ಫ್ಲಾಟ್‌ ಓನರ್ಸ್‌ ರಕ್ಷಣೆಗೆ ನಿಂತ ರಾಜ್ಯ ಸರ್ಕಾರ

Published : Aug 14, 2026, 12:56 PM IST
Bengaluru

ಸಾರಾಂಶ

ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲ್ಯಾಟ್‌ ಮಾಲೀಕರ ಮಾಲೀಕತ್ವ ಹಾಗೂ ಹಕ್ಕುಗಳನ್ನು ರಕ್ಷಿಸುವ ಉದ್ದೇಶದ ‘ಕರ್ನಾಟಕ ಅ‍ಪಾರ್ಟ್‌ಮೆಂಟ್‌ (ಮಾಲೀಕತ್ವ ಮತ್ತು ನಿರ್ವಹಣೆ)’ ಮಸೂದೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಬೆಂಗಳೂರು : ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲ್ಯಾಟ್‌ ಮಾಲೀಕರ ಮಾಲೀಕತ್ವ ಹಾಗೂ ಹಕ್ಕುಗಳನ್ನು ರಕ್ಷಿಸುವ ಉದ್ದೇಶದ ‘ಕರ್ನಾಟಕ ಅ‍ಪಾರ್ಟ್‌ಮೆಂಟ್‌ (ಮಾಲೀಕತ್ವ ಮತ್ತು ನಿರ್ವಹಣೆ)’ ಮಸೂದೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ವಿಧೇಯಕವನ್ನು ಇದೇ ಮಳೆಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕಾರ ಪಡೆಯಲು ತೀರ್ಮಾನಿಸಿದ್ದು, ತನ್ಮೂಲಕ ಅಪಾರ್ಟ್‌ಮೆಂಟ್‌ ಮಾಲೀಕರ ರಕ್ಷಣೆಗೆ ಸರ್ಕಾರ ಮುಂದಾಗಿದೆ.

ಈ ಮಸೂದೆ ಅಪಾರ್ಟ್‌ಮೆಂಟ್ ಸಂಘಗಳ ರಚನೆ, ಮಾಲೀಕತ್ವದ ಹಕ್ಕು, ಬಿಲ್ಡರ್‌ಗಳ ಹೊಣೆಗಾರಿಕೆ, ತಿಂಗಳ ನಿರ್ವಹಣಾ ಶುಲ್ಕ ಮುಂತಾದ ವಿಷಯಗಳನ್ನು ಒಳಗೊಂಡಿದ್ದು, ಕಾಯ್ದೆಯಾಗಿ ಜಾರಿಗೆ ಬಂದ ಬಳಿಕ ಹಳೆಯ ಮತ್ತು ಹೊಸ ಎಲ್ಲ ಅಪಾರ್ಟ್‌ಮೆಂಟ್‌ಗಳು ತಮ್ಮ ಸಂಘಗಳನ್ನು ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸುವುದು ಕಡ್ಡಾಯ ಆಗಲಿದೆ.

ಈ ಮಸೂದೆ ಪ್ರಕಾರ, ಪ್ರತಿಯೊಬ್ಬ ಫ್ಲ್ಯಾಟ್‌ ಮಾಲೀಕರು ಜಮೀನು ಮತ್ತು ಸಾಮಾನ್ಯ ಪ್ರದೇಶಗಳಲ್ಲಿ ಸ್ವಯಂಚಾಲಿತವಾಗಿ ಅನುಪಾತದ ಆಧಾರದಲ್ಲಿ ಅವಿಭಜಿತ ಷೇರು (ಯುಡಿಎಸ್‌) ಹೊಂದಲಿದ್ದಾರೆ.

ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ದಾಖಲೆ ಹಸ್ತಾಂತರ:

ಕಟ್ಟಡ ನಿರ್ಮಾಣದಾರ ಸಂಸ್ಥೆಗಳು (ಬಿಲ್ಡರ್‌ಗಳು) ಅಥವಾ ಗೃಹ ಯೋಜನೆಗಳ ಪ್ರವರ್ತಕರು ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆದ 60 ದಿನಗಳ ಒಳಗೆ ಯೋಜನೆಯ ಎಲ್ಲ ದಾಖಲೆಗಳು, ಮಂಜೂರಾದ ನಕ್ಷೆಗಳು, ವಾರಂಟಿಗಳು, ನಿರ್ವಹಣಾ ಒಪ್ಪಂದಗಳು, ಕಾರ್ಪಸ್ ಫಂಡ್, ಠೇವಣಿಗಳು ಮತ್ತು ಇತರ ದಾಖಲೆಗಳನ್ನು ಅಪಾರ್ಟ್‌ಮೆಂಟ್ ಸಂಘಕ್ಕೆ ಹಸ್ತಾಂತರಿಸಬೇಕು. ಬಾಕಿ ನಿರ್ವಹಣಾ ಶುಲ್ಕವನ್ನು ಬಡ್ಡಿ ಸಹಿತ ವಸೂಲಿ ಮಾಡಲು ಸಂಘಗಳಿಗೆ ಹಕ್ಕು ಸಿಗಲಿದೆ.

