ಸೋನು ನಿಗಮ್‌ ವಿರುದ್ಧ ಎಫ್‌ಐಆರ್‌

ಸಾರಾಂಶ

ಕನ್ನಡಾಭಿಮಾನವನ್ನು ಪಹಲ್ಗಾಂ ದಾಳಿಗೆ ಹೋಲಿಸಿ ಕನ್ನಡಿಗರನ್ನು ಅವಮಾನಿಸಿದ ಖ್ಯಾತ ಗಾಯಕ ಸೋನು ನಿಗಮ್‌ ವಿರುದ್ಧ ಆವಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌

ಬೆಂಗಳೂರು : ಕನ್ನಡದ ಹಾಡು ಹಾಡಿ ಅಂತ ಕೇಳಿದ್ದಕ್ಕೆ ಕನ್ನಡಾಭಿಮಾನವನ್ನು ಪಹಲ್ಗಾಂ ದಾಳಿಗೆ ಹೋಲಿಸಿ ಕನ್ನಡಿಗರನ್ನು ಅವಮಾನಿಸಿದ ಖ್ಯಾತ ಗಾಯಕ ಸೋನು ನಿಗಮ್‌ ವಿರುದ್ಧ ಆವಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಘಟಕ ಜಿಲ್ಲಾಧ್ಯಕ್ಷ ಎ.ಧರ್ಮರಾಜ್‌ ಪೊಲೀಸರಿಗೆ ಶುಕ್ರವಾರ ನೀಡಿದ ದೂರಿನಂತೆ ಎಫ್‌ಐಆರ್‌ ದಾಖಲಾಗಿದೆ.

ಕನ್ನಡ ಚಲನಚಿತ್ರಗಳಲ್ಲಿ ಹಿಂದಿ ಮೂಲದ ಗಾಯಕ ಸೋನು ನಿಗಮ್‌ ಅವರಿಗೆ ಸಾಕಷ್ಟು ಅವಕಾಶಗಳನ್ನು ಕೊಡಲಾಗಿದೆ. ಕನ್ನಡ ಚಿತ್ರಗಳಿಂದಲೇ ಹೆಚ್ಚಿನ ಹಣ ಮತ್ತು ಖ್ಯಾತಿ ಪಡೆದುಕೊಂಡು ಕನ್ನಡಿಗರ ವಿರುದ್ಧವೇ ಮಾತನಾಡಿದ ಸೋನುನಿಗಮ್‌ ರಿಂದ ಇನ್ನು ಮುಂದೆ ಕನ್ನಡದ ಯಾವುದೇ ನಿರ್ಮಾಪಕರು ಹಾಡು ಹಾಡಿಸಬಾರದು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೋನು ನಿಗಮ್‌ರನ್ನು ಕನ್ನಡ ಚಿತ್ರರಂಗದಿಂದ ಸಂಪೂರ್ಣ ನಿರ್ಬಂಧಿಸಬೇಕು ಎಂದು ಆಗ್ರಹಿಸಿದರು.

ಸ್ಯಾಂಡಲ್‌ವುಡ್‌ನಿಂದ ಸೋನು ಬ್ಯಾನ್‌ಗೆ ಕನ್ನಡ ಹೋರಾಟಗಾರರ ತೀವ್ರ ಒತ್ತಾಯ

ಕನ್ನಡಾಭಿಮಾನವನ್ನು ಪಹಲ್ಗಾಂ ಉಗ್ರ ದಾಳಿಗೆ ಹೋಲಿಸಿ ಅವಮಾನಿಸಿದ ಗಾಯಕ ಸೋನು ನಿಗಮ್‌ ಅವರನ್ನು ಕನ್ನಡ ಚಿತ್ರರಂಗದಿಂದ ನಿರ್ಬಂಧಿಸಬೇಕು. ಯಾವುದೇ ಖಾಸಗಿ ಸಂಘ, ಸಂಸ್ಥೆಗಳು, ಶಾಲಾ-ಕಾಲೇಜುಗಳು ಸೋನು ನಿಗಮ್‌ಗೆ ಸಂಗೀತ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟರೆ ಹೋರಾಟ ನಡೆಸುವುದಾಗಿ ಕನ್ನಡಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಈ ಕುರಿತು ಯುವ ಕರ್ನಾಟಕ ವೇದಿಕೆ ಕಾರ್ಯಕರ್ತರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷೆ ಶಿಲ್ಪಾ ಶ್ರೀನಿವಾಸ್‌, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌ ಅವರನ್ನು ಭೇಟಿ ಮಾಡಿದ್ದು ಸೋನು ನಿಗಮ್‌ ಅವರನ್ನು ಚಿತ್ರರಂಗದಿಂದ ನಿರ್ಬಂಧಿಸುವಂತೆ ಮನವಿ ಪತ್ರ ಸಲ್ಲಿಸಿದರು.

ಕನ್ನಡ ಹಾಡುವಂತೆ ಮನವಿ ಮಾಡಿದ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿ ಕನ್ನಡಿಗರನ್ನು ದೇಶದ್ರೋಹಿಗಳಂತೆ ಬಿಂಬಿಸಿ ಅಪಮಾನ ಮಾಡಿರುವ ಸೋನು ನಿಗಮ್‌ ಇನ್ನು ಮುಂದೆ ರಾಜ್ಯದ ಯಾವುದೇ ಮೂಲೆಯಲ್ಲಿ ಕಾರ್ಯಕ್ರಮ ನೀಡಲು ಬಂದರೂ ಮುಖಕ್ಕೆ ಮಸಿ ಬಳಿದು ಪ್ರತಿಭಟಿಸುತ್ತೇವೆ. ಕನ್ನಡ ಚಿತ್ರರಂಗದಲ್ಲಿ ನಮ್ಮ ಮನವಿ ಮೀರಿ ಅವರಿಗೆ ಅವಕಾಶ ಕೊಟ್ಟರೆ ಚಿತ್ರ ನಿರ್ಮಾಪಕ, ನಿರ್ದೇಶಕರ ವಿರುದ್ಧವೂ ಹೋರಾಟ ಮಾಡುತ್ತೇವೆ ಎಂದು ಯುವ ಕರ್ನಾಟಕ ವೇದಿಕೆಯ ರೂಪೇಶ್‌ ರಾಜಣ್ಣ ಅವರು ಕನ್ನಡಪ್ರಭಕ್ಕೆ ತಿಳಿಸಿದರು.

Share this article