ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಈ ಬಾರಿ ಹೆಚ್ಚಿಸಲು ಮಕ್ಕಳ ಕಲಿಕಾ ಮಟ್ಟ ಸುಧಾರಣೆಗೆ ಹಲವು ಸೂತ್ರಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಫಲಿತಾಂಶ ಏರಿಕೆಯಾಗುವುದು ಶೇ.100 ರಷ್ಟು ಗ್ಯಾರಂಟಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬೆಂಗಳೂರು : ವೆಬ್‌ಕಾಸ್ಟಿಂಗ್ ಜಾರಿಯಿಂದ ಕಳೆದ ಸಾಲಿನಲ್ಲಿ ಕುಸಿದಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಈ ಬಾರಿ ಹೆಚ್ಚಿಸಲು ಮಕ್ಕಳ ಕಲಿಕಾ ಮಟ್ಟ ಸುಧಾರಣೆಗೆ ಹಲವು ಸೂತ್ರಗಳನ್ನು ಕೈಗೊಳ್ಳಲಾಗಿದೆ. ಇದರಿಂದ ಫಲಿತಾಂಶ ಏರಿಕೆಯಾಗುವುದು ಶೇ.100 ರಷ್ಟು ಗ್ಯಾರಂಟಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಅಲ್ಲದೆ, ಕುಸಿದ ಫಲಿತಾಂಶವನ್ನು ತಕ್ಕಮಟ್ಟಿಗೆ ಸರಿದೂಗಿಸಲು ನೀಡಲಾಗಿದ್ದ ಶೇ.10ರಷ್ಟು ಹೆಚ್ಚುವರಿ ಗ್ರೇಸ್ ಅಂಕವನ್ನು ಈ ಬಾರಿ ನೀಡದಿರಲು ತೀರ್ಮಾನಿಸಲಾಗಿದೆ. ಅದೇ ರೀತಿ ಕೆಲವೇ ಅಂಕಗಳಿಂದ ಪಾಸಾಗುವುದರಿಂದ ವಂಚಿತರಾಗುವ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಕೇಂದ್ರದ ನೀತಿ ಹಾಗೂ ಕೋವಿಡ್ ಬಳಿಕದ ತೀರ್ಮಾನದಂತೆ ನೀಡಲಾಗುತ್ತಿರುವ ಶೇ.10ರಷ್ಟು ಗ್ರೇಸ್ ಅಂಕವನ್ನು ಮುಂದುವರೆಸಬೇಕಾ? ಬೇಡವಾ? ಎಂಬ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಗರದ ಹೊಸಕೆರೆಹಳ್ಳಿ ಬಳಿಯ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್‌ಇಆರ್‌ಟಿ) ಕಚೇರಿಯಲ್ಲಿ ಸೋಮವಾರ ವಿವಿಧ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗಿನ ಸಂವಾದ ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ತಯಾರಿಗೆ ಕೈಗೊಂಡಿರುವ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಕಳೆದ ಸಾಲಿನಲ್ಲಿ ಫಲಿತಾಂಶ ಕುಸಿತವಾದರೂ ವೆಬ್‌ಕಾಸ್ಟಿಂಗ್ ಜಾರಿಯಿಂದ ನಮ್ಮ ಮಕ್ಕಳ ನೈಜ ಕಲಿಕಾ ಮಟ್ಟ ಹೇಗಿದೆ ಎಂದು ತಿಳಿಯಲು ಇದು ಸಾಧ್ಯವಾಯಿತು. ಇದರಿಂದ ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸಲು ಈ ಬಾರಿ ಬೆಳಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಕರೆ ಮಾಡಿ ಓದಲು ಎಚ್ಚರಿಸುವುದು, ವಿಶೇಷ ತರಗತಿ, ಗಣಿತ ಗಣಕ ಕಾರ್ಯಕ್ರಮ, ಗುಂಪು ಅಧ್ಯಯನ ಹೀಗೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಕೆಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಕೂಡ ಶಾಲೆಗೆ ತೆರಳಿ ಪಾಠ ಮಾಡಿದ್ದಾರೆ. ವೆಬ್‌ಕಾಸ್ಟಿಂಗ್ ಬಗ್ಗೆ ಆತಂಕ, ಭಯ ಮಕ್ಕಳಲ್ಲಿ ಮೂಡದಂತೆ ಘಟಕ ಪರೀಕ್ಷೆಗಳನ್ನೂ ಇದೇ ವ್ಯವಸ್ಥೆಯಡಿ ಮಾಡಲಾಗಿದೆ. ಈ ಎಲ್ಲಾ ಕ್ರಮಗಳಿಂದ ಈ ಬಾರಿ ಫಲಿತಾಂಶ ಸುಧಾರಣೆಯಾಗುವ ಸಂಪೂರ್ಣ ನಿರೀಕ್ಷೆ ಇದೆ ಎಂದರು.