ಪ್ರತಿಯೊಂದು ಅಪಾರ್ಟ್‌ಮೆಂಟ್‌ನ ‘ಸೂಪರ್ ಬಿಲ್ಟಪ್‌ ಏರಿಯಾ’ಕ್ಕೆ ಅನುಗುಣವಾಗಿ ನಿರ್ವಹಣಾ ಶುಲ್ಕ ವಿಧಿಸಬೇಕು ಎಂದು ಕಾನೂನಿನಲ್ಲಿದ್ದರೂ, ವೈಯಕ್ತಿಕ ನಿವಾಸಿಗಳು ಪಡೆಯುವ ವಿಶೇಷ ಸೇವೆಗಳು ಅಥವಾ ಸೌಲಭ್ಯಗಳಿಗೆ ಪ್ರತ್ಯೇಕ ಶುಲ್ಕ ವಿಧಿಸಲು ಮಸೂದೆ ಅವಕಾಶ ನೀಡಿದೆ. ಅಪಾರ್ಟ್‌ಮೆಂಟ್‌ ಮಾರಲು ಬಯಸುವ ಮಾಲೀಕರು, ಯಾವುದೇ ಬಾಕಿ ಹಣ ಉಳಿಸಿಕೊಂಡಿಲ್ಲವೆಂದು ಸಂಘದಿಂದ ಪ್ರಮಾಣಪತ್ರ ಪಡೆಯಬೇಕು. ಮಾರಾಟವಾಗದ ಫ್ಲ್ಯಾಟ್‌ಗಳಿಗೂ ಬಿಲ್ಡರ್‌ಗಳು ನಿರ್ವಹಣಾ ಶುಲ್ಕ ಪಾವತಿಸಬೇಕು. ಕನಿಷ್ಠ ಶೇ.75ರಷ್ಟು ಫ್ಲ್ಯಾಟ್ ಮಾಲೀಕರ ಒಪ್ಪಿಗೆ ಇದ್ದರೆ ಮಾತ್ರ ಅಪಾರ್ಟ್‌ಮೆಂಟ್‌ ಪ್ರಮುಖ ರಚನಾತ್ಮಕ ಬದಲಾವಣೆಗಳು, ಪುನರ್ನಿರ್ಮಾಣ, ಪುನರಾಭಿವೃದ್ಧಿ ಅಥವಾ ಫ್ಲ್ಯಾಟ್ ಗಳ ಸಂಖ್ಯೆ ಅಥವಾ ಗಾತ್ರದ ಮೇಲೆ ಪರಿಣಾಮ ಬೀರುವ ಬದಲಾವಣೆ ಮಾಡಬಹುದು.

ಮಸೂದೆಯ ಪ್ರಕಾರ, ಸಂಘದ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ ಗರಿಷ್ಠ ಎರಡು ವರ್ಷ. ಸತತ ಎರಡು ಅವಧಿ ಪೂರ್ಣಗೊಳಿಸಿದ ಸದಸ್ಯರು ನಂತರದ ಅವಧಿಗೆ ಸ್ಪರ್ಧಿಸುವ ಅಥವಾ ನಾಮನಿರ್ದೇಶನ ಅವಕಾಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಕಾಯ್ದೆಯಲ್ಲಿ ಏನಿದೆ?

- ಅಪಾರ್ಟ್‌ಮೆಂಟ್ ಸಂಘಗಳ ರಚನೆ, ಮಾಲೀಕತ್ವದ ಹಕ್ಕು, ಬಿಲ್ಡರ್‌ಗಳ ಹೊಣೆಗಾರಿಕೆ, ತಿಂಗಳ ನಿರ್ವಹಣಾ ಶುಲ್ಕ ಮತ್ತಿತರ ವಿಷಯಗಳು ಈ ಕಾಯ್ದೆಯಲ್ಲಿದೆ

- ಹಳೆಯ ಮತ್ತು ಹೊಸ ಎಲ್ಲ ಅಪಾರ್ಟ್‌ಮೆಂಟ್‌ಗಳು ತಮ್ಮ ಸಂಘಗಳನ್ನು ಸಕ್ಷಮ ಪ್ರಾಧಿಕಾರದಲ್ಲಿ ನೋಂದಾಯಿಸುವುದು ಕಡ್ಡಾಯ. ಸಂಘದ ಕಾರ್ಯಕಾರಿ ಸಮಿತಿ ಅಧಿಕಾರಾವಧಿ ಗರಿಷ್ಠ ಎರಡು ವರ್ಷ. ಸತತ 2 ಅವಧಿ ಪೂರ್ಣಗೊಳಿಸಿದ ಸದಸ್ಯರಿಗೆ ನಂತರದ ಅವಧಿಗೆ ಸ್ಪರ್ಧಿಸುವ ಅಥವಾ ನಾಮನಿರ್ದೇಶನಕ್ಕೆ ನಿರ್ಬಂಧ

