ನಾಡಿನಲ್ಲಿ ಶಾಂತಿ-ಸೌಹಾರ್ದತೆ, ಸುರಕ್ಷತೆಯ ವಾತಾವರಣ ನಿರ್ಮಿಸುವ, ಇಲಾಖೆಯನ್ನು ಸಮಾಜಸ್ನೇಹಿಯಾಗಿಸಿ ಆಧುನೀಕರಣದೆಡೆಗೆ ಕೊಂಡೊಯ್ಯಲು ಪೊಲೀಸರೆಲ್ಲ ಒಮ್ಮತವಾಗಿ ಕಾರ್ಯನಿರ್ವಹಿಸೋಣ ಎಂದು ನೂತನ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಪ್ರಭಾರ) ಡಾ.ಎಂ.ಎ.ಸಲೀಂ ಕರೆ ನೀಡಿದ್ದಾರೆ.
ಬೆಂಗಳೂರು : ನಾಡಿನಲ್ಲಿ ಶಾಂತಿ-ಸೌಹಾರ್ದತೆ, ಸುರಕ್ಷತೆಯ ವಾತಾವರಣ ನಿರ್ಮಿಸುವ, ಇಲಾಖೆಯನ್ನು ಸಮಾಜಸ್ನೇಹಿಯಾಗಿಸಿ ಆಧುನೀಕರಣದೆಡೆಗೆ ಕೊಂಡೊಯ್ಯಲು ಪೊಲೀಸರೆಲ್ಲ ಒಮ್ಮತವಾಗಿ ಕಾರ್ಯನಿರ್ವಹಿಸೋಣ ಎಂದು ನೂತನ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಪ್ರಭಾರ) ಡಾ.ಎಂ.ಎ.ಸಲೀಂ ಕರೆ ನೀಡಿದ್ದಾರೆ.
ರಾಜ್ಯದ ಅರಕ್ಷಕ ಪಡೆಯ ಮಹಾದಂಡನಾಯಕನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮ ಇಲಾಖೆಯ ಅಧಿಕಾರಿ-ಸಿಬ್ಬಂದಿಗೆ ಎರಡು ಪುಟಗಳ ಪತ್ರ ಬರೆದು ಸಹಕಾರವನ್ನು ಅವರು ಕೋರಿದ್ದಾರೆ.
ರಾಜ್ಯ ಪೊಲೀಸ್ ಪಡೆ ಮುಖ್ಯಸ್ಥನಾಗಿ ಅಧಿಕಾರವನ್ನು ವಹಿಸಿಕೊಂಡಿರುವುದು ನನಗೆ ಅಪಾರ ಸಂತಸ ತಂದಿದೆ. ನಮ್ಮ ಈ ಗುರಿಸಾಧನೆಗೆ ಇಲಾಖೆಯ ಅಡಿಪಾಯವಾಗಿರುವ ಕೆಳಹಂತದ ಸಿಬ್ಬಂದಿ ವರ್ಗದಿಂದ ಹಿರಿಯ ಅಧಿಕಾರಿಗಳವರೆಗಿನ ಎಲ್ಲಾ ಸಹೋದ್ಯೋಗಿಗಳ ನಿರಂತರ ಬೆಂಬಲ ಅಪೇಕ್ಷಿಸುತ್ತೇನೆ. ಪೊಲೀಸ್ ಇಲಾಖೆಯ ಕ್ರಿಯಾಶೀಲತೆ ಮತ್ತು ಸಾಮರ್ಥ್ಯ ಹೆಚ್ಚಿಸುವ ಹಲವು ಪರಿಕಲ್ಪನೆಗಳನ್ನು ಅನುಷ್ಠಾನಗೊಳಿಸಬೇಕಾಗಿದೆ ಎಂದು ಹೇಳಿದ್ದಾರೆ.
ಸಮಾಜದ ದುರ್ಬಲ ವರ್ಗದವರಿಗೆ ಮತ್ತು ನೊಂದವರಿಗೆ ನ್ಯಾಯ ದೊರಕಿಸಿಕೊಡುವ ವಿಶೇಷ ಅವಕಾಶ ಮತ್ತು ಜವಾಬ್ದಾರಿ ಪೊಲೀಸರಾದ ನಮಗಿದೆ ಎಂಬುದನ್ನು ಯಾವತ್ತಿಗೂ ಮರೆಯಕೂಡದು. ನಾಡಿನ ಒಳಿತಿಗೆ ಶಕ್ತಿಮೀರಿ, ಪಾರದರ್ಶಕತೆ, ವೃತ್ತಿಪರತೆಯಿಂದ ಸೇವೆ ಸಲ್ಲಿಸಿ ರಾಜ್ಯವನ್ನು ದೇಶದಲ್ಲೇ ಅತಿ ಹೆಚ್ಚು ಸುರಕ್ಷಿತ ರಾಜ್ಯವಾಗಿಸೋಣ ಎಂದು ಕರೆ ನೀಡಿದ್ದಾರೆ.