ಗ್ರೇಸ್ ಅಂಕ ಇಲ್ಲ: ವೆಬ್‌ಕಾಸ್ಟಿಂಗ್ ಜಾರಿಯಿಂದ ತೀವ್ರವಾಗಿ ಫಲಿತಾಂಶ ಕುಸಿದಿದ್ದರಿಂದ ಕಳೆದ ಬಾರಿ ಅದುವರೆಗೆ ಇದ್ದ ಶೇ.10ರಷ್ಟು ಗ್ರೇಸ್ ಅಂಕದ ಜೊತೆ ಹೆಚ್ಚುವರಿಯಾಗಿ ಶೇ.10ರಷ್ಟು ಸೇರಿಸಿ ಒಟ್ಟು ಶೇ.20ರಷ್ಟು ಗ್ರೇಸ್ ಅಂಕ ನೀಡಲಾಗಿತ್ತು. ಆದರೆ, ಈ ಬಾರಿ ಹೆಚ್ಚುವರಿ ಗ್ರೇಸ್ ಅಂಕ ನೀಡುವುದಿಲ್ಲ. ಉಳಿದ ಶೇ.10 ರಷ್ಟುಗ್ರೇಸ್ ಅಂಕ ನೀಡಬೇಕಾ? ಬೇಡವಾ? ಎಂದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಅಲ್ಲದೆ, ಮಕ್ಕಳಿಗಾಗಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸಲು ಮಾರ್ಗಸೂಚಿ ತರಲಾಗಿದೆ. ಪರೀಕ್ಷೆಗೆ ಇನ್ನೂ 50 ದಿನಗಳು ಇದ್ದು, ಈ ಮಾರ್ಗಸೂಚಿ ಅನುಸಾರ ಅವರು ದೈನಂದಿನ ಅಧ್ಯಯನ ನಡೆಸಿದರೆ ಪರೀಕ್ಷೆಗೆ ಇನ್ನಷ್ಟು ಉತ್ತಮ ರೀತಿಯಲ್ಲಿ ತಯಾರಾಗಲಿದ್ದಾರೆ. ನಿತ್ಯ ಯಾವ್ಯಾವ ವಿಷಯದ ಓದಿಗೆ ಎಷ್ಟು ಸಮಯ ನೀಡಬೇಕು. ಪರೀಕ್ಷೆಯಲ್ಲಿ ಸಮಯ ವ್ಯರ್ಥವಾಗದಂತೆ ಎಷ್ಟು ಅಂಕದ ಪ್ರಶ್ನೆಗಳಿಗೆ ಎಷ್ಟು ಸಮಯದಲ್ಲಿ ಹೇಗೆ ಉತ್ತರ ಬರೆಯಬೇಕು ಎಂಬೆಲ್ಲ ಮಾಹಿತಿ ನೀಡಲಾಗಿದೆ. ಈ ಮಾರ್ಗಸೂಚಿಯನ್ನು ಎಲ್ಲ ಮಕ್ಕಳಿಗೂ ತಲುಪಿಸಲಾಗುವುದು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಆಯುಕ್ತ ತ್ರಿಲೋಕ್‌ಚಂದ್ರ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷ ಎಚ್.ಬಸವರಾಜೇಂದ್ರ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನಾ ನಿರ್ದೇಶಕ ಕೂರ್ಮರಾವ್ ಇದ್ದರು.