ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆಯ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ನೈಋತ್ಯ ರೈಲ್ವೆಯು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೀದರ್ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಒದಗಿಸಲಿದೆ.
ಎಸ್ಎಂವಿಟಿ ಬೆಂಗಳೂರು-ಬೀದರ್ ವಿಶೇಷ ಎಕ್ಸ್‌ಪ್ರೆಸ್ ರೈಲು (06519) ಆ.14ರಂದು ರಾತ್ರಿ 9.15ಕ್ಕೆ ಹೊರಟು ಮರುದಿನ ಬೆಳಗ್ಗೆ 11.30ಕ್ಕೆ ಬೀದರ್ ತಲುಪಲಿದೆ. ಮರು ಪ್ರಯಾಣದಲ್ಲಿ ಬೀದರ್-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು (06520) ಆ.15 ರಂದು ಬೀದರ್‌ನಿಂದ ಮಧ್ಯಾಹ್ನ 2.30ಕ್ಕೆ ಹೊರಟು ಮರುದಿನ ಬೆಳಗಿನ ಜಾವ 4.30ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ಈ ವಿಶೇಷ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಕೃಷ್ಣ, ಯಾದಗಿರಿ, ವಾಡಿ, ಶಹಬಾದ್, ಕಲಬುರಗಿ, ಹುಮನಾಬಾದ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. 20 ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿ, 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ದಿವ್ಯಾಂಗ ಸ್ನೇಹಿ ಬೋಗಿ ಸೇರಿ ಒಟ್ಟು 22 ಬೋಗಿಗಳನ್ನು ಒಳಗೊಂಡಿದೆ.