ಬಿಡದಿ ವ್ಯಾಪ್ತಿಯಲ್ಲಿ ಭೂಸ್ವಾಧೀನ ಕೈಬೀಡಿ : ಸಿಎಂಗೆ ಮಾಜಿ ಪ್ರಧಾನಿ ಎಚ್‌ಡಿಡಿ ಪತ್ರ

Published : Apr 25, 2025, 10:22 AM IST
former pm Hd Devegowda alleged to siddaramaiah to unstable Kumaraswamy

ಸಾರಾಂಶ

ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟೌನ್ ಶಿಪ್ ನಿರ್ಮಾಣಕ್ಕೆ ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು : ರಾಮನಗರ ಜಿಲ್ಲೆಯ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಟೌನ್ ಶಿಪ್ ನಿರ್ಮಾಣಕ್ಕೆ ರೈತರ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ರೈತರ ಜಮೀನುಗಳನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಬಿಡದಿ ಹೋಬಳಿಯ ಬೈರಮಂಗಲ, ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳಲ್ಲಿನ ಹಲವಾರು ಸರ್ವೆ ನಂಬರುಗಳಲ್ಲಿರುವ ಸುಮಾರು 10 ಸಾವಿರ ಎಕರೆ ಜಮೀನನ್ನು ಸರ್ಕಾರವು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಟೌನ್‌ಶಿಪ್ ಯೋಜನೆ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಿರುವುದಾಗಿ ವರದಿಯಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಕೈಗಾರಿಕಾಭಿವೃದ್ಧಿಗಾಗಿ ಸಾವಿರಾರು ಎಕರೆ ರೈತರ ಭೂಮಿಯನ್ನು ವಶಪಡಿಸಿಕೊಂಡು ಕೈಗಾರಿಕಾಭಿವೃದ್ಧಿ ಪ್ರದೇಶವನ್ನು ಸ್ಥಾಪಿಸಿದೆ ಎಂದು ತಿಳಿಸಿದ್ದಾರೆ.

ರಾಮನಗರ ಜಿಲ್ಲೆ ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂದಂತೆ ಇದ್ದು, ಹಲವಾರು ಉದ್ಯಮಗಳು ಖಾಸಗಿಯಾಗಿ ಕೈಗಾರಿಕೆಗಳನ್ನು ಸ್ಥಾಪಿಸಿವೆ. ಉಳಿದಂತೆ ಇರುವ ಕೃಷಿ ಭೂಮಿಯಲ್ಲಿ ರೈತರು ತಮ್ಮ ಜೀವನ ನಿರ್ವಹಣೆಗೆ ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ, ಕೃಷಿಗಾಗಿ ಅವಲಂಬಿತರಾಗಿದ್ದಾರೆ. ಬಹುಪಾಲು ರೈತರು ಅತೀ ಸಣ್ಣ ಮತ್ತು ಸಣ್ಣ ಹಿಡುವಳಿದಾರರಾಗಿದ್ದು ಬಡ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ರೈತರು ತಮ್ಮ ಜಮೀನಿನಲ್ಲಿ ಮತ್ತು ಜಮೀನಿನ ಸುತ್ತ ಲಕ್ಷಾಂತರ ಮರ-ಗಿಡಗಳನ್ನು ಬೆಳೆಸಿದ್ದಾರೆ. ಇಂತಹ ಪ್ರದೇಶವನ್ನು ಟೌನ್‌ಶಿಪ್ ಯೋಜನೆಗೆ ಸ್ವಾಧೀನ ಪಡಿಸಿಕೊಂಡರೆ ಪರಿಸರಕ್ಕೆ ಅಪಾರ ಹಾನಿ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ಸಾವಿರಾರು ಕುಟುಂಬಗಳಿಗೆ ಧಕ್ಕೆ

ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆಗೆ ಧಕ್ಕೆ ಉಂಟಾಗಿ, ರೈತ ಕುಟುಂಬದ ಯುವಕರು ನಿರುದ್ಯೋಗಿಗಳಾಗಿ ಬೀದಿಪಾಲಾಗುತ್ತಾರೆ. ಈ ಬಡ ರೈತರ ಜೀವನೋಪಾಯಕ್ಕೆ ಕೃಷಿ ಭೂಮಿಯೇ ಆಧಾರವಾಗಿದೆ. ಇದಲ್ಲದೆ, ರಾಜ್ಯ ವಸತಿ ಮಂಡಳಿ ಹಾಗೂ ಇತರೆ ಸರ್ಕಾರಿ ಪ್ರಾಧಿಕಾರಗಳು ರಾಮನಗರ ಜಿಲ್ಲೆಯ ಬಿಡದಿ ಸುತ್ತ-ಮುತ್ತಲು ಹಲವಾರು ವಸತಿ ಯೋಜನೆಗಳನ್ನು ರೂಪಿಸಿ, ರೈತರ ಜಮೀನ್ನು ಸ್ವಾಧೀನಪಡಿಸಿಕೊಂಡು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ಟೌನ್‌ಶಿಪ್ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುತ್ತಿರುವ ರೈತರ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಬಡ ರೈತರ ಹಿತದೃಷ್ಠಿಯಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪೊಲೀಸರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ : ಪತ್ರಕರ್ತ ವಶ
ಪೊಲೀಸ್ ವಾಹನದಲ್ಲಿ ಕುಡುಕರು ಮನೆಗೆ : ವ್ಯವಸ್ಥೆಗೆ ಆಕ್ಷೇಪ