ನವದೆಹಲಿ : ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ದಸರಾ ಉದ್ಘಾಟನೆಗೆ ಮುಷ್ತಾಕ್ ಅವರನ್ನು ಆಹ್ವಾನಿಸಿದ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ, ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಕಳೆದ ಸೋಮವಾರ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರಿನ ಹಾಲನಾಯಕನಹಳ್ಳಿಯ ನಿವಾಸಿ ಎಚ್.ಎಸ್. ಗೌರವ್ ಎಂಬುವರು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ವಿಕ್ರಮ್ ನಾಥ್ ನೇತೃತ್ವದ ದ್ವಿಸದಸ್ಯ ಪೀಠ, ಭಾರತ, ಜಾತ್ಯಾತೀತ ರಾಷ್ಟ್ರ. ಸಂವಿಧಾನದ ಪೀಠಿಕೆಯಲ್ಲಿ ಏನಿದೆ ಎಂಬುದು ನಿಮಗೆ ತಿಳಿದಿಲ್ಲವೆ? ಎಂದು ಅರ್ಜಿದಾರರನ್ನು ಪ್ರಶ್ನಿಸಿತು. ಹೀಗೆ ವಿರೋಧ ಮಾಡಲು ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.
ಇದಕ್ಕೂ ಮೊದಲು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ದಸರಾ ಉದ್ಘಾಟನೆಯಂತಹ ಧಾರ್ಮಿಕ ಸಮಾರಂಭವನ್ನು ಅನ್ಯ ಧರ್ಮದ ವ್ಯಕ್ತಿ ಉದ್ಘಾಟಿಸುವುದು ಸೂಕ್ತವಲ್ಲ. ಜಾತ್ಯತೀತ ರಾಷ್ಟ್ರವಾದರೂ, ನನ್ನ ಧಾರ್ಮಿಕ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಇದು ವಿಧಿ 25ರ ಅಡಿಯಲ್ಲಿ ನನ್ನ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಪ್ರಕಾರ ಅವರು ನಮ್ಮ ಧರ್ಮಕ್ಕೆ ವಿರುದ್ಧವಾದ ಹೇಳಿಕೆಗಳನ್ನು ನೀಡಿದ್ದಾರೆ. ಹೀಗಾಗಿ, ಈ ಸಂದರ್ಭದಲ್ಲಿ ಅಂತವರನ್ನು ಆಹ್ವಾನಿಸುವುದು ಸರಿಯಲ್ಲ ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇದು ರಾಜ್ಯದ ಕಾರ್ಯಕ್ರಮ. ಜಾತಿ-ಧರ್ಮಗಳ ನಡುವೆ ವ್ಯತ್ಯಾಸ ತೋರಿಸುವುದು ಹೇಗೆ?. ಎಂದು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲರು, ದೇವಸ್ಥಾನದ ಒಳಗೆ ಪೂಜೆ ಜಾತ್ಯತೀತ ಕ್ರಿಯೆಯಲ್ಲ. ಅದು ಸಮಾರಂಭದ ಒಂದು ಭಾಗವಷ್ಟೇ. ಅಲ್ಲಿ ಸರಣಿ ನಿರ್ಧಾರಗಳು ಇರುತ್ತವೆ ಎಂದು ವಾದಿಸಿದರು. ಆದರೆ, ಅರ್ಜಿದಾರರ ವಾದವನ್ನು ಮಾನ್ಯ ಮಾಡದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿತು. ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.