ಎಸ್ಸೆಸ್ಸೆಲ್ಸಿ: 10% ಗ್ರೇಸ್‌ ಅಂಕ ಪಡೆದವರೆಷ್ಟು ಮಂದಿ?

Published : May 04, 2025, 08:26 AM IST
SSLC exam begins in Karnataka from today

ಸಾರಾಂಶ

ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಎಷ್ಟು ವಿದ್ಯಾರ್ಥಿಗಳಿಗೆ ಶೇ.10ರಷ್ಟು ಗ್ರೇಸ್‌ ಅಂಕ ನೀಡಿ ಪಾಸು ಮಾಡಲಾಗಿದೆ ಎನ್ನುವ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಬೆಂಗಳೂರು : ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟ ಸೂಚನೆ ನೀಡಿದ್ದರೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧಿಕಾರಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಎಷ್ಟು ವಿದ್ಯಾರ್ಥಿಗಳಿಗೆ ಶೇ.10ರಷ್ಟು ಗ್ರೇಸ್‌ ಅಂಕ ನೀಡಿ ಪಾಸು ಮಾಡಲಾಗಿದೆ ಎನ್ನುವ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.

 ಅಧಿಕಾರಿಗಳ ಈ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವೆಬ್‌ಕಾಸ್ಟಿಂಗ್‌ ವ್ಯವಸ್ಥೆಯಿಂದ ಕುಸಿದ ಫಲಿತಾಂಶ ಉತ್ತಮಪಡಿಸಲು ಕಳೆದ ಬಾರಿಯಂತೆ ಈ ಬಾರಿಯೂ ಫಲಿತಾಂಶ ಹೆಚ್ಚಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಮಕ್ಕಳಿಗೆ ಗ್ರೇಸ್‌ ಅಂಕ ನೀಡಿರಬಹುದು ಎನ್ನುವ ಗುಮಾನಿ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಮಂಡಳಿ ಕಚೇರಿಯಲ್ಲಿ ಶುಕ್ರವಾರ ಫಲಿತಾಂಶ ಬಿಡುಗಡೆ ಮಾಡಿದ ಸಚಿವರಿಗೆ ಈ ಬಾರಿ ಎಷ್ಟು ಮಕ್ಕಳು ಶೇ.10ರಷ್ಟು ಗ್ರೇಸ್‌ ಅಂಕ ಪಡೆದು ಪಾಸಾಗಿದ್ದಾರೆ ಎಂಬ ಪ್ರಶ್ನೆ ಸುದ್ದಿಗಾರರಿಂದ ಎದುರಾಯಿತು. ಆದರೆ, ಅಧಿಕಾರಿಗಳು ಆ ವೇಳೆ ಸಚಿವರಿಗೆ ಮಾಹಿತಿ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಸಚಿವರು ಸಂಜೆಯೊಳಗೆ ಸಂಬಂಧಿಸಿದ ಮಾಹಿತಿಯನ್ನು ಕಂಪ್ಯೂಟರ್‌ ವಿಭಾಗದಿಂದ ಪಡೆದು ಮಾಧ್ಯಮಗಳಿಗೆ ಬಹಿರಂಗಪಡಿಸುವಂತೆ ಸೂಚನೆ ನೀಡಿದ್ದರು. ಆದರೆ, ಶನಿವಾರ ಕೂಡ ಈ ಮಾಹಿತಿ ಒದಗಿಸದೆ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ.

 1.70 ಲಕ್ಷ ಮಕ್ಕಳಿಗೆ ಗ್ರೇಸ್‌ ಅಂಕ:

2022-23ನೇ ಸಾಲಿನಲ್ಲಿ ಶೇ.85 ದಾಟಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ 2023-24ನೇ ಸಾಲಿನಲ್ಲಿ ವೆಬ್‌ಕಾಸ್ಟಿಂಗ್‌ ಜಾರಿಯಿಂದ ಏಕಾಏಕಿ ಶೇ.53ಕ್ಕೆ ಕುಸಿದಿತ್ತು. ಅಷ್ಟು ದೊಡ್ಡ ಮಟ್ಟದ ಫಲಿತಾಂಶ ಕುಸಿತದ ಮುಜುಗರದಿಂದ ಪಾರಾಗಲು ಏಕಾಏಕಿ ಶೇ.10ರಷ್ಟಿದ್ದ ಗ್ರೇಸ್‌ ಅಂಕದ ಪ್ರಮಾಣವನ್ನು ಶೇ.20ಕ್ಕೆ ಹೆಚ್ಚಿಸಿ, ಗ್ರೇಸ್‌ ಅಂಕ ಪಡೆಯಲು ಒಟ್ಟಾರೆ 175 ಅಂಕ ಪಡೆಯಬೇಕೆಂದಿದ್ದ ಮಾನದಂಡವನ್ನು 125 ಅಂಕಕ್ಕೆ ಇಳಿಸಿ ಬರೋಬ್ಬರಿ 1.70 ಲಕ್ಷ ವಿದ್ಯಾರ್ಥಿಗಳಿಗೆ ಶೇ.20ರಷ್ಟು ಗ್ರೇಸ್‌ ಅಂಕ ನೀಡಿ ಉತ್ತೀರ್ಣಗೊಳಿಸಲಾಗಿತ್ತು.

 ಇದರಿಂದ ಅಸಲಿಗೆ ಶೇ.53ರಷ್ಟಿದ್ದ ಫಲಿತಾಂಶವನ್ನು ಶೇ.73ಕ್ಕೆ ಹೆಚ್ಚಿಸಲಾಗಿತ್ತು. ಆದರೆ, ಈ ಬಾರಿ ಶೇ.20ರ ಬದಲು ಶೇ.10ರಷ್ಟು ಮಾತ್ರ ಗ್ರೇಸ್‌ ಅಂಕ ನೀಡಲಾಗಿದೆ ಎಂದು ಸಚಿವರೇ ಮಾಹಿತಿ ನೀಡಿದರು. ಇದರಿಂದ ಎಷ್ಟು ಮಕ್ಕಳು ಪಾಸಾಗಿದ್ದಾರೆ ಎಂಬ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೂ ಸೂಚಿಸಿದರು. ಆದರೆ, ಎರಡು ದಿನವಾದರೂ ಅಧಿಕಾರಿಗಳು ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಮೇಕೇದಾಟು ಯೋಜನೆ ಅನುಷ್ಠಾನಕ್ಕೆ 30 ಮಂದಿ ತಂಡ ರಚಿಸಿದ ಸರ್ಕಾರ
ಗ್ರಾಪಂಗಳಲ್ಲಿ 10 ವರ್ಷಗಳಲ್ಲಿ ₹50000 ಕೋಟಿ ಅಕ್ರಮ: ಶಾಸಕ