ಎಲ್ಲ ಸಂಪರ್ಕಕ್ಕೆ ಸ್ಮಾರ್ಟ್‌ ಮೀಟರ್‌ ಕಡ್ಡಾಯ? ಇಂಧನ ಇಲಾಖೆ

Published : Jun 10, 2025, 09:52 AM IST
smart meter

ಸಾರಾಂಶ

ರಾಜ್ಯದಲ್ಲಿರುವ ಎಲ್ಲಾ ವಿದ್ಯುತ್‌ ಸಂಪರ್ಕಗಳಿಗೂ ಕಡ್ಡಾಯವಾಗಿ ಸ್ಮಾರ್ಟ್‌ ಮೀಟರ್‌ ಅಳವಡಿಸಲು ಇಂಧನ ಇಲಾಖೆ ಮುಂದಾಗಿದೆ.

 ಬೆಂಗಳೂರು : ರಾಜ್ಯದಲ್ಲಿರುವ ಎಲ್ಲಾ ವಿದ್ಯುತ್‌ ಸಂಪರ್ಕಗಳಿಗೂ ಕಡ್ಡಾಯವಾಗಿ ಸ್ಮಾರ್ಟ್‌ ಮೀಟರ್‌ ಅಳವಡಿಸಲು ಇಂಧನ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಆಸ್ತಿಗಳಿಗೆ ಶೇಕಡ 2ರಷ್ಟು ಸೆಸ್‌ ವಿಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ.

ಕೇಂದ್ರ ಸರ್ಕಾರವು ರಾಜ್ಯದಲ್ಲಿ ಕೇವಲ ನೂತನ ಸಂಪರ್ಕ, ತಾತ್ಕಾಲಿಕ ಸಂಪರ್ಕ ಅಲ್ಲದೆ ಎಲ್ಲಾ ವಿದ್ಯುತ್‌ ಸಂಪರ್ಕಗಳಿಗೂ ಕಡ್ಡಾಯವಾಗಿ ಸ್ಮಾರ್ಟ್‌ ಮೀಟರ್‌ ಅಳವಡಿಸುವಂತೆ ಸೂಚಿಸಿದೆ. ಇದಕ್ಕಾಗಿ ಆರ್‌ಡಿಎಸ್‌ಎಸ್‌ ಯೋಜನೆಯಡಿ ಕೇಂದ್ರ ಸರ್ಕಾರದ ಸಹಾಯಧನ ಪಡೆಯಲು ಸ್ಥಳೀಯ ಸಂಸ್ಥೆಗಳಿಂದ ಎಸ್ಕಾಂಗಳಿಗೆ ಇರುವ ವಿದ್ಯುತ್‌ ಬಿಲ್‌ ಬಾಕಿ ಸಂಪೂರ್ಣ ಪಾವತಿಸಿರಬೇಕು.

ಆದರೆ, ರಾಜ್ಯದಲ್ಲಿ ವಿವಿಧ ಎಸ್ಕಾಂಗಳು ಹಾಗೂ ಕೆಪಿಟಿಸಿಎಲ್‌ಗೆ ಸ್ಥಳೀಯ ಸಂಸ್ಥೆಗಳಿಂದ ಬರೋಬ್ಬರಿ 15,000 ಕೋಟಿ ರು. ಬಾಕಿ ಹಣ ಪಾವತಿಸಬೇಕು. ಇಷ್ಟು ಹಣ ಪಾವತಿಸಲು ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆಗಳಿಗೆ ಶೇ.2 ರಷ್ಟು ಸೆಸ್‌ ವಿಧಿಸಿ ಅದನ್ನು ಪ್ರತ್ಯೇಕವಾಗಿಟ್ಟು ಎಸ್ಕಾಂಗಳಿಗೆ ಪಾವತಿಸಬೇಕು. ಬಳಿಕ ಕೇಂದ್ರ ಸರ್ಕಾರವು ಡಿಸೆಂಬರ್‌ಗೆ ಮುಗಿಯಲಿರುವ ಆರ್‌ಡಿಎಸ್‌ಎಸ್‌ ಯೋಜನೆಯ ಅವಧಿ ವಿಸ್ತರಿಸಿದರೆ ರಾಜ್ಯದಲ್ಲೂ ಎಲ್ಲಾ ಸಂಪರ್ಕಗಳಿಗೂ ಸ್ಮಾರ್ಟ್‌ ಮೀಟರ್‌ ಕಡ್ಡಾಯ ಮಾಡಬಹುದು ಎಂದು ಇಂಧನ ಇಲಾಖೆ ಪ್ರಸ್ತಾವನೆಯಲ್ಲಿ ತಿಳಿಸಿದೆ.

ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, ಇತ್ತೀಚೆಗೆ ದಕ್ಷಿಣ ರಾಜ್ಯಗಳ ಇಂಧನ ಸಚಿವರ ಸಭೆಯಲ್ಲಿ ಕೇಂದ್ರ ಇಂಧನ ಸಚಿವರು ರಾಜ್ಯದಲ್ಲಿ ಎಲ್ಲಾ ಸಂಪರ್ಕಗಳಿಗೂ ಸ್ಮಾರ್ಟ್‌ ಮೀಟರ್‌ ಕಡ್ಡಾಯಗೊಳಿಸಲು ಸೂಚಿಸಿದ್ದಾರೆ.

ಆರ್‌ಡಿಎಸ್‌ಎಸ್‌ ಯೋಜನೆಯಡಿ ಎಲ್ಲಾ ಸಂಪರ್ಕಗಳಿಗೂ ಸ್ಮಾರ್ಟ್‌ ಮೀಟರ್‌ ಅಳವಡಿಸಿದ್ದರೆ ಎಸ್ಕಾಂಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಶೇ.60 ರಷ್ಟು ಸಬ್ಸಿಡಿ ಹಾಗೂ ಸ್ಮಾರ್ಟ್‌ ಮೀಟರ್‌ ಖರೀದಿಗೆ ಗ್ರಾಹಕರಿಗೆ ಶೇ.15 ರಷ್ಟು ಸಬ್ಸಿಡಿ ಲಭಿಸುತ್ತಿತ್ತು. ಇದರಿಂದ ಸುಮಾರು 10,000 ಕೋಟಿ ರು. ಕೇಂದ್ರದ ಸಹಾಯಧನ ಬರಬಹುದು. ಆದರೆ, ಇದಕ್ಕೆ ಎಸ್ಕಾಂಗಳಿಗೆ ರಾಜ್ಯ ಸರ್ಕಾರ ಇರುವ ಎಲ್ಲಾ ಬಾಕಿ ಹಣ ಪಾವತಿಸಬೇಕು ಎಂಬ ಷರತ್ತು ಇದೆ. ಹೀಗಾಗಿ ರಾಜ್ಯ ಹಣಕಾಸು ಇಲಾಖೆ ಇದಕ್ಕೆ ಅನುಮೋದನೆ ನೀಡಿಲ್ಲ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಎಸ್ಕಾಂಗಳಿಗೆ ಸ್ಥಳೀಯ ಸಂಸ್ಥೆಗಳು ಸುಮಾರು 15,000 ಕೋಟಿ ರು. ಬಿಲ್‌ ಮೊತ್ತ ಬಾಕಿ ಉಳಿಸಿಕೊಂಡಿವೆ. ಇದೇ ರೀತಿ ಹರಿಯಾಣದಲ್ಲೂ ಬಾಕಿ ಇತ್ತು. ಅಲ್ಲಿ ಶೇ.2 ರಷ್ಟು ಸ್ಥಳೀಯ ಸಂಸ್ಥೆಗಳಿಗೆ ಸೆಸ್‌ ಹಾಕಿ ಆ ಹಣವನ್ನು ಎಸ್ಕಾಂಗಳಿಗೆ ಪಾವತಿಸಲಾಗಿದೆ. ಅದೇ ರೀತಿ ರಾಜ್ಯದಲ್ಲೂ ಮಾಡಬಹುದು ಎಂಬ ಸಲಹೆ ವ್ಯಕ್ತವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸಚಿವ ಸಂಪುಟದಲ್ಲಿ ವಿಷಯ ಇಟ್ಟು ಒಪ್ಪಿಗೆ ದೊರೆತರೆ ರಾಜ್ಯದಲ್ಲೂ ಎಲ್ಲಾ ಸಂಪರ್ಕಗಳಿಗೂ ಸ್ಮಾರ್ಟ್‌ ಮೀಟರ್‌ ಅಳವಡಿಸಲಾಗುವುದು ಎಂದರು.

ಸ್ಮಾರ್ಟ್‌ ಮೀಟರ್‌ ಅಳವಡಿಕೆಯಾದರೆ ಜನ ಮೊಬೈಲ್‌, ಡಿಟಿಎಚ್‌ ಚಾರ್ಜ್‌ ಮಾಡಿದಂತೆ ಮಾಡಬಹುದು. ಎಸ್ಕಾಂಗಳು ಸಹ ಸಂಪರ್ಕ ಕಡಿತ ಮಾಡಬೇಕಾದರೆ ಕೇಂದ್ರ ಕಂಟ್ರೋಲ್‌ ಕೊಠಡಿಯಲ್ಲೇ ಕುಳಿತು ಮಾಡಬಹುದು ಎಂದು ಕೆ.ಜೆ.ಜಾರ್ಜ್ ಸಮರ್ಥನೆ ನೀಡಿದರು.

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು