್ಯಕೀಯ ನೆರವು ನೀಡುವುದು ಸೇರಿದಂತೆ ಮತ್ತಿತರ ಕಾರ್ಯಗಳನ್ನು ಪ್ರತಿಷ್ಠಾನದ ಮೂಲಕ ಮಾಡಲಾಗುತ್ತದೆ.

- ವಿಶ್ವೇಶ್ವರ ಭಟ್‌, ಹಿರಿಯ ಪತ್ರಕರ್ತ, ಎಸ್‌.ಎಲ್‌. ಭೈರಪ್ಪ ಪ್ರತಿಷ್ಠಾಪನದ ಟ್ರಸ್ಟಿ

ಭೈರಪ್ಪ ಅವರು ಯಾವತ್ತೂ ಯಾವುದೇ ಪ್ರಶಸ್ತಿಯ ಬಗ್ಗೆಯೂ ವ್ಯಾಮೋಹ ಹೊಂದಿದವರಲ್ಲ

ನಮ್ಮ ನಡುವಿನ ಮಹಾನ್‌ ವ್ಯಕ್ತಿಯೊಬ್ಬರು ನೋಬೆಲ್‌ ಪ್ರಶಸ್ತಿಗೆ ಲಾಬಿ ಮಾಡಿದ ಉದಾಹರಣೆಯಿದೆ. ಆದರೆ, ಎಸ್‌.ಎಲ್‌. ಭೈರಪ್ಪ ಅವರು ಯಾವತ್ತೂ ಯಾವುದೇ ಪ್ರಶಸ್ತಿಯ ಬಗ್ಗೆಯೂ ವ್ಯಾಮೋಹ ಹೊಂದಿದವರಲ್ಲ. ಸಮಾಜದ ಆಗುಹೋಗುಗಳನ್ನಿಟ್ಟುಕೊಂಡು, ಪೌರಾಣಿಕ, ಆಧೂನಿಕ ವಿಷಯಗಳನ್ನೊಳಗೊಂಡ ಕಾಂದಬರಿಗಳನ್ನು ಬರೆದಿದ್ದಾರೆ. ಅವರು ಯಾವತ್ತೂ ತಮ್ಮತನವನ್ನು ಬಿಟ್ಟುಕೊಟ್ಟಿಲ್ಲ ಎಂದು ಬೊಮ್ಮಾಯಿ ಹೇಳಿದರು.

ದೇಶ ಏನು ಮಾಡಿದೆ ಎನ್ನುವವರು ದೇಶ ಬಿಟ್ಟು ಹೋಗಲಿ: ಗಣೇಶ್‌

ಕೆಲವರು ತಮ್ಮ ತಂದೆ-ತಾಯಿಗೆ ತಮ್ಮನ್ನು ಹುಟ್ಟಿಸಿದ್ದು ಏಕೆ ಎನ್ನುತ್ತಾರೆ. ಅಂತಹವರು ತಮ್ಮ ಹುಟ್ಟನ್ನು ತ್ಯಜಿಸಿ ಸಾವನ್ನು ಆರಿಸಿಕೊಳ್ಳಬೇಕು. ಯಾರು ಪ್ರಶ್ನೆ ಮಾಡುತ್ತಾರೋ ಅದರ ಪರಿಣಾಮವನ್ನು ಸ್ವೀಕರಿಸಲು ಸಿದ್ಧರಾಗಿರಬೇಕು. ಅದೇ ರೀತಿ ದೇಶ ಏನು ಮಾಡಿದೆ ಎಂದು ಪ್ರಶ್ನಿಸುವವರು, ದೇಶವನ್ನು ಬಿಟ್ಟು ಹೋಗುವ ಕೆಲಸ ಮಾಡಬೇಕು. ಎಲ್ಲರೂ ತಮ್ಮ ಹುಟ್ಟಿನ ಬಗ್ಗೆ ಚಿಂತಿಸುವುದಕ್ಕಿಂತ ತಾವು ಪಡೆದ ಸಂಸ್ಕಾರ, ಮೌಲ್ಯಗಳ ಬಗ್ಗೆ ಯೋಚಿಸಬೇಕು, ಅಳವಡಿಸಿಕೊಳ್ಳಬೇಕು ಎಂದು ಶತಾವಧಾನಿ ಗಣೇಶ್‌ ತಿಳಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''