ಡಿಡಬ್ಲ್ಯೂಆರ್‌ ಅಳವಡಿಕೆಗೆ ಐಎಂಡಿಗೆ ಜಾಗದ ಕೊರತೆ

ಸಾರಾಂಶ

ನಗರದ ಹವಾಮಾನದ ಕುರಿತಂತೆ ನಿಖರ ಮಾಹಿತಿಯನ್ನು ತಿಳಿಯಲು ಡಾಪ್ಲರ್ ವೆದರ್ ರಾಡಾರ್ (ಡಿಡಬ್ಲ್ಯೂಆರ್‌) ಅಳವಡಿಕೆ ಭಾರತದ ಹವಾಮಾನ ಇಲಾಖೆ ರೂಪಿಸಿರುವ ಯೋಜನೆಗೆ ಸ್ಥಳದ ಅಭಾವ ಉಂಟಾಗಿದ್ದು, ಯೋಜನೆ ಜಾರಿಗೆ ಹಿನ್ನಡೆಯಾಗಿದೆ.

ಬೆಂಗಳೂರು :  ನಗರದ ಹವಾಮಾನದ ಕುರಿತಂತೆ ನಿಖರ ಮಾಹಿತಿಯನ್ನು ತಿಳಿಯಲು ಡಾಪ್ಲರ್ ವೆದರ್ ರಾಡಾರ್ (ಡಿಡಬ್ಲ್ಯೂಆರ್‌) ಅಳವಡಿಕೆ ಭಾರತದ ಹವಾಮಾನ ಇಲಾಖೆ ರೂಪಿಸಿರುವ ಯೋಜನೆಗೆ ಸ್ಥಳದ ಅಭಾವ ಉಂಟಾಗಿದ್ದು, ಯೋಜನೆ ಜಾರಿಗೆ ಹಿನ್ನಡೆಯಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹವಾಮಾನದ ಕುರಿತು ಸದ್ಯ ಗೋವಾ ಮತ್ತು ತಮಿಳುನಾಡಿನಲ್ಲಿ ಸ್ಥಾಪಿಸಲಾಗಿರುವ ರಾಡಾರ್‌ ಮತ್ತು ಉಪಗ್ರಹಗಳಿಂದ ಲಭ್ಯವಾಗುವ ಡೇಟಾಗಳನ್ನಾಧರಿಸಿ ವರದಿ ಮತ್ತು ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ. ಅದೇ ಮಾದರಿಯ ರಡಾರ್‌ನ್ನು ಬೆಂಗಳೂರಿನಲ್ಲಿ ಅಳವಡಿಕೆ ಮಾಡಲು ಐಎಂಡಿ ಯೋಜನೆ ರೂಪಿಸಿದೆ.

ಆದರೆ, ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಜಾಗದ ಕೊರತೆ ಉಂಟಾಗಿದೆ. ಅದಕ್ಕಾಗಿ ಖಾಸಗಿ ಮತ್ತು ಸರ್ಕಾರಿ ಬಹುಮಹಡಿ ಕಟ್ಟಡಗಳ ಮೇಲ್ಭಾಗದಲ್ಲಿ ಅಳವಡಿಸುವ ಕುರಿತು ಚಿಂತನೆ ನಡೆಸಲಾಗಿದೆ. ಅಂತಹ ಕಟ್ಟಡಗಳ ಹುಡುಕಾಟದಲ್ಲಿ ನಿರತರವಾಗಿರುವ ಐಎಂಡಿ ಅಧಿಕಾರಿಗಳು, ಅದಕ್ಕಾಗಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲು ಮುಂದಾಗಿದ್ದಾರೆ.

ಮೋಡಗಳು, ಗುಡುಗು, ಗಾಳಿಯ ಮಾದರಿಯ ಕುರಿತು ಸಂಪೂರ್ಣ ಅಧ್ಯಯನ ನಡೆಸಲು ಡಿಡಬ್ಲ್ಯೂಆರ್‌ ಅಗತ್ಯವಿದೆ. ಅದನ್ನು ಸ್ಥಾಪಿಸುವುದರಿಂದ ಪ್ರತಿ ಮೂರು ಗಂಟೆಗೊಮ್ಮೆ ಹವಮಾನ ಮುನ್ಸೂಚನೆ ವರದಿ ಸಿಗಲಿದೆ. ಡಿಡಬ್ಲ್ಯೂಆರ್‌ ಅಳವಡಿಸುವ ಪ್ರದೇಶದ ಸುತ್ತಮುತ್ತ ಖಾಲಿಯಾಗಿರಬೇಕಿದ್ದು, ಯಾವುದೇ ಕಟ್ಟಡಗಳ ನಿರ್ಮಾಣ ಸೇರಿದಂತೆ ಇನ್ನಿತರ ಅಡೆತಡೆಯಿರಬಾರದು. ಅಲ್ಲದೆ, ಜಾಗದ ಸುತ್ತಲಿನ 30-40 ಕಿಮೀ ವ್ಯಾಪ್ತಿಯಲ್ಲಿ ರಡಾರ್‌ಗೆ ಬರುವ ಎಲೆಕ್ಟ್ರಾನಿಕ್‌ ಸಿಗ್ನಲ್‌ ಪಡೆಯಲು ಯಾವುದೇ ತಡೆಯಿರಬಾರದು. ಅಂತಹ ಜಾಗಕ್ಕಾಗಿ ಐಎಂಡಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ಈ ಹಿಂದೆ ಹೆಸರಘಟ್ಟ, ಜಿಕೆವಿಕೆ ಪ್ರದೇಶಗಳನ್ನು ಪರಿಶೀಲಿಸಿರುವ ಐಎಂಡಿ ಅಧಿಕಾರಿಗಳು, ನಂತರ ಅದು ಸರಿ ಹೊಂದುವುದಿಲ್ಲ ಎಂದು ಪ್ರಸ್ತಾವನೆಯನ್ನು ಕೈಬಿಟ್ಟಿದ್ದರು. ಹೀಗಾಗಿ ಕನಿಷ್ಠ 25 ಮಹಡಿ ಎತ್ತರದ ಕಟ್ಟಡಗಳಲ್ಲಿ ಡಿಡಬ್ಲ್ಯೂಆರ್‌ ಅಡಳವಡಿಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ.

Share this article