- ಪ್ರತಿಯೊಬ್ಬ ಫ್ಲ್ಯಾಟ್‌ ಮಾಲೀಕರು ಜಮೀನು ಮತ್ತು ಸಾಮಾನ್ಯ ಪ್ರದೇಶಗಳಲ್ಲಿ ಸ್ವಯಂಚಾಲಿತವಾಗಿ ಅನುಪಾತದ ಆಧಾರದಲ್ಲಿ ಯುಡಿಎಸ್‌ ಹೊಂದುವ ಅಧಿಕಾರ

- ಬಿಲ್ಡರ್‌ಗಳು ಒಸಿ ಪಡೆದ 60 ದಿನಗಳೊಳಗೆ ಯೋಜನೆಯ ದಾಖಲೆಗಳು, ನಕ್ಷೆಗಳು, ವಾರಂಟಿಗಳು, ನಿರ್ವಹಣಾ ಒಪ್ಪಂದ, ಕಾರ್ಪಸ್ ಫಂಡ್, ಠೇವಣಿಗಳು ಮತ್ತು ಇತರ ದಾಖಲೆಗಳನ್ನು ಅಪಾರ್ಟ್‌ಮೆಂಟ್ ಸಂಘಕ್ಕೆ ಹಸ್ತಾಂತರಿಸುವುದು ಕಡ್ಡಾಯ

- ‘ಸೂಪರ್ ಬಿಲ್ಟಪ್‌ ಏರಿಯಾ’ಕ್ಕೆ ಅನುಗುಣವಾಗಿ ನಿರ್ವಹಣಾ ಶುಲ್ಕ ವಿಧಿಸಬೇಕು ಎಂದು ಕಾನೂನಿನಲ್ಲಿದ್ದರೂ, ವೈಯಕ್ತಿಕ ನಿವಾಸಿಗಳು ಪಡೆಯುವ ವಿಶೇಷ ಸೇವೆಗಳು ಅಥವಾ ಸೌಲಭ್ಯಗಳಿಗೆ ಪ್ರತ್ಯೇಕ ಶುಲ್ಕ ವಿಧಿಸಲು ಅವಕಾಶ

- ಅಪಾರ್ಟ್‌ಮೆಂಟ್‌ ಮಾರುವ ಮೊದಲು ಯಾವುದೇ ಬಾಕಿ ಹಣ ಉಳಿಸಿಕೊಂಡಿಲ್ಲವೆಂದು ಸಂಘದಿಂದ ಪ್ರಮಾಣಪತ್ರ ಪಡೆಯಬೇಕು, ಮಾರಾಟವಾಗದ ಫ್ಲ್ಯಾಟ್‌ಗಳಿಗೂ ಬಿಲ್ಡರ್‌ಗಳು ನಿರ್ವಹಣಾ ಶುಲ್ಕ ಪಾವತಿ ಕಡ್ಡಾಯ.

- ಕನಿಷ್ಠ ಶೇ.75ರಷ್ಟು ಫ್ಲ್ಯಾಟ್ ಮಾಲೀಕರ ಒಪ್ಪಿಗೆ ಇದ್ದರೆ ಮಾತ್ರ ಅಪಾರ್ಟ್‌ಮೆಂಟ್‌ ಪ್ರಮುಖ ರಚನಾತ್ಮಕ ಬದಲಾವಣೆಗಳು, ಪುನರ್ನಿರ್ಮಾಣ, ಪುನರಾಭಿವೃದ್ಧಿ ಅಥವಾ ಫ್ಲ್ಯಾಟ್‌ಗಳ ಸಂಖ್ಯೆ ಅಥವಾ ಗಾತ್ರದ ಮೇಲೆ ಪರಿಣಾಮ ಬೀರುವ ಬದಲಾವಣೆಗೆ ಅವಕಾಶ

- ಸಂಘದ ಕಾರ್ಯಕಾರಿ ಸಮಿತಿಯ ಅಧಿಕಾರಾವಧಿ ಗರಿಷ್ಠ ಎರಡು ವರ್ಷ. ಸತತ ಎರಡು ಅವಧಿ ಪೂರ್ಣಗೊಳಿಸಿದ ಸದಸ್ಯರು ನಂತರದ ಅವಧಿಗೆ ಸ್ಪರ್ಧಿಸುವ ಅಥವಾ ನಾಮನಿರ್ದೇಶನ ಅವಕಾಶಕ್ಕೆ ನಿರ್ಬಂಧ ವಿಧಿಸಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನಟಿ ಸಹೋದರಿ ಮೇಲೆ ರೇ* ಆರೋಪ : ಆರೋಪಿಯ ಬಂಧನ
ಕಾವೇರಿ ನೀರು ಹಂಚಿಕೆ ವಿರೋಧಿಸಿ ಕರೆ ನೀಡಿದ್ದ ಬಂದ್‌ಗೆ ಸೊಪ್ಪು ಹಾಕದ ಬೆಂಗಳೂರು ಜನ